ನವದೆಹಲಿ : I.N.D.I. A. ಮೈತ್ರಿ ಕೂಟ ಗಟ್ಟಿಗೊಳಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದ್ದು, ನೀರು ಬಿಡುವಾಗ ನಿಮಗೆ ರಾಜ್ಯದ ಸಂಸದರ ನೆನಪಾಗಲಿಲ್ಲವೇ..? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದ ಹಿತ ಕಾಪಾಡಲು ನಾವು ಬದ್ಧರಾಗಿದ್ದೇವೆ. ಆದರೆ ರಾಜ್ಯ ಸರ್ಕಾರ ಮೊದಲು ನೀರು ಹರಿಸಿ ಈಗ ಬಂದು ಸಭೆ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮೈತ್ರಿಕೂಟ ಗಟ್ಟಿಗೊಳಿಸಲು ತಮಿಳುನಾಡಿಗೆ ನೀರು ಹರಿಸಿ, ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಇದು ಸರಿಯಲ್ಲ, ಹೀಗಾಗಬಾರದು ಎಂದು ನೇರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಉಪಸ್ಥಿತರಿದ್ದ ಸಭೆಯಲ್ಲೇ ಹೇಳಿದ್ದೇನೆ. ನೀವು ಮೊದಲು ನೀರು ಹರಿಸುವಾಗ ಯಾರನ್ನು ಕೇಳಿದ್ರಿ..? ಆಗ ನಿಮಗೆ ಸಂಸದರ ನೆನಪು ಆಗಲಿಲ್ವಾ? ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ನೇರವಾಗಿ ಹೇಳಿದ್ದೇನೆ ಎಂದು ಪ್ರಲ್ಹಾದ ಜೋಶಿಯವರು ಹೇಳಿದರು.
ಕಾನೂನಾತ್ಮಕ ವಿಚಾರಗಳ ಬಗ್ಗೆಯೂ ಮಾತನಾಡಿದ ಅವರು, ನಾಳೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಇದೆ. ನಮ್ಮಲ್ಲಿ ನೀರು ಇಲ್ಲ ಎಂದು ಅಫಿಡವಿಟ್ ಹಾಕ್ತಾರೆ. ಮತ್ತೆ ಅತ್ತ ಯಾವುದೋ ಒತ್ತಡದಲ್ಲಿ ತಮಿಳುನಾಡಿಗೆ ನೀರು ಹರಿಸ್ತಾರೆ. ತಮಿಳುನಾಡಿಗೆ ನೀರು ಹರಿಸುವ ಮೊದಲು ಮೀಟಿಂಗ್ ಮಾಡಬೇಕಿತ್ತು, ಚರ್ಚೆ ಮಾಡಬೇಕಿತ್ತು. ಕರ್ನಾಟಕದ ಹಿತ ಕಾಪಾಡಲು ನಾವು ಬದ್ಧರಾಗಿದ್ದೇವೆ. ನಿನ್ನೆ ಡಿಕೆಶಿ ನನ್ನನ್ನು ಭೇಟಿಯಾಗಿದ್ದಾರೆ.