• Home
  • About Us
  • ಕರ್ನಾಟಕ
Sunday, July 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ನಾಟಕ ವಿಮರ್ಶೆ | ಜಾತಿ ಸೂಕ್ಷ್ಮತೆಯ ನಾಡಿ ಹಿಡಿವ ರಂಗಪ್ರಯೋಗ ʼ ಮುಟ್ಟಿಸಿಕೊಂಡವನು ʼ

ನಾ ದಿವಾಕರ by ನಾ ದಿವಾಕರ
August 24, 2023
in ಅಂಕಣ, ಅಭಿಮತ
0
ನಾಟಕ ವಿಮರ್ಶೆ | ಜಾತಿ ಸೂಕ್ಷ್ಮತೆಯ ನಾಡಿ ಹಿಡಿವ ರಂಗಪ್ರಯೋಗ ʼ ಮುಟ್ಟಿಸಿಕೊಂಡವನು ʼ
Share on WhatsAppShare on FacebookShare on Telegram

ಸಮಾಜದ ಅಂತಃಸತ್ವವನ್ನು ಕಲಕುವ ಕತೆಗೆ ಹೃದಯಸ್ಪರ್ಶಿ ರಂಗರೂಪ

ADVERTISEMENT

ನಾ ದಿವಾಕರ

ಪಿ. ಲಂಕೇಶ್‌ 1970-80ರ ದಶಕದ ಸೂಕ್ಷ್ಮ ಸಂವೇದನೆಯ ಬರಹಗಾರರಲ್ಲಿ ಪ್ರಮುಖರಾಗಿ ಇಂದಿಗೂ ತಮ್ಮ ಪ್ರಸ್ತುತತೆ ಮತ್ತು ಅಸ್ತಿತ್ವವನ್ನು ಉಳಿಸಿಕೊಂಡಿರುವ ನವ್ಯ ಸಾಹಿತ್ಯದ ಲೇಖಕ. ಅವರ ಕತೆಗಳಲ್ಲಿ, ನಾಟಕಗಳಲ್ಲಿ ಕಾಣಬಹುದಾದ ಸಾಮಾಜಿಕ ಒಳಸೂಕ್ಷ್ಮಗಳು ಹಾಗೂ ಮನುಜ ಸಂಬಂಧದ ಸಾಂಸ್ಕೃತಿಕ ಒಳಸುಳಿಗಳು ಆ ಕಾಲಘಟ್ಟದ ಸಮಾಜದ ನಡುವೆಯೇ ಮೇಲೆದ್ದು ಕಾಣುತ್ತಿದ್ದ ಜಾತಿ ವ್ಯವಸ್ಥೆಯ ಕ್ರೌರ್ಯ, ತಾರತಮ್ಯ ಹಾಗೂ ದೌರ್ಜನ್ಯಗಳಿಗೆ ಕನ್ನಡಿ ಹಿಡಿಯುತ್ತಿದ್ದವು. ಶತಮಾನಗಳ ಜಾತಿ ಶೋಷಣೆ ಹಾಗೂ ಶ್ರೇಷ್ಠತೆಯ ಪಾರಮ್ಯದ ರಥಚಕ್ರದಡಿಗೆ ಸಿಲುಕಿ ನಲುಗುತ್ತಿದ್ದ ಒಂದು ಬೃಹತ್‌ ಸಮುದಾಯಕ್ಕೆ ತನ್ನೊಳಗಿನ ವೇದನೆ, ನೋವು, ಯಾತನೆ, ತುಮುಲ ಹಾಗೂ ತಲ್ಲಣಗಳನ್ನು ಹೊರಹಾಕಲು ಲಭಿಸಿದ್ದ ಅವಕಾಶಗಳ ಪೈಕಿ ಸಾಹಿತ್ಯವೂ ಒಂದು. ನವ್ಯ ಹಾಗೂ ಬಂಡಾಯ ಸಾಹಿತ್ಯದ ಪುಟಗಳಲ್ಲಿ ಈ ಅಭಿವ್ಯಕ್ತಿಯ ಉತ್ತುಂಗವನ್ನೂ ನೋಡಿದ್ದೇವೆ. ಲಂಕೇಶರ ಇಂತಹುದೇ ಸೂಕ್ಷ್ಮ ಸಂವೇದನೆಯ ಕತೆಗಳಲ್ಲೊಂದು “ ಮುಟ್ಟಿಸಿಕೊಂಡವನು ”.

ಈ ಸಣ್ಣ ಕತೆಯನ್ನು ರಂಗಾಯಣ ಕಲಾವಿದೆ ಕೆ. ಆರ್‌. ನಂದಿನಿ ರಂಗರೂಪಕ್ಕೆ ಅಳವಡಿಸಿ, ನಿರ್ದೇಶಿಸಿ  ಹೃದಯಸ್ಪರ್ಶಿ ನಾಟಕವನ್ನು ಪ್ರೇಕ್ಷಕರ ಮುಂದಿರಿಸಿದ್ದಾರೆ. ತನ್ಮೂಲಕ ಕೆಲವು ವರ್ಷಗಳ ಕಾಲ ಮನುಜಸೂಕ್ಷ್ಮ ಸಂವೇದನೆಯ ಕೊರತೆಯನ್ನು ಎದುರಿಸುತ್ತಿದ್ದ ರಂಗಾಯಣಕ್ಕೆ ಮರುಜೀವ ಬಂದಂತಾಗಿದೆ. “ ಮುಟ್ಟಿಸಿಕೊಂಡವನು ” ಕತೆಯ ಕೇಂದ್ರ ಪಾತ್ರಧಾರಿ ಬಸಲಿಂಗ ಹಾಗೂ ತಿಮ್ಮಪ್ಪ ಇವತ್ತಿನ ಸಮಾಜದಲ್ಲೂ ಅಷ್ಟೇ ಜೀವಂತಿಕೆಯಿಂದ ನಮ್ಮ ನಡುವೆ ವಿಭಿನ್ನ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ವೈದ್ಯ ತಿಮ್ಮಪ್ಪನ ಮನದಾಳದ ತೊಳಲಾಟ ಇಂದು ಪ್ರತಿರೋಧದ ಛಾಯೆಯಲ್ಲಿ ಕಾಣಬಹುದಾದರೂ ಸಮಾಜದ ಒಂದು ಮೂಲೆಯಲ್ಲಿ ತಮ್ಮ ಅಸಹಾಯಕತೆಯನ್ನು ಮೀರಲಾರದೆ ನಲುಗುವ ಜೀವಗಳನ್ನೂ ಇಂದಿಗೂ ಗುರುತಿಸಬಹುದು. ಹಾಗೆಯೇ ಬಸಲಿಂಗ ನಮ್ಮ ನಡುವೆ ನಿತ್ಯ ಕಾಣಬಹುದಾದ ಒಂದು ಸಮಾಜದ ಬಿಂಬವಾಗಿ ಕಾಣುತ್ತಾನೆ. ಜಾತಿ ಪ್ರಜ್ಞೆ ರೂಪಾಂತರಗೊಳ್ಳುತ್ತಾ ತಳಮಟ್ಟದವರೆಗೂ ವ್ಯಾಪಿಸಿರುವುದೇ ಅಲ್ಲದೆ ತನ್ನ ಅಸ್ತಿತ್ವದ ಬುನಾದಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಸಕಲ ಪ್ರಯತ್ನಗಳನ್ನೂ ಮಾಡುತ್ತಿರುವ ಈ ಹೊತ್ತಿನಲ್ಲಿ ಕೆ. ಆರ್.‌ ನಂದಿನಿ “ಮುಟ್ಟಿಸಿಕೊಂಡವನನ್ನು” ಸಮಾಜದ ಮುಂದಿರಿಸಿ ವಿಸ್ಮೃತಿಗೆ ಜಾರಿರಬಹುದಾದ ಸೂಕ್ಷ್ಮ ಸಂವೇದನೆಗಳನ್ನು ಬಡಿದೆಬ್ಬಿಸಿದ್ದಾರೆ.

ಕಥೆಯ ನಿರೂಪಣೆ ಮತ್ತು ರಂಗರೂಪ

ತನ್ನ ಸ್ವಂತ ದುಡಿಮೆಯಿಂದಲೇ ಬದುಕು ಸವೆಸುವ ಶ್ರಮಜೀವಿಯೊಬ್ಬನಲ್ಲಿ ಸಹಜವಾಗಿ ಕಾಣಬಹುದಾದ ಪ್ರಾಮಾಣಿಕತೆ, ಕಸುಬು ನಿಷ್ಠೆ ಹಾಗೂ ಮಾನವೀಯ ಅಂತಃಕರಣಗಳ ಜೊತೆಗೇ ಅವನಲ್ಲಿ ಸುಪ್ತವಾಗಿರಬಹುದಾದ ಜಾತಿ ಪ್ರಜ್ಞೆಯನ್ನೂ ಗುರುತಿಸುವ ಪ್ರಯತ್ನವನ್ನು ಲಂಕೇಶ್‌ ಈ ಕತೆಯ ಬಸಲಿಂಗನಲ್ಲಿ ಗುರುತಿಸಲು ಯತ್ನಿಸುತ್ತಾರೆ. ತನ್ನ ದುಡಿಮೆಯ ಆಧಾರವಾದ ಎತ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಸುಳ್ಳು ಹೇಳಲೂ ಬಾರದ ಬಸಲಿಂಗನಿಗೆ ಕ್ರಮೇಣವಾಗಿ ತನಗರಿವಿಲ್ಲದೆಯೇ ಅಂತರಾಳದಲ್ಲಿ ಹುದುಗಿದ್ದ ಜಾತಿ ಶ್ರೇಷ್ಠತೆಯ ಪ್ರಜ್ಞೆ ಹೊರಹೊಮ್ಮುವುದು ಅವನ ಜೀವನ ದರ್ಶನವನ್ನೇ ಬದಲಿಸಿಬಿಡುತ್ತದೆ. ದೃಷ್ಟಿಮಾಂದ್ಯತೆಯಿಂದ ಬಳಲುವ ಬಸಲಿಂಗನಿಗೆ ಚಿಕಿತ್ಸೆ ನೀಡುವ ವೈದ್ಯ ತಿಮ್ಮಪ್ಪ “ನಮ್ಮವರಲ್ಲ” ಎಂಬ ಭಾವನೆಯೇ ಬಸಲಿಂಗನೊಳಗಿನ ಸಣ್ಣತನವನ್ನು, ಮಡಿ-ಮೈಲಿಗೆಯ ಪರಿಕಲ್ಪನೆಗಳನ್ನು ಒಮ್ಮೆಲೆ ಹೊರಹಾಕಿಬಿಡುತ್ತದೆ. ವ್ಯಕ್ತಿಗತವಾಗಿ ಸುಪ್ತವಾಗಿರಬಹುದಾದ ಜಾತಿ ಪ್ರಜ್ಞೆಯನ್ನು ಚಿಗುರಿಸುವುದು ಎರಡು ಸಂಸ್ಥೆಗಳು. ಒಂದು ಕುಟುಂಬ ಮತ್ತೊಂದು ಸಮಾಜ. ಇಲ್ಲಿ ಬಸಲಿಂಗನ ಹೆಂಡತಿ ಸಿದ್ಲಿಂಗಿ ಆ ಕೆಲಸ ಮಾಡುತ್ತಾಳೆ. ಬಸಲಿಂಗ ಮೈಲಿಗೆ ತೊಳೆದುಕೊಳ್ಳಲು ಹೋಗಿ ತನ್ನ ಎಡಗಣ್ಣಿನ ದೃಷ್ಟಿ ಕಳೆದುಕೊಳ್ಳುತ್ತಾನೆ.

