ಕಳೆದ ವರ್ಷ ಕೋವಿಡ್ ವಾರ್ ರೂಮ್ನ ಕೆಟ್ಟ ರಾಜಕೀಯದಿಂದಾಗಿ ರಾಷ್ಟ್ರಾದ್ಯಂತ ಸುದ್ದಿಯಾಗಿದ್ದ ಕರ್ನಾಟಕವು ಈ ಬಾರಿ ಮತ್ತೆ ಸುದ್ದಿಯಾಗಿದೆ. ಆದರೆ ಒಂದು ಧನಾತ್ಮಕ ಕಾರಣಕ್ಕಾಗಿ. ಕೋವಿಡ್ ನಿರ್ವಹಣೆಯಲ್ಕಿ ಅತ್ಯಂತ ಯಶಸ್ವಿಯಾಗಿ ತಂತ್ರಜ್ಞಾನವನ್ನು ಬಳಸಿಕೊಂಡಿರುವುದಕ್ಕಾಗಿ ರಾಜ್ಯದ ಕೋವಿಡ್ ವಾರ್ ರೂಂ ಮಖ್ಯಸ್ಥ ಐಎಎಸ್ ಅಧಿಕಾರಿ ಮುನೀಶ್ ಮೌಡ್ಗಿಲ್ ಕೇಂದ್ರ ಸರ್ಕಾರ ಕೊಡಮಾಡುವ ‘ಇ-ಗವರ್ನೆನ್ಸ್ ಜ್ಯೂರಿ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ರೋಗಿಗಳನ್ನು ಫಾಲೋ ಮಾಡಲು, ಸೋಂಕಿತರ ಸಂಪರ್ಕಗಳನ್ನು ಪತ್ತೆಹಚ್ಚಲು ಮತ್ತು ಮನೆಯಲ್ಲಿ ಪ್ರತ್ಯೇಕವಾಗಿರುವವರನ್ನು ಮೇಲ್ವಿಚಾರಣೆ ಮಾಡಲು ಯಶಸ್ವಿಯಾಗಿ ಆ್ಯಪ್ನ್ನು ಕರ್ನಾಟಕ ಬಳಸಿಕೊಂಡಿದೆ. ಲಸಿಕೆ ಪೂರೈಕೆಯನ್ನು ಪತ್ತೆಹಚ್ಚಲು , ವೈದ್ಯಕೀಯ ಆಮ್ಲಜನಕದ ಉತ್ಪಾದನೆ ಮತ್ತು ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು, ಕೋವಿಡ್-ಪಾಸಿಟಿವ್ ಜನರಿಗೆ ಚಿಕಿತ್ಸೆಯ ಸರದಿ ನಿರ್ಧಾರ, ಅಗತ್ಯವಿರುವವರಿಗೆ ಹಾಸಿಗೆಗಳನ್ನು ಹಂಚುವುದು ಮತ್ತು ಕಾಲ್ಬ್ಯಾಕ್ ವ್ಯವಸ್ಥೆಯನ್ನು ಸುಗಮಗೊಳಿಸಲು ಸಹ ಸಾಫ್ಟ್ವೇರ್ ನ್ನು ಬಳಸಲಾಗಿದೆ. ಆನ್-ಗ್ರೌಂಡ್ ಫ್ರಂಟ್ಲೈನ್ ಸಿಬ್ಬಂದಿಯನ್ನು ಸಂಪರ್ಕಿಸುವ ವ್ಯವಸ್ಥೆಗಳು, ವಾರ್ ರೂಮ್ ಮತ್ತು ಪರೀಕ್ಷಾ ಫಲಿತಾಂಶಗಳನ್ನು ಅಪ್ಲೋಡ್ ಮಾಡುವ ಪ್ರಯೋಗಾಲಯಗಳು, ಸಾಂಕ್ರಾಮಿಕ ರೋಗವನ್ನು ನಿರ್ವಹಿಸಲು ಕರ್ನಾಟಕವು ಅತ್ಯಂತ ಸುಧಾರಿತ ತಂತ್ರಜ್ಞಾನವನ್ನು ಬಳಸಿದೆ.
