ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಆದಾಯವನ್ನು ಡಬಲ್ ಮಾಡುವುದಾಗಿ ಹೇಳಿದ್ದರು. ಯಾವ ರೈತರ ಆದಾಯ ಡಬಲ್ ಆಗಿದೆ ಎಂದು ಹೇಳಬೇಕು. ಹಾಲಿನ ದರದ ವಿಚಾರದಲ್ಲಿ ಪಶುಸಂಗೋಪನೆ ಮಾಡುವವರಿಗೆ ಯಾವ ನ್ಯಾಯ ಒದಗಿಸಿದ್ದಾರೆ ಎಂದು ಸರ್ಕಾರವೇ ಹೇಳಬೇಕು. ಈಗಾಗಲೇ ಪೂಜೆ ಮಾಡಿದ್ದರೂ ಈಗ ಮತ್ತೊಮ್ಮೆ ಬಂದು ಪೂಜೆ ಮಾಡುತ್ತಿದ್ದಾರೆ ಮಾಡಲಿ. ಸಹಕಾರ ಸಚಿವಾಲಯದಿಂದ ಹಾಲು ಉತ್ಪಾದಕರನ್ನು ಸೇರಿಸಿ ಇಂದು ಕಾರ್ಯಾಕ್ರಮ ಮಾಡುತ್ತಿದ್ದಾರೆ.
ಬಿಜೆಪಿ ಅವರು ಹಳೇ ಮೈಸೂರು ಭಾಗದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂಬ ಪ್ರಶ್ನೆಗೆ, ‘ಹಳೇ ಮೈಸೂರು ಭಾಗ ಇರಲಿ, ನಾವು ಧಾರವಾಡದಲ್ಲಿ ನಿಂತಿದ್ದು, ಮಹದಾಯಿ ವಿಚಾರವಾಗಿ ಹೋರಾಟ ಮಾಡುತ್ತಿದ್ದೇವೆ. ಕರ್ನಾಟಕ, ಗೋವಾ ಹಾಗೂ ಕೇಂದ್ರದಲ್ಲಿ ಒಟ್ಟು ತ್ರಿಬಲ್ ಇಂಜಿನ್ ಸರ್ಕಾರ ಇದ್ದರೂ ನಮ್ಮ ಜನರಿಗೆ ನ್ಯಾಯ ಒದಗಿಸಿಕೊಡಲು ಆಗಿಲ್ಲ ಎಂದು ಕಿಡಿಕಾರಿದ್ದಾರೆ.
ನಾವು ಈ ವಿಚಾರವಾಗಿ ಹೋರಾಟಕ್ಕೆ ಮುಂದಾದಾಗ ನಮಗೆ ಹೆಚ್ಚಿನ ಜನಬೆಂಬಲ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಪ್ರಕಟಿಸಿರುವ ಆದೇಶಕ್ಕೆ ನಿರ್ದಿಷ್ಟ ದಿನಾಂಕವೂ ಇಲ್ಲ. ಇದರಲ್ಲಿ ಅಂತಿಮವಾಗಿ ಗೋವಾ ಹಾಗೂ ಮಹರಾಷ್ಟ್ರದ ತಕರಾರಿನ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ಏನಾಗುತ್ತದೆ ಎಂದು ನೋಡಿಕೊಂಡು ಯೋಜನೆ ಮಾಡುವುದಾಗಿ ಹೇಳಿದ್ದಾರೆ.

ಇವರು ಕೇವಲ ರಾಜಕೀಯವಾಗಿ ಚಾಕಲೇಟ್ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಹಿಂದೆ ಯಡಿಯೂರಪ್ಪನವರು ಒಂದೇ ದಿನದಲ್ಲಿ ಯೋಜನೆ ಆರಂಭಿಸುವುದಾಗಿ ಹೇಳಿದ್ದರು. ಇವರು ಎಷ್ಟು ಸುಳ್ಳು ಹೇಳುತ್ತಾರೆ. ಪ್ರಹ್ಲಾದ್ ಜೋಷಿ ಅವರು ಉನ್ನತ ಸ್ಥಾನದಲ್ಲಿದ್ದು, ಇಷ್ಟೋಂದು ಸುಳ್ಳು ಯಾಕೆ ಹೇಳುತ್ತಿದ್ದಾರೆ? ಈ ಭಾಗದ ಜನರು ದಡ್ಡರಾ? ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜನರ ಧ್ವನಿ, ಆಕ್ರೋಶ ನಮ್ಮ ಕಾರ್ಯಕ್ರಮದಲ್ಲಿ ವ್ಯಕ್ತವಾಗಲಿದೆ. ಸರ್ಕಾರ ನಿಮ್ಮನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ. ಇಂದು ವಿಜಯಪುರದಲ್ಲಿ ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ವಿಚಾರವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಮ್ಮ ಪಕ್ಷದ ಎಲ್ಲ ನಾಯಕರು ಈಗ ಅಲ್ಲಿಗೆ ಪ್ರಯಾಣ ಬೆಳೆಸುತ್ತಿದ್ದೇವೆ. ಬಿಜೆಪಿ ಸರ್ಕಾರ ಗೋವಾ ಮತ್ತು ಮಹಾರಾಷ್ಟ್ರದ ತಕರಾರನ್ನು ತೆರವುಗೊಳಿಸಿ ಈ ಯೋಜನೆ ಮಾಡಲಿ. ಅದು ಯಾಕೆ ಸಾಧ್ಯವಾಗುತ್ತಿಲ್ಲ? ಗೋವಾದಲ್ಲಿ 1 ಸೀಟು ಮುಖ್ಯವೋ ಇಲ್ಲಿನ 27 ಕ್ಷೇತ್ರಗಳು ಮುಖ್ಯವೋ? ಇದು ಕರ್ನಾಟಕ ಜನತೆಗೆ ಆಗುತ್ತಿರುವ ಅನ್ಯಾಯದ ಪರಮಾವಧಿ. ಇದೆಲ್ಲವೂ ಜನರ ಕಣ್ಣೊರೆಸುವ, ತಪ್ಪು ದಾರಿಗೆ ಎಳೆಯುವ ತಂತ್ರವಾಗಿದೆ ಎಂದು ಕಿಡಿಕಾರಿದ್ದಾರೆ.






