ರಾಜ್ಯದಲ್ಲಿ ಸಾಲು ಸಾಲು ಹೃದಯಾಘಾತ (Heart attack) ಪ್ರಕರಣಗಳು ಜನತೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಹೃದ್ರೋಗ ಆಸ್ಪತ್ರೆಗಳಿಗೆ ತಪಾಸಣೆಗೆ ಎಂದು ಬರುವ ಜನರ ಸಂಖ್ಯೆ ಬಹಳ ಹೆಚ್ಚಾಗಿದೆ. ಸಣ್ಣ ವಯಸ್ಸಿನಿಂದ ವಯೋವೃದ್ಧರ ತನಕ ಎಲ್ಲರಲ್ಲೂ..ಆತಂಕ..ಆತಂಕ..ಆತಂಕ
ಆದ್ರೆ ಈ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಹೃದಯ ತಜ್ಞರು (Heart specialist), ಕೆಲವು ಖ್ಯಾತ ವೈದ್ಯರು ಜನ ಸಾಮಾನ್ಯರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ಯಾವುದೇ ಆತಂಕ ಬೇಡ ಆದ್ರೆ ಎಚ್ಚರಿಕೆ ವಹಿಸುವುದು ಅತಿ ಮುಖ್ಯ ಎಂಬ ಸಲಹೆ ನೀಡಿದ್ದಾರೆ.

ಸಾಮಾನ್ಯವಾಗಿ ಎದೆನೋವು ಸಮಸ್ಯೆ ಬಂದಾಗ ಗ್ಯಾಸ್ಟ್ರಿಕ್ (Gastric) ಎಂದೋ ಅಥವಾ ಮತ್ತಿನ್ನೇನೋ ಎಂದು ಸುಮ್ಮನಾಗಬಾರದು.ಎದೆಯ ಮೇಲೆ 10 ಕೆಜಿ ಇಟ್ಟಂತಹ ಅನುಭವವಾದ್ರೆ, ತಕ್ಷಣಕ್ಕೆ ಸರಿ ಹೋಗದೆ 30 ನಿಮಿಷಗಳವರೆಗೆ ಇದೇ ರೀತಿ ಅನ್ನಿಸಿದ್ರೆ ನಿರ್ಲಕ್ಷಿಸಬಾರದು, ವಿಳಂಬ ಮಾಡದೆ ಕೂಡಲೇ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು.
ನಿಮ್ಮ ಎದೆಯಲ್ಲಿ ನೋವು ಕಾಣಿಸಿಕೊಂಡಾಗ ಅದು ಹೃದಯಾಘಾತದ ಮುನ್ಸೂಚನೆಯಾ ಅಥವಾ ಗ್ಯಾಸ್ಟ್ರಿಕ್ ಕಾರಣಕ್ಕೆ ನೋವು ಉಂಟಾಗಿದ್ಯಾ ಎಂಬುದು ತಪಾಸಣೆಯಿಂದ ಮಾತ್ರ ತಿಳಿಯಲು ಸಾಧ್ಯ.ಕುತ್ತಿಗೆಯ ಕೆಳಭಾಗದಲ್ಲಿ ಎಲ್ಲಿ ನೋವು ಬಂದರೂ ನಿರ್ಲಕ್ಷಿಸಬಾರದು.ರೋಗಿಯು ತನ್ನ ಆರೋಗ್ಯ ಲಕ್ಷಣಗಳನ್ನು ತಿಳಿದುಕೊಳ್ಳದೆ ಗ್ಯಾಸ್ಟ್ರಿಕ್ ಔಷಧ ತೆಗೆದುಕೊಳುವುದು ಉತ್ತಮವಲ್ಲ ಎಂದು ವೈದ್ಯರು ಹೇಳುತ್ತಾರೆ.

ಹೀಗೆ ಹೃದಯಾಘಾತವನ್ನು ಮೂರು ಹಂತದಲ್ಲಿ ವಿಂಗಡಿಸಬಹುದು. ಸಾಮಾನ್ಯ, ಮಾಧ್ಯಮ ಹಾಗೂ ಗಂಭೀರ ಲಕ್ಷಣಗಳು. ಅತಿ ಮಿಖ್ಯ ಅಂಶ ಅಂದ್ರೆ ಎಲ್ಲದಕ್ಕೂ ಚಿಕಿತ್ಸೆಯಿದೆ. ಇನ್ನು ಯುವಕರಲ್ಲಿ ಹೃದಯಾಘಾತಗಳು ಉಂಟಾಗಲು ರಿಸ್ಕ್ ಫ್ಯಾಕ್ಟರ್‌ಗಳೂ ಕಾರಣ ಎನ್ನಲಾಗಿದೆ.
ಹೆಚ್ಚೆಚ್ಚು ದುರಭ್ಯಾಸಗಳು ಈ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಮದ್ಯಪಾನ ಮತ್ತು ಧೂಮಪಾನ ಯುವಕರ ಪ್ರಾಣಕ್ಕೆ ಕುತ್ತಾಗಿದೆ. ಉಸಿರಾಟದ ಸಮಸ್ಯೆ ಹಾಗೂ ತಲೆಸುತ್ತುವ ಲಕ್ಷಣಗಳೂ ಕಂಡುಬರಬಹುದು.
ಇನ್ನು ವಿಪರೀತ ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ಮೊದಲಾದ ಸಮಸ್ಯೆ ಇರುವವರು ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅತೀ ಅಗತ್ಯ.ಜನ ಸಾಮಾನ್ಯರು ಅರಿತುಕೊಳ್ಳಬೇಕಿರುವುದು ಏನಂದ್ರೆ ಹೃದಯಾಘಾತವನ್ನು ತಡೆಗಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಯೋಗ, ವ್ಯಾಯಾಮ, ವಾಕಿಂಗ್‌ನಂತಹ ಚಟುವಟಿಕೆಗಳನ್ನು ಹೆಚ್ಚೆಚ್ಚು ರೂಢಿಸಿಕೊಳ್ಳಬೇಕು.