ಸಿಎಂ ಗದ್ದುಗೆ ಮೇಲೆ ಕಣ್ಣಿಟ್ಟಿರೋ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ , ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಆದ್ರೆ, ಇದೀಗ ಆ ನಾಮಪತ್ರ ತಿರಸ್ಕೃತವಾಗುವ ಆತಂಕದಲ್ಲಿದ್ದು, ಡಿಕೆ ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ತಮ್ಮ ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆ ಹಿನ್ನೆಲೆ, ಮುಂಜಾಗ್ರತಾವಾಗಿ ನಿನ್ನೆ ಸಹೋದರ ಸಂಸದ ಡಿಕೆ ಸುರೇಶ್ ಅವರಿಂದಲೂ ನಾಮಪತ್ರ ಹಾಕಿಸಿದ್ದಾರೆ.

ಇಂದು ಬೆಳಗ್ಗೆ 11 ಗಂಟೆ ನಂತರ ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಸಲಿದ್ದು, ನಾಮಪತ್ರದಲ್ಲಿ ಲೋಪದೋಷಗಳು ಕಂಡುಬಂದಿದರೆ ತಿರಸ್ಕೃತ ಮಾಡುತ್ತಾರೆ. ಐಟಿ ಅಧಿಕಾರಿಗಳು ಸಹ ನಾಲ್ಕು ದಿನಗಳ ಹಿಂದಷ್ಟೇ ಡಿಕೆ ಶಿವಕುಮಾರ್ಗೆ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಅಲ್ಲದೆ ಏಪ್ರಿಲ್ 17 ರಂದು ಡಿಕೆ ಶಿವಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ ನಂತರ ಐಟಿ ಅಧಿಕಾರಿಗಳು ಆಸ್ತಿ ವಿವರದ ಮಾಹಿತಿ ಪಡೆದಿದ್ದಾರೆ. ಜೊತೆಗೆ ಕನಕಪುರಕ್ಕೆ ಬಂದು ಮಾಹಿತಿ ಪಡೆದು ಹೋಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲೇ ಡಿಕೆ ಶಿವಕುಮಾರ್ ತಮ್ಮ ನಾಮಪತ್ರ ತಿರಸ್ಕಾರ ಆದ್ರೆ, ಸಹೋದರ ಕಣದಲ್ಲಿ ಇರಲಿ ಎಂಬ ಲೆಕ್ಕಾಚಾರದಿಂದ ನಾಮಿನೇಷನ್ ಫೈಲ್ ಮಾಡಿಸಿದ್ದಾರೆ.











