ಭಾರತದಲ್ಲಿ ಎರಡನೇ ಕೋವಿಡ್ ಅಲೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ದೇಶದಾದ್ಯಂತ 1.20 ಲಕ್ಷಕ್ಕೂ ಅಧಿಕ ಕರೋನಾ ಪ್ರಕರಣಗಳು ದಿನವೊಂದಕ್ಕೆ ಏರಿಕೆಯಾಗುತ್ತಿದೆ. ಕರೋನಾ ಲಸಿಕೆ ಅಭಿಯಾನ ಶುರುವಾಗಿದ್ದರೂ, ಕರೋನಾ ಹೆಚ್ಚಳವಾಗುತ್ತಿರುವ ವೇಗ ತಗ್ಗಿಲ್ಲ. ಈ ನಡುವೆ, ಭಾರತದ ಸುಮಾರು 60% ಕರೋನಾ ಪ್ರಕರಣಗಳಿರುವ ಮಹಾರಾಷ್ಟ್ರಕ್ಕೆ ಕೇಂದ್ರ ಸರ್ಕಾರ ಲಸಿಕೆ ವಿತರಣೆಯಲ್ಲಿ ತಾರತಮ್ಯ ಎಸಗುತ್ತಿದೆ ಎಂಬ ಆರೋಪ ಕೇಳಿ ಬಂದಿವೆ.
ಮಹಾರಾಷ್ಟ್ರ ರಾಜ್ಯದಲ್ಲಿ ಕರೋನಾ ಲಸಿಕೆಯ ಕೊರತೆಯ ಕುರಿತಂತೆ ನಿನ್ನೆಯಷ್ಟೇ ರಾಜ್ಯ ಸರ್ಕಾರ ಆತಂಕ ವ್ಯಕ್ತಪಡಿಸಿತ್ತು. ದಿನವೊಂದಕ್ಕೆ ಸುಮಾರು 6 ಲಕ್ಷ ಜನರಿಗೆ ಲಸಿಕೆ ನೀಡುತ್ತಿದ್ದೇವೆ, ಹಾಗಾಗಿ, ಒಂದು ವಾರಕ್ಕೆ ಸುಮಾರು 40 ಲಕ್ಷ ಡೋಸೇಜುಗಳ ಅಗತ್ಯ ನಮಗಿದೆ. ಆದರೆ, ರಾಜ್ಯದಲ್ಲಿ ಲಸಿಕೆ ಕೊರತೆ ಎದುರಾಗಿದ್ದು, ಹಲವು ಲಸಿಕಾ ಕೇಂದ್ರಗಳನ್ನು ಮುಚ್ಚುತ್ತಿದ್ದೇವೆ ಎಂದು ರಾಜ್ಯ ಸರ್ಕಾರ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ತಿಳಿಸಿತ್ತು. ಅದರಂತೆ ರಾಜ್ಯದಲ್ಲಿ ಸುಮಾರು 26 ಲಸಿಕಾ ಕೇಂದ್ರಗಳನ್ನು ಮುಚ್ಚಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅದಾಗ್ಯೂ, ಮಹಾರಾಷ್ಟ್ರದ ಅರ್ಧದಷ್ಟು ಜನಸಂಖ್ಯೆ ಇರುವ ಗುಜರಾತಿಗೆ ಇದುವರೆಗೂ ಸುಮಾರು 1 ಕೋಟಿಯಷ್ಟು ಲಸಿಕೆಗಳನ್ನು ಕೇಂದ್ರ ವಿತರಣೆ ಮಾಡಿವೆ, ಆದರೆ, ಮಹಾರಾಷ್ಟ್ರಕ್ಕೆ ಅಗತ್ಯವಿರುವಷ್ಟು ಲಸಿಕೆಗಳನ್ನು ಸರಬರಾಜು ಮಾಡಿಲ್ಲ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಆರೋಪಿಸಿದ್ದಾರೆ.