ಬಸಲಿಂಗನಿಗೆ ಚಿಕಿತ್ಸೆ ನೀಡಿ ಗುಣಪಡಿಸಲೆತ್ನಿಸುವ ವೈದ್ಯ ತಿಮ್ಮಪ್ಪ ಸಂವೇದನಾಶೀಲ ವ್ಯಕ್ತಿ. ವೈದ್ಯನಾಗಿ ಎನ್ನುವುದಕ್ಕಿಂತಲೂ ಮನುಷ್ಯನಾಗಿ ಸಹಜೀವಿಯನ್ನು ತನ್ನಂತೆಯೇ ಕಾಣುವ ಸಹೃದಯತೆ ಅವರಲ್ಲಿರುತ್ತದೆ. ಹಾಗಾಗಿಯೇ ಜನಾನುರಾಗಿ ವೈದ್ಯರಾಗಿರುತ್ತಾರೆ. ಆದರೆ ತನಗೆ ದೃಷ್ಟಿ ನೀಡಿದ ವೈದ್ಯರ ಜಾಗದಲ್ಲಿ ಬಸಲಿಂಗನ ಜಾತಿ ಪೀಡಿತ ಒಳಮನಸ್ಸಿಗೆ ಒಬ್ಬ ʼ ಮುಟ್ಟಬಾರದ ʼ ವ್ಯಕ್ತಿ ಕಾಣತೊಡಗುತ್ತಾನೆ. ಈ ಮಾನಸಿಕ ಕಾಯಿಲೆ ಉಚ್ಛ್ರಾಯ ಹಂತ ತಲುಪಿದಾಗ ಬಸಲಿಂಗನ ಮನದಾಳದ ದ್ವೇಷ, ಅಸೂಯೆ, ಸಿಟ್ಟು, ಆಕ್ರೋಶ ಎಲ್ಲವೂ ಒಮ್ಮೆಲೆ ಸ್ಪೋಟಿಸಿಬಿಡುತ್ತದೆ. ಎಂದೂ ಸುಳ್ಳಾಡದ ಬಸಲಿಂಗ ಸುಳ್ಳಿನ ಸರಮಾಲೆಯನ್ನೇ ಸಿದ್ಧಪಡಿಸಲು ಸಜ್ಜಾಗುತ್ತಾನೆ.  ಆದರೆ ಊರವರ ಮಾತು ಕೇಳಿ ತಿಮ್ಮಪ್ಪ ವೈದ್ಯರ ವಿರುದ್ಧ ಸೆಟೆದು ನಿಲ್ಲುವ ಬಸಲಿಂಗನಿಗೆ ತನ್ನ ದೃಷ್ಟಿಯನ್ನು ಸರಿಪಡಿಸಲು ಯಾರೂ ಮುಂದಾಗದಿದ್ದಾಗ, ಮರಳಿ ಅವರ ಬಳಿಯೇ ಬರಬೇಕಾಗುತ್ತದೆ. ಇಬ್ಬರ ನಡುವೆ ಮೊದಲಿನಿಂದಲೂ ಇದ್ದ ಮನುಜ ಪ್ರೀತಿ ಮತ್ತೊಮ್ಮೆ ಚಿಗುರುತ್ತದೆ. ಮುಟ್ಟಿಸಿಕೊಂಡ ಬಸಲಿಂಗ ಮತ್ತು ಮುಟ್ಟಿದ ತಿಮ್ಮಪ್ಪ ಇಬ್ಬರ ನಡುವೆ ಇರುವ ಅವಿನಾಭಾವ ಸಂಬಂಧದ ನಡುವೆ ಶ್ರೇಷ್ಠ-ಕನಿಷ್ಠತೆಯ ಬೇಲಿಗಳಾಗಲೀ, ತರತಮಗಳ ಗೋಡೆಗಳಾಗಲೀ, ಉಚ್ಚ-ನೀಚ ಭಾವನೆಗಳಾಗಲೀ ಇರದಿದ್ದರೂ, ಸುತ್ತಲಿನ ಸಮಾಜದ ರೀತಿ ರಿವಾಜುಗಳು, ಸಂಪ್ರದಾಯ ನಂಬಿಕೆಗಳು ಹೇಗೆ ಬಸಲಿಂಗನಂತಹ ಮುಗ್ಧ ಶ್ರಮಜೀವಿಯ ಮನಸ್ಸಿನಲ್ಲೂ ಈ ಅಪಸವ್ಯಗಳನ್ನು ಸೃಷ್ಟಿಸಬಲ್ಲದು ಎನ್ನುವುದನ್ನು ಕತೆ ಬಿಂಬಿಸುತ್ತದೆ.

