
ಬೆಂಗಳೂರು: ಇತ್ತೀಚೆಗೆ ಹೊರಬಂದ ಡಾ.ಕೃತಿಕಾ ರೆಡ್ಡಿ ಕೊಲೆ ಪ್ರಕರಣದ ಮತ್ತಷ್ಟು ರೋಚಕ ವಿಚಾರಗಳು ಬಯಲಾಗ್ತಿದೆ. ವಿಚಾರಣೆ ವೇಳೆ ತಾನೇ ಕೊಲೆ ಮಾಡಿದ್ದು ಎಂದು ಒಪ್ಪಿಕೊಂಡಿರುವ ಪತಿ ಡಾ.ಮಹೇಂದ್ರ ರೆಡ್ಡಿ ಇನ್ನಷ್ಟು ವಿಚಾರಗಳನ್ನ ಖಾಕಿ ಮುಂದೆ ತೆರೆದಿಟ್ಟಿದ್ದಾನೆ.

ಪತ್ನಿಗೆ ಆನಸ್ತೇಸಿಯಾ ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ್ದ ಡಾ.ಮಹೇಂದ್ರ ರೆಡ್ಡಿ, ಆಕೆಯ ಸಾವಿನ ನಂತರ ಏನು ಗೊತ್ತಿಲ್ಲದಂತಿದ್ದ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಕೂಡ ಬಿಟ್ಟು ಬೇರೆ ಕಡೆ ಉಪನ್ಯಾಸಕನಾಗಿ ಕೆಲಸ ಮಾಡ್ತಿದ್ದ. ಆದರೆ ಮಹೇಂದ್ರ ರೆಡ್ಡಿಗೆ ತಾನು ಮಾಡಿರೋ ಕೊಲೆ ವಿಚಾರ ಹೊರಗೆ ಬರುತ್ತೆ ಎಂಬ ಭಯ ದಿನಲೂ ಕಾಡ್ತಿತ್ತು. ಈ ಭಯದಿಂದಲೇ ಮಹೇಂದ್ರ ರೆಡ್ಡಿ ಟೆಂಪಲ್ ರನ್ ಮಾಡ್ತಿದ್ದ. ಕೊಲೆ ಕೇಸ್ ನಲ್ಲಿ ಸಿಕ್ಕಿಬೀಳಬಾರದೆಂದು
6 ತಿಂಗಳ ಕಾಲರಾಜ್ಯದ ಪ್ರಮುಖ 15 ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿದ್ದ. ದೇವಸ್ಥಾನಗಳನ್ನು ಸುತ್ತಿ ದೇವರಲ್ಲಿ ಮೊರೆ ಇಟ್ಟಿದ್ದ. ಆದರೆ ಪೊಲೀಸರ ತನಿಖೆ ಮುಂದೆ ಮಹೇಂದ್ರನ ಪ್ರಾರ್ಥನೆ ಫಲಿಸಲಿಲ್ಲ
ಇನ್ನು ಡಾ. ಮಹೇಂದ್ರ ರೆಡ್ಡಿ ತಾನು ಪತ್ನಿಯ ಆರೋಗ್ಯ ಸಮಸ್ಯೆಯಿಂದ ಬೇಸತ್ತು ಆಕೆಯನ್ನು ಕೊಂದಿದ್ದಾಗಿ ಹೇಳಿಕೊಂಡಿದ್ದಾನೆ. ಕೊಲೆ ಹಿಂದಿನ ಕಾರಣ ಮತ್ತು ಅದಕ್ಕಾಗಿ ಆರೋಪಿಯ ಪ್ಲ್ಯಾನ್ ಹೇಗಿತ್ತು ಎಂಬುದು ಕೂಡ ಬಯಲಾಗಿದೆ.
ಡಾ.ಕೃತಿಕಾರೆಡ್ಡಿಯದ್ದು ಸಹಜ ಸಾವು ಎಂದು ಬಿಂಬಿಸದರೆ ಮೃತ ದೇಹದ ಮರಣೋತ್ತರ ಪರೀಕ್ಷೆ ಮಾಡುವುದಿಲ್ಲ. ಹೀಗಾಗಿ ಸಾವಿಗೆ ಅಸಲಿ ಕಾರಣ ಏನೆಂಬುದು ಗೊತ್ತಾಗಲ್ಲ ಎಂಬುದು ಡಾ. ಮಹೇಂದ್ರ ರೆಡ್ಡಿಯ ಪ್ಲ್ಯಾನ್ ಆಗಿತ್ತು.

ಇನ್ನು ಪತ್ನಿ ಡಾ.ಕೃತಿಕಾ ರೆಡ್ಡಿಗೆ ಆರೋಗ್ಯ ಸಮಸ್ಯೆಯಿಂದಲೇ ಮಹೇಂದ್ರ ಬೇಸತ್ತಿದ್ದನಂತೆ. ತನಗೆ ವೈಯಕ್ತಿಕ ಜೀವನ ಇಲ್ಲ ಎಂದು ಕೋಪಕೊಂಡಿದ್ದು, ವಿಚ್ಛೇದನ ಪಡೆದರೆ ಮಾವನ ಆಸ್ತಿಯಲ್ಲಿ ತನಗೆ ಏನು ಸಿಗಲ್ಲ ಎಂಬುದು ಆರೋಪಿಗೆ ಗೊತ್ತಿತ್ತು. ಹಾಗಾಗಿ ಹೆಂಡತಿಯ ಆರೋಗ್ಯ ಸಮಸ್ಯೆಯನ್ನೇ ಬಂಡವಾಳವಾಗಿ ಮಾಡಿಕೊಂಡು ಕೊಲೆ ಮಾಡಿ ಅದನ್ನು ಸಹಜ ಸಾವು ಎಂದು ಬಿಂಬಿಸಲು ಯೋಜನೆ ಸಿದ್ಧಪಡಿಸಿದ್ದ. ಇದರ ಭಾಗವಾಗಿ ಡಾ.ಕೃತಿಕಾಗೆ ಅನಸ್ತೇಶಿಯಾ ಕೊಟ್ಟಿದ್ದ ಎಂಬುವುದು ತನಿಖೆ ವೇಳೆ ಗೊತ್ತಾಗಿದೆ.
ಸದ್ಯ ಆರೋಪಿ ಡಾ.ಮಹೇಂದ್ರ ರೆಡ್ಡಿ ವಿಚಾರಣೆ ಮುಗಿದಿದ್ದು, ಪೊಲೀಸರ ಮತ್ತೆ ಕಸ್ಟಡಿಗೆ ತೆಗೆದುಕೊಂಡಿಲ್ಲ. ಹೀಗಾಗಿ ಪತ್ನಿಯನ್ನೇ ಕೊಂದ ಆರೋಪಿ ಡಾ.ಮಹೇಂದ್ರ ರೆಡ್ಡಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.













