ಬೆಂಗಳೂರು: ಪರಪ್ಪನ ಅಗ್ರಹಾರದ ಜೈಲಿನಲ್ಲಿ ಕೈದಿಗಳ ಮೊಬೈಲ್ ವೀಡಿಯೋ ವೈರಲ್ ಪ್ರಕರಣ ಸಂಬಂಧ ನಟ ಧನ್ವೀರ್ ಮೊಬೈಲ್ ರಿಟ್ರೀವ್ ವರದಿ ಪೊಲೀಸರ ಕೈ ಸೇರಿದೆ. ಆದರೆ ರಿಟ್ರೀವ್ ವೇಳೆ ಮೊಬೈಲ್ ನಲ್ಲಿ ಡೇಟಾನೇ ಇಲ್ಲ ಎಂದು ಗೊತ್ತಾಗಿದೆ.

ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಧನ್ವೀರ್ ಮೊಬೈಲ್ ವಶಕ್ಕೆ ಪಡೆದು ಸೈಬರ್ ಸೆಲ್ ನೀಡಿದ್ದರು. ಆದರೆ ಧನ್ವೀರ್ ಡೇಟಾವೇ ಇಲ್ಲದ ಮೊಬೈಲ್ ಕೊಟ್ಟು ಪೊಲೀಸರ ತನಿಖಾ ದಿಕ್ಕು ತಪ್ಪಿಸಿದ್ದಾರೆ ಎನ್ನಲಾಗಿದೆ. ಸದ್ಯ ಸೈಬರ್ ಸೆಲ್ ವರದಿ ಜೊತೆಗೆ FSL ರಿಪೋರ್ಟ್ ಗಾಗಿ ಪೊಲೀಸರು ಕಾಯುತ್ತಿದ್ದು
ಈ ರಿಪೋರ್ಟ್ ಬಂದ ಬಳಿಕ ಚಾರ್ಜ್ ಶೀಟ್ ವೇಳೆ ಸಾಕ್ಷ್ಯನಾಶದ ಸೆಕ್ಷನ್ ಕೂಡ ಸೇರ್ಪಡೆ ಮಾಡಿ ಚಾರ್ಜ್ ಶೀಟ್ ಹಾಕಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಇನ್ನು ಜೈಲಿನಲ್ಲಿ ವಿಡಿಯೋಗಳು ವೈರಲ್ ಮಾಡಿದವರ ಯಾರು ಎಂದು ಪೊಲೀಸರು ನಿರಂತರ ಹುಡುಕಾಟ ನಡೆಸುತ್ತಿದ್ದಾರೆ. ಈಗಾಗಲೇ ವಿಡಿಯೋ ಚಿತ್ರೀಕರಣ ಮಾಡಿದ್ದ ಕೋಳಿ ಮಂಜನ ವಿಚಾರಣೆ ನಡೆಸಿದ್ದು, ಆತ ವಿಲ್ಸನ್ ಗಾರ್ಡನ್ ನಾಗ ವಿಡಿಯೋ ಮಾಡಲು ಹೇಳಿದ್ದ ಎಂದು ಹೇಳಿಕೆ ನೀಡಿದ್ದಾನೆ. ಕೋಳಿ ಮಂಜನ ಹೇಳಿಕೆ ಹಿನ್ನಲೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ವಿಲ್ಸನ್ ಗಾರ್ಡ್ ನಾಗನ ವಿಚಾರಣೆ ನಡೆದಿದೆ. ಆದರೆ ವಿಚಾರಣೆ ವೇಳೆ ನಾನು ಮೊಬೈಲ್ ಬಳಸಿಯೇ ತುಂಬಾ ವರ್ಷಗಳಾಗಿದೆ. ಜೈಲಿನಲ್ಲಿ ಯಾರಿಗೆ ಮೊಬೈಲ್ ಸಿಗುತ್ತೋ ಗೊತ್ತಿಲ್ಲ, ನನಗಂತೂ ಯಾವತ್ತು ಸಿಕ್ಕಿಲ್ಲ. ಬೇಕು ಅಂತ ಇದರಲ್ಲಿ ನನ್ನ ಸಿಲುಕಿಸೋ ಕೆಲಸ ಆಗುತ್ತಿದೆ ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.