ಸೂಕ್ಷ್ಮ ಸಂವೇದನೆಯ ತಂತುಗಳು

ಮನುಷ್ಯರ ನಡುವೆ ಪ್ರೀತಿ ಸ್ಫುರಿಸಲು ಸ್ಪೃಶ್ಯಾಸ್ಪೃಶ್ಯತೆಯ ಭಾವನೆಗಳು ಎಂದಿಗೂ ಅಡ್ಡಿಬರುವುದಿಲ್ಲ ಎಂಬ ಸರಳ ಸತ್ಯವನ್ನು ತಿಮ್ಮಪ್ಪ ಮತ್ತು ಬಸಲಿಂಗನ ಸಂಬಂಧವು ನಿರೂಪಿಸುತ್ತದೆ. ಆದರೆ ಈ ನಡುವೆ ಬಸಲಿಂಗ ತನ್ನ ಸಣ್ಣತನಕ್ಕಾಗಿ ಪರಿತಪಿಸುವುದು, ವೈದ್ಯ ತಿಮ್ಮಪ್ಪ ತಮ್ಮ ಅಸಹಾಯಕತೆಗಾಗಿ ಹಲುಬುವುದು ನಮ್ಮ ಸಮಾಜದೊಳಗಿನ ವೈರುಧ್ಯಗಳನ್ನು ಸೂಚಿಸುತ್ತದೆ. ತಾನು ಬಸಲಿಂಗನನ್ನು ಮುಟ್ಟಿದ್ದು ವೈದ್ಯನಾಗಿಯೇ ಆದರೂ ಅಂತಹ ಮುಗ್ಧ ಜೀವಿಯಲ್ಲೂ ಈ ಮುಟ್ಟುವಿಕೆ ಉಂಟುಮಾಡುವ ತಲ್ಲಣಗಳು ವೈದ್ಯ ತಿಮ್ಮಪ್ಪನ ಅಂತರಿಕ ತೊಳಲಾಟಕ್ಕೆ ಕಾರಣವಾಗುತ್ತದೆ. ಜಾತಿ ವ್ಯವಸ್ಥೆಯು ನಿರ್ಮಿಸುವ ಮಿತಿಗಳನ್ನೂ, ಗಡಿರೇಖೆಗಳನ್ನೂ ಮೀರಿ ಸ್ಪಂದಿಸುವ ಬಸಲಿಂಗನ ಮುಗ್ಧತೆಯನ್ನು ನಾಶಪಡಿಸಲು ಜಾತಿ ಪ್ರಜ್ಞೆ ಒಂದು ಕರಾಳ ಅಸ್ತ್ರವಾಗಿ ಪರಿಣಮಿಸುತ್ತದೆ. ತನ್ನ ಸಣ್ಣತನದ ಆಘಾತದಿಂದ ಹೊರಬರುವ ಬಸಲಿಂಗ ಮರಳಿ ವೈದ್ಯ ತಿಮ್ಮಪ್ಪ ಅವರನ್ನೇ ಆಶ್ರಯಿಸುತ್ತಾನೆ.

ಬಸಲಿಂಗನ ಆತ್ಮನಿವೇದನೆಯ ಹೊತ್ತಿನಲ್ಲಿ ವೈದ್ಯ ತಿಮ್ಮಪ್ಪ ತನ್ನ ಮನದಾಳದ ನೋವಿಗೆ, ಅಂತರಾಳದ ಯಾತನೆಗೆ ಯಾರನ್ನು ದೂಷಿಸುವುದು ಎಂದು ಯೋಚಿಸುವಂತಾಗುತ್ತದೆ. ಸಮಾಜವೊಂದು ಪರಂಪರಾನುಗತವಾಗಿ ಸೃಷ್ಟಿಸಿದ ವ್ಯವಸ್ಥೆಯ ಬುನಾದಿ ಇರುವುದೇ ನಮ್ಮ ಅಂತರ್‌ ಪ್ರಜ್ಞೆಯಲ್ಲಿ. ಈ ಪ್ರಜ್ಞೆಯ ಪ್ರತಿಯೊಂದು ಬಿಂದುವೂ ಮನುಷ್ಯನ ಸಹಜ ಭಾವಗಳನ್ನು ಕಾಡುತ್ತಲೇ ಸ್ಥಾಪಿತ ವ್ಯವಸ್ಥೆಯ ಒಂದು ಭಾಗವನ್ನಾಗಿ ಮಾಡಿಬಿಡುತ್ತದೆ. ವೈದ್ಯ ತಿಮ್ಮಪ್ಪನಲ್ಲಿನ ಮನುಜ ಸಂವೇದನೆ, ಶ್ರಮಿಕ ಬಸಲಿಂಗನಲ್ಲಿರುವ ಜೀವನನಿಷ್ಠೆ ಮತ್ತು ಪ್ರಾಮಾಣಿಕತೆ ಎರಡೂ ಸಮಾಜ ಸೃಷ್ಟಿಸುವ ತರತಮದ ಗೋಡೆಗಳನ್ನು ಮೀರಿ ಮನುಷ್ಯತ್ವದ ನೆಲೆಯಲ್ಲಿ ನಿಲ್ಲಲು ಸಹಾಯ ಮಾಡುವುದನ್ನು “ ಮುಟ್ಟಿಸಿಕೊಂಡವನು ” ನಾಟಕದಲ್ಲಿ ತಮ್ಮ ಅಪೂರ್ವ ಅಭಿನಯದ ಮೂಲಕ ಕೃಷ್ಣಕುಮಾರ್‌ ಮತ್ತು ಮಹದೇವ್‌ ಇದನ್ನು ಸಾಕ್ಷಾತ್ಕರಿಸುತ್ತಾರೆ.

