ಸಾರಿಗೆ ನೌಕರರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಆರನೇ ವೇತನ ಆಯೋಗ ಜಾರಿಯಾಗಲೀ, ಇತರೆ ಸರ್ಕಾರಿ ನೌಕರರಿಗೂ ತಮಗೂ ಇರುವ ವೇತನ ತಾರತಮ್ಯ ತೊಲಗಲಿ ಎಂಬ ನೌಕರರ ಬೇಡಿಕೆಗೆ ಸರ್ಕಾರ ಕೂಡ ಮೊಂಡು ಹಿಡಿದು ಕೂತಿದೆ. ಆರನೇ ವೇತನ ಆಯೋಗ ಜಾರಿ ಸಾಧ್ಯವೇ ಇಲ್ಲ ಎಂದಿರುವ ಸರ್ಕಾರ, ಸಾರಿಗೆ ನೌಕರರ ವಿರುದ್ಧ ಕಠಿಣ ಕ್ರಮಗಳಿಗೆ ಮುಂದಾಗಿದೆ.
ಈ ನಡುವೆ ಸಾರಿಗೆ ನೌಕರರ ಮುಷ್ಕರದ ಬಿಸಿ ಜನಸಾಮಾನ್ಯರಿಗೆ ತಟ್ಟಿದ್ದು, ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ತಮ್ಮತಮ್ಮ ಊರುಗಳಿಗೆ ಹೋಗುವವರು, ಹಬ್ಬದ ಖರೀದಿ, ವ್ಯಾಪಾರ- ವಹಿವಾಟು ಮಾಡುವವರಿಗೆ ತೀರಾ ತೊಂದರೆಯಾಗಿದೆ. ಮತ್ತೊಂದು ಕಡೆ ಇಂತಹ ಹೊತ್ತಲ್ಲಿ ಜನರ ನೆರವಿಗೆ ಬರಬೇಕಿದ್ದ ರೈಲ್ವೆ ಇಲಾಖೆ, ಈಗಲೂ ಕೌಂಟರ್ ಟಿಕೆಟ್ ಅವಕಾಶಗಳನ್ನು ಮುಕ್ತವಾಗಿ ನೀಡಿದ ಮೂರು-ನಾಲ್ಕು ಪಟ್ಟು ದರಕ್ಕೆ ಕೌಂಟರ್ ಟಿಕೆಟ್(ಮುಂಗಡ ಬುಕಿಂಗ್ ರಹಿತ) ಮಾರಾಟ ಮಾಡುವ ಮೂಲಕ ಜನರನ್ನು ಲೂಟಿ ಹೊಡೆಯುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಒಂದು ಕಡೆ ನ್ಯಾಯಯುತ ವೇತನ ಮತ್ತು ಸೌಲಭ್ಯಗಳಿಗಾಗಿ ಹಲವು ಬಾರಿ ಸೌಹಾರ್ದಯುತವಾಗಿ ಸರ್ಕಾರದ ಗಮನ ಸೆಳೆದರೂ ಸರ್ಕಾರ ಸ್ಪಂದಿಸಿಲ್ಲ. ಹಾಗಾಗಿ ಈ ಮುಷ್ಕರ ಅನಿವಾರ್ಯ ಎಂಬುದು ಸಾರಿಗೆ ನೌಕರರ ಸಮರ್ಥನೆ. ಕರೋನಾ ಸಂಕಷ್ಟದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಜೊತೆಗೆ ಸಾರಿಗೆ ನಿಗಮವೇ ಭಾರೀ ನಷ್ಟದಲ್ಲಿದೆ. ಹಾಗಾಗಿ ನಷ್ಟದಲ್ಲಿರುವ ಸಂಸ್ಥೆಯ ಉದ್ಯೋಗಿಗಳಿಗೆ ವೇತನ ಹೆಚ್ಚಿಸಿ ಮತ್ತೆ ನಷ್ಟಕ್ಕೆ ತಳ್ಳುವುದು ಆಗದು ಎಂಬುದು ಸರ್ಕಾರದ ಪಟ್ಟು.