ಪ್ರಪಂಚಕ್ಕೆ ಕೋವಿಡ್ ಅಪ್ಪಳಿಸಿ ಎರಡು ವರ್ಷಗಳು ಕಳೆದಿವೆ. ಈಗ ಅಧಿಕಾರಿಗಳು, ವೈದ್ಯಕೀಯ ಮತ್ತು ಅರೆವೈದ್ಯಕೀಯ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತರು, ವೈದ್ಯರು ಮತ್ತು ಟೆಕ್ ಯುವಕರನ್ನು ಒಳಗೊಂಡಿರುವ ವಿವಿಧ ತಂಡಗಳೊಂದಿಗೆ ಕರ್ನಾಟಕದ ವಾರ್ ರೂಂ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬಗ್ಗೆ ‘ದಿ ಪ್ರಿಂಟ್’ ಜೊತೆ ಮಾತಾಡಿರುವ ಮೌಡ್ಗಿಲ್ “ಮೊದಲ ಎರಡು ಅಲೆಗಳ ಸಮಯದಲ್ಲಿ ನಾವು ಬಳಸಿದ ಅನೇಕ ಅಪ್ಲಿಕೇಶನ್ಗಳು ಅಥವಾ ಅವುಗಳ ಕಾರ್ಯವಿಧಾನಗಳನ್ನು ಹೆಚ್ಚು ಸುಧಾರಿತ ಪ್ಲಾಟ್ಫಾರ್ಮ್ಗಳಿಗೆ ಅಳವಡಿಸಲಾಗಿದೆ. ಕೋವಿಡ್ -19 ನಿರ್ವಹಣೆಗಾಗಿ ನಾವು ತಂತ್ರಜ್ಞಾನವನ್ನು ಅವಲಂಬಿಸಿದ್ದೇವೆ” ಎಂದಿದ್ದಾರೆ. ಆರೋಗ್ಯ ರಕ್ಷಣೆಗಾಗಿ ತಾಂತ್ರಿಕ ಪರಿಹಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಕರ್ನಾಟಕವು ಮುನ್ನಡೆ ಸಾಧಿಸಿದೆ ಎಂದು ಖಾಸಗಿ ವೈದ್ಯರು ಮತ್ತು ಆರೋಗ್ಯ ತಜ್ಞರು ಸಹ ಅಭಿಪ್ರಾಯ ಪಟ್ಟಿದ್ದಾರೆ.
ಸೆಂಟರ್ ಫಾರ್ ಅಕಾಡೆಮಿಕ್ ರಿಸರ್ಚ್, ಎಚ್ಸಿಜಿ ಕ್ಯಾನ್ಸರ್ ಸೆಂಟರ್, ಬೆಂಗಳೂರು ಮತ್ತು ಕರ್ನಾಟಕ ಕೋವಿಡ್ ಕಾರ್ಯಪಡೆಯ ಜೀನೋಮಿಕ್ ಸರ್ವೆಲೆನ್ಸ್ ಕಮಿಟಿಯ ಸದಸ್ಯರಾಗಿರುವ ಡಾ ವಿಶಾಲ್ ರಾವ್ “ಕರ್ನಾಟಕವು ತಂತ್ರಜ್ಞಾನವನ್ನು ಆರೋಗ್ಯ ನಿರ್ವಹಣೆಗೆ ತ್ವರಿತವಾಗಿ ಅಳವಡಿಸಿಕೊಂಡು ಒಂದು ರೀತಿಯ ಹೈಪರ್ಲೂಪ್ ಅನ್ನು ಸೃಷ್ಟಿಸಿತು. ನಾವು ಯಾವಾಗಲೂ ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದೇ ನೋಡಿದ್ದೇವೆ ಮತ್ತು ನಾವು ಮೆಡ್ಟೆಕ್ ಪರಿಹಾರಗಳೊಂದಿಗೆ ಬಂದ ವೇಗ ಮತ್ತು ದಕ್ಷತೆಯು ಅದನ್ನು ಸಾಬೀತುಪಡಿಸಿದೆ” ಎನ್ನುವ ಅವರು “ಟೆಲಿ-ಟೆಕ್ (ದೂರವಾಣಿ ಸಮಾಲೋಚನೆ) ನಿಂದ ಎಂ-ಟೆಕ್ (ಮೊಬೈಲ್ ತಂತ್ರಜ್ಞಾನ) ಗೆ ಕರ್ನಾಟಕವು ಪ್ರಗತಿ ಸಾಧಿಸಿರುವುದು ದೊಡ್ಡ ಟೇಕ್ಅವೇ. ಇದು ಕೋವಿಡ್ -19 ರೋಗಿಗಳ ಮೇಲ್ವಿಚಾರಣೆಯನ್ನು ಮಾತ್ರವಲ್ಲದೆ ಸಾಂಕ್ರಾಮಿಕ ರೋಗದಿಂದಾಗಿ ನಿರ್ಲಕ್ಷಿಸಲ್ಪಟ್ಟ ಇತರ ವೈದ್ಯಕೀಯ ಸಮಸ್ಯೆಗಳನ್ನು ಸಹ ಪರಿಶೀಲಿಸಲು ಸಹಾಯ ಮಾಡುತ್ತದೆ” ಎನ್ನುತ್ತಾರೆ.
ಸಿಸ್ಟಮ್ ಹೇಗೆ ಕೆಲಸ ಮಾಡುತ್ತದೆ?
ಒಬ್ಬ ವ್ಯಕ್ತಿಯು ಕೋವಿಡ್-19 ಪರೀಕ್ಷೆಗೆ ಒಳಗಾದಾಗ, ಭಾರತ ಸರ್ಕಾರದ ಅಪ್ಲಿಕೇಶನ್ನಲ್ಲಿ ಡೇಟಾವನ್ನು ಗುರುತಿಸಲಾಗುತ್ತದೆ. ಪರೀಕ್ಷಾ ಫಲಿತಾಂಶಗಳನ್ನು ಕೇಂದ್ರ ಸರ್ಕಾರದ ನೆಟ್ವರ್ಕ್ ಮೂಲಕ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪೋರ್ಟಲ್ಗೆ ಅಪ್ಲೋಡ್ ಮಾಡಲಾಗುತ್ತದೆ. ಕರ್ನಾಟಕ ರಾಜ್ಯ ವಾರ್ ರೂಮ್ ಈ ಡೇಟಾವನ್ನು ಗಂಟೆಯ ಆಧಾರದ ಮೇಲೆ ಡೌನ್ಲೋಡ್ ಮಾಡುತ್ತದೆ ಮತ್ತು ಈ ಹಂತದಿಂದ ರಾಜ್ಯದ ತಂತ್ರಜ್ಞಾನ-ಚಾಲಿತ ಸಾಂಕ್ರಾಮಿಕ ನಿರ್ವಹಣೆಯು ಪ್ರಾರಂಭವಾಗುತ್ತದೆ.
“ನಾವು ಐಸಿಎಂಆರ್ನಿಂದ ಕೋವಿಡ್ ಪಾಸಿಟಿವ್ ರೋಗಿಗಳ ಪಟ್ಟಿಯನ್ನು ಪಡೆಯುತ್ತೇವೆ ಮತ್ತು ಇದನ್ನು ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ವಾರ್ ರೂಮ್ಗಳಿಗೆ ಮತ್ತು ಸಮಾನಾಂತರವಾಗಿ ಪ್ರತಿ ವಾರ್ಡ್ನಲ್ಲಿರುವ ಮುಂಚೂಣಿಯ ಆರೋಗ್ಯ ಕಾರ್ಯಕರ್ತರಿಗೆ ಸಂಪರ್ಕ ಟ್ರೇಸಿಂಗ್ ಅಪ್ಲಿಕೇಶನ್ ಮೂಲಕ ಕಳುಹಿಸಲಾಗುತ್ತದೆ. ಅವರು ತಮ್ಮ ಸಂಪರ್ಕಗಳ ವಿವರಗಳನ್ನು ಸಂಗ್ರಹಿಸಲು ರೋಗಿಯನ್ನು ಸಂಪರ್ಕಿಸುತ್ತಾರೆ ಮತ್ತು ಇದನ್ನು ಕ್ವಾರಂಟೈನ್ ವಾಚ್ ಅಪ್ಲಿಕೇಶನ್ಗೆ ಅಪ್ಲೋಡ್ ಮಾಡುತ್ತಾರೆ, ನಂತರ ಇದನ್ನು ಹೋಮ್ ಐಸೋಲೇಶನ್ ಮಾನಿಟರಿಂಗ್ ತಂಡದೊಂದಿಗೆ ಹಂಚಿಕೊಳ್ಳಲಾಗುತ್ತದೆ” ಎಂದು ಮೌಡ್ಗಿಲ್ ಇಡೀ ವ್ಯವಸ್ಥೆ ಕಾರ್ಯನಿರ್ವಹಿಸುವುದನ್ನು ವಿವರಿಸುತ್ತಾರೆ.

