ಮಹಾರಾಷ್ಟ್ರದಲ್ಲಿ ಮತ್ತೆ ರಾಜಕೀಯ ಕ್ಷಿಪ್ರ ಕ್ರಾಂತಿಯಾಗಿದೆ. ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ 46 ಶಾಸಕರೊಂದಿಗೆ ಅಸ್ಸಾಂನಲ್ಲಿ ಬೀಡುಬಿಟ್ಟಿದ್ದಾರೆ. ಈ ಪೈಕಿ 38 ಮಂದಿ ಶಿವಸೇನೆ ಶಾಸಕರು, ಉಳಿದವರು ಪಕ್ಷೇತರ ಶಾಸಕರು. ಏತನ್ಮಧ್ಯೆ ಶಿವಸೇನಾ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೇಲೆ ಅನುಮಾನಗಳು ಕೇಳಿಬರಲಾರಂಭಿಸಿವೆ. ಈ ಬಂಡಾಯದ ಬಗ್ಗೆ ಉದ್ಧವ್ ಅವರಿಗೆ ಮೊದಲೇ ಗೊತ್ತಿತ್ತು ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಕಾಲದಿಂದಲೂ ‘ಶಿವ ಸೈನಿಕರಿಗೆ’ ಶಿವಸೇನೆಯ ನಾಯಕರ ಮೇಲೆ ಪ್ರೀತಿ-ಗೌರವಕ್ಕಿಂತಲೂ ಭಯವೇ ಹೆಚ್ಚು. ಉದ್ಧವ್ ಠಾಕ್ರೆಯೂ ಇಂತಹ ‘ಹವಾ’ ಮೈಂಟೈನ್ ಮಾಡಿದ್ದರು. ಆರಂಭದಲ್ಲಂತೂ ಉದ್ಧವ್ ಠಾಕ್ರೆ ಹುಕುಂ ಇಲ್ಲದೆ ಶಿವಸೇನೆಯಲ್ಲಿ ಹುಲ್ಲು ಕಡ್ಡಿಯೂ ಅಲುಗಾಡುತ್ತಿರಲಿಲ್ಲ. ಜೊತೆಗೀಗ ಅವರು ಮುಖ್ಯಮಂತ್ರಿ, ಗುಪ್ತಾಚಾರ ಇಲಾಖೆ ಕೂಡ ಅವರೊಂದಿಗಿದೆ. ಇಂತಹ ಉದ್ಧವ್ ಠಾಕ್ರೆಗೆ ಬಂಡಾಯದ ಸುಳಿವು ಸಿಗದೇ ಇರುವುದು ಸಂಪೂರ್ಣವಾಗಿ ಸಾಧ್ಯವಿಲ್ಲ. ಅದರಲ್ಲೂ ಒಬ್ಬಿಬ್ಬರಲ್ಲ, ಐದತ್ತು ಮಂದಿಯಲ್ಲ 38 ಶಾಸಕರು ಬಂಡೇಳುತ್ತಾರೆಂದರೆ ಖಂಡಿತಕ್ಕೂ ‘ಉದ್ಧವ್ ಠಾಕ್ರೆಗೆ ಗೊತ್ತಿದ್ದೇ ಈ ಎಲ್ಲಾ ಬೆಳವಣಿಗೆಗಳು ನಡೆದಿವೆ’ ಎನ್ನುತ್ತಾರೆ ರಾಜಕೀಯ ತಜ್ಞರು.