ಇದು ಕೇವಲ ವೇತನ ಹೆಚ್ಚಳ ಬೇಡಿಕೆ ಮತ್ತು ಅದಕ್ಕೆ ಸರ್ಕಾರದ ನಕಾರಕ್ಕೆ ಮಾತ್ರ ಸೀಮಿತವಾಗಿದ್ದರೆ ಬಹುಶಃ ಈ ಮುಷ್ಕರ ಇಷ್ಟೊಂದು ಸದ್ದು ಮಾಡುತ್ತಿರಲಿಲ್ಲ. ಈ ಮುಷ್ಕರದ ಹಿಂದೆ ಸರ್ಕಾರಿ ನೌಕರರ ವೇತನದ ವಿಷಯದಲ್ಲಿ ಸರ್ಕಾರಗಳು ಕಾಲಾನುಕಾಲದಿಂದ ಅನುಸರಿಸಿಕೊಂಡುಬಂದಿರುವ ತಾರತಮ್ಯದ ಅನ್ಯಾಯದ ಇತಿಹಾಸವಿದೆ. ನಿಜವಾಗಿಯೂ ಶ್ರಮ ಮತ್ತು ಜೀವ ಪಣಕ್ಕೊಡ್ಡಿ ಕೆಲಸ ಮಾಡುವ ಸಾರಿಗೆ ನೌಕರರಿಗೆ ಅವರ ಶ್ರಮ ಮತ್ತು ತೆಗೆದುಕೊಳ್ಳುವ ಕಷ್ಟಕ್ಕೆ ಸಮನಾದ ವೇತನ ನೀಡಲಾಗುತ್ತಿಲ್ಲ. ಸಾರಿಗೆ ಇಲಾಖೆಯೊಂದೇ ಅಲ್ಲ, ಶಿಕ್ಷಣ, ಆರೋಗ್ಯ ಮತ್ತಿತರ ಇಲಾಖೆಗಳು ಸೇರಿದಂತೆ ತೀರಾ ಅಗತ್ಯ ನಾಗರಿಕ ಸೌಕರ್ಯ ಮತ್ತು ಸೇವೆಗಳನ್ನು ಒದಗಿಸುವ ನೌಕರರ ವೇತನದ ವಿಷಯದಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ತಳಮಟ್ಟದಲ್ಲಿ ಹೆಚ್ಚು ಶ್ರಮ ಮತ್ತು ಸವಾಲಿನ ಕೆಲಸ ಮಾಡುವ ಪ್ರಾಥಮಿಕ ಶಾಲೆ ಶಿಕ್ಷಕರು, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳ ವೇತನ ಮತ್ತು ಅದೇ ಇಲಾಖೆಗಳಲ್ಲಿ ಉನ್ನತ ಮಟ್ಟದಲ್ಲಿರುವ ಮತ್ತು ಕಡಿಮೆ ಶ್ರಮದ ಮತ್ತು ಆರಾಮದಾಯಕ ಕೆಲಸ ಮಾಡುವ ಸಿಬ್ಬಂದಿಯ ವೇತನದ ನಡುವಿನ ಅಗಾಧ ಅಂತರ ನೋಡಿದರೆ ಇದು ಅರ್ಥವಾಗುತ್ತದೆ.

