ಶಿವಮೊಗ್ಗ : ಬಿಜೆಪಿ ಟಿಕೆಟ್ ಘೋಷಣೆಯಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವೇ ಸಂಭವಿಸಿತ್ತು. ಟಿಕೆಟ್ ವಂಚಿತರಾದ ಹಿರಿಯ ನಾಯಕರು ಪಕ್ಷಾಂತರಗೊಳ್ಳುವ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಆದರೆ ಟಿಕೆಟ್ ಘೋಷಣೆಗೂ ಮುನ್ನವೇ ರಾಜಕೀಯ ನಿವೃತ್ತಿ ಘೋಷಣೆ ಮಾಡುವ ಮೂಲಕ ಈಶ್ವರಪ್ಪ ಹೈಕಮಾಂಡ್ ನಡೆಗೆ ಸಮ್ಮತಿ ಸೂಚಿಸಿದ್ದರು.

ಇಂದು ಇದೇ ವಿಚಾರವಾಗಿ ಮಾಜಿ ಸಚಿವ ಈಶ್ವರಪ್ಪಗೆ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಪ್ರಬುದ್ಧ ನಡೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪಕ್ಷದ ವರಿಷ್ಠರ ನಡೆಯನ್ನು ಗೌರವಿಸಿದ್ದಕ್ಕೆ ನಿಮಗೆ ಧನ್ಯವಾದಗಳು, ರಾಜ್ಯಕ್ಕೆ ಭೇಟಿ ನೀಡಿದಾಗ ಖಂಡಿತವಾಗಿಯೂ ನಿಮ್ಮನ್ನು ಭೇಟಿಯಾಗುತ್ತೇನೆ. ಅಲ್ಲದೇ ಪಕ್ಷ ಎಂದಿಗೂ ನಿಮ್ಮ ಕೈ ಬಿಡುವುದಿಲ್ಲ ಎಂದಿದ್ದಾರೆ ಎನ್ನಲಾಗಿದೆ.
ಇನ್ನು ಪ್ರಧಾನಿ ಮೋದಿ ದೂರವಾಣಿ ಕರೆ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಪ್ರಧಾನಿ ಮೋದಿ ಬೆಳಗ್ಗೆ ದೂರವಾಣಿ ಕರೆ ಮಾಡಿದ ಆಶ್ಚರ್ಯವಾಯಿತು. ಪಕ್ಷದ ಸಾಮಾನ್ಯ ಕಾರ್ಯಕರ್ತನನ್ನೂ ಗುರುತಿಸುವ ಮೋದಿ ನಡೆ ಇಷ್ಟವಾಯಿತು ಎಂದಿದ್ದಾರೆ.