ಮಹಾರಾಷ್ಟ್ರಕ್ಕೆ ವಾರದಲ್ಲಿ 40 ಲಕ್ಷ ಡೊಸೇಜುಗಳ ಅನಿವಾರ್ಯತೆ ಇದೆ. ಆದರೆ ನಮಗೆ ಇವತ್ತು ಕೇವಲ 7.40 ಲಕ್ಷ ಲಸಿಕೆಗಳನ್ನು ಕೇಂದ್ರ ನೀಡಿವೆ. ಅದೇ ವೇಳೆ, ಉತ್ತರ ಪ್ರದೇಶಕ್ಕೆ 44 ಲಕ್ಷ ಡೋಸಸ್, ಮಧ್ಯಪ್ರದೇಶಕ್ಕೆ 33 ಲಕ್ಷ ಡೋಸಸ್, ಕರ್ನಾಟಕಕ್ಕೆ 23 ಲಕ್ಷ ಡೋಸಸ್, ಗುಜರಾತಿಗೆ 16 ಲಕ್ಷ ಡೋಸಸ್, ಹರ್ಯಾಣಕ್ಕೆ 24 ಲಕ್ಷ ಡೋಸಸ್ ನೀಡಿದೆ ಎಂದು ರಾಜೇಶ್ ಟೋಪೆ ತಿಳಿಸಿದ್ದಾರೆ. ಕುತೂಹಲಕಾರಿ ಅಂಶವೆಂದರೆ, ಈ ಎಲ್ಲಾ ರಾಜ್ಯಗಳೂ ಕೂಡಾ, ಬಿಜೆಪಿ ನೇರವಾಗಿ ಅಥವಾ ಮೈತ್ರಿಯಾಗಿ ಆಡಳಿತ ನಡೆಸುತ್ತಿರುವಂತಹವು.!
ಕೇಂದ್ರದ ತಾರತಮ್ಯದ ಕುರಿತಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್, ಮಹಾರಾಷ್ಟ್ರದಲ್ಲಿ 12.30 ಕೋಟಿ ಜನಸಂಖ್ಯೆಯಿದೆ. 4.73 ಲಕ್ಷಕ್ಕೂ ಹೆಚ್ಚು ಸಕ್ರಿಯ ಕರೋನಾ ಪ್ರಕರಣಗಳಿವೆ. ಆದರೆ ಇದುವರೆಗೂ ಮಹಾರಾಷ್ಟ್ರಕ್ಕೆ 85 ಲಕ್ಷ ಲಸಿಕೆಗಳನ್ನು ನೀಡಲಷ್ಟೇ ಕೇಂದ್ರ ಸಫಲವಾಗಿದೆ. ಅದೇ ವೇಳೆ ಮಹಾರಾಷ್ಟ್ರದ ಅರ್ಧದಷ್ಟು ಜನಸಂಖ್ಯೆಯಿರುವ (ಸುಮಾರು 6.50 ಕೋಟಿ) ಗುಜರಾತಿಗೆ 80 ಲಕ್ಷಕ್ಕೂ ಅಧಿಕ ಲಸಿಕೆಗಳನ್ನು ನೀಡಲಾಗಿದೆ. ಅಲ್ಲಿ ಸಕ್ರಿಯವಾಗಿರುವ ಕರೋನಾ ಪ್ರಕರಣಗಳ ಸಂಖ್ಯೆ ಕೇವಲ 17,000. ಆದರೂ, ಅಲ್ಲಿಗೆ ಹೆಚ್ಚು ಪ್ರಾಶಸ್ತ್ಯ ಕೊಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಅತೀಹೆಚ್ಚು ಕರೋನಾ ಸೋಂಕಿತರು ಇರುವ ಹಿನ್ನೆಲೆಯಲ್ಲಿ, ಮಹಾರಾಷ್ಟ್ರಕ್ಕೆ ಹೆಚ್ಚು ಲಸಿಕೆಗಳನ್ನು ತಲುಪಿಸಬೇಕಿತ್ತು. ಆದರೆ, ದೆಹಲಿಯಲ್ಲಿರುವ (ಕೇಂದ್ರ ಸರ್ಕಾರದಲ್ಲಿರುವ) ಕೆಲವು ವ್ಯಕ್ತಿಗಳು ಯಾವುದೋ ಉದ್ದೇಶದಿಂದ ಹೆಚ್ಚು ಲಸಿಕೆಗಳನ್ನು ನೀಡದಂತೆ ತಡೆಯುತ್ತಿದ್ದಾರೆ. ಅವರು ಮಹಾರಾಷ್ಟ್ರದ ಆರೋಗ್ಯ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಬಾರದೆಂದು ಬಯಸುತ್ತಾರೆ ಎಂದು ಪಾಟೀಲ್ ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವರು ಹೊರಡಿಸಿರುವ ಸರ್ಕ್ಯುಲರ್ ಕೂಡಾ ಮಹಾರಾಷ್ಟ್ರದ ವಿರುದ್ಧದ ದ್ವೇಷವನ್ನು ಸಾಬೀತುಪಡಿಸುತ್ತದೆ. ನಮ್ಮ ಸಿದ್ದಾಂತಗಳು ಕೇಂದ್ರ ಸರ್ಕಾರದ ಸಿದ್ದಾಂತದೊಂದಿಗೆ ಸರಿ ಹೊಂದುವುದಿಲ್ಲದ್ದರಿಂದ ಕೇಂದ್ರ ಸರ್ಕಾರ ನಮ್ಮೊಂದಿಗೆ ಸರಿಯಾಗಿ ಸಹಕರಿಸುವುದಿಲ್ಲ ಎಂದು ಪಾಟೀಲ್ ಆರೋಪಿಸಿದ್ದಾರೆ.
