ಅಂದುಕೊಂಡಿರುವುದಕ್ಕಿಂತ 90 ದಿನಗಳ ಮೊದಲೇ ತಾಲಿಬಾನ್ ಕಾಬೂಲ್ನ್ನು ವಶಪಡಿಸಿಕೊಳ್ಳಲಿದೆ ಎಂಬ ಅಮೆರಿಕ ಗುಪ್ತಚರ ಇಲಾಖೆಯ ವರದಿಗಳ ನಡುವೆಯೇ ಗುರುವಾರ ಅಫಘಾನಿಸ್ತಾನದ ಮೂರನೇ ಅತಿದೊಡ್ಡ ನಗರವಾದ ಹೆರಾತ್ನ್ನು ವಶಪಡಿಸಿಕೊಳ್ಳುವ ಹಾದಿಯಲ್ಲಿ ಅಫ್ಘಾನ್ ಮಿಲಿಟರಿಯೊಂದಿಗೆ ಭಾರಿ ಹೋರಾಟ ನಡೆಸಿದೆ. ಈ ನಗರ ರಾಜಧಾನಿ ಕಾಬೂಲ್ನಿಂದ ಕೇವಲ 150 ಕಿಮೀ ದೂರದಲ್ಲಿದೆ.
ತಾಲಿಬಾನ್ ಇರಾನ್ ಗಡಿಯ ಸಮೀಪವಿರುವ ಹೆರಾತ್ ನ ನಿಯಂತ್ರಣವನ್ನು ಪಡೆದುಕೊಂಡಿದೆ ಎಂದು ಪ್ರತಿಪಾದಿಸುತ್ತಿದೆ. ಮೇ ತಿಂಗಳಲ್ಲಿ ದೇಶದೊಳಗೆ ತನ್ನ ನೆಲೆಯನ್ನು ಮರುಸ್ಥಾಪನೆ ಮಾಡಲು ಆರಂಭಿಸಿದಾಗಿನಿಂದ ಹೆರಾತ್ ಮತ್ತು ಕಂದಹಾರ್ನ ಗೆಲುವು ತಾಲಿಬಾನ್ಗೆ ಅತ್ಯಂತ ಮಹತ್ವದ್ದಾಗಿದೆ. ಅಫ್ಘಾನಿಸ್ತಾನದ ಎರಡನೇ ಅತಿ ದೊಡ್ಡ ನಗರವಾದ ಕಂದಹಾರ್ ಈ ಗುಂಪಿನ ಆಧ್ಯಾತ್ಮಿಕ ನೆಲೆಯಾಗಿಯೂ ಗುರುತಿಸಿಕೊಂಡಿದೆ. ರಾಜಧಾನಿಯಿಂದ 150 ಕಿಮೀ ದೂರದಲ್ಲಿರುವ, ಕಂದಹಾರ್ ಮತ್ತು ಕಾಬೂಲ್ ರಸ್ತೆಯಲ್ಲಿರುವ ಘಜ್ನಿಯನ್ನು ಗುರುವಾರ ವಶಪಡಿಸಿಕೊಂಡ ನಂತರ ಕೂಡಾ ತಾಲಿಬಾನ್ ಸರ್ಕಾರದೊಂದಿಗೆ ಅಧಿಕಾರ ಹಂಚಿಕೊಳ್ಳುವಿಕೆಯ ವರದಿಗಳನ್ನು ತಳ್ಳಿಹಾಕಿದೆ.
ಹಿಂಸಾಚಾರಕ್ಕೆ ಹೆದರಿ ದೇಶದ ಎಲ್ಲೆಡಯಿಂದ ರಾಜಧಾನಿಗೆ ಜನ ಪಲಾಯನ ಮಾಡುತ್ತಿದ್ದು ಕಾಬೂಲಿನ ಪ್ರವೇಶ ದ್ವಾರದಲ್ಲಿ ಉಸಿರುಗಟ್ಟುವ ಪರಿಸ್ಥಿತಿ ಇದೆ ಎಂದು ಕೆಲವು ಪಾಶ್ಚಾತ್ಯ ಭದ್ರತಾ ಸಂಸ್ಥೆಗಳು ತಿಳಿಸಿವೆ.
