• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಶಿಥಿಲವಾದ ನೈತಿಕ ಮೌಲ್ಯಗಳು: ಈಗ ಕಾರ್ಯಾಂಗದ ಸರದಿ

ನಾ ದಿವಾಕರ by ನಾ ದಿವಾಕರ
February 22, 2023
in ಅಂಕಣ
0
ಶಿಥಿಲವಾದ ನೈತಿಕ ಮೌಲ್ಯಗಳು: ಈಗ ಕಾರ್ಯಾಂಗದ ಸರದಿ
Share on WhatsAppShare on FacebookShare on Telegram

ಅಧಿಕಾರ ರಾಜಕಾರಣದಲ್ಲಿ  ಶಿಥಿಲವಾಗುತ್ತಿರುವ ಸಾಂವಿಧಾನಿಕ ನೈತಿಕತೆ ಕಾರ್ಯಾಂಗಕ್ಕೂ ವ್ಯಾಪಿಸಿದಂತಿದೆ

ADVERTISEMENT

ಸಾಮಾನ್ಯ ಜನತೆಯ ದೃಷ್ಟಿಯಲ್ಲಿ ಅತ್ಯಂತ ಉತ್ಕೃಷ್ಟ ಆಡಳಿತ ವ್ಯವಸ್ಥೆ ಎಂದರೆ ಪ್ರಜಾಪ್ರಭುತ್ವ ಎನ್ನುವುದು ಜಗಜ್ಜಾಹೀರಾಗಿರುವ ಸತ್ಯ. ಈ ವ್ಯವಸ್ಥೆಯಲ್ಲಿ ಏನೇ ಹುಳುಕುಗಳಿದ್ದರೂ ಅದನ್ನು ಸರಿಪಡಿಸಿಕೊಳ್ಳುವ ಅವಕಾಶಗಳು ಆಡಳಿತ ನಡೆಸುವವರಿಗೆ ಇರುವಂತೆಯೇ, ಸರಿಪಡಿಸಿಕೊಳ್ಳುವಂತೆ ಒತ್ತಡ ಹೇರುವ ಹಕ್ಕು ಪ್ರಜೆಗಳಿಗೂ ಇರುತ್ತದೆ. ಈ ಎರಡೂ ಬದಿಯ ಅವಕಾಶ, ಹಕ್ಕು, ಕರ್ತವ್ಯ ಮತ್ತು ಆಯ್ಕೆಗಳ ಸಮತೋಲನ ಸಾಧಿಸುವ ಸಲುವಾಗಿಯೇ ಪ್ರತಿಯೊಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಒಂದು ಸಂವಿಧಾನ ಜಾರಿಯಲ್ಲಿರುತ್ತದೆ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ಬೆನ್ನುತಟ್ಟಿಕೊಳ್ಳುವ ನಮ್ಮ ದೇಶದ ಸಂವಿಧಾನವೂ ವಿಶ್ವದ ಅತ್ಯಂತ ಶ್ರೇಷ್ಠ ಸಂವಿಧಾನ ಎಂದೇ ಹೆಸರುಗಳಿಸಿದೆ. ಈ ಸಂವಿಧಾನದ ಘನತೆ, ಗೌರವ, ಪ್ರತಿಷ್ಠೆ ಮತ್ತು ಸ್ಥಾನಮಾನಗಳನ್ನು ಕಾಪಾಡುವ ಹೊಣೆಗಾರಿಕೆ ಪ್ರಜಾಪ್ರಭುತ್ವದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ನಾಲ್ಕನೆಯ ಅಂಗ ಎನ್ನಲಾಗುವ ಮಾಧ್ಯಮಗಳ ಮೇಲಿರುತ್ತದೆ. ಭಾರತದ ಸಂದರ್ಭದಲ್ಲಿ ನ್ಯಾಯಾಂಗವನ್ನು ಹೊರತುಪಡಿಸಿ  ಇತರ ಮೂರೂ ಅಂಗಗಳು ತಮ್ಮ ಜವಾಬ್ದಾರಿಯನ್ನು ಮರೆತಿರುವುದು ಈ ದೇಶದ ಆಡಳಿತ ವ್ಯವಸ್ಥೆಯನ್ನು ದಿನದಿಂದ ದಿನಕ್ಕೆ ಹದಗೆಡುವಂತೆ ಮಾಡುತ್ತಿದೆ.