ದಲಿತ ಸಮುದಾಯ ಇಂದಿಗೂ ಎದುರಿಸುತ್ತಿರುವ ಅಸ್ಪೃಶ್ಯತೆ ಮತ್ತು ಸಾಮಾಜಿಕ ಬಹಿಷ್ಕಾರಗಳನ್ನು ಗಮನಿಸಿದಾಗ, ಲಂಕೇಶ್‌ ಅವರ ʼಮುಟ್ಟಿಸಿಕೊಂಡವನುʼ ಕತೆಯು ವ್ಯಕ್ತಿಗತ ನೆಲೆಯಲ್ಲಿ ಸಂವೇದನಾತ್ಮಕವಾಗಿಯೇ ಈ ಭದ್ರಕೋಟೆಗಳನ್ನು ಉಲ್ಲಂಘಿಸಬಹುದು ಎಂಬ ಸಂದೇಶವನ್ನೂ ನೀಡುತ್ತದೆ. ತನ್ನ ಅರಿವಿಲ್ಲದೆಯೇ ಹುಟ್ಟಿ, ಜನ್ಮದಾರಭ್ಯ ಪಡೆದುಬಂದ ಅಸ್ಪೃಶ್ಯತೆ ಎಂಬ ಶಾಪವನ್ನು ಅನುಭವಿಸುವ ಪ್ರತಿಯೊಬ್ಬ ದಲಿತ ವ್ಯಕ್ತಿಯಲ್ಲೂ ಸಹಜವಾಗಿಯೇ ಇರಬಹುದಾದ ಪ್ರತಿರೋಧದ ಆಕ್ರೋಶವನ್ನು ವೈದ್ಯ ತಿಮ್ಮಪ್ಪ ವ್ಯಕ್ತಿಗತ ನೆಲೆಯಲ್ಲಿ ಜೀವನಾನುಭವದ ಸಂಕೀರ್ಣತೆಗಳೊಂದಿಗೆ ಅನುಸಂಧಾನ ಮಾಡುವ ಮೂಲಕ ಬಸಲಿಂಗನಲ್ಲಿದ್ದ ಜಾತಿ ಪ್ರಜ್ಞೆಯನ್ನು ಗುರುತಿಸುತ್ತಾನೆ. ಕತೆಯಲ್ಲಿ ಬಸಲಿಂಗ ಕಳೆದುಕೊಳ್ಳುವ ಎಡಗಣ್ಣು ಸಮಾಜದ ಒಳಗಣ್ಣು ಸಹ ಆಗಿರುತ್ತದೆ. ಹಾಗೆಯೇ ತಿಮ್ಮಪ್ಪ ವೈದ್ಯ ನೀಡುವ ಮರುಚಿಕಿತ್ಸೆಯಿಂದ ಪಡೆಯುವ ಬಲಗಣ್ಣಿನ ದೃಷ್ಟಿ, ಆತ್ಮಸಾಕ್ಷಿಗೆ ತೆರೆದುಕೊಂಡು ಮುಕ್ತವಾಗುವ ಸಂವೇದನಾಶೀಲ ಸಮಾಜದ ಒಳದೃಷ್ಟಿಯೂ ಆಗಿರುತ್ತದೆ.

