ಚಿತ್ರದುರ್ಗ ಜಿಲ್ಲೆ ಕಾಲುವೆಳ್ಳಿ ಗ್ರಾಮದಲ್ಲಿ ಎಸ್ಸಿ ಸಮುದಾಯದ ಜನರಿಗೆ ಕ್ಷೌರ ಮಾಡಲು ನಿರಾಕರಿಸಿದ ಕ್ಷೌರಿಕ ಸೇರಿದಂತೆ ಕ್ಷೌರ ಮಾಡದಂತೆ ನಿರ್ಬಂಧ ಹೇರಿದ್ದ ನಾಲ್ವರ ವಿರುದ್ದ ಪೊಲೀಸರು FIR ದಾಖಲು ಮಾಡಿಕೊಂಡಿದ್ದಾರೆ.
ಚಳ್ಳಕೆರೆ ತಾಲೂಕಿನ ಕಾಲುವೆಳ್ಳಿ ಗ್ರಾಮದ ಕ್ಷೌರದ ಅಂಗಡಿ ಮಾಲಿಕ ನಾಗರಾಜ ಎಂಬ ವ್ಯಕ್ತಿ ದಲಿತರಿಗೆ ಹೇರ್ ಕಟ್ ಮಾಡಬಾರದು ಎಂದು ಗ್ರಾಮದ ಕೆಲವರು ನಿರ್ಬಂಧ ಹಾಕಿದ್ದರು. ಹೀಗಾಗಿ ಕ್ಷೌರಿಕ ನಾಗರಾಜ ಎಸ್ಸಿ ಸಮುದಾಯದ ಜನರಿಗೆ ಕಟಿಂಗ್ ಮಾಡಲ್ಲ ಎಂದಿದ್ದ. ಆ ವೀಡಿಯೋ ಕೂಡ ವೈರಲ್ ಆಗಿತ್ತು.
ಎಸ್ಸಿ ಸಮುದಾಯದ ಯುವಕರು ಸಂಘಟನೆಗಳ ಮೂಲಕ ತಹಶಿಲ್ದಾರ್ಗೆ ಮನವಿ ನೀಡಿ ಕ್ರಮಕ್ಕೆ ಒತ್ತಾಯ ಮಾಡಿದ್ದರು. ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಚಿತ್ರದುರ್ಗ ಎಸಿ ಕಾರ್ತಿಕ್ ಸೇರಿದಂತೆ ಗ್ರಾಮದಲ್ಲಿ ಶಾಂತಿ ಸಭೆ, ಜಾಗೃತಿ ಸಭೆ ಕೂಡ ಮಾಡಲಾಗಿತ್ತು.
ಈ ಸಂಬಂಧ ಪರಿಶೀಲನೆ ನಡೆಸಿರುವ ಪೊಲೀಸರು ಕ್ಷೌರದ ಅಂಗಡಿ ಮಾಲೀಕ ನಾಗರಾಜ ಮತ್ತು ಗ್ರಾಮದ ನಾಗರಾಜ್, ಬುಕ್ಕಣ್ಣ, ಜೊಲಾಡಿ ರಂಗ, ವೆಂಕಟೇಶ ಎಂಬುರ ವಿರುದ್ಧ ಅಸ್ಪೃಷ್ಯತೆ ಆಚರಣೆ, ಜಾತಿ ನಿಂದನೆ ಕುರಿತು ತಳುಕು ಠಾಣೆಯಲ್ಲಿ FIR ದಾಖಲು ಮಾಡಿಕೊಂಡಿದ್ದಾರೆ.