ಪಾಕಿಸ್ತಾನ ಹಾಗೂ ಶ್ರೀಲಂಕಾದಂತಹ ರಾಷ್ಟ್ರಗಳು ಆರ್ಥಿಕವಾಗಿ ದಿವಾಳಿಯಾಗಿದ್ದನ್ನು ನೋಡಿದ್ದೇವೆ, ಅಷ್ಟೇ ಏಕೆ ಅಮೆರಿಕ ಹಾಗೂ ಬ್ರಿಟನ್ನಂತಹ ದೇಶಗಳೂ ಸದ್ಯ ಆರ್ಥಿಕ ಸಂಕಷ್ಟದಲ್ಲಿ ಇರುವ ಬಗ್ಗೆ ಮಾಧ್ಯಮಗಳಲ್ಲಿ ಮಾಹಿತಿ ಪಡೆದುಕೊಳ್ಳುತ್ತಲೇ ಇದ್ದೇವೆ. ಇವೆಲ್ಲದರ ಜೊತೆಗೆ ಜರ್ಮನಿಯೂ ಸದ್ದಿಲ್ಲದೇ ಆರ್ಥಿಕ ಹೊಡೆತವನ್ನು ಅನುಭವಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.



2022ರ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಜರ್ಮನಿಯ ಆರ್ಥಿಕತೆ ಶೇ. 0.5ರಷ್ಟು ಕುಸಿತ ಕಂಡಿತ್ತು. ಅಂದರೆ, ಮೈನಸ್ 0.5ಗೆ ಇಳಿದಿತ್ತು. ಇದೀಗ 2023ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ. 0.3ರಷ್ಟು ಜಿಡಿಪಿ ಕುಸಿತವ ಕಂಡಿದೆ. ಅಂದರೆ ಮೈನಸ್ 0.3 ಆಗಿದೆ. ಸ್ವತಃ ಜರ್ಮನಿ ಸರ್ಕಾರವೇ ಈ ಮಾಹಿತಿಯನ್ನು ಬಿಚ್ಚಿಟ್ಟಿದೆ.
ಯಾವುದೇ ದೇಶ ಸತತ 2ನೇ ಬಾರಿಗೆ ಜಿಡಿಪಿ ಬೆಳವಣಿಗೆ ಋಣಾತ್ಮಕವನ್ನು ಹೊಂದಿದ್ದರೆ ಆ ದೇಶವು ಆರ್ಥಿಕ ಹಿಂಜರಿತದಲ್ಲಿದೆ ಎಂದೇ ಅರ್ಥ. ಈಗ ಜರ್ಮನಿಯ ಪರಿಸ್ಥಿತಿ ಕೂಡ ಇದೇ ಆಗಿದೆ. ರಷ್ಯಾ ಹಾಗೂ ಉಕ್ರೇನ್ ಯುದ್ಧದ ಬಳಿಕ ಬ್ರಿಟನ್ನ ಜೊತೆಯಲ್ಲಿ ಜರ್ಮನಿ ಕೂಡ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದೆ. ಹಣದುಬ್ಬರದಿಂದಾಗಿ ಜರ್ಮನಿಯ ಸ್ಥಿತಿ ಚಿಂತಾಕ್ರಾಂತಕ್ಕೆ ಕಾರಣವಾಗಿದೆ.
ಇನ್ನು ಇದರ ಜೊತೆಯಲ್ಲಿ ಅಗತ್ಯ ವಸ್ತುಗಳ ದರ ಏರಿಕೆ, ಪೆಟ್ರೋಲ್, ಡಿಸೇಲ್ಗಳ ಬೆಲೆ ಏರಿಕೆ, ರಷ್ಯಾ ಉಕ್ರೇನ್ ಯುದ್ಧ , ಸರ್ಕಾರದಿಂದ ವೆಚ್ಚ ಕಡಿತ ಇವೆಲ್ಲವೂ ಜರ್ಮನಿಯ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ.
ಭಾರತದ ಕತೆಯೇನು ..?
ಸದ್ಯಕ್ಕೆ ಆರ್ಥಿಕವಾಗಿ ಭಾರತಕ್ಕೆ ಯಾವುದೇ ತೊಂದರೆಯಿಲ್ಲ. ರಷ್ಯಾ ಹಾಗೂ ಉಕ್ರೇನ್ನ ನಡುವಿನ ಯುದ್ಧದಿಂದ ಭಾರತಕ್ಕೆ ಕೊಂಚ ಲಾಭವೇ ಆಗಿದೆಯೇ ಹೊರತು ನಷ್ಟವಾಗಿಲ್ಲ. ರಷ್ಯಾ ಅಗ್ಗದ ದರದಲ್ಲಿ ಭಾರತಕ್ಕೆ ತೈಲೋತ್ಪನ್ನ ಸರಬರಾಜು ಮಾಡ್ತಿದೆ. ಇನ್ನು ಜಿಡಿಪಿ ಕೂಡ ದಿನದಿಂದ ದಿನಕ್ಕೆ ಚೇತರಿಸಿಕೊಳ್ತಿದೆ.