ಸದ್ಯ ಇಡೀ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬದಲಾವಣೆಯದ್ದೇ ಸುದ್ದಿ. ಕಳೆದೊಂದು ವಾರದಿಂದ ಬಿಜೆಪಿ ನಾಯಕರು ದಿನ ಬೆಳಗಾದರೆ ಸಿಎಂ ಬದಲಾವಣೆ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದಾರೆ. ಒಂದೆಡೆ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮತ್ತು ಆರ್ಎಸ್ಎಸ್ ಬೆಂಬಲಿತ ಶಾಸಕರು ಎನ್ನುತ್ತಿದ್ದರೆ, ಇನ್ನೊಂದೆಡೆ ಬಿ.ಎಸ್ ಯಡಿಯೂರಪ್ಪ ತನ್ನ ವೀರಶೈವ ಲಿಂಗಾಯತ ಸಮುದಾಯದ ಮಠಧೀಶರು, ಪ್ರಬಲ ನಾಯಕರು, ಉದ್ಯಮಿಗಳನ್ನು ಸೇರಿಸಿ ಸಿಎಂ ಸ್ಥಾನ ಉಳಿಸಿಕೊಳ್ಳು ಶತಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರ ಬಿಜೆಪಿ ನಾಯಕರಿಗೆ ವೀರಶೈವ ಲಿಂಗಾಯತ ಸಮುದಾಯದ ಮುಂಚೂಣಿ ನಾಯಕರು ಬಿ.ಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಮುಂದಿನ ಚುನಾವಣೆಯಲ್ಲಿ ಸೋಲು ಖಚಿತ ಎಂದು ಸ್ಟ್ರಾಂಗ್ ವಾರ್ನಿಂಗ್ ಕೊಟ್ಟಿದ್ದಾರೆ.
ಬಿಜೆಪಿ ಹೈಕಮಾಂಡ್ ಮುಂದಿನ ಚುನಾವಣೆ ಪಕ್ಷದ ಆಧಾರದ ಮೇರೆಗೆ ಗೆಲ್ಲಲು ನಿರ್ಧರಿಸಿದೆ. ಸಿಎಂ ಬಿ.ಎಸ್ ಯಡಿಯೂರಪ್ಪ ವರ್ಚಸ್ಸು ಅಲ್ಲದೇ ಲಿಂಗಾಯತರ ಜೊತೆಗೆ ಒಕ್ಕಲಿಗರ ಸಮುದಾಯವನ್ನು ಓಲೈಕೆ ಮಾಡಿ ಚುನಾವಣೆ ಗೆಲ್ಲಬೇಕು ಎಂದು ಪ್ಲಾನ್ ಮಾಡಿದೆ. ಯಡಿಯೂರಪ್ಪ ಈ ಅವಧಿ ಮುಗಿಯುವತನಕ ಸಿಎಂ ಆಗಿ ಮುಂದುವರಿದರೂ ಮುಂದಿನ ಚುನಾವಣೆ ಗೆಲ್ಲೋದು ಅಷ್ಟು ಸುಲಭವಲ್ಲ ಎಂಬುದು ಹೈಕಮಾಂಡ್ಗೆ ಮನವರಿಕೆಯಾಗಿದೆ. ಹೀಗಾಗಿ ಸರ್ಕಾರದ ಜತೆಗೆ ರಾಜ್ಯ ಬಿಜೆಪಿಯಲ್ಲೂ ಮೇಜರ್ ಸರ್ಜರಿಗೆ ಮುಂದಾಗಿದ್ದಾರೆ.
ಬಿಜೆಪಿ ಎಷ್ಟೇ ಮೇಜರ್ ಸರ್ಜರಿ ಮತ್ತು ಮೆಗಾ ಪ್ಲಾನ್ ಮಾಡಿದರೂ ಗೆಲುವು ನಮ್ಮದೇ ಎನ್ನುತ್ತಿದೆ ಕಾಂಗ್ರೆಸ್. ಇದಕ್ಕೆ ಸಾಕ್ಷಿಯೇ ಕೊರೋನಾ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯದ ವೈಫಲ್ಯ, ಲಸಿಕೆ ಕೊರತೆ, ರೈತರ ಪ್ರತಿಭಟನೆ, ದಿನನಿತ್ಯ ಮತ್ತು ತೈಲ ಬೆಲೆ ಏರಿಕೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿರುವುದು. ಈಗ ಬೇರೆ ವೀರಶೈಲ ಲಿಂಗಾಯತ ಸಮುದಾಯವೂ ಬಿಜೆಪಿ ವಿರುದ್ಧ ತಿರುಗಿ ಬಿದ್ದ ಕಾರಣ ಮುಂದಿನ ಚುನಾವಣೆ ಗೆಲ್ಲೋಕೆ ಬಿಜೆಪಿಗೆ ಅವಕಾಶವೇ ಇಲ್ಲದಂತಾಗಿದೆ.

ಮೇಲ್ನೋಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿತ್ತಾಡುತ್ತಿದ್ದರೂ ತಮ್ಮ ನಡುವೇ ಯಾವುದೇ ಭಿನ್ನಾಭಿಪ್ರಾಯ ಇಲ್ಲದೇ ಮುಂದಿನ ಚುನಾವಣೆಗೆ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಕಾಂಗ್ರೆಸ್ ಪಕ್ಷ ಭಾರೀ ತಯಾರಿ ಆರಂಭಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ತಂತ್ರಗಾರಿಕೆಯಿಂದ ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಆಡಳಿತ ಪಕ್ಷ ಬಿಜೆಪಿಯ ಅಭ್ಯರ್ಥಿಗಳಿಗೆ ತೀವ್ರ ಪೈಪೋಟಿ ಕೊಟ್ಟಿದ್ದರು. ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಸವನಗೌಡ ತುರುವಿಹಾಳ ಅವರು ಭರ್ಜರಿ ಗೆಲವು ಸಾಧಿಸಿದ್ದರು. ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎದುರು ಬಿಜೆಪಿ ಅಭ್ಯರ್ಥಿ ಪ್ರಯಾಸದ ಗೆಲವು ಸಾಧಿಸಿದ್ದರು. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಸೋತರೂ ಬಿಜೆಪಿಗೆ ತೀವ್ರ ಪೈಪೋಟಿ ಕೊಟ್ಟಿತ್ತು.
