ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಕೇಂದ್ರ ಸರ್ಕಾರದ ನಡುವಿನ ಜಟಾಪಟಿ ಮುಂದುವರೆದಿದೆ. ಬಂಗಾಳದ ಮುಖ್ಯ ಕಾರ್ಯದರ್ಶಿಯನ್ನು ವಾಪಾಸು ಕರೆಯಿಸಿಕೊಳ್ಳುವ ಕೇಂದ್ರದ ನಿರ್ಧಾರಕ್ಕೆ ಮಮತಾ ಬ್ಯಾನರ್ಜಿ ಸೆಡ್ಡು ಹೊಡೆದಿದ್ದಾರೆ.
ಈ ಬಗ್ಗೆ ಪ್ರಧಾನ ಮಂತ್ರಿಗೆ ಪತ್ರ ಬರೆದಿರುವ ಅವರು, ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿರುವ ಅಲ್ಪನ್ ಬಂಡೋಪಾಧ್ಯಾಯ ಅವರನ್ನು ಕೇಂದ್ರ ವಾಪಾಸು ಕರೆದಿರುವುದು ಅಚ್ಚರಿ ಮೂಡಿಸಿದೆ. ಆದರೆ, ರಾಜ್ಯದ ಕೋವಿಡ್ ವಿರುದ್ದದ ಹೋರಾಟದ ಸಂದರ್ಭದಲ್ಲಿ ಅವರನ್ನು ಇಲ್ಲಿಂದ ಕಳುಹಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
“ಪಶ್ಚಿಮ ಬಂಗಾಳ ಸರ್ಕಾರ ಅಲ್ಪನ್ ಅವರನ್ನು ಇಲ್ಲಿಂದ ಕಳುಹಿಸಿಕೊಡಲು ಆಗುವುದಿಲ್ಲ, ಕಳುಹಿಸಿ ಕೊಡುವುದೂ ಇಲ್ಲ. ರಾಜ್ಯದ ಜನರು ಎದುರಿಸುತ್ತಿರುವ ಸಂಕಷ್ಟಗಳು ಮತ್ತಷ್ಟು ಹೆಚ್ಚಾಗುವಂತೆ ನೀವು ಮಾಡುವುದಿಲ್ಲ ಎಂಬ ಭರವಸೆ ಇದೆ. ಕಾನೂನಾತ್ಮಕವಾಗಿ ಪಶ್ಚಿಮ ಬಂಗಾಳದಲ್ಲಿ ಅಲ್ಪನ್ ಅವರ ಸೇವೆ ಮೂರು ತಿಂಗಳು ವಿಸ್ತರಿಸಲಾಗಿದೆ,” ಎಂದು ಪತ್ರದಲ್ಲಿ ದೀದಿ ಬರೆದಿದ್ದಾರೆ.
ಪ್ರಧಾನಿ ಮೋದಿ ಪಶ್ಚಿಮ ಬಂಗಾಳದಲ್ಲಿ ಯಾಸ್ ಚಂಡಮಾರುತದಿಂದಾದ ಸಮಸ್ಯೆಗಳ ಕುರಿತು ಅವಲೋಕನ ನಡೆಸಲು ಬಂದಾಗ, ದೀದಿ ಕೆಲವೇ ಕೆಲವು ನಿಮಿಷಗಳ ಮಟ್ಟಿಗೆ ಪ್ರದಾನಿಯವರನ್ನು ಭೇಟಿಯಾಗಿದ್ದರು. ನಂತರ ಮತ್ತೊಂದು ಸಭೆಗಾಗಿ ಅಲ್ಲಿಂದ ತೆರಳಿದ್ದರು. ಇದು ಕೇಂದ್ರ ಸರ್ಕಾರವನ್ನು ತೀವ್ರ ಮುಜುಗರಕ್ಕೆ ತಳ್ಳಿತ್ತು. ಇದರ ಪರಿಣಾಮವಾಗಿ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ದ ಕೆಂಡಕಾರಿತ್ತು.
ನಂತರ ಐಎಎಸ್ ಅಧಿಕಾರಿಯಾಗಿರುವ ಅಲ್ಪನ್ ಅವರಿಗೆ ಕೇಂದ್ರ ಸರ್ಕಾರ ವಾಪಾಸ್ ಕೇಂದ್ರ ಸ್ಥಾನಕ್ಕೆ ಮರಳುವಂತೆ ಆದೇಶ ನೀಡಿತ್ತು. ಈ ಆದೇಶದ ವಿರುದ್ದ ಕಿಡಿಕಾರಿರುವ ದೀದಿ, ಇದು ಅಸಂವಿಧಾನಿಕ ಹಾಗೂ ಕಾನೂನಾತ್ಮಕವಾಗಿ ಲೋಪವುಳ್ಳಂತಹ ಆದೇಶ ಎಂದು ಹೇಳಿದ್ದರು.
ಈಗ ನೇರವಾಗಿ ಪ್ರಧಾನಿಯವರಿಗೆ ಪತ್ರವನ್ನು ಬರೆದು, ಅಲ್ಪನ್ ಬಂಡೋಪಾಧ್ಯಾಯರನ್ನು ರಾಜ್ಯದಿಂದ ಬಿಡುಗಡೆಗೊಳಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ,ಇದು ಇಷ್ಟಕ್ಕೇ ಮುಗಿಯುವ ವಿವಾದ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.