ರಾಜ್ಯದಲ್ಲಿ ಕರೋನಾ ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಅವಧಿಯನ್ನು ವಿಸ್ತರಿಸಲಾಗಿದೆ. ಕರೋನಾದ ವಿಷಯದಲ್ಲೇನೋ ನೂತನ ಮುಖ್ಯಮಂತ್ರಿಗಳು ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ, ಇದೀಗ ತಾನೆ ಕಣ್ಣು ಬಿಟ್ಟಿರುವ ಅವರ ಸರ್ಕಾರಕ್ಕೆ ಎದುರಾಗುತ್ತಿರುವ ಅಸಮಾಧಾನ, ಅತೃಪ್ತಿ, ಬಣ ರಾಜಕಾರಣ ಮುಂತಾದ ಸವಾಲಿನ ಅಲೆಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.
ಏಕೆಂದರೆ, ಸ್ವತಃ ತಮ್ಮನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ ಕ್ರಿಯೆಯಿಂದಲೇ ಆರಂಭವಾದ ರಾಜ್ಯ ಬಿಜೆಪಿಯ ಬೇಗುದಿ, ನಂತರದ ಸಚಿವ ಸಂಪುಟ ರಚನೆ, ಸಚಿವರ ಆಯ್ಕೆ, ಜಿಲ್ಲಾ ಉಸ್ತುವಾರಿ ನೇಮಕ, ಖಾತೆ ಹಂಚಿಕೆ,.. ಹೀಗೆ ಪ್ರತಿ ಹಂತದಲ್ಲೂ ಹಲವು ಹತ್ತು ದಿಕ್ಕುಗಳಿಂದಲೂ ಭುಗಿಲೇಳುತ್ತಲೇ ಇದೆ. ಒಂದು ಕಡೆ ಕಡೆ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಮತ್ತು ಆಪ್ತರನ್ನು ಸಂಪುಟಕ್ಕೆ ಸೇರಿಸಿಕೊಂಡಿಲ್ಲ ಎಂಬ ಬೇಗುದಿ, ಮತ್ತೊಂದು ಕಡೆ ಬಿಎಸ್ವೈ ಪದಚ್ಯುತಿಗೆ ನಿರಂತರ ಯತ್ನ ನಡೆಸಿಯೂ ಸಿಎಂ ಸ್ಥಾನವಿರಲಿ, ಕನಿಷ್ಟ ಸಂಪುಟದಲ್ಲೂ ಸ್ಥಾನ ಸಿಕಿಲ್ಲ ಎಂಬ ಬಂಡಾಯಗಾರರ ಬೇಗುದಿ. ಈ ನಡುವೆ, ಇದೀಗ ಸಚಿವ ಸಂಪುಟದ ಅವಕಾಶವಂಚಿತರ ಬೇಗುದಿ. ಅದು ಸಾಲದು ಎಂಬಂತೆ ಸಚಿವರಾಗಿಯೂ ಬೇಕಾದ ಖಾತೆ ಸಿಗಲಿಲ್ಲ ಎಂಬ ಮತ್ತೊಂದು ಬೇಗುದಿ. ಹೀಗೆ ಬೇಗುದಿಯ ಅಲೆಗಳು ಕರೋನಾ ಅಲೆಯನ್ನೂ ಮೀರಿಸುವ ವೈವಿಧ್ಯತೆಯಲ್ಲಿ ಅಪ್ಪಳಿಸುತ್ತಿವೆ.

ಇದೀಗ ಸಚಿವ ಸ್ಥಾನ ವಂಚಿತ ಬೇರೆ ಬೇರೆ ಬಣದ ಶಾಸಕರು ಒಂದಾಗಿ ಬೆಳಗಾವಿ ಸಾಹುಕಾರರ ಗರಡಿಯಲ್ಲಿ ನಡೆಸುತ್ತಿರುವ ಜಂಗೀ ಕುಸ್ತಿಯ ತಯಾರಿಗಳು ನಿಜಕ್ಕೂ ಶಿಗ್ಗಾಂವಿಯ ಜಗಜಟ್ಟಿ ಬಸವಣ್ಣಗೆ ಭರ್ಜರಿ ಸವಾಲು ಒಡ್ಡಿವೆ.