ಟ್ರಯಾಜಿಂಗ್, ಟೆಲಿಕನ್ಸಲ್ಟೇಶನ್, ದೈಹಿಕ ಸಂಪರ್ಕ ಇತ್ಯಾದಿಗಳಿಗೆ ಡೇಟಾವನ್ನು ಬಳಸಲಾಗುತ್ತದೆ. ಒಮ್ಮೆ ಪರೀಕ್ಷೆಗೆ ಒಳಗಾದ ನಂತರ, ವೈದ್ಯಕೀಯ ತಂಡಗಳು ಆಸ್ಪತ್ರೆಗೆ ಅಗತ್ಯವಿರುವ ರೋಗಿಗಳನ್ನು ಭೇಟಿ ಮಾಡಿ, ಅವರಿಗೆ ಯಾವ ರೀತಿಯ ಹಾಸಿಗೆಗಳು ಬೇಕು ಎಂದು ನಿರ್ಣಯಿಸಿ ಮತ್ತು ಅದನ್ನು ಅಪ್ಲಿಕೇಶನ್ಗೆ ನವೀಕರಿಸುತ್ತವೆ. ಆಸ್ಪತ್ರೆಗಳಲ್ಲಿ ನಿರ್ದಿಷ್ಟ ರೀತಿಯ ಹಾಸಿಗೆಗಳನ್ನು ನೀಡಲು ಹಾಸಿಗೆ ಹಂಚಿಕೆ ವ್ಯವಸ್ಥೆಯನ್ನು ಬಳಸಲಾಗುತ್ತದೆ. ರೋಗಿಯ ಸ್ಥಿತಿಯನ್ನು ನಿರಂತರವಾಗಿ ಅಪ್ಡೇಟ್ ಮಾಡಲಾಗುತ್ತದೆ. ಹೋಮ್ ಐಸೋಲೇಶನ್ನಲ್ಲಿರುವವರನ್ನು StepOne ಆ್ಯಪ್ ಬಳಸಿ ಮೇಲ್ವಿಚಾರಣೆ ಮಾಡಲಾಗುತ್ತದೆ ”ಎಂದು ಅವರು ಹೇಳುತ್ತಾರೆ.
ಪ್ರತಿದಿನ ರಾತ್ರಿ 8 ಗಂಟೆಗೆ, ಮೌಡ್ಗಿಲ್ ಅವರ ಸುಮಾರು 40ರಷ್ಟಿರುವ ವಾರ್ ರೂಮ್ ಸಿಬ್ಬಂದಿಯ ತಂಡವು ರಾಜ್ಯದಲ್ಲಿನ ಕೋವಿಡ್ -19 ಪರಿಸ್ಥಿತಿ ಮತ್ತು ಪ್ರವೃತ್ತಿಗಳ ವಿವರವಾದ ದೈನಂದಿನ ವಿಶ್ಲೇಷಣೆಯನ್ನು ಸಂಗ್ರಹಿಸುತ್ತದೆ. ವಿಶ್ಲೇಷಣೆಯು ತುಲನಾತ್ಮಕ ಏಳು ದಿನಗಳ ಸರಾಸರಿಗಳನ್ನು ಮತ್ತು ಕೋವಿಡ್ ಡೇಟಾದ ಪ್ರದೇಶವಾರು, ಜಿಲ್ಲಾವಾರು, ಲಿಂಗ-ವಾರು ಮತ್ತು ವಯಸ್ಸಿನ ಆಧಾರದ ಹೋಲಿಕೆಯನ್ನು ಒದಗಿಸುತ್ತದೆ.