ತನ್ನ ನಾಗರಿಕರನ್ನು ದೇಶವನ್ನು ತೊರೆಯುವಂತೆ ಒತ್ತಾಯಿಸಿದ ಯುಎಸ್ ರಾಯಭಾರ ಕಚೇರಿಯು, ಭದ್ರತಾ ಪರಿಸ್ಥಿತಿಗಳು ಉತ್ತಮವಾಗಿಲ್ಲ ಎಂದಿದೆ. “ಅಫ್ಘಾನಿಸ್ತಾನದಲ್ಲಿ ಯುಎಸ್ ನಾಗರಿಕರಿಗೆ ಸಹಾಯ ಮಾಡುವ ಸಾಮರ್ಥ್ಯವು ಕಾಬೂಲ್ನೊಳಗೆ ಕೂಡ ಅತ್ಯಂತ ಸೀಮಿತವಾಗಿದೆ” ಎಂದು ತನ್ನ ವೆಬ್ಸೈಟ್ನಲ್ಲಿನ ಸೂಚನೆಯಲ್ಲಿ ತಿಳಿಸಿದೆ. ಜರ್ಮನಿ ಸಹ ತನ್ನ ನಾಗರಿಕರಿಗೆ ಇದೇ ರೀತಿಯ ಎಚ್ಚರಿಕೆಯನ್ನು ನೀಡಿದೆ.
![](https://pratidhvani.com/wp-content/uploads/2021/08/162751-pjtaahrfuk-1628822079-1024x538.jpg)
ಈ ಮಧ್ಯೆ ಹಿಂಸಾಚಾರ ನಿಲ್ಲುವವರೆಗೂ ತಾಲಿಬಾನ್ಗಳಿಗೆ ಅಧಿಕಾರದಲ್ಲಿ ಪಾಲು ನೀಡಲು ಸರ್ಕಾರ ಮುಂದಾಗಿದೆ ಎಂದು ಅಲ್ ಜಜೀರಾ ಹೇಳಿದೆ. ಅಫಘಾನ್ ಸರ್ಕಾರದ ವಕ್ತಾರರು ತಕ್ಷಣ ಪ್ರತಿಕ್ರಿಯಿಸಲು ಲಭ್ಯರಾಗಿಲ್ಲ ಮತ್ತು ಕತಾರ್ನಲ್ಲಿ ಸ್ಥಗಿತಗೊಂಡ ಮಾತುಕತೆಯಲ್ಲಿ ಈಗಾಗಲೇ ಚರ್ಚಿಸಲಾದ ನಿಯಮಗಳಿಗಿಂತ ಅಲ್ಜಝೀರಾದಲ್ಲಿ ವರದಿಯಾದ ಕೊಡುಗೆ ಎಷ್ಟು ಮಟ್ಟಿಗೆ ಭಿನ್ನವಾಗಿದೆ ಎಂಬುವುದು ಸ್ಪಷ್ಟವಾಗಿಲ್ಲ.
ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ಅಂತಹ ಯಾವುದೇ ಪ್ರಸ್ತಾಪವನ್ನು ಮತ್ತು ಅಧಿಕಾರ ಹಂಚಿಕೆಯ ಸುದ್ದಿಯನ್ನು ತಳ್ಳಿಹಾಕಿದರು.
“ನಾವು ಈ ರೀತಿಯ ಯಾವುದೇ ಪ್ರಸ್ತಾಪವನ್ನು ಸ್ವೀಕರಿಸುವುದಿಲ್ಲ ಏಕೆಂದರೆ ನಾವು ಕಾಬೂಲ್ ಆಡಳಿತದೊಂದಿಗೆ ಪಾಲುದಾರರಾಗಲು ಬಯಸುವುದಿಲ್ಲ. ನಾವು ಅದರೊಂದಿಗೆ ಒಂದು ದಿನವೂ ಕೆಲಸ ಮಾಡಲು ಸಾಧ್ಯವಿಲ್ಲ”ಎಂದು ಅವರು ಹೇಳಿದ್ದಾರೆ.