ಹಾಸನ : ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ (K. S. Latha Kumari) ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ನಡುವಿನ ಆರೋಪ-ಪ್ರತ್ಯಾರೋಪಗಳು ಇದೀಗ ದೊಡ್ಡ ಮಟ್ಟದ ರಾಜಕೀಯ ವಾಗ್ವಾದಕ್ಕೆ (Political Controversy) ಕಾರಣವಾಗಿದೆ. ಸಿಂಹದ ಮುಂದೆ ನಾಯಿಗಳು ಬೊಗಳುತ್ತಿರುವ ಕಾರ್ಟೂನ್ (Cartoon) ಚಿತ್ರವೊಂದನ್ನು ಜಿಲ್ಲಾಧಿಕಾರಿಯ ಪ್ರತಿಕ್ರಿಯೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಬಿಂಬಿಸಲಾಗುತ್ತಿದ್ದು, ಈ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota Srinivasa Poojary) ಅವರು ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳೇ ಸಿಂಹಗಳು ಎಂದ ಪೂಜಾರಿ
ಈ ವಿವಾದದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಡಿ.ಕೆ. ಶಿವಕುಮಾರ್ ಅವರ ಕಾಂಗ್ರೆಸ್ ಸರಕಾರದಲ್ಲಿ ಅಧಿಕಾರಿಗಳು ಸಿಂಹಗಳಾಗುತ್ತಾರೆ ಮತ್ತು ಜನಪ್ರತಿನಿಧಿಗಳು ಬೊಗಳುವ ನಾಯಿಗಳಾಗುತ್ತಾರೆ ಎಂದು ಕಟುವಾಗಿ ಟೀಕಿಸಿದ್ದಾರೆ. ಒಬ್ಬ ಜಿಲ್ಲಾಧಿಕಾರಿ ಇಂತಹ ಪೋಸ್ಟ್ ಹಾಕುತ್ತಾರೆ ಹಾಗೂ ರಾಜ್ಯ ಸರಕಾರ ಅದನ್ನು ಪರೋಕ್ಷವಾಗಿ ಸಮರ್ಥಿಸುತ್ತದೆ ಎಂದರೆ ಏನರ್ಥ ಎಂದು ಅವರು ಪ್ರಶ್ನಿಸಿದ್ದಾರೆ. ಜಿಲ್ಲಾಧಿಕಾರಿ ನೇರವಾಗಿ ಯಾರ ಹೆಸರನ್ನೂ ಉಲ್ಲೇಖಿಸದಿದ್ದರೂ ಅವರ ಪೋಸ್ಟ್ ಕೇಂದ್ರ ಸಚಿವರನ್ನೇ ಗುರಿಯಾಗಿಸಿಕೊಂಡಿದೆ ಎಂಬುದು ಸ್ಪಷ್ಟವಾಗಿದೆ. ಅಧಿಕಾರಿಯೊಬ್ಬರು ಚುನಾಯಿತ ಜನಪ್ರತಿನಿಧಿಗಳನ್ನು ಈ ರೀತಿ ಅವಮಾನಿಸಿದರೆ, ಭವಿಷ್ಯದಲ್ಲಿ ಕರ್ನಾಟಕದಲ್ಲಿ ಶಾಸಕರು ಮತ್ತು ಸಂಸದರು ಕೆಲಸ ಮಾಡುವುದು ಕಷ್ಟವಾಗಲಿದ್ದು, ಇದು ಪ್ರಜಾಪ್ರಭುತ್ವದ ಬಹುದೊಡ್ಡ ದುರದೃಷ್ಟಕರ ಬೆಳವಣಿಗೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಕೆಲವು ವರ್ಷಗಳ ಹಿಂದೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ‘ಹಂದಿಗಳ ಜೊತೆ ಗುದ್ದಾಡಬಾರದು’ ಎಂಬರ್ಥದ ಸಂದೇಶವನ್ನು ನೀಡಿ ಪರೋಕ್ಷವಾಗಿ ಕುಮಾರಸ್ವಾಮಿ ಅವರನ್ನೇ ಗುರಿ ಮಾಡಿದ್ದ ಘಟನೆಯನ್ನೂ ಇಲ್ಲಿ ಸ್ಮರಿಸಲಾಗಿದೆ.