ಜಾರ್ಖಂಡ್ ಆರೋಗ್ಯ ಸಚಿವರೂ ತಮ್ಮಲ್ಲಿ ಲಸಿಕೆ ಕೊರತೆ ಇದೆ ಎಂದು ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ. ಮುಂದಿನ ಒಂದೆರಡು ದಿನಗಳವರೆಗೆ ನಮ್ಮಲ್ಲಿ ಸ್ಟಾಕ್ ಇದೆ. ನಾವು ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದೇವೆ ಎಂದು ಜಾರ್ಖಂಡ್ ಆರೋಗ್ಯ ಸಚಿವ ಬನ್ನಾ ಗುಪ್ತಾ ತಿಳಿಸಿದ್ದಾರೆ.
ಸುಮಾರು 83 ಲಕ್ಷ ಜನರು ಮೊದಲ ಮತ್ತು ಎರಡನೆಯ ಪ್ರಮಾಣದಲ್ಲಿ ಲಸಿಕೆ ಪಡೆಯಬೇಕಾಗಿದೆ. ಇದರರ್ಥ ನಮಗೆ ಸುಮಾರು 1.60 ಕೋಟಿ ಪ್ರಮಾಣಗಳು ಬೇಕಾಗುತ್ತವೆ. ಸುಮಾರು 18,27,800 ಲಸಿಕೆಗಳನ್ನು ಮೊದಲ ಡೋಸ್ ಆಗಿ, 2,78,000 ಲಸಿಕೆಗಳನ್ನು ಎರಡನೇ ಡೋಸ್ ಆಗಿ ನೀಡಲಾಗಿದೆ. ನಾವು ಕೇಂದ್ರ ಆರೋಗ್ಯ ಸಚಿವರೊಂದಿಗೆ ಮಾತನಾಡಿದ್ದೇವೆ ಮತ್ತು ಮೊದಲ ಡೋಸ್‌ಗೆ ಸುಮಾರು 10 ಲಕ್ಷ ಲಸಿಕೆಗಳನ್ನು ತಕ್ಷಣ ನಮಗೆ ನೀಡುವಂತೆ ವಿನಂತಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ತಾರತಮ್ಯದ ಕುರಿತು ಬನ್ನಾ ಗುಪ್ತ ಆರೋಪಿಸದಿದ್ದರೂ, ತಮ್ಮಲ್ಲಿ ಲಸಿಕೆ ಕೊರತೆಯಿರುವುದನ್ನು ಒಪ್ಪಿಕೊಂಡಿದ್ದಾರೆ. ಮಹಾರಾಷ್ಟ್ರ, ಜಾರ್ಖಂಡ್ ಮಾತ್ರವಲ್ಲದೆ ತೆಲಂಗಾಣ, ಒಡಿಸ್ಸಾ, ಛತ್ತೀಸ್‌ಗಡ್, ಆಂಧ್ರಪ್ರದೇಶ ಕೂಡಾ ಲಸಿಕೆ ಕೊರತೆ ಇರುವುದಾಗಿ ಒಪ್ಪಿಕೊಂಡಿದೆ. ಕೇಂದ್ರ ಸರ್ಕಾರಕ್ಕೆ ಇನ್ನಷ್ಟು ಲಸಿಕೆಗಳನ್ನು ಸರಬರಾಜು ಮಾಡುವಂತೆ ಒತ್ತಾಯಿಸಿದೆ.
ಈ ನಡುವೆ, ಲಸಿಕೆ ಕೊರತೆಯಿಂದ ಮಹಾರಾಷ್ಟ್ರದ 26 ಲಸಿಕಾ ಕೇಂದ್ರಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು, ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಲಸಿಕಾ ಕೇಂದ್ರದಲ್ಲೂ ಲಸಿಕೆ ಕೊರತೆಯಿರುವುದಾಗಿ ನೋಟೀಸ್ ಹಾಕಲಾಗಿದೆ.
Inputs: Jagaran English, Scroll.in, NDTV &free press journal