ಮೈಸೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ವೈಫಲ್ಯವನ್ನ ಮುಚ್ಚಿಕೊಳ್ಳಲು ಇಲ್ಲಸಲ್ಲದ ಹೇಳಿಕೆಗಳನ್ನ ನೀಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದರು.
ಮುಂಬೈಗೆ ಹುಡುಗಿಯರನ್ನ ಕಳುಹಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದವರು ಹಾಗೂ ರಾಜಕಾರಣದ ಕುಟುಂಬದಿಂದ ಬಂದವರು. ಅವರು ಇಂತಹ ಹೇಳಿಕೆ ಕೊಡುವಂತಹದ್ದು ಸರಿಯಲ್ಲ. ಅಲ್ಲದೇ ಹಲವು ಶಾಸಕರು ಮುಂಬೈಗೆ ಹೋಗಲು ಕಾರಣ ನೀವು ಹಾಗೂ ನಿಮ್ಮ ವೈಫಲ್ಯ. ಅದನ್ನೆಲ್ಲಾ ಮುಚ್ಚಿಕೊಳ್ಳಲು ಹಾಗೂ ಮಸಿ ಬಳಿಯಲು ಅಥವಾ ಹಿಟ್ ಅಂಡ್ ರನ್? ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.

ಅಲ್ಲದೇ ಈ ವಿಷಯದಲ್ಲಿ ಮಸಿ ಬಳಿದು ಹೋಗುವುದು ಸರಿಯಲ್ಲ. ಇದು ಒಬ್ಬ ನಾಯಕನ ಗುಣಲಕ್ಷಣವೂ ಅಲ್ಲ. ಹೀಗಾಗಿ ಯಾರು ಆ ಹೆಣ್ಣು ಮಕ್ಕಳು ಸಂಪೂರ್ಣ ಮಾಹಿತಿ ಕೊಡಿ ಎಂದು ಆಗ್ರಹಿಸಿದ ಅವರು, ಕುಮಾರಸ್ವಾಮಿ ಸಿನಿಮಾದವರು ಕಲ್ಪನಾ ಲಹರಿಯಲ್ಲಿ ಹೇಳಬಾರದು. ಹುಡುಗ ಹುಡುಗಿ ಮಿಕ್ಕಿದ್ದು ಪರದೆ ಮೇಲೆ ನೋಡಿ ಎನ್ನುತ್ತಾರೆ. ಹೀಗಾಗಿ ಕುಮಾರಸ್ವಾಮಿ ಹೇಳಿರುವುದು ಕಟ್ಟು ಕಥೆ, ಸುಳ್ಳಿನ ಕಂತೆ. ನಾನು ಪ್ರತ್ಯಕ್ಷದರ್ಶಿಯಾಗಿದ್ದೆ ಎಂದರು.
ಯಾರೋ ಪಿಂಪ್ ಮಾತು ಕೇಳಿ ಈ ರೀತಿ ಮಾತು ಸರಿಯಲ್ಲ ಎಂದ ಅವರು, ಯಾರದೋ ಮುಖಕ್ಕೆ ಮಸಿ ಬಳಿಯಲು ಈ ರೀತಿ ಹೇಳಿಕೆ ನೀಡಿದ್ದಾರೆ. ಈಗ ಇವುಗಳ ಬಗ್ಗೆ ಮಾತನಾಡುತ್ತಿರುವ ತಾವು ಮೂರು ವರ್ಷದಿಂದ ಏನು ಮಾಡುತ್ತಿದ್ದಿರಿ? ನಿಮ್ಮ ದುರಂಹಕಾರ, ಜಿಗುಪ್ಸೆ ಹಾಗೂ ನಿಮ್ಮ ವರ್ತನೆಯಿಂದ ಎಲ್ಲರೂ ಹೋದವರು. ಈಗ ಜವಾವ್ದಾರಿಯಿಲ್ಲದೆ ಮಾತನಾಡುತ್ತೀರಾ ಎಂದು ಕಿಡಿಕಾರಿದರು.
ಇದೇ ವೇಳೆ ಕನ್ನಡ ಸಾಹಿತ್ಯ ಸಮ್ಮೇಳನ ವಿಚಾರದ ಕುರಿತ ಪ್ರತಿಕ್ರಿಯೆ ನೀಡಿದ ಅವರು, ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಒಬ್ಬ ಅಯೋಗ್ಯ. ಇವೆರಲ್ಲಾ ಸೇರಿಕೊಂಡು ಕನ್ನಡ ಭಾಷೆಗೆ ಕೇಸರಿ ಬಣ್ಣ ಬಳೆಯುತ್ತಿದ್ದಾರೆ. ಮುಸ್ಲಿಮರನ್ನ ಸಮ್ಮೇಳನದಿಂದ ಹೊರಗಿಟ್ಟಿರುವುದು ತಪ್ಪು. ಮುಸ್ಲಿಂ ಸಮುದಾಯದಲ್ಲೂ ಖ್ಯಾತ ನಾಮ ಸಾಹಿತಿಗಳು, ಕವಿಗಳು ಇದ್ದಾರೆ. ಈ ಸಾಹಿತ್ಯ ಸಮ್ಮೇಳನವನ್ನ ನಾನು ಬಹಿಷ್ಕರಿಸುತ್ತಿದ್ದೇನೆ ಹಾಗೂ ಇದರ ಬದಲಾಗಿ ಬೆಂಗಳೂರಿನಲ್ಲಿ ನಡೆಯುವ ಜನ ಸಾಹಿತ್ಯ ಸಮ್ಮೇಳನಕ್ಕೆ ಹೋಗುತ್ತಿದ್ದೇನೆ ಎಂದ ಅವರು, ನಾಡಿನ ಎಲ್ಲಾ ಜನರು ಕನ್ನಡ ಸಾಹಿತ್ಯ ಸಮ್ಮೇಳನವಮ್ನ ಬಹಿಷ್ಕರಿಸಬೇಕು ಎಂದರು.
ಇನ್ನೂ ವಿಧಾನಸೌಧದಲ್ಲಿ ಹಣ ಪತ್ತೆ ವಿಚಾರದ ಬಗ್ಗೆ ಮಾತನಾಡಿದ ಅವರು, ಇಷ್ಟು ಭ್ರಷ್ಟಾಚಾರ ಹಿಂದೆ ಎಂದೂ ನೋಡಿರಲಿಲ್ಲ. ನಾನು ಬಹಳ ಜನ ಮಂತ್ರಿಗಳು, ಮುಖ್ಯಮಂತ್ರಿಗಳನ್ನು ನೋಡಿದ್ದೇನೆ ಮತ್ತು ಅವರುಗಳ ಜೊತೆಗೆ ಕೆಲಸ ಮಾಡಿದ್ದೇನೆ. ಆದರೆ ಇಂದು ಭ್ರಷ್ಟಾಚಾರ, ಸುಳ್ಳು, ಬಾಯಿಗೆ ಬಂದಂತೆ ಮಾತನಾಡುವುದು ಜಾಸ್ತಿಯಾಗಿದೆ ಎಂದು ಟೀಕಿಸಿದ ವಿಶ್ವನಾಥ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಯನ್ನು ಸಹ ಟೀಕಿಸಿದರು.