“ನಾವು ಯುನಾನಿ ಮತ್ತು ಆಯುರ್ವೇದ ಕೋರ್ಸ್ಗಳನ್ನು ಮಾಡುತ್ತಿರುವವರು ಸೇರಿದಂತೆ ದಾದಿಯರು, ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಹೆಚ್ಚಿನ ಸಂಖ್ಯೆಯ ಆರೋಗ್ಯ ಸಂಪನ್ಮೂಲಗಳ ಉಪಸ್ಥಿತಿಯನ್ನು ಸದುಪಯೋಗಪಡಿಸಿಕೊಂಡಿದ್ದೇವೆ. ಅವರಿಗೆ ಟ್ರಯಾಜಿಂಗ್ ಕರೆಗಳನ್ನು ವಹಿಸಲಾಗಿದೆ, ”ಎಂದು ಹೋಮ್ ಐಸೋಲೇಶನ್ ಉಸ್ತುವಾರಿ ಪಂಕಜ್ ಕುಮಾರ್ ಪಾಂಡೆ ತಿಳಿಸಿರುವುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ.
ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು IVR ಕರೆಗಳು, ರೋಗಿಗಳನ್ನು ಪತ್ತೆಹಚ್ಚಲು ತಂತ್ರಜ್ಞಾನವನ್ನು ಬಳಸುವುದರಿಂದ ಮಾನವ ಸಂಪನ್ಮೂಲಗಳ ಮೇಲಿನ ಹೊರೆ ಕಡಿಮೆಯಾಗಿದೆ ಎಂದು ಪಾಂಡೆ ಹೇಳಿದರು.
ಕಳೆದ ವರ್ಷ ಎರಡನೇ ಅಲೆಯಲ್ಲಿ ರಾಜ್ಯದ ಅನುಭವಗಳ ಆಧಾರದ ಮೇಲೆ, ರೋಗಿಗಳು ಆಸ್ಪತ್ರೆಯ ಹಾಸಿಗೆಗಳನ್ನು ಪಡೆಯಲು ಹೆಣಗಾಡದಂತೆ, ರಾಜ್ಯ ಸರ್ಕಾರವು ಚಿಕಿತ್ಸೆಗಾಗಿ ವಿಸ್ತಾರವಾದ ವ್ಯವಸ್ಥೆಯನ್ನು ಸ್ಥಾಪಿಸಿದೆ. ಈ ಪ್ರಕ್ರಿಯೆಯು ರೋಗಿಗಳನ್ನು ಆಸ್ಪತ್ರೆಗೆ ದಾಖಲು, ಕೋವಿಡ್ ಕೇರ್ ಸೆಂಟರ್ಗಳು ಅಥವಾ ಹೋಮ್ ಐಸೋಲೇಷನ್ ಎಂದು ವರ್ಗೀಕರಿಸಲು ತಜ್ಞರಿಗೆ ಸಹಾಯ ಮಾಡುತ್ತದೆ.
ಸುಮಾರು 10,000 ವಿದ್ಯಾರ್ಥಿಗಳಿಗೆ ಟ್ರಿಯಾಜಿಂಗ್ (triaging) ಮಾಡಲು ತರಬೇತಿ ನೀಡಲಾಗಿದೆ. “ಕೋವಿಡ್ ಮೂರನೇ ಅಲೆಯಲ್ಲಿ, ಸುಮಾರು 95 ಪ್ರತಿಶತ ರೋಗಿಗಳು ಮನೆಯಲ್ಲಿ ಐಸೋಲೇಟ್ ಆಗಿದ್ದಾರೆ. ಇದು ಮತ್ತು ಟ್ರಯಾಜಿಂಗ್ ವ್ಯವಸ್ಥೆಯು ನಮ್ಮ ಆರೋಗ್ಯ ವ್ಯವಸ್ಥೆಯ ಮೇಲೆ ಒತ್ತಡ ಹೇರಲು ಬಿಡುತ್ತಿಲ್ಲ” ಎಂದೂ ಪಾಂಡೆ ಹೇಳಿದ್ದಾರೆ.
