ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆಯ ಸಂಕಲ್ಪ ವಿಧಾನದ ದಿಟ್ಟಂ ಬದಲಾವಣೆ ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ನಡೆದುಕೊಂಡು ಬಂದಿದ್ದ ಪ್ರತ್ಯೇಕ ಸಂಕಲ್ಪ ಪದ್ಧತಿಯನ್ನು ಬದಲಿಸಿ ಸಾಮೂಹಿಕ ಸಂಕಲ್ಪಕ್ಕೆ ಅವಕಾಶ ನೀಡಿರುವ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ನಿರ್ಧಾರಕ್ಕೆ ಕೆಲ ಭಕ್ತರು ಹಾಗೂ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಳೆಯ ಪದ್ಧತಿಯನ್ನು ಮರುಜಾರಿಗೆ ತರಬೇಕೆಂಬ ಆಗ್ರಹದೊಂದಿಗೆ ಹೋರಾಟ ನಡೆಸುವ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆ ಹಾಗೂ ನಾಗಪ್ರತಿಷ್ಠೆ ಮಾಡಿಸುವ ಭಕ್ತರು ಈ ಹಿಂದೆ ಸಂಕಲ್ಪ ಮಂದಿರದಲ್ಲಿ ಪ್ರತ್ಯೇಕವಾಗಿ ಸಂಕಲ್ಪ ಮಾಡುತ್ತಿದ್ದರು.

ಪ್ರತಿಯೊಬ್ಬ ಭಕ್ತರಿಗೂ ಪ್ರತ್ಯೇಕ ಸಂಕಲ್ಪಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈ ಪ್ರಕ್ರಿಯೆಯಲ್ಲಿ ನೂಕುನುಗ್ಗಲು ಉಂಟಾಗುತ್ತಿದ್ದು, ಭಕ್ತರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸಾಮೂಹಿಕ ಸಂಕಲ್ಪದ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಅದರಂತೆ, ಈಗ ಆಶ್ಲೇಷ ಬಲಿ ಪೂಜೆ ನಡೆಯುವ ಸ್ಥಳದಲ್ಲಿಯೇ ಸಾಮೂಹಿಕ ಸಂಕಲ್ಪ ಮಾಡಲಾಗುತ್ತಿದೆ.
ದೇವಸ್ಥಾನದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದ ಸಂಕಲ್ಪ ವಿಧಾನದ ಬದಲಾವಣೆಗೆ ವಿರೋಧ ವ್ಯಕ್ತವಾಗಿದೆ. ಆಶ್ಲೇಷ ಬಲಿ ಪೂಜೆಗೆ ಕುಳಿತುಕೊಳ್ಳುವ ಮೊದಲು ಪ್ರತ್ಯೇಕವಾಗಿ ಸಂಕಲ್ಪ ಮಾಡುವ ಪದ್ಧತಿಯನ್ನು ಏಕಾಏಕಿ ಬದಲಿಸಿರುವುದು ಧಾರ್ಮಿಕ ಆಚರಣೆಗಳಿಗೆ ಧಕ್ಕೆ ತರುವ ನಿರ್ಧಾರ ಎಂದು ವಿರೋಧ ವ್ಯಕ್ತಪಡಿಸುತ್ತಿರುವವರು ಆರೋಪಿಸಿದ್ದಾರೆ.

ಪ್ರತಿಯೊಬ್ಬ ಭಕ್ತರೂ ವಿಭಿನ್ನ ಉದ್ದೇಶ ಹಾಗೂ ಪ್ರಾರ್ಥನೆಗಳೊಂದಿಗೆ ಆಶ್ಲೇಷ ಬಲಿ ಪೂಜೆ ಮಾಡಿಸುವುದರಿಂದ ಪ್ರತ್ಯೇಕ ಸಂಕಲ್ಪ ಅತ್ಯಗತ್ಯ ಎಂಬುದು ವಿರೋಧ ವ್ಯಕ್ತಪಡಿಸುತ್ತಿರುವವರ ವಾದವಾಗಿದೆ. ಎಲ್ಲ ಭಕ್ತರಿಗೂ ಒಂದೇ ಸಾಮೂಹಿಕ ಸಂಕಲ್ಪ ಮಾಡುವ ಬದಲು ಹಿಂದಿನ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಾಮೂಹಿಕ ಸಂಕಲ್ಪ ಪದ್ಧತಿಯನ್ನು ಕೈಬಿಟ್ಟು, ಹಿಂದಿನಂತೆ ಪ್ರತ್ಯೇಕ ಸಂಕಲ್ಪಕ್ಕೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಹೋರಾಟ ನಡೆಸಲು ಸಿದ್ಧತೆಗಳು ನಡೆಯುತ್ತಿವೆ. ಈ ಸಂಬಂಧ ಅಕ್ಟೋಬರ್ 29ರಂದು ಸುಬ್ರಹ್ಮಣ್ಯದಲ್ಲಿ ಭಕ್ತರು ಹಾಗೂ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಸೇರಿ ಹೋರಾಟದ ಪೂರ್ವಭಾವಿ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಿಶೋರ್ ಶಿರಾಡಿ ಮತ್ತು ಜಯಪ್ರಕಾಶ್ ಕೂಜುಗೋಡು ತಿಳಿಸಿದ್ದಾರೆ.

ಆಶ್ಲೇಷ ಬಲಿ ಪೂಜೆಯಲ್ಲಿ ಪ್ರತ್ಯೇಕ ಸಂಕಲ್ಪ ಪದ್ಧತಿಯನ್ನು ತಕ್ಷಣ ಮರುಜಾರಿಗೆ ತರಬೇಕು. ದೇವಾಲಯದ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ತಾವು ಭಾವಿಸಿರುವ ಸಾಮೂಹಿಕ ಸಂಕಲ್ಪ ಪದ್ಧತಿಯನ್ನು ಕೈಬಿಡಬೇಕು. ಇಲ್ಲದಿದ್ದರೆ ಭಕ್ತರನ್ನು ಒಗ್ಗೂಡಿಸಿಕೊಂಡು ನ್ಯಾಯಬದ್ಧ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆಯ ಸಂಕಲ್ಪ ವಿಧಾನದ ಬದಲಾವಣೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ವ್ಯವಸ್ಥಾಪನಾ ಸಮಿತಿಯ ನಿರ್ಧಾರಕ್ಕೆ ವ್ಯಕ್ತವಾಗಿರುವ ವಿರೋಧದ ನಡುವೆ, ಮುಂದಿನ ದಿನಗಳಲ್ಲಿ ಈ ವಿವಾದ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.