ಸಚಿವ ಸ್ಥಾನ ಕೈತಪ್ಪುತ್ತಲೇ ಒಂದು ಕಡೆ ಯಡಿಯೂರಪ್ಪ ಆಪ್ತರಾದ ಎಂ ಪಿ ರೇಣುಕಾಚಾರ್ಯ ನೇತೃತ್ವದ ಕೆಲವರು, ಮತ್ತೊಂದು ಕಡೆ ಅರವಿಂದ್ ಬೆಲ್ಲದ್, ನೆಹರೂ ಓಲೆಕಾರ್ ನೇತೃತ್ವದ ಕೆಲವರು, ಮಗದೊಂದು ಕಡೆ ರಮೇಶ್ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಕೆಲವರು ಬೇರೆಬೇರೆಯಾಗಿ ಅಸಮಾಧಾನ, ಆಕ್ರೋಶ, ಹತಾಶೆಯಂತಹ ಭಿನ್ನ ಭಿನ್ನ ನವರಸಗಳನ್ನು ಹೊರಹಾಕಿ, ಸರ್ಕಾರದಿಂದ ‘ಸಾಮಾಜಿಕ ಅಂತರ’ ಕಾಯ್ದುಕೊಳ್ಳುವ ಸಂದೇಶ ರವಾನಿಸಿದ್ದರು.
ಅದರಲ್ಲೂ ಸಿಎಂ ತವರು ಜಿಲ್ಲೆಯ ಹಿರಿಯ ಬಿಜೆಪಿ ಶಾಸಕರ ನೆಹರೂ ಓಲೆಕಾರ್ ಅವರಂತೂ ಸಚಿವ ಸ್ಥಾನ ವಂಚಿತ ಶಾಸಕರೆಲ್ಲರೂ ಒಗ್ಗೂಡುತ್ತಿದ್ದೇವೆ. ಮುಂದಿನ ನಿರ್ಧಾರದ ಕುರಿತು ಸದ್ಯದಲ್ಲೇ ಸಭೆ ನಡೆಸಿ ತೀರ್ಮಾನಿಸುತ್ತೇವೆ. ಸಿಎಂ ತವರು ಜಿಲ್ಲೆಯಿಂದಲೇ ಬಂಡಾಯವೇಳುತ್ತದೆ ಎನ್ನುವ ಮೂಲಕ ಬೊಮ್ಮಾಯಿ ಅವರು ತಮಗೆ ಸಚಿವ ಸ್ಥಾನ ತಪ್ಪಿಸಿ ಹೇಗೆ ಸಿಎಂ ಆಗಿ ಆಡಳಿತ ನಡೆಸುತ್ತಾರೆ ನೋಡುತ್ತೇನೆ ಎಂಬಂತೆ ಗುಟುರು ಹಾಕಿದ್ದರು. ಅದೇ ಹೊತ್ತಿಗೆ ಅತ್ತ ಬಾಲಚಂದ್ರ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ, ರಾಜೂಗೌಡ ಮತ್ತಿತರರು ಕೂಡ ತಮ್ಮನ್ನು ಸಂಪುಟದಿಂದ ದೂರವಿಟ್ಟಿರುವ ಬಗ್ಗೆ ಆಕ್ರೊಶ ವ್ಯಕ್ತಪಡಿಸಿದ್ದರು. ಹಾಗೇ ಅರವಿಂದ್ ಬೆಲ್ಲದ್, ಸಿ ಪಿ ಯೋಗೇಶ್ವರ್, ಯತ್ನಾಳ್ ಮುಂತಾದ ಬಿಎಸ್ ವೈ ವಿರೋಧಿ ಬಂಡಾಯಗಾರರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.
ಆದರೆ, ಗುರುವಾರ ರಾತ್ರಿಯ ಹೊತ್ತಿಗೆ ಈ ಎಲ್ಲಾ ಒಂದೊಂದು ದಿಕ್ಕಿನ ಅತೃಪ್ತರೂ ಬೆಳಗಾವಿ ಸಾಹುಕಾರ ಮತ್ತು ಹಿಂದಿನ ಸಮ್ಮಿಶ್ರ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಬರಲು ರೂಪಿಸಿದ ತಂತ್ರಗಾರಿಕೆಯ ಸೂತ್ರಧಾರ ರಮೇಶ್ ಜಾರಕಿಹೊಳಿ ಅವರ ಬೆಂಗಳೂರು ನಿವಾಸದಲ್ಲಿ ಒಟ್ಟಿಗೇ ಸೇರಿ, ಸಭೆ ನಡೆಸಿದ್ದಾರೆ! ಅದು ಸಾಲದು ಎಂಬಂತೆ ಮಾರನೇ ದಿನ ಶುಕ್ರವಾರ ಕೂಡ ಕೆಲವು ಸಚಿವ ಸ್ಥಾನ ವಂಚಿತ ಶಾಸಕರು ಜಾರಕಿಹೊಳಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಆ ಪೈಕಿ ಯಡಿಯೂರಪ್ಪ ಆಪ್ತ ಎಂ ಪಿ ರೇಣುಕಾಚಾರ್ಯ, ಬಿಎಸ್ ವೈ ವಿರೋಧಿ ಬಣದ ನಾಯಕತ್ವ ವಹಿಸಿದ್ದ ಅರವಿಂದ ಬೆಲ್ಲದ್ ಕೂಡ ಸೇರಿರುವುದು ಕುತೂಹಲಕರ. ಜೊತೆಗೆ ಬಾಲಚಂದ್ರ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ, ರಾಜೂಗೌಡ, ಸಿ ಪಿ ಯೋಗೇಶ್ವರ್ ಕೂಡ ಈ ಸಭೆಯಲ್ಲಿದ್ದರು ಎನ್ನಲಾಗಿದೆ.