ವಿವಾದದ ಹಿನ್ನೆಲೆ ಮತ್ತು ಎಚ್.ಡಿ.ಕೆ ಗಂಭೀರ ಆರೋಪ
ನವೆಂಬರ್ 8ರಂದು ಹಾಸನದ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಕಲ್ಲು ಗಣಿಗಾರಿಕೆ, ಕ್ರಷರ್‌ಗಳಿಗೆ ಅನುಮತಿ ನೀಡುವುದು ಹಾಗೂ ವಸತಿ ಉದ್ದೇಶದ ಭೂ ಪರಿವರ್ತನೆ ಪ್ರಕ್ರಿಯೆಯಲ್ಲಿ ಲಕ್ಷಾಂತರ ರೂಪಾಯಿ ಲಂಚ ಪಡೆಯಲಾಗುತ್ತಿದೆ ಎಂದು ಅವರು ದೂರಿದ್ದರು. ಜಿಲ್ಲಾಧಿಕಾರಿಯ ಆಪ್ತ ಸಹಾಯಕ ಶಶಿಕಿರಣ್ ಅವರನ್ನು ಈ ವ್ಯವಹಾರಗಳ ಮಧ್ಯವರ್ತಿ ಎಂದು ಆರೋಪಿಸಿದ್ದ ಕುಮಾರಸ್ವಾಮಿ, ಸ್ವತಃ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರಿಗೆ ಎಪ್ಪತ್ತೈದು ಲಕ್ಷ ರೂಪಾಯಿ ಲಂಚ ನೀಡಿದ್ದಾರೆ ಎಂದು ಬಾಂಬ್ ಸಿಡಿಸಿದ್ದರು. ಇದಕ್ಕೆ ಪೂರಕವೆಂಬಂತೆ ಸುಮಾರು ಹದಿನೈದು ಪುಟಗಳ ವಾಟ್ಸ್ಆ್ಯಪ್ ಸಂಭಾಷಣೆಗಳನ್ನು ಸಹ ಅವರು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದರು.
ಆರೋಪ ಸಂಪೂರ್ಣವಾಗಿ ತಳ್ಳಿಹಾಕಿದ ಜಿಲ್ಲಾಧಿಕಾರಿ
ತಮ್ಮ ಮೇಲಿನ ಕುಮಾರಸ್ವಾಮಿ ಅವರ ಎಲ್ಲಾ ಆರೋಪಗಳನ್ನು ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ತಾವು ಯಾವುದೇ ಅನಧಿಕೃತ ಅಥವಾ ಕಾನೂನುಬಾಹಿರ ಕೆಲಸಗಳನ್ನು ಮಾಡಿಲ್ಲ ಮತ್ತು ಮುಂದೆಯೂ ಮಾಡುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಅಥವಾ ಆಪ್ತ ಸಹಾಯಕ ವಿಭಾಗದಿಂದ ಇಂತಹ ಯಾವುದೇ ಸಂದೇಶಗಳು ರವಾನೆಯಾಗಿದ್ದರೆ ಅದು ಖಂಡಿತಾ ಸರಿಯಲ್ಲ, ತಮ್ಮ ಆಪ್ತ ಸಹಾಯಕನ ವಾಟ್ಸ್ಆ್ಯಪ್ ಚಾಟ್ ಎಂದು ಹೇಳಿಕೊಂಡು ಕೆಲವು ಮಾಧ್ಯಮಗಳಲ್ಲಿ ಸುಳ್ಳು ಹಾಗೂ ಅನಧಿಕೃತ ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತಿದ್ದು, ಸಾರ್ವಜನಿಕರು ಇಂತಹ ಅಪಪ್ರಚಾರವನ್ನು ನಂಬಬಾರದು ಎಂದು ಅವರು ಮನವಿ ಮಾಡಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾಗಿರುವುದರಿಂದ ಸೈಬರ್ ಅಪರಾಧ ವಿಭಾಗಕ್ಕೆ ದೂರು ನೀಡುವುದರ ಜತೆಗೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ, ನಾಯಿಗಳು ಬೊಗಳುತ್ತಿದ್ದರೂ ಶಾಂತವಾಗಿ ಕುಳಿತಿರುವ ಹಾಗೂ ‘ಪ್ರತಿಯೊಂದು ಧ್ವನಿಗೂ ಪ್ರತಿಕ್ರಿಯಿಸುವ ಅಗತ್ಯವಿಲ್ಲ’ ಎಂಬ ಅರ್ಥದ ಸಂದೇಶ ಹೊಂದಿದ್ದ ಸಿಂಹದ ಕಾರ್ಟೂನ್ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಈ ಚಿತ್ರವನ್ನು ಮುಂದಿಟ್ಟುಕೊಂಡು ಕೋಟ ಶ್ರೀನಿವಾಸ ಪೂಜಾರಿ ಮಾಡಿರುವ ಪೋಸ್ಟ್ ರಾಜ್ಯ ರಾಜಕೀಯದಲ್ಲಿ ಹೊಸದೊಂದು ಸಂಚಲನಕ್ಕೆ ನಾಂದಿ ಹಾಡಿದೆ.
ಮೂರು ಮದುವೆಗಳ ಬಗ್ಗೆ ಪವನ್ ಕಲ್ಯಾಣ್ ಹಿಂದೆ ಹೇಳಿದ್ದೇನು? ಸಂಬಂಧಗಳ ಏಳುಬೀಳು ಕುರಿತು ನಟ ಹೇಳಿದ್ದೇನು?