ಸೃಜನಶೀಲ ರಂಗಪ್ರಯೋಗ

ಸಮಾಜದ ಅಂತರಂಗವನ್ನು ಕದಡುವ ಈ ಸಣ್ಣ ಕತೆಗೆ ರಂಗರೂಪ ನೀಡಿ, ಮೂಲ ಕಥಾ ಹಂದರಕ್ಕೆ ಚ್ಯುತಿ ಬರದಂತೆ , ರಂಗಾಸಕ್ತರ ಮುಂದಿಡುವ ಕೆ.ಆರ್.‌ ನಂದಿನಿ ಅವರ ಪ್ರಯತ್ನ ಶ್ಲಾಘನೀಯ. ರಂಗಾಯಣ, ಅಲ್ಲಿನ ಪರಿಸರ ಹಾಗೂ ಕಲಾವಿದರ ಹಿರಿಮೆ ಇರುವುದೇ ಈ ಸೃಜನಶೀಲತೆಯಲ್ಲಿ. ಬಸಲಿಂಗನ ಪಾತ್ರದಲ್ಲಿ ಕೃಷ್ಣಕುಮಾರ್‌ ನಾರ್ಣ, ಸಿದ್ಲಿಂಗಿ ಪಾತ್ರದಲ್ಲಿ ಬಿ.ಎನ್‌ ಶಶಿಕಲಾ ಮತ್ತು ವೈದ್ಯ ತಿಮ್ಮಪ್ಪ ಪಾತ್ರದಲ್ಲಿ ಮಹದೇವ್‌ ಅವರ ಅಭಿನಯದ ಸೊಗಸು ಬಣ್ಣನೆಗೆ ನಿಲುಕದ್ದು. ತನ್ನ ಒಡೆಯನ ಮಾತನ್ನೇ ಕೇಳದೆ ಅವನ ಬೈಗುಳಿಗೆ ತುತ್ತಾಗುವ ಬಸಲಿಂಗನ ಎರಡು ಎತ್ತುಗಳು, ಅವನ ದೃಷ್ಟಿಹೀನತೆಯ ಪರಿತಾಪದ ನಡುವೆಯೂ ತನ್ನ ಜಾತಿಪೀಡಿತ ಸಣ್ಣತನದಿಂದ ಹೊರಬರಲಾರದೆ ತೊಳಲಾಡುತ್ತಿರುವಾಗ ಅವನಿಂದ ಸಂತೈಸಲ್ಪಡುವುದು ಆದರೆ ಮೆಲ್ಲನೆ ಅವನಿಂದ ದೂರ ಸಾಗುವುದು ಇಡೀ ಕಥಾಹಂದರದ ಸ್ಥಾಯಿ ಭಾವವನ್ನು ಸೂಚಿಸುವಂತಿದೆ. ಮಾನಸಿಕವಾಗಿ ತನ್ನಿಂದ ದೂರ ತಳ್ಳಲ್ಪಟ್ಟ ವೈದ್ಯ ತಿಮ್ಮಪ್ಪನವರ ಬೆರಳುಗಳಲ್ಲಿದ್ದ ಸಂವೇದನಾ ಶಕ್ತಿಯನ್ನು ತನ್ನ ಎತ್ತುಗಳಲ್ಲೂ ಕಂಡು ಬಸಲಿಂಗ ಮತ್ತಷ್ಟು ಪರಿತಪಿಸುವ ಪ್ರಸಂಗ ಹೃದಯಕ್ಕೆ ನಾಟುತ್ತದೆ .

ಜಾತಿ ಪ್ರಜ್ಞೆಗೆ ಬಲಿಯಾಗಿ ತನ್ನ ಅತ್ಯಂತ ಪ್ರೀತಿಯ ವೈದ್ಯರನ್ನು ದೂರ ಮಾಡುವ ಬಸಲಿಂಗ ಮತ್ತೊಂದೆಡೆ ತನ್ನ ಬಲಗಣ್ಣಿನ ದೃಷ್ಟಿಯನ್ನೂ ಕಳೆದುಕೊಳ್ಳುವ ಆತಂಕಕ್ಕೊಳಗಾಗಿ ಗತ್ಯಂತರವಿಲ್ಲದೆ ಪುನಃ ಅವರ ಬಳಿಯೇ ಹೋಗಬೇಕೆಂಬ ಸನ್ನಿವೇಶ ಅವನಲ್ಲಿ ಸಹಜವಾಗಿಯೇ ವೈರುಧ್ಯಗಳ ಸಂಘರ್ಷವನ್ನು ಹುಟ್ಟುಹಾಕುತ್ತದೆ. ಅವನ ಎದೆಯಾಳದ ಪ್ರಾಮಾಣಿಕತೆಯನ್ನೂ ಭಗ್ನಗೊಳಿಸುವ ದ್ವೇಷಾಸೂಯೆಗಳು ಸೃಷ್ಟಿಸುವ ಮಾನಸಿಕ ತೊಳಲಾಟಗಳನ್ನು ಸ್ವಗತದ ಮೂಲಕ ಪ್ರಸ್ತುತಪಡಿಸುವ ನಿರ್ದೇಶಕರ ಸೃಜನಶೀಲತೆ ಮೆಚ್ಚುವಂತಹುದು. ಈ ತೊಳಲಾಟವನ್ನು ಬಿಂಬಿಸಲು ಯಕ್ಷಗಾನದ ರೂಪಕವನ್ನು ಬಳಸಿರುವುದು ಹಾಗೂ ಕತ್ತಲು ಬೆಳಕಿನ ನಡುವೆ ಮನಸ್ಸಿನ ಹೊಯ್ದಾಟ ಹೇಗೆ ಮನುಷ್ಯನನ್ನು ಹಿಂಡಿಬಿಡುತ್ತದೆ ಎಂದು ಯಕ್ಷಗಾನದ ಪಾತ್ರದ ಮೂಲಕವೇ ಬಿಂಬಿಸಿರುವುದು ನಾಟಕಕ್ಕೆ ಮೆರುಗು ನೀಡುತ್ತದೆ. ಮೈಮ್‌ ರಮೇಶ್‌ ಅವರ ನೃತ್ಯ ಸಂಯೋಜನೆ ಮತ್ತು ಸ್ವಗತದಲ್ಲಿ ಬಸಲಿಂಗ ಪಾತ್ರಧಾರಿ ಕೃಷ್ಣಕುಮಾರ್‌ ಅವರ ನಟನೆ ಪರಸ್ಪರ ಮೇಳೈಸುವ ಮೂಲಕ ಇಡೀ ದೃಶ್ಯ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ  ಮಾಡುತ್ತದೆ.