ಮುಖ್ಯವಾಗಿ ಇನ್ನೂ ಸಂಪುಟದಲ್ಲಿ ಖಾಲಿ ಉಳಿದಿರುವ ನಾಲ್ಕು ಸಚಿವ ಸ್ಥಾನಗಳು, ಯಡಿಯೂರಪ್ಪ ಪದಚ್ಯುತಿ ಮತ್ತು ಆ ಬಳಿಕದ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳು, ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಪಕ್ಷದ ವರಿಷ್ಠರು ಅರವಿಂದ ಬೆಲ್ಲದ್ ಮೂಲಕ ಹೆಣೆದ ತಂತ್ರಗಾರಿಕೆ ಮತ್ತು ಬೆಲ್ಲದ್ ಕೇವಲ ದಾಳವಾಗಿ ಬಳಕೆಯಾದ ರೀತಿ, ಮುಂದೆ ಪಕ್ಷದ ಹೈಕಮಾಂಡ್ ಗೆ ದಾಳವಾಗದೆ ಸ್ವಂತ ರಾಜಕೀಯ ಹಿತಾಸಕ್ತಿ ಮುಂದಿಟ್ಟುಕೊಂಡು ಪಕ್ಷ ಮತ್ತು ಸರ್ಕಾರದಲ್ಲಿ ಕೆಲಸ ಮಾಡಬೇಕಾದ ದಾರಿಗಳ ಕುರಿತು ಈ ರಹಸ್ಯ ಸಭೆಯಲ್ಲಿ ಚರ್ಚೆ ನಡೆದಿದೆ.
ಹಾಗೇ, ಕನಿಷ್ಟ ಉಳಿದ ನಾಲ್ಕು ಸ್ಥಾನಗಳಿಗೂ ತಮ್ಮನ್ನು ಪರಿಗಣಿಸದೇ ಹೋದರೆ ತಮ್ಮ ಮುಂದಿರುವ ದಾರಿ ಯಾವುದು ಎಂಬ ಬಗ್ಗೆಯೂ ಮಾತುಕತೆ ನಡೆದಿದೆ. ಆದರೆ, ಈ ಹಂತದಲ್ಲಿ ದಿಢೀರ್ ನಿರ್ಧಾರ ಕೈಗೊಳ್ಳದೆ ಕಾದುನೋಡುವ ತಂತ್ರಕ್ಕೆ ಮೊರೆಹೋಗುವುದು ಸೂಕ್ತ ಎಂದೂ ಕೆಲವರು ಸಭೆಯಲ್ಲಿ ಸಲಹೆ ನೀಡಿದ್ಧಾರೆ. ರಮೇಶ್ ಜಾರಕಿಹೊಳಿ ಕೂಡ ಸದ್ಯ ತಮ್ಮದೇ ಸಿಡಿ ಹಗರಣದ ಕಾರಣದಿಂದಾಗಿ ಸಾರ್ವಜನಿಕವಾಗಿ ಸಮರ ಸಾರುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ಕಾದುನೋಡುವ ತಂತ್ರವೇ ಸದ್ಯಕ್ಕೆ ಸೂಕ್ತ ಎಂದು ಸಲಹೆ ನೀಡಿದ್ಧಾರೆ ಎನ್ನಲಾಗಿದೆ.

