
ಕೋಲಾರ: ಕೋಲಾರ ಕಾಂಗ್ರೆಸ್ ಶಾಸಕರಲ್ಲಿ ಭಿನ್ನಮತ ಸ್ಪೋಟವಾಗಿದೆ. ಕೋಲಾರ ಉಸ್ತುವಾರಿ ಸಚಿವ ಭೈರತಿ ಸುರೇಶ್ ವಿರುದ್ದ ನೇರವಾಗಿ ವಾಗ್ದಾಳಿ ಮಾಡಿದ್ದಾರೆ ಬಂಗಾರಪೇಟೆ ಹಿರಿಯ ಕಾಂಗ್ರೆಸ್ ಶಾಸಕ ಎಸ್.ಎನ್ ನಾರಾಯಣಸ್ವಾಮಿ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನತೆಗೆ ಸಚಿವ ಭೈರತಿ ಸುರೇಶ್ ಅವಮಾನ ಮಾಡಿದ್ದಾರೆ ಎಂದಿರುವ ಎಸ್.ಎನ್ ನಾರಾಯಣಸ್ವಾಮಿ, ಕೋಲಾರದಲ್ಲಿ ಜಿಲ್ಲಾಡಳಿತ ಆಯೋಜನೆ ಮಾಡಿದ್ದ ಜನಪರ ಉತ್ಸವ ಕಾರ್ಯಕ್ರಮದ ಬಗ್ಗೆ ಟೀಕಿಸಿದ್ದಾರೆ. ದಲಿತ ಶಾಸಕರನ್ನ ಪರಿಗಣಿಸದೆ ಕಾರ್ಯಕ್ರಮ ಮಾಡಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.

ಕೋಲಾರ ಉಸ್ತುವಾರಿ ಸಚಿವ ಭೈರತಿ ಸುರೇಶ್, ಶಾಸಕರನ್ನ ವಿಶ್ವಾಸಕ್ಕೆ ತೆಗದುಕೊಂಡಿಲ್ಲ, ರಾಜ್ಯ ಬಜೆಟ್ ಹಿನ್ನಲೆ, ಇದುವರೆಗೂ ಒಂದೇ ಒಂದು ಸಭೆಯನ್ನೂ ಮಾಡಿಲ್ಲ. ಯಾರು ಬಂದರು, ಬಾರದಿದ್ದರು, ಸರ್ಕಾರಿ ಕಾರ್ಯಕ್ರಮ ಮಾಡ್ತೀವಿ ಎಂದು ಭೈರತಿ ಸುರೇಶ್ ಹೇಳಿದ್ದಾರೆ. ಈ ಹೇಳಿಕೆ ಮೂಲಕ ದಲಿತರಿಗೆ ಅವಮಾನ ಮಾಡಿದ್ದಾರೆ ಎಂದಿದ್ದಾರೆ.
ಶಾಸಕರೇ ಇಲ್ಲದೆ ಅವ್ರು ಮಂತ್ರಿಯಾಗ್ತಾರಾ..? ಎಂದು ಪ್ರಶ್ನಿಸಿರುವ ಎಸ್.ಎನ್ ನಾರಾಯಣಸ್ವಾಮಿ, ಶಾಸಕರು ಅಗತ್ಯವೇ ಇಲ್ಲವಾ..? ಅದನ್ನ ಹೇಳಲಿ ಎಂದಿದ್ದಾರೆ. ಶಾಸಕರು ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಅದನ್ನ ಹೇಳಲಿ. ನೀವು ಹಣವಂತರು, ಪ್ರಭಾವಿಗಳು ಇರಬಹುದು. ಅಷ್ಟು ಮಾತ್ರಕ್ಕೆ ಏನು ಬೇಕು ಹಾಗೆ ಹೇಳುವಂತಿಲ್ಲ. ಸೌಜನ್ಯಕ್ಕಾಗಿಯು ನಮ್ಮನ್ನ ಪರಿಗಣಿಸಿಲ್ಲ, ತುಘಲಕ್ ದರ್ಬಾರ್ ನಡೀತಿದೆ ಎಂದಿದ್ದಾರೆ.