ಶಾಸಕಾಂಗಕ್ಕೆ ಕಾಲಕಾಲಕ್ಕೆ ಆಯ್ಕೆಯಾಗುವ ಜನಪ್ರತಿನಿಧಿಗಳು ಗ್ರಾಮ ಪಂಚಾಯತ್‌ ಮಟ್ಟದಿಂದ ಸಂಸತ್ತಿನವರೆಗೆ ತಮ್ಮನ್ನು ತಾತ್ವಿಕ ನೆಲೆಯಲ್ಲಿ ಜನಸೇವಕರೆಂದೇ ಭಾವಿಸುತ್ತಾರೆ. ಆಡಳಿತ ವ್ಯವಸ್ಥೆಯಲ್ಲಿ ತಮ್ಮ ಪ್ರತಿನಿಧಿತ್ವವನ್ನು ನಿರ್ಣಯಿಸುವುದು ಸರ್ಕಾರಗಳು ರೂಪಿಸುವ ಜನೋಪಯೋಗಿ ಯೋಜನೆಗಳ ಅನುಷ್ಟಾನದ ಮೂಲಕ ಎನ್ನುವ ವಾಸ್ತವವನ್ನೂ ಬಹುಶಃ ಎಲ್ಲರೂ ಅರಿತಿರುತ್ತಾರೆ. ಆದರೆ ʼ ಜನಸೇವೆ ʼ ಯನ್ನು ವ್ಯಾಖ್ಯಾನಿಸುವ ಸಂದರ್ಭದಲ್ಲಿ ಸಾಮಾನ್ಯ ʼ ಜನ ʼರ ವರ್ಗೀಕರಣವೂ ಸದ್ದಿಲ್ಲದೆ ಸಾಗುತ್ತಿರುತ್ತದೆ. ಸರ್ಕಾರದ ಯೋಜನೆಗಳು ಯಾವ ವರ್ಗದ ʼಜನರನ್ನುʼ ತಲುಪಬೇಕು ಎನ್ನುವುದನ್ನು ಚುನಾವಣಾ ರಾಜಕಾರಣದ ಲಾಭನಷ್ಟದ ಲೆಕ್ಕಾಚಾರಗಳು ನಿರ್ಧರಿಸುತ್ತವೆ. ಹಾಗಾಗಿಯೇ ತುಷ್ಟೀಕರಣ, ಅವಗಣನೆ, ನಿರ್ಲಕ್ಷ್ಯ ಇವೆಲ್ಲವೂ ರಾಜಕೀಯ ಪಕ್ಷಗಳ ಬ್ರಹ್ಮಾಸ್ತ್ರಗಳಾಗಿಬಿಡುತ್ತವೆ. ಇವೆಲ್ಲವೂ ಜನಸಾಮಾನ್ಯರ ನೆಲೆಯಲ್ಲಿ ಸಹನೀಯವಾಗಿಬಿಡುತ್ತವೆ. ಆದರೆ ಶಾಸಕಾಂಗದಲ್ಲಿ ತಮ್ಮನ್ನು ಪ್ರತಿನಿಧಿಸುವ ಶಾಸಕ, ಸಂಸದರಲ್ಲಿ ಸಾಂವಿಧಾನಿಕ ನೈತಿಕತೆ ಶಿಥಿಲವಾಗುವುದನ್ನು ಯಾವುದೇ ಸಮಾಜವೂ ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ.

ಬಹುಶಃ ಭಾರತ ಇಂತಹ ಸನ್ನಿವೇಶವನ್ನು ಎದುರಿಸುತ್ತಿದೆ. ಸಾಂವಿಧಾನಿಕ ನೈತಿಕತೆಗೂ, ಸಾಂವಿಧಾನಿಕ ಬದ್ಧತೆಗೂ ಇರುವ ಸೂಕ್ಷ್ಮ ಅಂತರವನ್ನು ಸೋ ಕಾಲ್ಡ್‌ ಜನಪ್ರತಿನಿಧಿಗಳು ಗ್ರಹಿಸುವುದು ಅತ್ಯವಶ್ಯವಾಗುತ್ತದೆ. ಸಂವಿಧಾನದ ಅಡಿಯಲ್ಲೇ ರೂಪಿಸಲಾಗುವ ಕಾಯ್ದೆ ಕಾನೂನುಗಳನ್ನು ಅನುಸರಿಸುವುದು ಮತ್ತು ಸರ್ಕಾರಗಳು ಸಂವಿಧಾನದ ಆಶಯದಂತೆ ರೂಪಿಸುವ ಯೋಜನೆಗಳನ್ನು ಕಟ್ಟಕಡೆಯ ಫಲಾನುಭವಿಗೂ ತಲುಪಿಸುವುದು ಸಂವಿಧಾನ ಬದ್ಧತೆ ಎನಿಸಿಕೊಳ್ಳುತ್ತದೆ. ಇದರಿಂದಾಚೆಗೆ ಜನಪ್ರತಿನಿಧಿಗಳ ಸಾರ್ವಜನಿಕ ವರ್ತನೆ, ನಡೆನುಡಿ, ಅವರಾಡುವ ಮಾತುಗಳು ಮತ್ತು  ನಡೆಸುವ ಚಟುವಟಿಕೆಗಳು ಸಾಂವಿಧಾನಿಕ ನೈತಿಕತೆಯನ್ನು ಬಿಂಬಿಸುತ್ತವೆ. ಆಡಳಿತ ನೀತಿಯನ್ನು ರೂಪಿಸುವ ಪರಮಾಧಿಕಾರ ಹೊಂದಿರುವ ಜನಪ್ರತಿನಿಧಿಗಳಲ್ಲಿ ಈ ನೈತಿಕತೆ ಕ್ಷೀಣಿಸಿದಂತೆಲ್ಲಾ, ಮೌಲಿಕ ಕುಸಿತವು ಶೀಘ್ರವಾಗಿ ತಳಮಟ್ಟಕ್ಕೆ ತಲುಪುತ್ತದೆ . ಸಹಜವಾಗಿಯೇ ಶಾಸಕಾಂಗದ ನಂತರದ ಸ್ತರದಲ್ಲಿ ಕಾರ್ಯಾಂಗವು ಇದರಿಂದ ಬಾಧಿತವಾಗುತ್ತದೆ. ಕಾರ್ಯಾಂಗದ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ, ಅಧಿಕಾರಶಾಹಿಯಿಂದ ಯಾವುದೇ ತಪ್ಪುಗಳಾಗದಂತೆ, ಅಕ್ರಮ-ಅವ್ಯವಹಾರಗಳು ನಡೆಯದಂತೆ, ಭ್ರಷ್ಟಾಚಾರ ನಡೆಯದಂತೆ ಎಚ್ಚರ ವಹಿಸುವ ಜವಾಬ್ದಾರಿ ಶಾಸಕಾಂಗದ ಮೇಲಿರುತ್ತದೆ.

ಈ ಜವಾಬ್ದಾರಿಯನ್ನು ಸಾಂವಿಧಾನಿಕ ನೈತಿಕತೆಯ ಚೌಕಟ್ಟಿನಲ್ಲಿ ನಿಭಾಯಿಸಬೇಕೇ ಹೊರತು, ನಿಯಂತ್ರಣಾಧಿಕಾರದ ನೆಲೆಯಲ್ಲಿ ಪರಿಭಾವಿಸಬಾರದು. ಈ ಎಚ್ಚರಿಕೆ ಶಾಸಕಾಂಗದ ಪ್ರತಿನಿಧಿಗಳಲ್ಲಿ ಇರಬೇಕಾಗುತ್ತದೆ. ದುರಾದೃಷ್ಟವಶಾತ್‌ ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸಕಾಂಗದಲ್ಲಿ ಜನಸಾಮಾನ್ಯರನ್ನು ಪ್ರತಿನಿಧಿಸುವವರಿಗೆ ಈ ಎಚ್ಚರಿಕೆಯ ಕೊರತೆ ಇದೆ. ದಿನದಿಂದ ದಿನಕ್ಕೆ ಈ ಕೊರತೆ ಹೆಚ್ಚಾಗುತ್ತಲೂ ಇದೆ. ಕಾರ್ಯಾಂಗವನ್ನು ನಿರ್ವಹಿಸುವ ಅಧಿಕಾರಿಗಳೂ ಸಹ ಸಾಂವಿಧಾನಿಕವಾಗಿ ಜನಸೇವಕರೇ ಎನ್ನವುದನ್ನೂ ಮರೆತು ವರ್ತಿಸುತ್ತಿರುತ್ತಾರೆ. ಈ ಅಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸುವ, ದರ್ಪ ತೋರಿಸುವ ಶಾಸಕರು ಮತ್ತು ಸಂಸದರು, ಈ ಅಧಿಕಾರಿಗಳ ಸ್ವಾಯತ್ತತೆಯನ್ನು ಕಸಿದುಕೊಳ್ಳುವುದಷ್ಟೇ ಅಲ್ಲದೆ, ಜನಸಾಮಾನ್ಯರಿಗೆ ಸ್ಪಂದಿಸುವ ಅವಕಾಶಗಳನ್ನೂ ಕಸಿದುಕೊಳ್ಳುತ್ತಾರೆ. ಈ ಪ್ರವೃತ್ತಿಯನ್ನು ಧಿಕ್ಕರಿಸುವ ಅಧಿಕಾರಿಗಳು ಎದುರಿಸುವ ಸಂಕಷ್ಟಗಳಿಗೆ ದೊಡ್ಡ ಇತಿಹಾಸವೇ ಇದೆ.

ಈ ಹಿನ್ನೆಲೆಯಲ್ಲೇ ಕಾರ್ಯಾಂಗದಲ್ಲಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಜನಧ್ವನಿ ಮತ್ತು ಕುಸಿಯುತ್ತಿರುವ ನೈತಿಕ ಮೌಲ್ಯಗಳತ್ತ ಗಮನಹರಿಸಬೇಕಿದೆ. ಮೈಸೂರಿನ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ (ಐಜಿಪಿ) ಡಿ. ರೂಪಾ ಮೌದ್ಗಿಲ್‌ ಅವರ ನಡುವಿನ ಶೀತಲ ಯುದ್ಧ ಈಗ ಬೀದಿ ಕಾಳಗವಾಗಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ. ಶಿಕ್ಷಕರ ನೇಮಕಾತಿ, ಉಪನ್ಯಾಸಕರ ನೇಮಕಾತಿ, ಪಿಎಸ್‌ಐ ನೇಮಕಾತಿ,  ವಿಶ್ವವಿದ್ಯಾಲಯಗಳ ಆಡಳಿತ ನಿರ್ವಹಣೆ ಹೀಗೆ ಎಲ್ಲ ಆಡಳಿತ ವಲಯಗಳಲ್ಲೂ ಭ್ರಷ್ಟಾಚಾರದ ಬೇರುಗಳು ಹರಡುತ್ತಿರುವ ಕರ್ನಾಟಕ ಸದ್ಯದಲ್ಲಿ ʼ ಸರ್ವ ಜನಾಂಗದ ಶಾಂತಿಯ ತೋಟ ʼ ಆಗುವುದರ ಬದಲು ʼ ಸರ್ವ ವಲಯದ ಭ್ರಷ್ಟರ ತೋಟ ʼ ಅಗಿ ನಳನಳಿಸುತ್ತಿದೆ. ಈ ಭ್ರಷ್ಟಾಚಾರ, ಅಕ್ರಮ, ಅವ್ಯವಹಾರಗಳ ನಡುವೆಯೇ ಇಬ್ಬರು ಮಹಿಳಾ ಅಧಿಕಾರಿಗಳ ನಡುವಿನ ಕಲಹ ಕಚೇರಿಯಿಂದ ಹೊರಬಂದು ಬೀದಿಪಾಲಾಗಿದೆ.

ಭಾರತದ ಸಾಮಾಜಿಕ ಪರಿಸರದಲ್ಲಿ ಮಹಿಳೆಯರ ನಡುವಿನ ಜಗಳ ಎಂದರೆ ಇಡೀ ಸಮಾಜವೇ ವಕ್ರದೃಷ್ಟಿಯಿಂದ ನೋಡುವುದನ್ನು ಸಣ್ಣ ಕುಟುಂಬದಿಂದ ಕಾರ್ಪೋರೇಟ್‌ ಕಚೇರಿಯವರೆಗೂ ಕಾಣಬಹುದು. ಕಚೇರಿಗಳಲ್ಲಿ ಇಬ್ಬರು ಮಹಿಳಾ ಸಿಬ್ಬಂದಿಯ ನಡುವೆ ಕಲಹ ನಡೆದರೆ ನೋಡುತ್ತಾ ಆನಂದಿಸುವ ಪುರುಷ ವರ್ಗ ಒಂದು ಇದ್ದೇ ಇರುತ್ತದೆ. ಮಧ್ಯಪ್ರವೇಶಿಸಿ ಕಲಹ ಬಗೆಹರಿಸುವ ಕೆಲವೇ ಪುರುಷರ ಪ್ರಯತ್ನಗಳನ್ನು ವಕ್ರದೃಷ್ಟಿಯಿಂದ ನೋಡುವ ವರ್ಗವೂ ಇದ್ದೇ ಇರುತ್ತದೆ. “ ಈರ್ಷೆ ಮಹಿಳೆಯರ ಸಹಜ ಗುಣ ” ಎನ್ನುವ ಪುರುಷಾಧಿಪತ್ಯದ ಅಭಿಪ್ರಾಯವನ್ನು ಸಾರ್ವತ್ರೀಕರಿಸುವ ಮೂಲಕ, ಮಹಿಳಾ ಕಲಹವನ್ನು ಕದನಕಣದಂತೆ ಭಾವಿಸುವ ಒಂದು ಸಮಾಜ ನಮ್ಮ ನಡುವೆ ಜೀವಂತವಾಗಿದೆ. ಉನ್ನತ ಅಧಿಕಾರ ಸ್ಥಾನದಲ್ಲಿರುವ ಶ್ರೀಮತಿ ರೋಹಿಣಿ ಮತ್ತು ರೂಪೌ ಮೌದ್ಗಿಲ್‌ ಅವರ ನಡುವಿನ ಕಲಹವನ್ನೂ ಸುತ್ತಲಿನ ಅಧಿಕಾರ ರಾಜಕಾರಣದ ವಾರಸುದಾರರು ಹೀಗೆಯೇ ಕಾಣುತ್ತಿರುವಂತೆ ತೋರುತ್ತಿದೆ. ಕನ್ನಡದ ಸುದ್ದಿಮನೆಗಳು ಈ ವನಿತಾ ಕದನವನ್ನು ಸಂಭ್ರಮಿಸುತ್ತಿರುವುದನ್ನು ಗಮನಿಸಿದಾಗ, ನಮ್ಮೊಳಗಿನ ಈ ಪುರುಷಾಧಿಪತ್ಯದ ಪೂರ್ವಗ್ರಹಗಳು ಇನ್ನೂ ಜೀವಂತವಾಗಿರುವುದು ಖಚಿತವಾಗುತ್ತದೆ.

ಶಾಸಕಾಂಗಕ್ಕೆ ಅನ್ವಯಿಸುವಂತಹ ಸಾಂವಿಧಾನಿಕ ನೈತಿಕತೆಯೇ ಕಾರ್ಯಾಂಗಕ್ಕೂ ಅನ್ವಯಿಸುತ್ತದೆ ಎಂಬ ಸಾಮಾನ್ಯ ಪರಿಜ್ಞಾನ ಪ್ರತಿಯೊಬ್ಬ ಅಧಿಕಾರಿಗೂ ಇರಬೇಕಾಗುತ್ತದೆ. ಐಎಎಸ್‌ ಅಧಿಕಾರಿ ರೋಣಿಣಿ ಸಿಂಧೂರ್‌ ಮತ್ತು ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ನಡುವೆ ಎದ್ದಿರುವ ಕಲಹ ಆಡಳಿತ ವ್ಯವಸ್ಥೆಗೆ ಸಂಬಂಧಪಟ್ಟಿರುವುದು.  ಇಂತಹ ಯಾವುದೇ ವಿವಾದವನ್ನು ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವುದು ಅಧಿಕಾರಿಗಳ ಪ್ರಥಮ ಆದ್ಯತೆಯಾಗಬೇಕಲ್ಲವೇ ? ಕಾರ್ಯಾಂಗವು ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡು, ಅಧಿಕಾರ ಸ್ಥಾನದಲ್ಲಿರುವವರು ತಮ್ಮದೇ ಆದ ರಾಜಕೀಯ ಹಿತಾಸಕ್ತಿಯನ್ನು ಹೊಂದಿದ್ದರೆ ಅಥವಾ ನಿರ್ದಿಷ್ಟ ರಾಜಕೀಯ ಒಲವು ಹೊಂದಿದ್ದರೆ ಅಲ್ಲಿ ಪ್ರಾಮಾಣಿಕತೆ ಮತ್ತು ಸಂವಿಧಾನ ನಿಷ್ಠೆ ಕ್ಷೀಣಿಸುತ್ತದೆ. ಜನಸೇವೆಗಾಗಿಯೇ ಇರುವ ಕಾರ್ಯಾಂಗದ ಕರ್ತವ್ಯಗಳನ್ನು ನಿರ್ವಹಿಸುವ ಅಧಿಕಾರಿಗಳಲ್ಲಿ ಪ್ರಜಾನಿಷ್ಠೆ ಪ್ರಧಾನವಾಗಿರಬೇಕೇ ಹೊರತು ಯಾವುದೇ ಪಕ್ಷ ನಿಷ್ಠೆ ಅಲ್ಲ. ದುರಾದೃಷ್ಟವಶಾತ್‌ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಈ ಮೌಲ್ಯಗಳು ಹಂತಹಂತವಾಗಿ ಶಿಥಿಲವಾಗುತ್ತಲೇ ಹೋಗುತ್ತಿವೆ. ಈ ಮೌಲ್ಯಗಳನ್ನು ಕಾಪಾಡಿಕೊಂಡಿದ್ದರೆ ಇಬ್ಬರೂ ಅಧಿಕಾರಿಗಳು ವ್ಯಕ್ತಿಗತ ದೋಷಾರೋಪಗಳನ್ನು ಸಾಮಾಜಿಕ ತಾಣಗಳ ಮೂಲಕ ಹಂಚಿಕೊಳ್ಳುತ್ತಿರಲಿಲ್ಲ.

ಐಎಎಸ್‌ ಆಗಲೀ ಐಪಿಎಸ್‌ ಆಗಲೀ ಈ ಅಧಿಕಾರಿಗಳ ನಿಷ್ಠೆ ಇರಬೇಕಾದ್ದು ಜನತೆಗೆ, ಸಮಾಜಕ್ಕೆ ಮತ್ತು ಸಂವಿಧಾನಕ್ಕೆ. ಅಧಿಕಾರ ವಲಯಗಳಲ್ಲಿ ಉದ್ಭವಿಸಬಹುದಾದ ಇಂತಹ ಕಲಹಗಳನ್ನು ನಿವಾರಿಸುವ ಕ್ಷಮತೆ ಶಾಸಕಾಂಗದ ಪ್ರತಿನಿಧಿಗಳಲ್ಲೂ ಇದ್ದಾಗ ಮಾತ್ರವೇ ಈ ನಿಷ್ಠೆಯನ್ನು ಕಾಪಾಡಿಕೊಳ್ಳುವ ಜಾಗ್ರತೆ ಮೂಡಿಸಲು ಸಾಧ್ಯ.  ಮೈಸೂರಿನ ಸ್ಥಳೀಯ ಶಾಸಕರು ಮತ್ತು ಸಂಸದರು ಇಬ್ಬರು ಮಹಿಳಾ ಅಧಿಕಾರಿಗಳ ನಡುವಿನ ಕಲಹವನ್ನು ಬಗೆಹರಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕಿತ್ತು. ಈಗ ವಿಷಯ ಮುಖ್ಯಮಂತ್ರಿಗಳ ಕಚೇರಿಯವರೆಗೂ ತಲುಪಿದ್ದು, ಕಲಹವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಬ್ಬರೂ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಲು ಆದೇಶಿಸಿದ್ದಾರೆ.  ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿರುವ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಐಪಿಎಸ್‌ (ಐಜಿಪ) ಅಧಿಕಾರಿ ರೂಪಾ ಮೌದ್ಗಿಲ್‌ ಅವರಿಗೆ ಸೇವಾ ನಿಯಮ ಉಲ್ಲಂಘನೆಯ ಆರೋಪದ ಮೇಲೆ ನೋಟಿಸ್‌ ಜಾರಿ ಮಾಡಲು ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.  ಇದರ  ನಡುವೆಯೇ ಇಬ್ಬರೂ ಅಧಿಕಾರಿಗಳು ಮುಖ್ಯಕಾರ್ಯದರ್ಶಿಗಳಿಗೆ ಪರಸ್ಪರ ದೂರು ಸಲ್ಲಿಸಿದ್ದಾರೆ.

ಕಾರ್ಯಾಂಗದಲ್ಲಿ ಸಾಂವಿಧಾನಿಕ ನಿಷ್ಠೆಯೇ ಪ್ರಧಾನವಾಗಿ ಇದ್ದಿದ್ದರೆ ಈ ವಿವಾದ ಬೀದಿ ರಂಪಾಟವಾಗುತ್ತಿರಲಿಲ್ಲ. ಟಿವಿ ಸುದ್ದಿಮನೆಗಳ ನಿರೂಪಕರು ಈ ವಿವಾದವನ್ನು ತಮ್ಮ ಸ್ಟುಡಿಯೋಗಳ ಕಟಕಟೆಯಲ್ಲಿಟ್ಟು ನಿಷ್ಕರ್ಷೆ ಮಾಡುವ ಅವಶ್ಯಕತೆ ಎದುರಾಗುತ್ತಿರಲಿಲ್ಲ. ಮೈಸೂರಿನ ಶಾಸಕರು, ಸಂಸದರು ಮತ್ತು ರಾಜಕೀಯ ನಾಯಕರು ಈ ವಿವಾದವನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಲ್ಲಿ ಸಾಮಾಜಿಕ ತಾಣಗಳಲ್ಲಿ ವೈಯುಕ್ತಿಕ ವಿಚಾರಗಳು ಪ್ರಸ್ತಾಪವಾಗುತ್ತಲೂ ಇರಲಿಲ್ಲ. ರಾಜಕೀಯ ನಾಯಕರೂ ಸಹ ಕಾರ್ಯಾಂಗವನ್ನು ನಿರ್ವಹಿಸುವ ಅಧಿಕಾರಿಗಳನ್ನು ʼ ತಮ್ಮವರು ʼ ಮತ್ತು ʼ ತಮ್ಮವರಲ್ಲದವರು ʼ  ಎಂದು ವರ್ಗೀಕರಿಸುವ ಪರಿಪಾಠ ಬೆಳೆಸಿಕೊಂಡು  ಬಂದಿರುವುದರಿಂದ ಇಂತಹ ಕಲಹಗಳಿಂದ ರಾಜಕೀಯ ಲಾಭ ಪಡೆಯುವ ಉದ್ದೇಶವೇ ಪ್ರಧಾನವಾಗಿಬಿಡುತ್ತದೆ. ಈ ಹಗ್ಗಜಗ್ಗಾಟದಲ್ಲಿ ದಿವಂಗತ ಡಿ.ಕೆ. ರವಿ ಅವರಂತಹ ಪ್ರಾಮಾಣಿಕ ಅಧಿಕಾರಿಗಳು, ಗಣಪತಿಯವರಂತಹ ನಿಷ್ಠಾವಂತ ಅಧಿಕಾರಿಗಳು ಬಲಿಪಶುಗಳಾಗಿ ಹುತಾತ್ಮರಾಗಿಬಿಡುತ್ತಾರೆ.

 “ ಇಬ್ಬರು ಅಧಿಕಾರಿಗಳ ಜಗಳದಲ್ಲಿ ನನ್ನ ಮಗನ ಹೆಸರನ್ನು ಎಳೆದು ತರಬೇಡಿ ” ಎಂದು ದಿವಂಗತ ಡಿ.ಕೆ ರವಿ ಅವರ ತಾಯಿ ಮನವಿ ಮಾಡಿರುವುದು ಇಡೀ ಆಡಳಿತ ವ್ಯವಸ್ಥೆಯನ್ನೇ ನಾಚಿ ತಲೆತಗ್ಗಿಸುವಂತೆ ಮಾಡಬೇಕಿತ್ತಲ್ಲವೇ ? ಅಧಿಕಾರ ವಲಯದ ಕಚೇರಿಗಳಲ್ಲಿ ಉದ್ಭವಿಸುವ ಕಲಹಗಳು ಕುಟುಂಬ ವಲಯಗಳಿಗೂ ವಿಸ್ತರಿಸುವ ಮಟ್ಟಿಗೆ ನಮ್ಮ ಆಡಳಿತ ವ್ಯವಸ್ಥೆ ಮೌಲ್ಯಗಳನ್ನು ಕಳೆದುಕೊಂಡಿದೆ ಎನಿಸುವುದಿಲ್ಲವೇ ? ರೂಪಾ ಅವರ  ಪ್ರಶ್ನೆಗಳ ನೈತಿಕತೆಯನ್ನಾಗಲೀ, ರೋಹಿಣಿ ಅವರ ಆರೋಪಗಳ ಸತ್ಯಾಸತ್ಯತೆಗಳನ್ನಾಗಲೀ ನಿರ್ಧರಿಸುವುದು ಜನಪ್ರತಿನಿಧಿಗಳ ಕೆಲಸವಲ್ಲ. ಬದಲಾಗಿ ಇಂತಹ ಕಲಹಗಳನ್ನು ಅಧಿಕಾರ ವಲಯದ ನಾಲ್ಕು ಗೋಡೆಗಳ ನಡುವೆಯೇ ಬಗೆಹರಿಸಿ, ಸಾರ್ವಜನಿಕರಿಗೆ ಪಾರದರ್ಶಕವಾದ ಉತ್ತಮ ಆಡಳಿತ ನೀಡುವುದು ಜನಪ್ರತಿನಿಧಿಗಳ ಆದ್ಯತೆಯಾಗಬೇಕಲ್ಲವೇ ?

ಸಾಂವಿಧಾನಿಕ ನೈತಿಕತೆಯನ್ನು ಕಳೆದುಕೊಂಡಿರುವ ಒಂದು ಆಡಳಿತ ವ್ಯವಸ್ಥೆಯಲ್ಲಿ ಇಂತಹ ಅವ್ಯವಸ್ಥೆ ಮತ್ತು ಅವಲಕ್ಷಣಗಳು ಸಹಜವೇ ಎನಿಸುತ್ತದೆ. ಕಾರ್ಯಾಂಗವನ್ನು ಪ್ರತಿನಿಧಿಸುವ ರಾಜಕೀಯ ನಾಯಕರು, ಜನಪ್ರತಿನಿಧಿಗಳು ತಮ್ಮ ಸಾಂವಿಧಾನಿಕ ನೈತಿಕತೆಯನ್ನು ಕಾಪಾಡಿಕೊಂಡು ಬಂದರೆ ಸಹಜವಾಗಿಯೇ ಇವರ ನಿಗ್ರಹದಲ್ಲೇ ಕಾರ್ಯನಿರ್ವಹಿಸುವ ಕಾರ್ಯಾಂಗದ ಅಧಿಕಾರಿಗಳೂ ತಮ್ಮ ಸಾಂವಿಧಾನಿಕ ನೈತಿಕತೆಯನ್ನು ಕಾಪಾಡಿಕೊಳ್ಳಲು ಸಾಧ್ಯ. ಇಲ್ಲವಾದರೆ, ಇಡೀ ವ್ಯವಸ್ಥೆಯೇ ವಿವಸ್ತ್ರವಾಗಿ ನೈತಿಕ ಪಾತಾಳಕ್ಕೆ ಕುಸಿದುಬಿಡುತ್ತದೆ. ಈ ಅಪಾಯವನ್ನು ಮನಗಾಣಬೇಕಿರುವುದು ಜನತಾ ಜನಾರ್ಧನರು.

Tags: ಕಾರ್ಯಾಂಗಪ್ರಜಾಪ್ರಭುತ್ವ
Previous Post

ಆದಿಲ್ ಖಾನ್ ದುರಾನಿಯನ್ನು 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ನ್ಯಾಯಾಲಯ

Next Post

ರೋಹಿಣಿ ಸಿಂದೂರಿ ವಿರುದ್ಧ ದೂರು ನೀಡುವಂತೆ ಒತ್ತಡ: ದೂರು ದಾಖಲಿಸುತ್ತೇನೆಂದ ಸಾಮಾಜಿಕ ಕಾರ್ಯಕರ್ತ ಗಂಗರಾಜು

Related Posts

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ
ಅಂಕಣ

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

by ಪ್ರತಿಧ್ವನಿ
May 23, 2026
0

ನಾ ದಿವಾಕರ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಆಳುವ ವರ್ಗಗಳು ಜನಸಾಮಾನ್ಯರಿಗೆ ಮಿತವ್ಯಯದ ಉಪದೇಶ ಮಾಡುವುದು ಈ ಜನರ ಸಂಕಟಗಳು ಹೆಚ್ಚಾದಾಗ ಅಲ್ಲ, ಮಾರುಕಟ್ಟೆಗೆ ಬಲವಾದ ಹೊಡೆತ ಬಿದ್ದು ಬುಡ...

Read moreDetails
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 22, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 21, 2026
ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

May 18, 2026
ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

May 13, 2026
Next Post
ರೋಹಿಣಿ ಸಿಂದೂರಿ ವಿರುದ್ಧ ದೂರು ನೀಡುವಂತೆ ಒತ್ತಡ: ದೂರು ದಾಖಲಿಸುತ್ತೇನೆಂದ ಸಾಮಾಜಿಕ ಕಾರ್ಯಕರ್ತ ಗಂಗರಾಜು

ರೋಹಿಣಿ ಸಿಂದೂರಿ ವಿರುದ್ಧ ದೂರು ನೀಡುವಂತೆ ಒತ್ತಡ: ದೂರು ದಾಖಲಿಸುತ್ತೇನೆಂದ ಸಾಮಾಜಿಕ ಕಾರ್ಯಕರ್ತ ಗಂಗರಾಜು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada