ಕೇಂದ್ರ ಬಜೆಟ್ ಅಧಿವೇಶನ ಆರಂಭಕ್ಕೂ ಮೊದಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾಡಿದ ಭಾಷಣದಲ್ಲಿ ಉಲ್ಲೇಖಿಸಿದ ಕೇಂದ್ರ ಸರ್ಕಾರದ ʼರಾಷ್ಟ್ರೀಯ ಹೆದ್ದಾರಿ ನಿರ್ಮಾಣದʼ ಸಾಧನೆಯ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ.
ಸಂಸತ್ತಿನಲ್ಲಿ ಸೋಮವಾರ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಮಾಡಿದೆ ಎಂದು ರಾಷ್ಟ್ರಪತಿಗಳು ಭರ್ಜರಿ ಭಾಷಣ ಮಾಡಿದ್ದರು. ಅದರಲ್ಲೂ, ಭಾರತ ಸಾರಿಗೆ ಕ್ಷೇತ್ರದಲ್ಲಿ ಮಾಡಿದ ಸಾಧನೆ ಎಂದು ರಾಷ್ಟ್ರಪತಿಯವರು ನೀಡಿರುವ ಮಾಹಿತಿಯು ಕೇಂದ್ರ ಸರ್ಕಾರದ ನಿಜಬಣ್ಣವನ್ನು ಬಯಲು ಮಾಡಿದೆ.
ಕೇಂದ್ರ ಸರ್ಕಾರ ಹಾಗೂ ಅದರ ಮುಖ್ಯಸ್ಥ ಪ್ರಧಾನಿ ಮೋದಿ ಅವರು ಮಾಡಿದ ಜುಮ್ಲಾ ಭಾಷಣಗಳಂತೆಯೇ ಸಂಸತ್ತಿನಲ್ಲಿ ರಾಷ್ಟ್ರಪತಿಯ ಭಾಷಣವೂ ಜುಮ್ಲಾ ಎಂಬ ಟೀಕೆಯೂ ಬಂದಿದೆ. ಭಾರತ ಸಾರಿಗೆ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದೆ ಎಂದು ರಾಷ್ಟ್ರಪತಿ ಹೇಳಿದ್ದು, ರಾಷ್ಟ್ರೀಯ ಹೆದ್ದಾರಿಯ ಉದ್ದದಲ್ಲಿ ಭರ್ಜರಿ ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ʼರಾಷ್ಟ್ರೀಯ ಹೆದ್ದಾರಿ ನಿರ್ಮಾಣದʼ ಕ್ರೆಡಿಟ್ ನೀಡಿ ಭಾಷಣ ಮಾಡಿದ್ದರು.
ಸಂಸತ್ತಿನಲ್ಲಿ ರಾಷ್ಟ್ರಪತಿಯವರು ಮಾಡಿದ ಭಾಷಣದಲ್ಲಿ, ʼಭಾರತದಾದ್ಯಂತ ಹೆದ್ದಾರಿ ನಿರ್ಮಾಣದಲ್ಲಿ ಭಾರಿ ವೇಗ ಕಂಡುಬಂದಿದೆ. ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ ಕಾಮಗಾರಿ ಭರದಿಂದ ಸಾಗುತ್ತಿದ್ದು, ಎಕ್ಸ್ಪ್ರೆಸ್ವೇ ಪೂರ್ಣಗೊಳ್ಳುವ ಹಂತದಲ್ಲಿದೆ. 2014 ರಲ್ಲಿ, 90,000 ಕಿ.ಮೀ ಇದ್ದ ಹೆದ್ದಾರಿಯ ಉದ್ದವು ಇಂದು 1,40,000 ಕಿ.ಮೀಗೆ ತಲುಪಿದೆʼ ಎಂದು ಹೇಳಿದ್ದರು.

ʼಗ್ರಾಮೀಣ ಭಾರತದ ರಸ್ತೆಗಳನ್ನು ಗಮನಿಸಿದರೆ, 36,500 ಕಿ.ಮೀ ಉದ್ದದ ರಸ್ತೆಗಳನ್ನು 2020-21ರಲ್ಲಿ ನಿರ್ಮಿಸಲಾಗಿದೆ. ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯು ಈ ನಿಟ್ಟಿನಲ್ಲಿ ಹೆಮ್ಮೆ ತರುವಂತಹ ಸಂಗತಿ. ಗ್ರಾಮೀಣ ಪ್ರದೇಶಗಳಲ್ಲಿ ದಿನವೊಂದಕ್ಕೆ 100 ಕಿಮೀನಂತೆ ರಸ್ತೆಗಳನ್ನು ನಿರ್ಮಿಸಲಾಗಿದೆ, ಎಲ್ಲಾ ಋತುಗಳಲ್ಲೂ ಗ್ರಾಮೀಣ ಭಾರತಗಳನ್ನು ಸಂಪರ್ಕಿಸುವಂತಹ ರಸ್ತೆ ನಿರ್ಮಾಣ ಆಗಿದೆʼ ಎಂದು ರಾಷ್ಟ್ರಪತಿ ಕೇಂದ್ರ ಸರ್ಕಾರವನ್ನು ಕೊಂಡಾಡಿದ್ದಾರೆ.
ಭಾರತಮಾಲಾ ಯೋಜನೆಯಡಿಯಲ್ಲಿ, 23 ಹಸಿರು ಎಕ್ಸ್‌ಪ್ರೆಸ್‌ವೇಗಳು ಮತ್ತು ಹಸಿರು-ಕ್ಷೇತ್ರ ಕಾರಿಡಾರ್ ಸೇರಿದಂತೆ ಸುಮಾರು 6 ಲಕ್ಷ ಕೋಟಿ ರೂಪಾಯಿಗಳ ವೆಚ್ಚದಲ್ಲಿ 20,000 ಕಿಲೋಮೀಟರ್‌ಗಿಂತಲೂ ಹೆಚ್ಚು ಹೆದ್ದಾರಿಗಳ ನಿರ್ಮಾಣ ಪ್ರಗತಿಯಲ್ಲಿದೆ. ಇಂದು, ರಾಷ್ಟ್ರೀಯ ಹೆದ್ದಾರಿಗಳು ದೇಶದ ಉದ್ದ ಮತ್ತು ಅಗಲವನ್ನು ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಸಂಪರ್ಕಿಸುತ್ತಿವೆ. 2014ರ ಮಾರ್ಚ್‌ನಲ್ಲಿ 90 ಸಾವಿರ ಕಿಲೋಮೀಟರ್‌ಗಳಷ್ಟು ಉದ್ದದ ರಾಷ್ಟ್ರೀಯ ಹೆದ್ದಾರಿಗಳಿದ್ದರೆ, ಇಂದು ನಾವು 1 ಲಕ್ಷದ 40 ಸಾವಿರ ಕಿಲೋಮೀಟರ್‌ಗಿಂತಲೂ ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದ್ದೇವೆ ಎಂದು ರಾಷ್ಟ್ರಪತಿ ಕೋವಿಂದ್, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ಕ್ರೆಡಿಟನ್ನು ಹಿಂಬಾಗಿಲ ಮೂಲಕ ಕೇಂದ್ರಕ್ಕೆ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ, ವಾಸ್ತವಾಂಶ ಪರಿಶೀಲಿಸಿದಾಗ, ರಾಷ್ಟ್ರಪತಿ ಭಾಷಣ ನಿಜಾಂಶವನ್ನು ಹೇಗೆ ತಿರುಚಲಾಗಿದೆ ಎಂಬುದನ್ನು ಗಮನಿಸಬಹುದು.
ರಾಷ್ಟ್ರಪತಿ ಹೇಳಿದಂತೆ, 2014 ರಲ್ಲಿ 90,000 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಇದ್ದದ್ದು ನಿಜ, ಅದು ಪ್ರಸ್ತುತ 1 ಲಕ್ಷದ 40 ಸಾವಿರ ಕಿಲೋಮೀಟರ್ ಗಿಂತಲೂ ಉದ್ದಕೆ ವಿಸ್ತರಿಸಿದ್ದೂ ನಿಜ. ಆದರೆ, ಇದರಲ್ಲಿ ಕೇಂದ್ರದ ಕೊಡುಗೆ ಏನೇನೂ ಇಲ್ಲ. ಈ ಮೊದಲು ರಾಜ್ಯ ಹೆದ್ದಾರಿಗಳಾಗಿದ್ದ ರಸ್ತೆಗಳನ್ನೇ ರಾಷ್ಟ್ರೀಯ ಹೆದ್ದಾರಿಯೆಂದು ಬದಲಾಯಿಸಲಾಗಿದೆ. ಅಂದರೆ, ಈಗಿನ ರಾಷ್ಟ್ರೀಯ ಹೆದ್ದಾರಿಗಳು ಆಯಾ ರಾಜ್ಯದ ರಾಜ್‌ಯ ಸರ್ಕಾರಗಳು ನಿರ್ಮಿಸಿದ ರಾಜ್ಯ ಹೆದ್ದಾರಿಗಳನ್ನೇ ರಾಷ್ಟ್ರೀಯ ಹೆದ್ದಾರಿಗಳಾಗಿ ಪರಿವರ್ತಿಸಿದೆ. ಹೀಗೆ ರಾಜ್ಯಗಳು ನಿರ್ಮಿಸಿದ ರಸ್ತೆಗಳ ಕ್ರೆಡಿಟನ್ನು ಅನಾಮತ್ತಾಗಿ ಪ್ರಧಾನಿ ಮೋದಿ ಸರ್ಕಾರ ತಮ್ಮ ಹೆಗಲಿಗೇರಿಸಿಕೊಳ್ಳುತ್ತಿದೆ.