ಪರಿಶಿಷ್ಟ ಜಾತಿಗೆ ಸೇರಿದ ಅನುದಾನ ಖರ್ಚು ಮಾಡಲು ನಮ್ಮನ್ನೆ ಪರಿಗಣಿಸಿಲ್ಲ. ಕೇವಲ ಕಿವಿಯಲ್ಲಿ ಹೇಳೊ ಹಿಂಬಾಲಕರ ಮಾತನ್ನ ಮಾತ್ರ ಉಸ್ತುವಾರಿ ಮಂತ್ರಿ ಪರಿಗಣಿಸ್ತಿದ್ದಾರೆ. ಕೋಲಾರ ಡಿಸಿಸಿ ಬ್ಯಾಂಕ್ ಚುನಾವಣೆ ತಡವಾಗಲು ನಿಮ್ಮ ಬೆಂಬಲಿಗರೇ ಕಾರಣ. ಕೋಮುಲ್ ಹಾಲು ಒಕ್ಕೂಟದಲ್ಲಿ ಅಕ್ರಮವಾಗಿದ್ದರು ಕ್ರಮವೇ ಇಲ್ಲ. ಕೋಮುಲ್ನಲ್ಲಿ ಅಕ್ರಮವಾಗಿದ್ದರು, ತರಾತುರಿಯಲ್ಲಿ ಚುನಾವಣೆ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಕೋಲಾರ ಜಿಲ್ಲೆಯ ರಾಜಕಾರಣ ಕೇವಲ ಇಬ್ಬರು ಬಲಾಢ್ಯರ ಕೈಯಲ್ಲಿ ಸಿಲುಕಿ, ಕುಲುಗೆಟ್ಟಿದೆ. ಉಸ್ತುವಾರಿ ಸಚಿವ ಭೈರತಿ ಸುರೇಶ್ ಅಭಿವೃದ್ಧಿ ಕಡೆಗೂ ಗಮನ ಹರಿಸುತ್ತಿಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿ, ನಮ್ಮ ಶಕ್ತಿಯಿಂದಲೇ ಆಗುತ್ತಿದೆ. ಸಚಿವ ಭೈರತಿ ಸುರೇಶ್ ಅಕ್ಕ ಪಕ್ಕ ದಲಿತ ಮುಖಂಡರೇ ಇರಲ್ಲ. ಕೋಲಾರ ಜಿಲ್ಲೆಯಲ್ಲಿ ಇಬ್ಬರೇ ಆಳ್ವಿಕೆ ಮಾಡ್ತಿದ್ದಾರೆ ಎಂದು ಶಾಸಕ ನಾರಾಯಣಸ್ವಾಮಿ ಟೀಕಿಸಿದ್ದಾರೆ.

ಮುನಿಯಪ್ಪ ಹಾಗು ರಮೇಶ್ ಕುಮಾರ್ ನಡುವೆ ರಾಜಕೀಯ ಜಿದ್ದಾಜಿದ್ದಿ ನಡೆಯುತ್ತಿತ್ತು. ಇದೀಗ ಬೈರತಿ ಸುರೇಶ್ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಮೂರನೇ ಶಕ್ತಿ ಹುಟ್ಟಿಕೊಂಡಿದೆ. ಶಾಸಕ ಎಸ್.ಎನ್ ನಾರಾಯಣಸ್ವಾಮಿ ವಾಗ್ದಾಳಿ ಮಾಡುವ ಮೂಲಕ ಬೈರತಿ ಸುರೇಶ್ ಶಕ್ತಿಕೇಂದ್ರ ಮಾಡಿಕೊಳ್ತಿದ್ದಾರೆ ಎಂದು ಟೀಕಿಸಿದ್ದಾರೆ.