ಉದ್ಧವ್ ಅವರಿಗೆ ಎಲ್ಲವೂ ಗೊತ್ತಿತ್ತು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮಹಾರಾಷ್ಟ್ರದ ಹಿರಿಯ ಪತ್ರಕರ್ತ ಪ್ರದೀಪ್ ರೈಮುಲ್ಕರ್ ಅವರ ಮಾತುಗಳನ್ನು ಗಮನಿಸಬೇಕು. ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ನಡುವೆ ಸಮನ್ವಯ ಇಲ್ಲದಿರುವ ಕಾರಣಕ್ಕೆ ಸಮಸ್ಯೆ ಶುರುವಾಗಿದೆ. ಸಮಯ ಕಳೆದಂತೆ ಶಿವಸೇನೆ ಶಾಸಕರು ಮತ್ತು ಮುಖಂಡರ ಅಸಮಾಧಾನವೂ ಹೆಚ್ಚಾಗತೊಡಗಿದೆ. ಒಂದರ ಹಿಂದೆ ಒಂದರಂತೆ ಹಲವು ನಾಯಕರು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ದೂರು ನೀಡಿದ್ದಾರೆ. ಆದರೆ ಉದ್ಧವ್ ಠಾಕ್ರೆ ಪರಿಹಾರ ನೀಡಲಿಲ್ಲ. ಕಾಂಗ್ರೆಸ್ ಮತ್ತು ಎನ್ ಸಿಪಿ ಜೊತೆಗಿನ ಮೈತ್ರಿಯನ್ನು ಹೇಗೆ ಮುರಿಯುವುದು ಎಂದು ಉದ್ಧವ್ ಠಾಕ್ರೆಗೆ ಅರ್ಥವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಶಾಸಕರು ತಾವೇ ಮಾರ್ಗೋಪಾಯವನ್ನು ಕಂಡುಕೊಂಡರು. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯ ಫಲಿತಾಂಶಗಳು ಶಾಸಕರು ಬಂಡೇಳಲು ಪುಷ್ಠಿ ನೀಡಿದವು. ಪರಿಷತ್ ಚುನಾವಣೆಯಲ್ಲಿ ಶಿವಸೇನೆ ಶಾಸಕರು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಇದರಿಂದ ಬಂಡಾಯ ಶಾಸಕರಿಗೆ ಶಿವಸೇನೆಗೆ ಹಾನಿ ಮಾಡುವ ಉದ್ದೇಶ ಇರಲಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ರಾಜಕೀಯದಲ್ಲಿ ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು ಎನ್ನುವುದು ನಿಜ. ಆದರೆ ಯಾವುದೇ ನಿರ್ಧಾರಕ್ಕೂ ಮೊದಲು ತಯಾರಿ ನಡೆದಿರುತ್ತದೆ ಎಂಬುದೂ ನಿಜ. ಸದ್ಯದ ಬೆಳವಣಿಗೆಯಲ್ಲಿ 37-38 ಶಾಸಕರು ಒಟ್ಟಾಗಿ ಯೋಜನೆ ರೂಪಿಸಬೇಕು ಅಥವಾ ಪಕ್ಷದ ಮುಖ್ಯಸ್ಥರು ಅಥವಾ ಯಾವುದೇ ದೊಡ್ಡ ನಾಯಕರಿಗೆ ತಿಳಿಯದೆ ಇದು ಸಾಧ್ಯವಿಲ್ಲ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಳಿ ಗುಪ್ತಚರ ಇಲಾಖೆ ಇದೆ. ಗುಪ್ತಚರ ಇಲಾಖೆ ಎಲ್ಲಾ ರಾಜಕೀಯ ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿರುತ್ತದೆ. ಅದರಲ್ಲೂ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಬಂಡಾಯದ ಸುಳಿವು ಕಂಡುಬಂದಿದ್ದರಿಂದ ಗುಪ್ತಚರ ಇಲಾಖೆಗೆ ಇದು ಗೊತ್ತಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಗುಪ್ತಚರ ಇಲಾಖೆಗೆ ಗೊತ್ತಿತ್ತು ಎಂದರೆ ಶಾಸಕರ ಹಠಾತ್ ಬಂಡಾಯದ ಬಗ್ಗೆ ಉದ್ಧವ್ ಠಾಕ್ರೆಗೆ ತಿಳಿದಿತ್ತು ಎಂದೇ ಅರ್ಥ. ಅಥವಾ ಉದ್ಧವ್ ಠಾಕ್ರೆಯೇ ಇಡೀ ಬೆಳವಣಿಗೆಯ ಚಿತ್ರಕಥೆಯನ್ನು ಬರೆದಿರಬಹುದು.

ಇನ್ನೊಬ್ಬ ಹಿರಿಯ ಪತ್ರಕರ್ತ ಕೇಶವ್ ಪೆಲ್ಕರ್ ‘ಎನ್‌ಸಿಪಿ ಪಾತ್ರದ ಬಗ್ಗೆಯೂ ಅನುಮಾನಗಳಿವೆ’ ಎಂದು ಹೇಳುತ್ತಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‌ಸಿಪಿ-ಶಿವಸೇನೆಯ ಮೈತ್ರಿ ಸರ್ಕಾರ ಬರಲು ಎನ್‌ಸಿಪಿ ನಾಯಕ ಶರದ್ ಪವಾರ್ ಅವರೇ ಕಾರಣ. ಆದರೀಗ ಐದು ದಿನಗಳಿಂದ ಇಷ್ಟೆಲ್ಲಾ ಬೆಳವಣಿಗೆ ಆಗುತ್ತಿದ್ದರೂ ಎನ್‌ಸಿಪಿ ಸರ್ಕಾರವನ್ನು ಉಳಿಸಿಕೊಳ್ಳುವ ಆಸಕ್ತಿಯನ್ನು ತೋರಿಸುತ್ತಿಲ್ಲ. ಹಾಗಾಗಿ ಎನ್‌ಸಿಪಿ ಪಾತ್ರದ ಬಗೆಗೂ ಅನುಮಾನ ಪಡಬೇಕಾಗುತ್ತದೆ ಎನ್ನುತ್ತಾರೆ ಅವರು.
ಮಹಾವಿಕಾಸ್ ಅಘಾಡಿ ಸರ್ಕಾರದಿಂದ ಎನ್‌ಸಿಪಿ ಹೆಚ್ಚು ಲಾಭ ಪಡೆದಿದೆ. ಸರ್ಕಾರದಲ್ಲಿ ಎನ್‌ಸಿಪಿ ಮಂತ್ರಿಗಳಿಗೆ ಒಳ್ಳೆಯ ಇಲಾಖೆಗಳು ಸಿಕ್ಕಿವೆ. ಉದ್ಧವ್ ಠಾಕ್ರೆಯನ್ನು ಉತ್ಸವ ಮೂರ್ತಿಯನ್ನಾಗಿ ಮಾಡಿ ಎನ್‌ಸಿಪಿ ನಾಯಕರೇ ಸರ್ಕಾರ ಚಲಾಯಿಸಿದ್ದಾರೆ. ಆದರೂ ಸರ್ಕಾರ ಪತನವಾಗುತ್ತಿರುವುದನ್ನು ನೋಡಿಕೊಂಡು ಎನ್‌ಸಿಪಿ ನಾಯಕರು ಸುಮ್ಮನೆ ಕುಳಿತಿದ್ದಾರೆ ಎಂದರೆ ಅವರ ಬಗ್ಗೆ ಅನುಮಾನ ಮೂಡದೇ ಇರದು ಎಂದು ಕೇಶವ್ ಹೇಳುತ್ತಾರೆ.
ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡ ನಂತರ ಶಿವಸೇನೆ ಹೆಚ್ಚು ನಷ್ಟ ಅನುಭವಿಸಿದೆ. ಈ ಮೈತ್ರಿಗಾಗಿ ಶಿವಸೇನೆ ತನ್ನ ಹಲವು ಮೂಲ ತತ್ವಗಳನ್ನು ರಾಜಿ ಮಾಡಿಕೊಂಡಿದೆ. ಅದೇ ಹೊತ್ತಿಗೆ ಮಹಾರಾಷ್ಟ್ರದಲ್ಲಿ ಎಲ್ಲಾ ರಾಜ್ಯಗಳಂತೆ ಕಾಂಗ್ರೆಸ್‌ನ ಸ್ಥಿತಿ ಹದಗೆಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ವಿರುದ್ಧ ಎನ್‌ಸಿಪಿ ನೇರ ಹಣಾಹಣಿ ನಡೆಸಲು ಮುಂದಾಗಿದೆ. ಅದೇ ಕಾರಣಕ್ಕೆ ಸರ್ಕಾರಕ್ಕೆ ಸಂಚಕಾರ ಇದ್ದರೂ ಸುಮ್ಮನಿದೆ ಎಂದೂ ಹೇಳಲಾಗುತ್ತಿದೆ.