ಚಾಲಕರು, ನಿರ್ವಾಹಕರು ಮತ್ತು ಮೆಕಾನಿಕ್ ಮುಂತಾದ ಸಹಾಯಕ ಸಿಬ್ಬಂದಿಗಳ ನಡುವೆಯೇ ಸರ್ಕಾರಿ ವಿವಿಧ ಇಲಾಖೆಗಳಲ್ಲಿ ನೀಡುವ ವೇತನಕ್ಕೂ, ಕೆಎಸ್ ಆರ್ ಟಿಸಿಯಲ್ಲಿ ನೀಡಲಾಗುತ್ತಿರುವ ವೇತನಕ್ಕೂ ಹೋಲಿಸಿದರೂ ಅಗಾಧ ತಾರತಮ್ಯ ಎದ್ದು ಕಾಣುತ್ತದೆ ಎಂಬುದು ಸಾರಿಗೆ ನೌಕರರ ಅಳಲು. ಕೆಎಸ್ ಆರ್‌ಟಿಸಿಯ ವಿವಿಧ ನಿಗಮಗಳಲ್ಲಿ ಸದ್ಯ ಚಾಲ್ತಿಯಲ್ಲಿರುವ ವೇತನ ಪದ್ಧತಿಯ ಪ್ರಕಾರ, ಚಾಲಕರಿಗೆ 12,400, ನಿರ್ವಾಹಕರಿಗೆ 11,640 ಹಾಗೂ ತಾಂತ್ರಿಕ ಸಹಾಯಕ ಸಿಬ್ಬಂದಿಗೆ 11,640 ಮೂಲ ವೇತನ ಇದೆ. ಅದೇ ವೇಳೆ, ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಚಾಲಕರಿಗೆ ಮೂಲ ವೇತನ 21, 400 ಇದ್ದರೆ, ನಿರ್ವಾಹಕರಿಗೆ 19,950 ಮತ್ತು ತಾಂತ್ರಿಕ ಸಹಾಯಕ ಸಿಬ್ಬಂದಿಗೆ 19,950 ಮೂಲ ವೇತನ ನೀಡಲಾಗುತ್ತಿದೆ! ಅಂದರೆ, ದುಪ್ಪಟ್ಟು ವ್ಯತ್ಯಾಸ ಕಣ್ಣಿಗೆ ರಾಚುತ್ತಿದೆ. ಆ ಹಿನ್ನೆಲೆಯಲ್ಲಿ ನೋಡಿದರೆ, ಸಾರಿಗೆ ನೌಕರರ ಮುಷ್ಕರ, ನ್ಯಾಯಸಮ್ಮತ ಮತ್ತು ತೀರಾ ಅನ್ಯಾಯದ ವಿರುದ್ಧದ ನ್ಯಾಯದ ಹಕ್ಕೊತ್ತಾಯ ಎನಿಸದೇ ಇರದು
ಆದರೆ, ಸರ್ಕಾರ, ಸಾರಿಗೆ ನೌಕರರಿಗೆ ನೀಡುವ ಭತ್ಯೆ, ಬೋನಸ್, ಉಚಿತ ಪಾಸ್ ಮುಂತಾದ ಸೌಲಭ್ಯಗಳ ಪಟ್ಟಿ ನೀಡಿ, ಈ ವೇತನ ತಾರತಮ್ಯವನ್ನು ಸಮರ್ಥಿಸಿಕೊಳ್ಳುತ್ತಿದೆ. ಜೊತೆಗೆ ಮುಖ್ಯವಾಗಿ ಆದಾಯ ಮೀರಿದ ವೆಚ್ಚದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ನಿಗಮಗಳ ಆರ್ಥಿಕ ಸ್ಥಿತಿ ಕುರಿತ ಅಂಕಿಅಂಶಗಳನ್ನೂ ಮಂಡಿಸಿ, ನಷ್ಟದ ಉದ್ದನೆಯ ಪಟ್ಟಿಯನ್ನೇ ಸರ್ಕಾರ ಮಂಡಿಸುತ್ತಿದೆ.
ಕೆಎಸ್‌ಆರ್‌ಟಿಸಿ ದಿನವೊಂದಕ್ಕೆ 8.32 ಕೋಟಿ ರೂಪಾಯಿ ಆದಾಯ ಗಳಿಸುತ್ತದೆ. ಆದರೆ, ಅದರ ದೈನಂದಿನ ಕಾರ್ಯಾಚರಣೆ ವೆಚ್ಚ 9.94 ಕೋಟಿ ಆಗುತ್ತದೆ! ಅದೇ ರೀತಿ ಬಿಎಂಟಿಸಿ ದಿನವೊಂದಕ್ಕೆ ಬರೋಬ್ಬರಿ 3.08 ಕೋಟಿ ರೂ. ಆದಾಯ ಗಳಿಸಿದರೆ, ಅದರ ನಿರ್ವಹಣಾ ವೆಚ್ಚ 6.13 ಕೋಟಿಯಷ್ಟಿದೆ!
ಹಾಗೇ ವಾಯುವ್ಯ ಸಾರಿಗೆ ನಿಗಮದ ದೈನಂದಿನ ಲಾಭ 4.48 ಕೋಟಿ ರೂಗಳಾದರೆ, ವೆಚ್ಚ 5.92 ಕೋಟಿ. ಈಶಾನ್ಯ ಸಾರಿಗೆ ನಿಗಮದ ದೈನಂದಿನ ಆದಾಯ 4.37 ಕೋಟಿಯಾದರೆ, ವೆಚ್ಚ 5.17 ಕೋಟಿ ರೂ.! ಹಾಗೇ, ಒಟ್ಟು ನಾಲ್ಕು ನಿಗಮಗಳ ದೈನಂದಿನ ಒಟ್ಟು ಆದಾಯ 20.25 ಕೋಟಿ ರೂಪಾಯಿಗಳಾದರೆ, ಅವುಗಳ ದೈನಂದಿನ ಕಾರ್ಯಾಚರಣೆ ವೆಚ್ಚ 27.16 ಕೋಟಿ ರೂಪಾಯಿ! ಅಂದರೆ; ಆದಾಯಕ್ಕಿಂತ ಖರ್ಚು ಹೆಚ್ಚು ಎಂಬುದನ್ನು ಸಾರಿಗೆ ಇಲಾಖೆಯ ಅಂಕಿಅಂಶಗಳು ಹೇಳುತ್ತವೆ. ನಾಲ್ಕು ನಿಗಮಗಳ ಕಾರ್ಯಾಚರಣೆಯ ವೆಚ್ಚದಲ್ಲಿ ಇಂಧನ ವೆಚ್ಚ ಶೇ. 36.3 ರಷ್ಟಾದರೆ, ಸಿಬ್ಬಂದಿ ವೆಚ್ಚ ಶೇ.44.5ರಷ್ಟು. ಮತ್ತು ಇತರೆ ವೆಚ್ಚಗಳು ಶೇ.20ರಷ್ಟು. ಹಾಗೇ, ನಾಲ್ಕು ನಿಗಮಗಳಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ಒಟ್ಟು ಸಂಖ್ಯೆ 1,11,708 ಇದೆ. ಈ ಪೈಕಿ 31,826 ಮಂದಿ ಚಾಲಕರಿದ್ದರೆ, ನಿರ್ವಾಹಕರು 12,571 ಮಂದಿ ಇದ್ದಾರೆ. 15,172 ತಾಂತ್ರಿಕ ಸಿಬ್ಬಂದಿ ಇದ್ದಾರೆ ಎಂಬುದು ಇಲಾಖೆಯ ಮಾಹಿತಿ.
ಈ ಲೆಕ್ಕಾಚಾರಗಳನ್ನು ಗಮನಿಸಿದರೆ, ಸಾರಿಗೆ ಇಲಾಖೆಯ ಸಿಬ್ಬಂದಿ ಹೊರೆ ಮತ್ತು ನಷ್ಟದ ಹೊರೆಯ ಅಂದಾಜು ಸಿಗದೇ ಇರದು. ಆದರೆ, ನಿರಂತರ ನಷ್ಟದಲ್ಲಿರುವ ಸಾರಿಗೆ ನಿಗಮಗಳನ್ನು ಸುಧಾರಣೆಯ ನಿಟ್ಟಿನಲ್ಲಿ ಸರ್ಕಾರಗಳು ಯಾವ ಕ್ರಮಕೈಗೊಂಡಿವೆ? ಆ ಕ್ರಮಗಳು ಏಕೆ ಫಲ ನೀಡಿಲ್ಲ? ನಿಗಮಗಳು ನಷ್ಟದಲ್ಲಿರುವಾಗಲೂ ಪ್ರತಿವರ್ಷ ಭಾರೀ ಪ್ರಮಾಣವೆಚ್ಚದ ಕಾರಣಕ್ಕೆ ಬಹುತೇಕ ಖಾಲಿ ಓಡಾಡುವ ಐಷಾರಾಮಿ ಬಸ್ಸುಗಳನ್ನು ಪ್ರತಿ ವರ್ಷ ಖರೀದಿಸುತ್ತಿರುವುದು ಏಕೆ? ಸಾರಿಗೆ ನಿಗಮದ ಬಸ್ಸುಗಳಿಗೇ ಪೈಪೋಟಿ ನೀಡುವ ಮೂಲಕ ನಷ್ಟದ ಪ್ರಮಾಣ ಹೆಚ್ಚಿಸುವ ಖಾಸಗೀ ಬಸ್ಸುಗಳಿಗೆ ಸ್ಪರ್ಧಾತ್ಮಕ ವೇಳೆಯಲ್ಲಿ ಪರವಾನಗಿ ನೀಡುತ್ತಿರುವುದು ಏಕೆ? ಪ್ರಶ್ನೆಗಳಿಗೂ ಸರ್ಕಾರ ಉತ್ತರ ಕೊಡಬೇಕಿದೆ.