ಆದರೆ, ಸಿಎಂ ಮತ್ತು ಪಕ್ಷದ ವರಿಷ್ಠರ ಮೇಲೆ ಒತ್ತಡ ತಂತ್ರವನ್ನು ಮುಂದುವರಿಸುವ ಭಾಗವಾಗಿ ಮಾಡಬೇಕಾದ್ದನ್ನೆಲ್ಲಾ ಮಾಡಲು ಕೂಡ ಅತೃಪ್ತರ ಸಭೆಯಲ್ಲಿ ಚರ್ಚಿಸಲಾಗಿದೆ. ಅಂತಹ ತಂತ್ರಗಾರಿಕೆಯ ಭಾಗವಾಗಿಯೇ ಶುಕ್ರವಾರ ರಾತ್ರಿ ಬಾಲಚಂದ್ರ ಜಾರಕಿಹೊಳಿ, ಶ್ರೀಮಂತ ಪಾಟೀಲ, ಮಹೇಶ್ ಕುಮಟಳ್ಳಿ, ಪ್ರತಾಪ್ ಗೌಡ ಪಾಟೀಲ ಮುಖ್ಯಮಂತ್ರಿ ಬೊಮ್ಮಾಯಿ ಅವರ ಆರ್ ಟಿ ನಗರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ. ಬಾಕಿ ಇರುವ ಸಚಿವ ಸ್ಥಾನ ಹಂಚಿಕೆಯ ಕುರಿತು ಸಿಎಂ ಮೇಲೆ ಒತ್ತಡ ಹಾಕುವ ಭಾಗವಾಗಿ ಈ ಭೇಟಿ ನಡೆದಿದೆ.
ಆದರೆ, ಈ ಭೇಟಿಯ ವೇಳೆ ಸಿಎಂ ಬೊಮ್ಮಾಯಿ ಯಾವ ಪ್ರತಿಕ್ರಿಯೆ ನೀಡಿದರು ಮತ್ತು ಮಂತ್ರಿಗಿರಿಯ ಬೇಡಿಕೆಯೊಂದಿಗೆ ಬಂದಿದ್ದ ಮುಖಂಡರಿಗೆ ಯಾವ ಸಮಜಾಯಿಷಿ ನೀಡಿ ಕಳಿಸಿದರು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಆದರೆ, ಗುರುವಾರ ಮತ್ತು ಶುಕ್ರವಾರದ ನಿರಂತರ ರಹಸ್ಯ ಸಭೆಗಳು ಮತ್ತು ಆ ಬಳಿಕ ನೇರವಾಗಿ ಸಿಎಂ ಮನೆಗೇ ಭೇಟಿ ನೀಡಿದ ಅತೃಪ್ತರ ನಡೆಗಳು, ಸದ್ಯಕ್ಕಂತೂ ಮುಖ್ಯಮಂತ್ರಿಗಳಿಗೆ ಸಂಪುಟ ರಚನೆ, ಉಸ್ತುವಾರಿ ಹಂಚಿಕೆ, ಖಾತೆ ಹಂಚಿಕೆ ಮುಗಿಸಿ ‘ಕೈ ತೊಳೆದುಕೊಳ್ಳುವ’ ನಿರಾಳತೆಯನ್ನು ಕೂಡ ದೂರತಳ್ಳಿವೆ. ಹಾಗಾಗಿ ಈಗ ಮುಖ್ಯಮಂತ್ರಿಗಳು ಮುಖಕ್ಕೆ ‘ಮಾಸ್ಕ್’ ಹಾಕಿಕೊಂಡಂತೆ ಎಲ್ಲವನ್ನೂ ಮೌನವಾಗಿಯೇ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಆದರೆ, ನಿರಂತರವಾಗಿ ಅಲೆಯ ಮೇಲೊಂದು ಅಲೆಯಂತೆ ಅಪ್ಪಳಿಸುತ್ತಲೇ ಇರುವ ಈ ಅತೃಪ್ತಿ, ಅಸಮಾಧಾನ, ಬಂಡಾಯದ ‘ಸಾಂಕ್ರಾಮಿಕ’ಕ್ಕೆ ಸದ್ಯಕ್ಕಂತೂ ಸಿಎಂ ಬಳಿಯಾಗಲೀ, ಬಿಜೆಪಿ ವರಿಷ್ಠರ ಬಳಿಯಾಗಲೀ ‘ಮದ್ದಿಲ್ಲ’ ಎಂಬುದಂತೂ ದಿಟ. ಆದ್ದರಿಂದ ಈ ಅತೃಪ್ತಿ ಎಷ್ಟರ ಮಟ್ಟಿಗೆ ಭುಗಿಲೇಳಲಿದೆ ಎಂಬುದರ ಮೇಲೆ ಬೊಮ್ಮಾಯಿ ಅವರ ಆಡಳಿತ ‘ಕ್ವಾರಂಟೈನ್’ ಆಗಲಿದೆಯೇ? ಅಥವಾ ‘ಲಾಕ್ ಡೌನ್’ ಆಗಲಿದೆಯೇ ಎಂಬುದು ನಿಂತಿದೆ.