ಇಲ್ಲಿಯವರೆಗೆ ಏನಾಯಿತು?
ಜೂನ್ 20ರ ಸೋಮವಾರದಿಂದ ಶಿವಸೇನೆಯ ಬಂಡಾಯ ಮುನ್ನೆಲೆಗೆ ಬಂತು. ಅಂದು 10 ಎಂಎಲ್‌ಸಿ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇದಕ್ಕಾಗಿ 11 ಅಭ್ಯರ್ಥಿಗಳು ಕಣದಲ್ಲಿದ್ದರು. ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಅಂದರೆ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿಕೂಟ ಆರು ಅಭ್ಯರ್ಥಿಗಳನ್ನು ಮತ್ತು ಬಿಜೆಪಿ ಐವರನ್ನು ಕಣಕ್ಕಿಳಿಸಿತ್ತು. ಶಿವಸೇನಾ ಮೈತ್ರಿಕೂಟವು ಎಲ್ಲಾ ಆರು ಅಭ್ಯರ್ಥಿಗಳನ್ನು ಗೆಲ್ಲಲು ಸಾಕಷ್ಟು ಸಂಖ್ಯೆಯನ್ನು ಹೊಂದಿತ್ತು. ಆದರೆ ಅದು ಒಂದು ಸ್ಥಾನವನ್ನು ಕಳೆದುಕೊಂಡಿತು. ಈ ಐದರಲ್ಲಿ ಕಾಂಗ್ರೆಸ್‌ಗೆ ಕೇವಲ ಒಂದು ಸ್ಥಾನ ಮತ್ತು ಎನ್‌ಸಿಪಿ-ಶಿವಸೇನೆ ತಲಾ ಎರಡು ಸ್ಥಾನಗಳನ್ನು ಪಡೆದುಕೊಂಡಿವೆ. ಇದರ ಅರ್ಥ ಎಂಎಲ್ ಸಿ ಚುನಾವಣೆಯಲ್ಲಿ ಅಡ್ಡ ಮತದಾನ ದೊಡ್ಡ ಮಟ್ಟದಲ್ಲಿ ನಡೆದಿದೆ ಎಂದೇ ಅರ್ಥ.

ಉದ್ಧವ್ ಠಾಕ್ರೆ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರು ಮಹಾರಾಷ್ಟ್ರ ಸಂಪುಟದ ಸಚಿವ ಏಕನಾಥ್ ಶಿಂಧೆ ಅವರನ್ನು ಬೆಂಬಲಿಸಿ ಶಿವಸೇನೆ ಮೈತ್ರಿಗೆ ಹೊಡೆತ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲು ಅವರೆಲ್ಲರೂ ಗುಜರಾತ್ ತೆರಳಿದ್ದರು. ನಂತರ ಅಸ್ಸಾಂ ತಲುಪಿ ಈಗ ಅಲ್ಲೇ ತಂಗಿದ್ದಾರೆ. ಶಾಸಕರ ಮನವೊಲಿಸಲು ಜೂನ್ 22 ರಂದು ಶಿವಸೇನೆ ಮುಖ್ಯಸ್ಥರ ಆಜ್ಞೆಯ ಮೇರೆಗೆ ಮೂವರು ನಾಯಕರ ನಿಯೋಗವು ಗುಜರಾತಿಗೆ ಹೋಗಿತ್ತು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಇದು ಕೂಡ ‘ನಾಟಕವೇ’ ಇರಬಹುದು ಎನ್ನಲಾಗುತ್ತಿದೆ. ಈಗಂತೂ ಸರ್ಕಾರ ಪತನಕ್ಕೆ ಕ್ಷಣಗಣನೆ ಶುರುವಾಗಿದೆ.