ಬಸಲಿಂಗ ಮರಳಿ ತನ್ನ ಬಳಿಯೇ ಬಂದು ಕಾಲು ಹಿಡಿದ ಕ್ಷಮೆ ಕೋರಿದಾಗ ವೈದ್ಯ ತಿಮ್ಮಪ್ಪನಲ್ಲಿ ಉಂಟಾಗುವ ಮಾನಸಿಕ ತಳಮಳ ಮತ್ತು ಏಳುವ ಹಲವು ಪ್ರಶ್ನೆಗಳು ಬಾಹ್ಯ ಸಮಾಜದಲ್ಲಿ ನಿತ್ಯ ಎದುರಿಸಬಹುದಾದ ಸವಾಲುಗಳಂತೆಯೇ ಕಾಣುತ್ತದೆ. ಬಸಲಿಂಗ ತಮ್ಮನ್ನು ತಬ್ಬಿಕೊಂಡಿದ್ದರೂ ಅವನನ್ನು ಮುಟ್ಟಿ ಸಂತೈಸಲು ಕೆಲಕ್ಷಣ ಹಿಂಜರಿಯುವ ತಿಮ್ಮಪ್ಪ ವೈದ್ಯರ ಆಂತರಿಕ ಬೇಗುದಿ ಹಾಗೂ ನೋವು ಮಹದೇವ್‌ ಅವರ ಸಹಜಾಭಿನಯದೊಂದಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿದೆ. ಅಸ್ಪೃಶ್ಯತೆ ಜೀವಂತವಾಗಿರುವ ಒಂದು ಸಮಾಜಕ್ಕೆ ಈ ದೃಶ್ಯ ನೇರವಾಗಿ ಇರಿಯುತ್ತದೆ. ವೈದ್ಯ ತಿಮ್ಮಪ್ಪನ ಕಂಬನಿಯ ಪ್ರತಿಯೊಂದು ಹನಿಯೂ ಈ ಸಮಾಜದ ಒಡಲಲ್ಲಿ ಕಾಪಿಟ್ಟುಕೊಂಡುಬಂದಿರುವ ನೋವು, ವೇದನೆ, ಯಾತನೆ ಮತ್ತು ತಳಮಳಗಳ ಬಿಂದುಗಳಾಗಿ ಕಾಣುತ್ತವೆ. ಕೃಷ್ಣಕುಮಾರ್‌ ಮತ್ತು ಮಹದೇವ್‌ ಅವರ ಅತ್ಯದ್ಭುತ ಅಭಿನಯಕ್ಕೆ Hats off .

ನಿರ್ದೇಶಕಿ ಕೆ. ಆರ್.‌ ನಂದಿನಿ ಕತೆಯ ಪ್ರತಿಯೊಂದು ಆಯಾಮವನ್ನೂ ಸೂಕ್ಷ್ಮ ಸಂವೇದನೆಯೊಂದಿಗೆ ರಂಗರೂಪಕ್ಕೆ ಅಳವಡಿಸಿರುವುದು ಇಡೀ ನಾಟಕದ ಹಿರಿಮೆ. ತನ್ನ ಜಾನುವಾರುಗಳ ಬಗ್ಗೆ ಬಸಲಿಂಗನಲ್ಲಿರುವ ಕಕ್ಕುಲಾತಿ, ವೈದ್ಯ ತಿಮ್ಮಪ್ಪನ ಬಗ್ಗೆ ಇರುವ ಮನುಜ ಪ್ರೀತಿ ಇವೆರಡೂ ಘಾಸಿಗೊಳಗಾಗುವುದು ಅವನಲ್ಲಿ ಜಾಗೃತವಾಗುವ ಜಾತಿ ಪ್ರಜ್ಞೆಯಿಂದ. ಮತ್ತೊಂದೆಡೆ ವೈದ್ಯ ತಿಮ್ಮಪ್ಪ ತಾನು ನಿಂತ ನೆಲದಲ್ಲೇ ಅನುಭವಿಸುವ ಆಂತರಿಕ ತಳಮಳವನ್ನು ಮತ್ತಷ್ಟು ಘಾಸಿಗೊಳಿಸುವುದೂ ಸಮಾಜದಲ್ಲಿನ ಮಡಿ-ಮೈಲಿಗೆ-ಮುಟ್ಟುವಿಕೆಯ ಹಿಂದಿನ ಸಣ್ಣತನಗಳು. ವೈದ್ಯ ತಿಮ್ಮಪ್ಪನ ಈ ಮನದಾಳದ ಬೇಗೆ ಮತ್ತು ಬಸಲಿಂಗನ ಆತ್ಮಸಾಕ್ಷಿಯ ನೋವಿನೊಂದಿಗೆ ನಾಟಕ ಅಂತ್ಯವಾಗುತ್ತದೆ.  ಕೊನೆಯ ದೃಶ್ಯದ ವೈದ್ಯ ತಿಮ್ಮಪ್ಪ ಮತ್ತು ಬಸಲಿಂಗ ಬಹುಕಾಲ ಮನಸ್ಸಿನಲ್ಲಿ ಉಳಿಯುತ್ತಾರೆ. ಎರಡು ಜೀವಗಳ ನಡುವಿನ ಸೂಕ್ಷ್ಮ ಸಂವೇದನೆಯ ಅನುಸಂಧಾನ ʼ ಮುಟ್ಟಿಸಿಕೊಂಡವನು ʼ ನಾಟಕದ ಪ್ರೇಕ್ಷಕರನ್ನೂ ಕಾಡುತ್ತಲೇ ಹೋಗುತ್ತದೆ. ಮೂಲ ಕತೆಯಲ್ಲಿನ ಮನುಜ ಸಂವೇದನೆಯ ತಂತುಗಳನ್ನು ರಂಗರೂಪದಲ್ಲಿ ಮತ್ತಷ್ಟು ತೀಕ್ಷ್ಣಗೊಳಿಸುವ ಮೂಲಕ ನಿರ್ದೇಶಕಿ ಕೆ. ಆರ್.‌ ನಂದಿನಿ ಗೆದ್ದಿದ್ದಾರೆ. ಪಾತ್ರಧಾರಿಗಳ ಸಹಜಾಭಿನಯ, ಉತ್ತಮ ರಂಗಸಜ್ಜಿಕೆ ಮತ್ತು ಬೆಳಕಿನ ವಿನ್ಯಾಸ, ಅದ್ಭುತ ನೃತ್ಯ ಸಂಯೋಜನೆ ʼ ಮುಟ್ಟಿಸಿಕೊಂಡವನು ʼ ರಂಗರೂಪವನ್ನು ಮತ್ತೆ ಮತ್ತೆ ನೋಡಲು ಪ್ರಚೋದಿಸುತ್ತದೆ.

ʼಮುಟ್ಟಿಸಿಕೊಂಡವನುʼ ರಂಗಾಯಣಕ್ಕೆ ಯಾವ ಗ್ರಹಣ ಛಾಯೆಯೂ ಕವಿದಿಲ್ಲ ಎಂದು ಸಾಕ್ಷೀಕರಿಸುತ್ತಾನೆ ಹಾಗೆಯೇ ಮುಟ್ಟಲು ಹಿಂಜರಿಯುವ ಮನಸುಗಳಿಗೆ ಕಣ್ತೆರೆಸುತ್ತಾನೆ.

-೦-೦-೦-೦

(ವಿ.ಸೂ : ರಂಗಾಯಣದ ಭೂಮಿಗೀತದಲ್ಲಿ ಪ್ರತಿ ಭಾನುವಾರ ಸಂಜೆ 6.30ಕ್ಕೆ ಪ್ರದರ್ಶನವಾಗುತ್ತಿದೆ.)

Tags: dramaLankesh patrikeMuttisikondavanuP LankeshrangayanaTheater Review
Previous Post

ಚಂದ್ರಯಾನ – 3, ಯಶಸ್ವಿ ಆಯ್ತು.. ಇನ್ಮುಂದೆ ರಾಜಕೀಯ ಲಾಭ.. ನಷ್ಟದ ಲೆಕ್ಕ..!!

Next Post

ನಿಖಿಲ್ ಕುಮಾರ್ ಅಭಿನಯದ ನೂತನ ಚಿತ್ರ ನಿರ್ಮಾಣಕ್ಕೆ ಮುಂದೆ ಬಂದ ಲೈಕಾ ಪ್ರೊಡಕ್ಷನ್ಸ್‌.!

Related Posts

Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
0

16 ಬಜೆಟ್ ಮಂಡಿಸಿದವರು ಸಿದ್ದರಾಮಯ್ಯ. ದೇವರಾಜ್ ಅರಸ್ ದಾಖಲೆ ಮುರಿದು ಸಿಎಂ ಆಗಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸ ಸಿಎಂ ಮೇಲಿರಲಿ. ನಿಮ್ಮ ಆಶೀರ್ವಾದ ಇರೋವರೆಗೂ ಸಿದ್ದರಾಮಯ್ಯ ಅವರಿಗೆ...

Read moreDetails

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

July 12, 2025

CM Siddaramaiah: ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂದು: ಸಿ.ಎಂ.ಸಿದ್ದರಾಮಯ್ಯ ಮೆಚ್ಚುಗೆ..!!

July 12, 2025

Santhosh Lad: ಗಿಗ್, ಸಿನಿ ಹಾಗೂ ಮನೆಗೆಲಸ ಕಾರ್ಮಿಕರ ಕಲ್ಯಾಣಕ್ಕಾಗಿ ಅಧಿನಿಯಮ ಜಾರಿಗೆ ಕ್ರಮ..

July 12, 2025

DK Shivakumar: ಖುರ್ಚಿ ಸಿಗುವುದೇ ಕಷ್ಟ. ಸಿಕ್ಕಾಗ ತೆಪ್ಪಗೆ ಕುಳಿತುಕೊಳ್ಳಬೇಕು..

July 11, 2025
Next Post
ನಿಖಿಲ್ ಕುಮಾರ್ ಅಭಿನಯದ ನೂತನ ಚಿತ್ರ ನಿರ್ಮಾಣಕ್ಕೆ ಮುಂದೆ ಬಂದ ಲೈಕಾ ಪ್ರೊಡಕ್ಷನ್ಸ್‌.!

ನಿಖಿಲ್ ಕುಮಾರ್ ಅಭಿನಯದ ನೂತನ ಚಿತ್ರ ನಿರ್ಮಾಣಕ್ಕೆ ಮುಂದೆ ಬಂದ ಲೈಕಾ ಪ್ರೊಡಕ್ಷನ್ಸ್‌.!

Please login to join discussion

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ
Top Story

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

by ಪ್ರತಿಧ್ವನಿ
July 13, 2025
Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
Top Story

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

by ಪ್ರತಿಧ್ವನಿ
July 12, 2025
Top Story

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

by ಪ್ರತಿಧ್ವನಿ
July 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

July 13, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada