ಸದ್ಯ, ರಾಜ್ಯ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ತೀವ್ರ ಮುಗಿ ಬಿದ್ದಿದ್ದಾರೆ. ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಬೆಂಬಲಿಗರು ಹೇಳುವ ಪ್ರಕಾರ ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಭಯಬಿದ್ದಿದ್ದು, ಸಿದ್ದರಾಮಯ್ಯ ಹೆಸರೆತ್ತದೆ ರಾಜ್ಯ ಬಿಜೆಪಿ ನಾಯಕರಿಗೆ ಐದು ನಿಮಿಷ ಭಾಷಣ ಮಾಡಲು ಸಾಧ್ಯವಿಲ್ಲವೆಂದು ಲೇವಡಿ ಮಾಡುತ್ತಿದ್ದಾರೆ.

ಈ ನಡುವೆ, ಮಾಜಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಅವರು ಸಿದ್ದರಾಮಯ್ಯರ ಬೆನ್ನಿಗೆ ನಿಂತಿದ್ದು, ಓರ್ವ ಜನಪರ ನಾಯಕನ ಮೇಳೆ ಅಷ್ಟ ದಿಕ್ಕುಗಳಿಂದ ನಿರಂತರ ಚುನಾವಣಾ ದಾಳಿ ಎಂದಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಬೆಂಬಲ ವ್ಯಕ್ತಪಡಿಸಿರುವ ಮಹದೇವಪ್ಪ ಅವರು, “ತಮ್ಮ ಹಲವಾರು ಜನಪರ ಯೋಜನೆಗಳು ಮತ್ತು ಐತಿಹಾಸಿಕ ಕಾಯ್ದೆಗಳ ಜಾರಿಯ ಮೂಲಕ ಕೆಳವರ್ಗದ ಜೊತೆಗೆ ಎಲ್ಲ ವರ್ಗದ ನಂಬಿಕೆಯ ಶಕ್ತಿಯಾಗಿ ಈಗಾಗಲೇ ಸಾಬೀತುಪಡಿಸಿರುವ ಒಬ್ಬ ವ್ಯಕ್ತಿಯನ್ನು ಕೇಂದ್ರವಾಗಿಸಿ ನಡೆಯುತ್ತಿರುವ ನಿರಂತರ ದಾಳಿಗಳು ಜನಪರವಾಗಿ ಇಲ್ಲದ ಫ್ಯೂಡಲ್ ಮತ್ತು ಕೋಮು ಶಕ್ತಿಗಳ ಕ್ರೌರ್ಯ ಮತ್ತು ಅಸಹನೆಯ ಸ್ಪಷ್ಟವಾದ ಅನಾವರಣವಾಗಿದೆ”
“ಬೊಮ್ಮಾಯಿಯವರಿಂದ ಆರಂಭಗೊಂಡು, ಈಶ್ವರಪ್ಪ, ಸಿ ಟಿ ರವಿ, ನಳೀನ್ ಕುಮಾರ್ ಕಟೀಲ್, RSS, ಮನುವಾದಿ ಮಾಧ್ಯಮ ಹಾಗೂ ಮುಂತಾದವರು Shift wise ನಂತೆ ಅಷ್ಟ ದಿಕ್ಕುಗಳಿಂದ ತಮ್ಮ ಟೀಕೆಯನ್ನು ಮುಂದುವರೆಸುತ್ತಿದ್ದಾರೆ.”
“ಇಂತಹ ಸಂದರ್ಭದಲ್ಲಿ ಜನಪರ ರಾಜಕಾರಣವನ್ನು ರಕ್ಷಿಸುವ ಹೊಣೆಯು ಜನಪರ ರಾಜಕಾರಣವನ್ನು ಬಯಸುವಂತಹ ಎಲ್ಲರ ಆದ್ಯ ಜವಾಬ್ದಾರಿ ಆಗಿದೆ. ಜನಪರವಾಗಿ ಕೆಲಸ ಮಾಡಿದವರನ್ನು ಮಾನಸಿಕವಾಗಿ ಕುಗ್ಗಿಸಲು ವಿಪರೀತ ದಾಳಿ ನಡೆಸುವಾಗಲೂ ಕೂಡಾ ನಾವು ಮೌನವಾಗಿದ್ದರೆ ಅದಕ್ಕಿಂತ ಕೆಟ್ಟದ್ದು ಇನ್ನೊಂದಿಲ್ಲ.” ಎಂದು ಡಾ. ಮಹದೇವಪ್ಪ ಅವರು ಬರೆದಿದ್ದಾರೆ.