ಹಾಗೇ, ಸಾರಿಗೆ ನೌಕರರ ಮುಷ್ಕರದ ವಿಷಯದಲ್ಲಿ ಸರ್ಕಾರ ಮತ್ತು ಸಿಎಂ ಯಡಿಯೂರಪ್ಪ ಹಿಂದೆಂದೂ ಯಾವುದೇ ಇಲಾಖಾ ನೌಕರರ ಮುಷ್ಕರದ ವೇಳೆ ತೋರದ ಬಿಗಿತನ, ಬಿಗಿಪಟ್ಟು ತೋರುತ್ತಿರುವುದು ಏಕೆ? ಒಂದು ಕಡೆ ಇದೇ ಸರ್ಕಾರದ ಮುಜರಾಯಿ ಸಚಿವ ಶ್ರೀನಿವಾಸ ಪೂಜಾರಿ ಅವರು ವಾರದ ಹಿಂದಷ್ಟೇ, ರಾಜ್ಯದ ಮುಜರಾಯಿ ಇಲಾಖೆ ಸಿಬ್ಬಂದಿ ಮತ್ತು ಅರ್ಚಕರಿಗೆ ಆರನೇ ವೇತನ ಆಯೋಗ ಜಾರಿ ಮಾಡುವುದಾಗಿ ಹೇಳಿದ್ದಾರೆ. ಹಾಗೇ ವೇತನ ಹೆಚ್ಚಳ ಸಾಧ್ಯವಿಲ್ಲ ಎನ್ನುವ ಸರ್ಕಾರ ಕೊಡುತ್ತಿರುವ ಕೋವಿಡ್ ಸಂಕಷ್ಟದ ಹೊತ್ತಲ್ಲಿ ಸರ್ಕಾರದ ಮೂರು ಮೂರು ಮಂದಿ ಡಿಸಿಎಂಗಳು, ಪ್ರತಿ ಸಚಿವರ ಹತ್ತಾರು ಮಂದಿ ಸಿಬ್ಬಂದಿ, ನಿಗಮ ಮಂಡಳಿ ಅಧ್ಯಕ್ಷರ ಕಾಲಾಳು- ಕೈಯಾಳುಗಳು, ಸ್ವತಃ ಸಿಎಂ ಆಪ್ತ ಮತ್ತು ಕಚೇರಿಯ ನೂರಾರು ಸಿಬ್ಬಂದಿಗಳು ,.. ಹೀಗೆ ಯಾರೂ ಹೊರೆ ಎನಿಸಿಲ್ಲ. ಜೊತೆಗೆ ಸಂಕಷ್ಟದ ಹೊತ್ತಲ್ಲೂ ಯಾವ ಸರ್ಕಾರಿ ಉನ್ನತಾಧಿಕಾರಿಗಳ ವೇತನಕ್ಕೂ ಕತ್ತರಿ ಬಿದ್ದಿಲ್ಲ. ಸಚಿವರು, ಶಾಸಕರ ವೇತನ ಕೂಡ ನಿಂತಿಲ್ಲ. ಭಾರೀ ದುಂದುವೆಚ್ಚದ ನೂರಾರು ಯೋಜನೆಗಳು ಕೂಡ ನಿಂತಿಲ್ಲ.
ಹಾಗಿರುವಾಗ, ಕೇವಲ ಸಾರಿಗೆ ನೌಕರರಂತಹ ಕೆಳಹಂತದ ನೌಕರರ ಕನಿಷ್ಠ ವೇತನ ಬೇಡಿಕೆಯ ವಿಷಯ ಬಂದಾಗ ಮಾತ್ರ ಸರ್ಕಾರಕ್ಕೆ ಕೋವಿಡ್ ಸಂಕಷ್ಟ, ಆರ್ಥಿಕ ಹೊರೆಯಂತಹ ಸಂಗತಿಗಳು ನೆನಪಾಗುವುದರ ಹಿಂದೆ ಏನಿದೆ ಎಂಬುದು ಪ್ರಶ್ನೆ. ಆ ಪ್ರಶ್ನೆಗೆ ಈಗಾಗಲೇ ಸಾರಿಗೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಕಂದಾಯ ಸಚಿವ ಆರ್ ಅಶೋಕ್ ಹಾಗೂ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಆಡಳಿತಪಕ್ಷದ ನಾಯಕರು ಸೂಚ್ಯ ಉತ್ತರ ನೀಡಿದ್ದಾರೆ. ಅಂದರೆ, ನೌಕರರು ಹೀಗೆ ಮುಷ್ಕರ ಮುಂದುವರಿಸಿದರೆ, ನಿಗಮ ನಷ್ಟದಿಂದ ಪಾರಾಗಲು ಖಾಸಗೀಯವರಿಗೆ ವಹಿಸುವುದು ಅನಿವಾರ್ಯ ಎಂಬರ್ಥದಲ್ಲಿ ಈ ನಾಯಕರುಗಳು ಈಗಾಗಲೇ ಹೇಳಿಕೆಗಳನ್ನು ನೀಡಿದ್ದಾರೆ.
ಆ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಮುಷ್ಕರದ ವಿಷಯದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಮೊಂಡುತನ, ನೌಕರರ ವಿರುದ್ಧ ಕಠಿಣ ಕಾನೂನು ಕ್ರಮದ ಪ್ರಹಾರಗಳನ್ನು ನಡೆಸುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಈ ಅವಕಾಶವನ್ನೇ ಬಳಸಿಕೊಂಡು ಸಾರ್ವಜನಿಕ ಸಾರಿಗೆ ಉದ್ಯಮವಾದ ಕೆಎಸ್ ಆರ್ ಟಿಸಿಯನ್ನು ಖಾಸಗೀಕರಣ ಮಾಡಲು ಯತ್ನಿಸುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಎದ್ದಿದೆ. ಏಕೆಂದರೆ, ಇದೇ ಬಿಜೆಪಿಯ ಕೇಂದ್ರ ಸರ್ಕಾರ ಈಗಾಗಲೇ ಕೋವಿಡ್ ಸಂಕಷ್ಟದ ಹೊತ್ತನ್ನೇ ಬಳಸಿಕೊಂಡು ದೇಶದ ರೈಲ್ವೆ, ವಿಮಾನಯಾನ ಮುಂತಾದ ಸಾರಿಗೆ ಮತ್ತು ಸಂಪರ್ಕ ವಲಯಗಳ ಖಾಸಗೀಕರಣಕ್ಕೆ ಚಾಲನೆ ನೀಡಿದೆ. ಹಾಗಾಗಿ ದೇಶದಲ್ಲಿ ಖಾಸಗೀಕರಣವೆಂದರೆ ಬಿಜೆಪಿ, ಬಿಜೆಪಿ ಎಂದರೆ ಖಾಸಗೀಕರಣ ಎಂಬ ವಾತಾವರಣ ನಿರ್ಮಾಣವಾಗಿದೆ.
ಇದೀಗ ರಾಜ್ಯ ಸರ್ಕಾರ ಕೂಡ, ತನ್ನದೇ ಪಕ್ಷದ ಕೇಂದ್ರ ಸರ್ಕಾರದ ನಡೆಯನ್ನೇ ಅನುಸರಿಸಿ, ನೌಕರರ ಮುಷ್ಕರವನ್ನೇ ನೆಪವಾಗಿಟ್ಟುಕೊಂಡು ಖಾಸಗಿಯವರ ಕೈಗೆ ಸಾರಿಗೆ ನಿಗಮಗಳನ್ನು ಒಪ್ಪಿಸಲು ಹುನ್ನಾರ ನಡೆಸಿದೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಆ ಹಿನ್ನೆಲೆಯಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಸಾರಿಗೆ ನೌಕರರ ಮುಷ್ಕರ ತೆಗೆದುಕೊಳ್ಳುವ ತಿರುವು ಸಾಕಷ್ಟು ಕುತೂಹಲ ಮೂಡಿಸಿದೆ.