ಕರೋನಾ ಎರಡನೇ ಅಲೆ ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದು, ದೇಶದ ಹಲವೆಡೆ ನೈಟ್ ಕರ್ಫ್ಯೂ, ವಾರಾಂತ್ಯ ಲಾಕ್‌ಡೌನ್‌ಗೆ ಕಾರಣವಾಗಿದೆ. ಈ ನಡುವೆ, ಕರ್ನಾಟಕ ರಾಜ್ಯ ಸರ್ಕಾರವೂ ಕೂಡಾ ಲಾಕ್‌ಡೌನ್ ಹೇರುವ ಸೂಚನೆಯನ್ನು ನೀಡಿದೆ.
ಲಾಕ್‌ಡೌನ್ ಹೇರುವ ಅನಿವಾರ್ಯತೆ ಬಂದರೆ ರಾಜ್ಯ ಸರ್ಕಾರವು ಲಾಕ್‌ಡೌನ್ ಹೇರಲಿದೆ ಎಂದು ರಾಜ್ಯ ಸರ್ಕಾರವು ಎಚ್ಚರಿಸಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಇದೇ ಮಾತನ್ನು ಹೇಳಿದ್ದಾರೆ.
ತಮ್ಮ ಒಳಿತಿಗಾಗಿ ಜನರೂ ಕೂಡಾ ಎಚ್ಚೆತ್ತುಕೊಳ್ಳಬೇಕು. ಜನರು ಮುನ್ನೆಚ್ಚರಿಕೆ ವಹಿಸದಿದ್ದರೆ ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಗತ್ಯ ಬಿದ್ದರೆ, ಮತ್ತೆ ಲಾಕ್‌ಡೌನ್ ಹೇರಲಾಗುವುದು. ಅಂತಹ ಅನಿವಾರ್ಯತೆಯನ್ನು ಸೃಷ್ಟಿಸಬಾರದೆಂದು ಮುಖ್ಯಮಂತ್ರಿ ಕರೆ ನೀಡಿದ್ದಾರೆ.
ಕರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳದ ಕುರಿತಂತೆ ರಾಜ್ಯ ಸರ್ಕಾರದ ಕ್ರಮಗಳ ಬಗ್ಗೆ ವಿವರಿಸಿದ ಯಡಿಯೂರಪ್ಪ, ಈ ಕುರಿತು ಪ್ರಧಾನಮಂತ್ರಿಗೆ ನಮ್ಮ ಕ್ರಮಗಳನ್ನು ತಿಳಿಸಿದ್ದೇವೆ. ಕರೋನಾ ಪ್ರಕರಣಗಳ ಹೆಚ್ಚಳ ಇರುವ ಜಿಲ್ಲೆಗಳಲ್ಲಿ ರಾತ್ರಿ ಹೊತ್ತಿನ ಕರ್ಫ್ಯೂ ಹೇರಿರುವುದನ್ನು ನಾವು ಪ್ರಧಾನಿ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದ್ದಾರೆ.
ಜನರು ಸ್ವಯಂ ಪ್ರೇರಿತವಾಗಿ ಫೇಸ್ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಸ್ಯಾನಿಟೈಸರ್ ಬಳಸಿ ಕೈ ತೊಳೆದುಕೊಳ್ಳುವುದು ಮೊದಲಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಜನರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸಬೇಕು. ನಮ್ಮೊಂದಿಗೆ ಸಹಕರಿಸದಿದ್ದರೆ ನಾವು ಕಠಿಣ ಕ್ರಮಗಳನ್ನು ಪ್ರಾರಂಭಿಸುತ್ತೇವೆ, ಅದಕ್ಕೆ ಜನರು ಅವಕಾಶ ನೀಡಬಾರದು. ಜನರು ನಮ್ಮೊಂದಿಗೆ ಸಹಕರಿಸಬೇಕೆಂದು ನಾನು ಬಯಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ತಜ್ಞರು ಲಾಕ್‌ಡೌನ್‌ಗೆ ಶಿಫಾರಸ್ಸು ಮಾಡಿದ್ದಾರೆ. ಇದನ್ನು ಮನದಲ್ಲಿಟ್ಟು ಜನರು ಸಹಕರಿಸಬೇಕು ಎಂದು ಅವರು ಹೇಳಿದ್ದಾರೆ.
ಈ ನಡುವೆ, ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಸರ್ಕಾರಕ್ಕೆ ಲಾಕ್‌ಡೌನ್ ಮಾಡುವ ಉದ್ದೇಶ ಇಲ್ಲ. ನಾನಾಗಲಿ, ಮುಖ್ಯಮಂತ್ರಿಯಾಗಲಿ ಲಾಕ್‌ಡೌನ್ ಮಾಡುವುದಾಗಿ ಹೇಳಿಲ್ಲ. ನಾವು ಹೇಳುತ್ತಿರುವುದು ಲಾಕ್‌ಡೌನ್ ಹೇರುವಂತಹ ಅತಿರೇಕದ ಪರಿಸ್ಥಿತಿಗೆ ನಮ್ಮನ್ನು ತಳ್ಳಬೇಡಿ ಎಂದು. ಲಾಕ್‌ಡೌನ್ ಹೇರಲು ಸರ್ಕಾರಕ್ಕೂ ಮನಸ್ಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರೋನವೈರಸ್ ಅನ್ನು ಮಟ್ಟ ಹಾಕಲು ತಾಂತ್ರಿಕ ಸಲಹಾ ಸಮಿತಿಯು ಸ್ವಲ್ಪ ಸಮಯದವರೆಗೆ ಲಾಕ್‌ಡೌನ್ ಅನ್ನು ಶಿಫಾರಸು ಮಾಡಿದೆ ಎನ್ನಲಾಗಿದೆ.