ಇದೇ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಮುಂದಿನ ಚುನಾವಣೆ ಗೆಲ್ಲುವ ಸದಾವಕಾಶ ಒದಗಿ ಬಂದಿದೆ. ಇಂತಹ ಸಂದರ್ಭವನ್ನು ಬಳಸಿಕೊಳ್ಳುವಂತೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆದು ಕ್ಲಾಸ್ ತೆಗೆದುಕೊಂಡಿದ್ದರು. ಯಾವುದೇ ಕಾರಣಕ್ಕೂ ಮುಂದಿನ ಸಿಎಂ ಅಭ್ಯರ್ಥಿ ನಾನೇ ಎಂದು ನಿಮ್ಮ ಬೆಂಬಲಿಗರಿಂದ ಹೇಳಿಕೆ ನೀಡದಂತೆ ಕಿವಿಮಾತು ಹೇಳಿದ್ದರು.

ಇಂತಹ ರಾಜಕೀಯ ಬೆಳಗಣಿಗೆಗಳ ಮಧ್ಯೆಯೇ ದೆಹಲಿಯಲ್ಲೇ ಠಿಕಾಣಿ ಹೂಡಿರುವ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಂಪರ್ಕದಲ್ಲಿ 28 ಬಿಜೆಪಿ ಶಾಸಕರು ಇರುವ ವಿಚಾರ ಬೆಳಕಿಗೆ ಬಂದಿದೆ. ಇತ್ತೀಚೆಗೆ ಸಿಎಂ ಬದಲಾವಣೆ ಕೂಗು ಕೇಳಿ ಬರುತ್ತಿರುವ ಹೊತ್ತಲ್ಲೇ ಹಲವು ಬಿಜೆಪಿ ಶಾಸಕರು ಇವರನ್ನು ಸಂಪರ್ಕಿಸಿದ್ದಾರೆ. 28 ಬಿಜೆಪಿ ಶಾಸಕರು ಮಧ್ಯಂತರ ಚುನಾವಣೆ ಎದುರಾದರೆ ಕಾಂಗ್ರೆಸ್ಸಿನಿಂದ ಸ್ಪರ್ಧಿಸಲಿದ್ದಾರಂತೆ.
2023ರ ವಿಧಾನಸಭೆ ಚುನಾವಣೆಯಲ್ಲಿ ವಿಜಯ ಸಾಧಿಸಲು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರೂ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಗೆಲುವು ಸಾಧಿಸುವುದು ಬಹುತೇಕ ಖಚಿತ, ಅಂತಹ ವಾತಾವರಣ ಸದ್ಯ ಕರ್ನಾಟಕದಲ್ಲಿದೆ. ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಹಗಲು ರಾತ್ರಿಯೆನ್ನದೇ ದುಡಿಯುತ್ತಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದರೆ ಪಕ್ಷ ಸೇರ್ಪಡೆಯಾಗಲು ಎಷ್ಟೋ ಮಂದಿ ಎದುರು ನೋಡುತ್ತಿದ್ದಾರಂತೆ. ಕೇವಲ ಬಿಜೆಪಿ ಮಾತ್ರವಲ್ಲ ಬದಲಿಗೆ ಜೆಡಿಎಸ್ ಶಾಸಕರು ಕೂಡ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರಂತೆ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪರಿಸ್ಥಿತಿಯನ್ನು ಅವಲೋಕಿಸುವ; ಸಾಧಕ-ಬಾಧಕಗಳನ್ನು ಪರಿಶೀಲನೆ ನಡೆಸುವ; ಪಕ್ಷಕ್ಕೆ ಬರುವ ಜೆಡಿಎಸ್ ಮತ್ತು ಬಿಜೆಪಿ ಶಾಸಕರನ್ನು ಸೇರಿಸಿಕೊಳ್ಳುವ ಜವಾಬ್ದಾರಿ ಕಾಂಗ್ರೆಸ್ ಹಿರಿಯ ರಾಜಕಾರಿನಿಯೊಬ್ಬರಿಗೆ ನೀಡಲಾಗಿದೆಯಂತೆ.
ಸಿಎಂ ಬದಲಾವಣೆಯಾದರೆ ಮಧ್ಯಂತರ ಚುನಾವಣೆ ಪಕ್ಕಾ. ಬಿಜೆಪಿ, ಜೆಡಿಎಸ್ನಿಂದ ಬರುವ ಶಾಸಕರ ಬೆಂಬಲದಿಂದ ಮತ್ತು ಕಾಂಗ್ರೆಸ್ ತನ್ನ ಸ್ವಂತ ಶಕ್ತಿಯಿಂದ ಚುನಾವಣೆ ಗೆಲ್ಲಲಿದೆ. ಮುಂದಿನ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತ, ಈ ಸದಾವಕಾಶ ಬಳಸಿಕೊಳ್ಳುವ ಪ್ಲಾನ್ ಸಿದ್ದರಾಮಯ್ಯ ಮತ್ತು ಡಿ.ಕೆ ಇಬ್ಬರು ಸೇರಿ ಮಾಡಿದ್ದಾರೆ ಎಂಬುದು ಟಾಕ್.