ಕೋವಿಡ್ ಟೆಸ್ಟ್ ಫಲಿತಾಂಶಗಳನ್ನು ಸ್ವೀಕರಿಸುವಾಗ ಮೊದಲು ಸ್ವಯಂಚಾಲಿತ ಕರೆಗಳು ಅಥವಾ ಸಂದೇಶಗಳು ಬರುತ್ತವೆ, ನಂತರ ವೈದ್ಯಕೀಯ ವಿದ್ಯಾರ್ಥಿಗಳು ಅಥವಾ ದಾದಿಯರಿಂದ ಟ್ರಯಾಜಿಂಗ್, ತದನಂತರ ಅಗತ್ಯವಿದ್ದರೆ ವೈದ್ಯರು ಮತ್ತು ತಜ್ಞರೊಂದಿಗೆ ದೂರಸಂಪರ್ಕ ಮಾಡಲಾಗುತ್ತದೆ. “ನಾಲ್ಕನೇ ದಿನ, ರೋಗಿಯನ್ನು ಪರೀಕ್ಷಿಸಲು ಭೌತಿಕ ಕರೆ ಇರುತ್ತದೆ ಮತ್ತು ಏಳನೇ ದಿನದಂದು ‘ಡಿಸ್ಚಾರ್ಜ್ ಕರೆ’ ಇರುತ್ತದೆ. ನಾವು ಎಲ್ಲಾ ಇತರ ದಿನಗಳಲ್ಲಿ IVR ಕರೆಗಳನ್ನು ಮಾಡುತ್ತೇವೆ. ವೈದ್ಯರಿಗೆ ಪ್ರಿಸ್ಕ್ರಿಪ್ಷನ್ ಬರೆಯಲು ಮತ್ತು ಅದನ್ನು ರೋಗಿಗಳಿಗೆ ಕಳುಹಿಸಲು ಮತ್ತು ಅವರ ಆರೋಗ್ಯ ಪರಿಸ್ಥಿತಿಗಳನ್ನು ಫಾಲೋ ಮಾಡಲು ನಾವು ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ. ‘ಸ್ಟೆಪ್ಒನ್’ ತಮ್ಮ ಸಿಎಸ್ಆರ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ಚಟುವಟಿಕೆಯ ಭಾಗವಾಗಿ ಖಾಸಗಿ ಸಂಸ್ಥೆಗಳು ನಡೆಸುತ್ತಿರುವ ಲಾಭರಹಿತ ಸೇವೆಯಾಗಿದೆ ” ಎಂದು ಪಾಂಡೆ ಹೇಳಿದ್ದಾರೆ. ಅಲ್ಲದೆ ಕರ್ನಾಟಕವು ದೈನಂದಿನ ಆಮ್ಲಜನಕದ ಅಗತ್ಯತೆಗಳು ಮತ್ತು ಬೇಡಿಕೆಯನ್ನು ನವೀಕರಿಸಲು ಸಾಫ್ಟ್ವೇರ್ ಅನ್ನು ಬಳಸುತ್ತಿದೆ. ಒಟ್ಟಿನಲ್ಲಿ ಕೆಟ್ಟ ರಾಜಕೀಯಕ್ಕಾಗಿ, ಧರ್ಮ ರಾಜಕಾರಣಕ್ಕಾಗಿ ಸುದ್ದಿಯಾಗಿದ್ದ ಕರ್ನಾಟಕದ ವಾರ್ ರೂಂ ಈಗ ಒಳ್ಳೆಯ ಕಾರಣಕ್ಕೆ ಸುದ್ದಿಯಾಗಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ ಎನ್ನಬಹುದು.