2019 ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಪ್ರಕಟನೆಯಲ್ಲೇ ಈ ಅಂಶ ಗಮನಿಸಬಹುದು. ಆ ಗೆಝೆಟ್ ನೋಟಿಫಿಕೇಶನ್ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ಕಾಯ್ದೆಯ ಎರಡನೇ ವಿಭಾಗದ ಅಡಿಯಲ್ಲಿ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುತ್ತದೆ. ಈ ಅಧಿಕಾರದ ಮೇರೆಗೆ, 31-03-2014 ರಲ್ಲಿ 91,287 ಕಿಮೀ ಇದ್ದ ರಾಷ್ಟ್ರೀಯ ಹೆದ್ದಾರಿಯನ್ನು 1,32,500 ಕಿಮೀ ಉದ್ದದವರೆಗೆ ವಿಸ್ತರಿಸಲಾಗಿದೆ. (ಇದು 2019 ಜುಲೈನಲ್ಲಿ ಕೇಂದ್ರ ಹೊರಡಿಸಿ ಗೆಝೆಟ್ ಮಾಹಿತಿ)

2014 ಎಪ್ರಿಲ್‌ನಿಂದ 2019 ಜುಲೈ ವರೆಗೆ 71,898 ಕಿಂತ ಉದ್ದದ ರಾಜ್ಯ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಮಾಡುವ ಪ್ರಸ್ತಾವನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅನುಮೋದನೆ ನೀಡಿದೆ. ಅದರಲ್ಲಿ 19,170 ಕಿಮೀ ಉದ್ದದ ರಸ್ತೆ ರಾಷ್ಟ್ರೀಯ ಹೆದ್ದಾರಿಯೆಂದು ಅಧಿಕೃತವಾಗಿ ಘೋಷಿಸಲಾಗಿದೆ ಎಂದು ಅದೇ ನೋಟಿಫಿಕೇಶನ್‌ನಲ್ಲಿ ಉಲ್ಲೇಖಿಸಲಾಗಿದೆ.
ವೈಫಲ್ಯಗಳನ್ನೆಲ್ಲಾ ನೆಹರೂ ಮತ್ತು ಹಿಂದಿನ ಸರ್ಕಾರಗಳ ಮೇಲೆ ಹೊರಿಸುವ ಹಳೆ ಚಾಳಿಯ ಹೊಸ ಸ್ವರೂಪದಂತೆ, ರಾಜ್ಯ ಸರ್ಕಾರಗಳ ಸಾಧನೆಗೆ ಕೇಂದ್ರ ಸರ್ಕಾರ ಬೀಗಿಕೊಂಡು, ಪ್ರಜೆಗಳ ಕಣ್ಣಿಗೆ ಮಣ್ಣೆರಚಲು ಪ್ರಯತ್ನಿಸುತ್ತಿದೆ ಎನ್ನುವುದಕ್ಕಿದು ತಾಜಾ ಉದಾಹರಣೆ. ಆದರೆ, ಸಂಸತ್ತಿನಲ್ಲೆ ದೇಶದ ಘನತೆವೆತ್ತ ರಾಷ್ಟ್ರಪತಿಯವರಿಂದಲೇ ದೇಶದ ಜನತೆಯ ದಿಕ್ಕು ತಪ್ಪಿಸುವ ಇಂತಹ ಪ್ರಯತ್ನದಲ್ಲಿ ಕೇಂದ್ರ ತೊಡಗಿರುವುದು ಮಾತ್ರ ವಿಪರ್ಯಾಸ!