ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧಿಯಾಗಿದ್ದ ನಟ ದರ್ಶನ್, ಬಳ್ಳಾರಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಅನಾರೋಗ್ಯ ಕಾರಣಕ್ಕೆ ಹೈಕೋರ್ಟ್ನಿಂದ ಮಧ್ಯಂತರ ಜಾಮೀನು ಪಡೆದಿದ್ದು, ಸಂಜೆ 6.30ಕ್ಕೆ ಜೈಲಿನಿಂದ ಬಿಡುಗಡೆ ಆದರು. ಆ ನಂತರ ಬಳ್ಳಾರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ದರ್ಶನ್ಗೆ ದಾರಿಯುದ್ಧಕ್ಕೂ ಅಭಿಮಾನಿಗಳ ಜಯಘೋಷ ಎಲ್ಲಾ ನೋವನ್ನು ಮರೆಯುವಂತೆ ಮಾಡಿದೆ. ಹೆದ್ದಾರಿಯಲ್ಲೂ ನೂರಾರು ಮಂದಿ ಯುವಕರು ದರ್ಶನ್ ಕಾರು ಅಡ್ಡಗಟ್ಟಿ ಮಾತನಾಡಿಸುವ ಪ್ರಯತ್ನ ಮಾಡಿದ್ದರು. ದರ್ಶನ್ ಕೂಡ ತಾಳ್ಮೆಯಿಂದ ಅಭಿಮಾನಿಗಳ ಕಡೆಗೆ ಕೈ ಬೀಸುತ್ತಾ ಮಧ್ಯರಾತ್ರಿ ಬೆಂಗಳೂರು ತಲುಪಿದ್ದಾರೆ.
ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆ ಆದ ಬಳಿಕ ಈದ್ಗಾ ಮೈದಾನದ ಬೈಪಾಸ್ ಬಳಿ ಟ್ರಾಫಿಕ್ ಜಾಮ್ ಉಂಟಾಯ್ತು. ಐದಾರು ನಿಮಿಷ ದರ್ಶನ್ ಕಾರು ಟ್ರಾಫಿಕ್ನಲ್ಲಿ ಸಿಲುಕಿತ್ತು. ಸಂಜೆ ವೇಳೆ ಹೆಚ್ಚು ಲಾರಿಗಳ ಸಂಚಾರ ಇರುವ ಕಾರಣಕ್ಕೆ ಟ್ರಾಫಿಕ್ ಜಾಮ್ ಆಯ್ತು. ಇನ್ನು ಬಳ್ಳಾರಿ ಜೈಲಿನಿಂದ ದರ್ಶನ್ ಆರ್ ಆರ್ ನಗರ ನಿವಾಸಕ್ಕೆ ಬರ್ತಿದ್ದಾರೆ ಅನ್ನೋ ಮಾಹಿತಿ ತಿಳಿಯುತ್ತಿದ್ದಂತೆ ಮನೆ ಬಳಿ ಅಭಿಮಾನಿಗಳು ಜಮಾಯಿಸಲು ಶುರು ಮಾಡಿದ್ರು. ಹೀಗಾಗಿ ದರ್ಶನ್ ಮನೆ ಬಳಿ ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿತ್ತು. ದರ್ಶನ್ ನಿವಾಸದ ಬಳಿ ರಿಸರ್ವ್ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಚಿಕ್ಕಬಳ್ಳಾಪುರದಿಂದ ಬೆಂಗಳೂರಿನತ್ತ ದರ್ಶನ್ ಬರುವಾಗ ಬಾಗೇಪಲ್ಲಿ ಚೆಕ್ ಪೋಸ್ಟ್ನಲ್ಲಿ ದರ್ಶನ್ ಕಾರು ಅಟ್ಡಗಟ್ಟಿದ ಅಭಿಮಾನಿಗಳು, ಬಾಗೇಪಲ್ಲಿ ಚೆಕ್ ಪೋಸ್ಟ್ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಇನ್ನು ದರ್ಶನ್ ಆಗಮನ ಹಿನ್ನಲೆಯಲ್ಲಿ ಬೆಂಗಳೂರು ನಗರಕ್ಕೆ ಬರುತ್ತಿದ್ದ ಭಾರೀ ವಾಹನಗಳನ್ನು ಪೊಲೀಸ್ರು ತಡೆ ಹಿಡಿದಿದ್ರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಕನ್ನಮಂಗಲ ಟೋಲ್ ಬಳಿ ಲಾರಿಗಳನ್ನು ತಡೆಯಲಾಗಿತ್ತು. 50 ಕ್ಕೂ ಹೆಚ್ಚು ಬಾರಿ ವಾಹನಗಳನ್ನು ಟೋಲ್ ಬಳಿ ತಡೆದು, ಅಭಿಮಾನಿಗಳು ಮುಗಿ ಬೀಳದಂತೆ ಪೋಲೀಸರು ಮುಂಜಾಗ್ರತೆ ವಹಿಸಿದ್ರು.
ದರ್ಶನ್ ದರ್ಶನಕ್ಕಾಗಿ ಕನ್ನಮಂಗಲ ಟೋಲ್ ಬಳಿ ಜಮಾಯಿಸಿದ ಅಭಿಮಾನಿಗಳು, ದರ್ಶನ್ ಪೋಟೋ ಹಿಡಿದು ದರ್ಶನ್ಗೆ ಜೈಕಾರ ಹಾಕಿದ್ರು. ದರ್ಶನ್ ಪರ ಜೈಕಾರ ಕೂಗುತ್ತಾ ಸಂತಸ ವ್ಯಕ್ತಪಡಿಸಿದ್ರು. ಮನೆ ಹತ್ರ ಅಭಿಮಾನಿಗಳು ಬಂದು ಹೋಗ್ತಿರೋ ಅಭಿಮಾನಿಗಳನ್ನು ನಿಯಂತ್ರಿಲು ಪೊಲೀಸರು ಹರಸಾಹಸ ಮಾಡಿದ್ದಾರೆ. ಮನೆ ಬಳಿ ಬಂದು ಜೋರಾಗಿ ಡಿಬಾಸ್ ಡಿಬಾಸ್ ಎಂದು ಕೂಗಾಡಿದ್ದಾರೆ. ಹೀಗಾಗಿ ಮನೆ ಬಳಿ ಬರ್ತಿದ್ದ ಅಭಿಮಾನಿಗಳನ್ನು ಪೊಲೀಸರು ಓಡಿಸಿದ್ದಾರೆ. ಮನೆ ಬಳಿ ಬಾರದಂತೆ ಅಭಿಮಾನಿಗಳಿಗೆ ಪೊಲೀಸ್ರು ಸೂಚನೆ ಕೊಟ್ರು. ಆದರೂ ಮಧ್ಯರಾತ್ರಿ ದರ್ಶನ್ ಬರುವ ತನಕ ಮನೆ ಸುತ್ತಲೇ ಓಡಾಡುತ್ತಿದ್ದ ಅಭಿಮಾನಿಗಳು ದರ್ಶನ್ ಮನೆ ಸೇರಿದ ಬಳಿಕ ಮನೆಗೆ ವಾಪಸ್ ಆಗಿದ್ದಾರೆ.