ಇಂದು ಕನ್ನಡ ಚಿತ್ರರಂಗದ ಧ್ರುವತಾರೆ, ವರನಟ, ನಟಸಾರ್ವಭೌಮ, ಅಭಿಮಾನಿಗಳನ್ನೇ ದೇವರೆಂದ ಅಣ್ಣವ್ರು, ಡಾ. ರಾಜ್ಕುಮಾರ್ರ ಜನ್ಮದಿನ. ಬೇಡರ ಕಣ್ಣಪ್ಪ ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮುತ್ತುರಾಜ್, ʻಭಕ್ತ ವಿಜಯʼ, ʻಹರಿಭಕ್ತʼ, ʻಓಹಿಲೇಶ್ವರʼ, ʻಭಕ್ತ ಕನಕದಾಸʼ, ನವಕೋಟಿ ʻನಾರಾಯಣʼ ಮುಂತಾದ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದರು.
1960ರ ದಶಕದಲ್ಲಿ, ʻಕಣ್ತೆರೆದು ನೋಡುʼ ʻಗಾಳಿಗೋಪುರʼ ʻನಂದಾದೀಪʼ, ʻಸಾಕು ಮಗಳುʼ ನಾಂದಿ ಮುಂತಾದ ಸಾಮಾಜಿಕ ಚಿತ್ರಗಳಲ್ಲಿಯೂ ಮುತ್ತುರಾಜ್ ನಟಿಸಿದರು. ʻರಣಧೀರ ಕಂಠೀರವʼ, ಕಿತ್ತೂರು ಚೆನ್ನಮ್ಮʼ, ʻಇಮ್ಮಡಿ ಪುಲಕೇಶಿʼ, ʻಶ್ರೀ ಕೃಷ್ಣ ದೇವರಾಯʼ ಮುಂತಾದ ಐತಿಹಾಸಿಕ ಚಿತ್ರಗಳು ಡಾ.ರಾಜ್ ಅಭಿನಯದಲ್ಲಿ ತೆರೆಕಂಡವು. 1971ರಲ್ಲಿ ಬಿಡುಗಡೆಯಾದ ಕಸ್ತೂರಿ ನಿವಾಸ ಮತ್ತು ಸಾಕ್ಷಾತ್ಕಾರ ಚಿತ್ರಗಳು ರಾಜ್ ಕುಮಾರ್ ಅವರ ಜನಪ್ರಿಯ ಚಿತ್ರಗಳಲ್ಲಿ ಮುಖ್ಯವಾದವು. ಈ ಚಿತ್ರಗಳಲ್ಲಿನ ʻಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದುʼ, ಹಾಗೂ ʻಒಲವೆ ಜೀವನ ಸಾಕ್ಷಾತ್ಕಾರʼ ಹಾಡುಗಳು ಜನಮನಗಳಲ್ಲಿ ವಿಶೇಷ ಸ್ಥಾನ ಪಡೆದಿವೆ.
ರಾಜ್ಕುಮಾರ್ ಅವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದ ಚಿತ್ರ 1971ರಲ್ಲಿ ತೆರೆಕಂಡ ʻಬಂಗಾರದ ಮನುಷ್ಯʼ. ಚಿತ್ರಮಂದಿರದಲ್ಲಿ ಸತತವಾಗಿ ಎರಡು ವರ್ಷಕ್ಕೂ ಹೆಚ್ಚಿನ ಅವಧಿಯ ಪ್ರದರ್ಶನಗೊಂಡು ಹೊಸ ದಾಖಲೆಯನ್ನು ನಿರ್ಮಿಸಿತು. ಹೀಗೆ 200ಕ್ಕೂ ಹೆಚ್ಚು ಸಿನಿಮಾಗಳನ್ನ ಡಾ.ರಾಜ್ ಕನ್ನಡ ಸಿನಿರಂಗಕ್ಕೆ ಕೊಡುಗೆಯನ್ನಾಗಿ ನೀಡಿದ್ದಾರೆ.
ಕೇವಲ ನಟನೆಯಲ್ಲದೆ, ಅತ್ಯುತ್ತಮ ಗಾಯಕರೂ ಆಗಿದ್ದ ಡಾ.ರಾಜ್ ಕನ್ನಡ ಗಾನಲೋಕಕ್ಕೂ ತಮ್ಮ ಅಪಾರ ಸೇವೆ ಸಲ್ಲಿಸಿದ್ದಾರೆ. ಇಂದು ಅಂತಹ ಮಹಾನ್ ಕಲಾವಿದನ ಜನ್ಮದಿನ. ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲ. ಆದರೆ, ರಾಜ್ಕುಮಾರ್ ಅವರನ್ನು ಸ್ಮರಿಸುವ ಕಾರ್ಯ ಈಗಲೂ ಆಗುತ್ತಿದೆ. ಅವರು ಹಾಕಿಕೊಟ್ಟ ಮಾರ್ಗದರ್ಶನವನ್ನು ಈಗಲೂ ಅನೇಕರು ಪಾಲಿಸುತ್ತಿದ್ದಾರೆ.
ಡಾ.ರಾಜ್ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ. ರಕ್ತದಾನ, ಅನ್ನದಾನ ಕೆಲಸಗಳು ಇಂದು ನಡೆಯುತ್ತಿವೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಸಮಾಧಿಗೆ ಕುಟುಂಬದವರು ಪೂಜೆ ಸಲ್ಲಿಸಲಿದ್ದಾರೆ. ರಾಜ್ ಸಮಾಧಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ.