ರಾಜ್ಯ ವಿಧಾನಸಭಾ ಚುನಾವಣೆಗೆ ಟೊಂಕ ಕಟ್ಟಿಕೊಂಡು ಹೋಗ್ತಿರೋ ರಾಜಕೀಯ ಪಕ್ಷಗಳು ಎದುರಾಳಿಗಳನ್ನು ಮಣಿಸುವುದಕ್ಕೆ ಎಲ್ಲಾ ರೀತಿಯ ಕಸರತ್ತು ನಡೆಸಿವೆ. ಆದರೆ ಬಿಜೆಪಿಗೆ ತನ್ನ ಒಳಗಿನ ಗೊಂದಲಗಳೇ ಮುಳುವಾಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಲೋಕಾಯುಕ್ತ ದಾಳಿಯಿಂದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಬಂಧನ ಭೀತಿಯಲ್ಲಿದ್ದಾರೆ. ಒಂದು ವೇಳೆ ಮಾಡಾಳ್ ವಿರೂಪಾಕ್ಷಪ್ಪ ಬಂಧನ ಮಾಡಿದರೂ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ. ಒಂದು ವೇಳೆ ಲೋಕಾಯುಕ್ತ ಪೊಲೀಸರು ಮಾಡಾಳು ವಿರೂಪಾಕ್ಷಪ್ಪರನ್ನು ಬಂಧನ ಮಾಡದೆ ಇದ್ದರೂ ವಿರೋಧ ಪಕ್ಷಗಳಿಗೆ ಅನುಕೂಲವೇ ಆಗುತ್ತದೆ. ಈ ರೀತಿಯ ಇಕ್ಕಟ್ಟಿನಿಂದ ಪಾರಾಗುವ ಬಗೆಯ ಬಗ್ಗೆ ಭಾರತೀಯ ಜನತಾ ಪಾರ್ಟಿ ಆಲೋಚನೆ ಮಾಡುತ್ತಿದೆ. ಈ ನಡುವೆ ಸಚಿವ ವಿ ಸೋಮಣ್ಣ, ಪಕ್ಷದಿಂದ ದೂರ ಆಗುತ್ತಿರುವುದು ಬಿಜೆಪಿ ಪಾಲಿಗೆ ನುಂಗಲಾರದ ಬಿಸಿ ತುಪ್ಪ ಎನ್ನುವಂತಾಗಿದೆ ಬಿಜೆಪಿ ಪರಿಸ್ಥಿತಿ.
ವಿ ಸೋಮಣ್ಣ – ಅಶೋಕ್ ನಡುವೆ ಮುಸುಕಿನ ಗುದ್ದಾಟ..!
ವಿ ಸೋಮಣ್ಣ ಹಾಗು ಆರ್ ಅಶೋಕ್ ಇಬ್ಬರೂ ಬೆಂಗಳೂರು ನಗರದ ಶಾಸಕರಾಗಿದ್ದು, ಬಿಜೆಪಿ ಪಕ್ಷದ ಒಳಗೆ ಮೇಲುಗೈ ಸಾಧಿಸಲು ಸಾಕಷ್ಟು ಪ್ರಯತ್ನ ಇಬ್ಬರ ನಡುವೆ ನಡೆಯುವುದು ಸಾಮಾನ್ಯ. ಇದೇ ಕಾರಣಕ್ಕೆ ಅಶೋಕ್ ಹಾಗು ಸೋಮಣ್ಣ ನಡುವೆ ಪೈಪೋಟಿ ಇತ್ತು. ಆದರೆ ಸೋಮವಾರ ಬಿಜೆಪಿ ರಥಯಾತ್ರೆಯಲ್ಲಿ ಭಾಗಿಯಾಗಿದ್ದ ಸೋಮಣ್ಣ, ಅರ್ಧದಲ್ಲೇ ಇಳಿದು ಹೊರಟು ಹೋದರು. ತನ್ನದೇ ಗೋವಿಂದರಾಜನಗರ ಕ್ಷೇತ್ರದಲ್ಲಿ ಬಿಜೆಪಿ ರಥಯಾತ್ರೆ ಅರ್ಧಕ್ಕೆ ಮೊಟಕು ಆಗುವಂತೆ ಆಯ್ತು. ಈ ಘಟನೆಗೂ ಮೊದಲು ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಸಚಿವ ಆರ್ ಅಶೋಕ್, ಸೋಮಣ್ಣನವರು ಇಡೀ ಕರ್ನಾಟಕದ ಫಿಗರ್ ಎಂದಿದ್ದರು. ನಾಗರಭಾವಿಯಿಂದ ನಾಯಂಡಹಳ್ಳಿವರೆಗೂ ರಥಯಾತ್ರೆ ಹೋಗಬೇಕಿತ್ತು. ಆದರೆ ರಥಯಾತ್ರೆಯಲ್ಲಿ ನಾಯಂಡಹಳ್ಳಿವರೆಗೂ ತೆರಳಲು ಆರ್ ಅಶೋಕ್ ನಿರಾಕರಿಸಿದ್ರು ಎನ್ನಲಾಗಿದೆ. ಇದರಿಂದ ಕೋಪಕೊಂಡ ಸಚಿವ ವಿ ಸೋಮಣ್ಣ ಅರ್ಧದಲ್ಲೇ ಇಳಿದು ಕಾರು ಹತ್ತಿ ಹೊರಟು ಹೋದರು. ಸಂಸದ ತೇಜಸ್ವಿ ಸೂರ್ಯ ಸಂಧಾನಕ್ಕೆ ಯತ್ನಿಸಿದ್ರೂ ಫಲಿಸಲಿಲ್ಲ.

ಅತ್ತ ಮಂಡ್ಯದಲ್ಲಿ ಕಾಂಗ್ರೆಸ್ ಕಡೆಗೆ ನಾರಾಯಣಗೌಡ..!
ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಉಪಚುನಾವಣೆ ವೇಳೆ ಗೆಲುವು ಸಾಧಿಸಿದ್ದ ನಾರಾಯಣಗೌಡ ಮಿನಿಸ್ಟರ್ ಕೂಡ ಆಗಿದ್ದಾರೆ. ಮಂಡ್ಯದಲ್ಲಿ ಒಂದು ಕ್ಷೇತ್ರ ಗೆಲುವು ಸಾಧಿಸಿದ ಬಳಿಕ ಬಿಜೆಪಿ ಮತ್ತಷ್ಟು ವಿಸ್ತರಣೆ ಮಾಡುವ ಕನಸು ಕಂಡಿತ್ತು. ಆದರೆ ನಾರಾಯಣಗೌಡ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ನಾನು ಕಾಂಗ್ರೆಸ್ಗೆ ಹೋಗ್ತೇನೆ. ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ ಗೆಲ್ಲುವುದು ಕಷ್ಟ. ಉಪಚುನಾವಣೆಯಲ್ಲಿ ಇಡೀ ಬಿಜೆಪಿ ಸರ್ಕಾರದ ಮಂತ್ರಿಗಳು ಬಂದು ನನ್ನ ಗೆಲುವಿಗೆ ಕೆಲಸ ಮಾಡಿದ್ದರು. ಅದೇ ಕಾರಣಕ್ಕೆ ಗೆಲುವು ಸಿಕ್ಕಿತ್ತು. ಮಂಡ್ಯದಲ್ಲಿ ಜೆಡಿಎಸ್ಗೆ ನೇರ ಎದುರಾಳಿ ಆಗಿರುವ ಕಾಂಗ್ರೆಸ್ ಕೂಡ ಪರೋಕ್ಷವಾಗಿ ನನ್ನ ಬೆಂಬಲಕ್ಕೆ ನಿಲ್ಲುವ ಕೆಲಸ ಮಾಡಿತ್ತು. ಇದೀಗ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಬ್ಯರ್ಥಿ ಹಾಕುತ್ತದೆ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಪ್ರಬಲವಾಗಿದ್ದು, ನಾನು ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ ಗೆಲುವು ಕಷ್ಟ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ ಕಾಂಗ್ರೆಸ್ ಜಿಲ್ಲಾ ಮಟ್ಟದ ನಾಯಕರು ನಾರಾಯಣಗೌಡ ಪಕ್ಷ ಸೇರ್ಪಡೆಯನ್ನು ವಿರೋಧಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಾರಾಯಣಗೌಡರೇ ಸ್ಪಷ್ಟನೆ ಕೊಟ್ಟಿದ್ದು, ಕಾಂಗ್ರೆಸ್ನಿಂದ ಆಹ್ವಾನವಿದೆ. ಮುಂದಿನ ದಿನಗಳಲ್ಲಿ ಜನ ಏನು ಹೇಳ್ತಾರೆ ಹಾಗೆ ಮಾಡ್ತೇನೆ ಎಂದಿದ್ದಾರೆ.
ಅತ್ತ ಶಶಿಕಲಾ ಜೊಲ್ಲೆ ಸೋಲಿಸಲು ಸಾಹುಕಾರ್ ಸಿದ್ಧತೆ..!
ಬೆಳಗಾವಿ ಜಿಲ್ಲೆ ನಿಪ್ಪಾಣಿ ಕ್ಷೇತ್ರದಿಂದ ಆಯ್ಕೆ ಆಗಿರುವ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಸೋಲಿಸಲು ಸ್ವತಃ ರಮೇಶ್ ಜಾರಕಿಹೊಳಿ ತಯಾರಿ ಮಾಡಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಆಪ್ತ ಉತ್ತಮ್ ಪಾಟೀಲ್ ಎಂಬುವರನ್ನು ಕಾಂಗ್ರೆಸ್ನಿಂದ ಅಖಾಡಕ್ಕೆ ಇಳಿಸಲಾಗ್ತಿದೆ. ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ ಅತ್ಯಾಪ್ತನಾಗಿರುವ ಉತ್ತಮ್ ಪಾಟೀಲ್, ಕಾಂಗ್ರೆಸ್ನಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತ. ಒಂದು ವೇಳೆ ಕಾಂಗ್ರೆಸ್ನಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿ ಆಗಿ ಆದರೂ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಕೂಡ ಶಶಿಕಲಾ ಜೊಲ್ಲೆ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದು, ಕುಣಿಯಲಾರದವರು ನೆಲ ಡೊಂಕು ಎಂದರೆ ನಾನೇನು ಮಾಡಲಿ ಎಂದು ಪ್ರಶ್ನೆ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ರಾಜಕೀಯ ದಾಳದ ವಿರುದ್ಧ ಶಶಿಕಲಾ ಜೊಲ್ಲೆ ಕುಟುಂಬ ಕಿಡಿಕಾರುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಬಿಜೆಪಿ ರಣತಂತ್ರ ಛಿದ್ರವಾಗುತ್ತಿದ್ದು, ಚುನಾವಣೆ ಸಮಯದಲ್ಲಿ ಸಂಕಷ್ಟಗಳ ಸುಳಿಗೆ ಭಾರತೀಯ ಜನತಾ ಪಾರ್ಟಿ ಸಿಲುಕುತ್ತಿದೆ ಎನ್ನುವುದು ಮಾತ್ರ ಸತ್ಯ.
ಕೃಷ್ಣಮಣಿ






