ಅಲ್ಲಿಗೆ ಕಾಂಗ್ರೆಸ್ ಜೊತೆಗಿನ ಎಲ್ಲಾ ನಂಟು ಮುರಿದಿರುವ ರಾಜ್ಯದ ಹಿರಿಯ ರಾಜಕಾರಣಿ ಸಿಎಂ ಇಬ್ರಾಹಿಂ ಇದೀಗ ತೆನೆ ಹೊರಲು ಮುಹೂರ್ತ ನೋಡಿಕೊಳ್ಳುತ್ತಿದ್ದಾರೆ. ಬಹಳ ದಿನಗಳಿಂದ ಮಾತಿನಲ್ಲೇ ಗೊಂದಲ ಹುಟ್ಟು ಹಾಕಿ ಕಾಂಗ್ರೆಸ್ನ ಹಿರಿಯ ನಾಯಕರಿಗೆ ಕಿರಿಕಿರಿ ಮಾಡಿದ್ದ ಸಿಎಂ ಇಬ್ರಾಹಿಂ ಅಧಿಕೃತವಾಗಿ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ನಿಂದ ಹೊರ ನಡೆದಿದ್ದಾರೆ. ತನಗೆ ಯಾವ ಸ್ಥಾನಮಾನವೂ ನೀಡಿಲ್ಲ ಎಂಬುವುದನ್ನು ರಾಜ್ಯದ ಅಲ್ಪಸಂಖ್ಯಾತರಿಗೆ ಮಾಡಿದ ಅಪಮಾನ ಎಂದು ಕೋಟ್ ಮಾಡಿರುವ ಸಿಎಂ ಇಬ್ರಾಹಿಂಗೆ, ದಳ ಸೇರಿಕೊಂಡರೂ ಮುಂದಿನ ದಾರಿ ಏನು..? ಹೇಗೆ..? ಹೀಗೆ ಹಲವು ಪ್ರಶ್ನೆಗಳು ಎದುರುಗೊಳ್ಳಲಿದೆ.
ಸಿಎಂ ಇಬ್ರಾಹಿಂ ನಿರ್ಗಮನ ಎಷ್ಟರ ಮಟ್ಟಿಗೆ ರಾಜ್ಯ ಕಾಂಗ್ರೆಸ್ಗೆ ಘಾಸಿಮಾಡಲಿದೆ ಎಂಬುವುದೇ ಸದ್ಯಕ್ಕಿರುವ ಚರ್ಚಾವಿಷಯ. 1978ರಲ್ಲಿ ಶಿವಾಜಿನಗರದಿಂದ ಚುನಾವಣಾ ಅಖಾಡಕ್ಕೆ ಧುಮುಕಿ ಗೆದ್ದು ಬಂದ ರೋಚಕ ಇತಿಹಾಸ ಇರುವ ಸಿಎಂ ಇಬ್ರಾಹಿಂ ನಂತರದ ದಿನಗಳಲ್ಲಿ ರಾಜಕೀಯವಾಗಿ ಯಶಸ್ವಿಗೊಂಡಿದ್ದರು. ಅದರಲ್ಲೂ ಸಿಎಂ ಇಬ್ರಾಹಿಂ ಅವರ ರಾಜಕೀಯ ಬದುಕಿನ ಉತ್ತುಂಗ ಎಂದರೆ 1994ರಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಅಲ್ಪಸಂಖ್ಯಾತರ ಮತವನ್ನು ಕ್ರೂಢೀಕರಿಸಿ ದೇವೇಗೌಡರ ತೆಕ್ಕೆಗೆ ಕೊಟ್ಟಿದ್ದು. ಇದೂ ಈಗಲೂ ಒಂದು ಅಪ್ರತಿಮ ಇತಿಹಾಸವಾಗಿಯೇ ಉಳಿದಿದೆ. ನಂತರದಲ್ಲಿ ದೇವೇಗೌಡರು ಗೆದ್ದು ಪ್ರಧಾನಿಯಾದಾಗ ಬಂದ ದಾರಿ ಮರೆಯದ ದೇವೇಗೌಡರು ಕೈ ಹಿಡಿದ ಸಿಎಂ ಇಬ್ರಾಹಿಂರನ್ನು ತನ್ನ ಸಂಪುಟದಲ್ಲಿ ಸಚಿವ ಸ್ಥಾನ ಕೊಟ್ಟು ಕೃತಘ್ಞತೆ ಸಲ್ಲಿಸಿದ್ದರು. ಇಲ್ಲಿಗೆ ರಾಜಕೀಯ ಪಡಸಾಲೆಯಲ್ಲಿ ಸಿಎಂ ಇಬ್ರಾಹಿಂ ದೇವೇಗೌಡರ ನೀಲಿಗಣ್ಣಿನ ಹುಡುಗ ಎಂದು ಕರೆಸಿಕೊಂಡರು.
ಅದಾಗಿ ರಾಜಕೀಯ ಏರಿಳಿತಗಳಲ್ಲಿ ಸಿಎಂ ಇಬ್ರಾಹಿಂ ಸಿದ್ದರಾಮಯ್ಯನವರ ಸಖ್ಯ ಬೆಳೆಸಿಕೊಂಡರು. ಸಿದ್ದರಾಮಯ್ಯ ಕಾಂಗ್ರೆಸ್ ಬಂದ ಬೆನ್ನಲ್ಲೇ ಅಹಿಂದ ಚಳವಳಿಯಲ್ಲೂ ಸಿದ್ದರಾಮಯ್ಯ ಬೆನ್ನಿಗೆ ನಿಂತು ತನ್ನ ಕರಾರುವಾಕ್ ಭಾಷಣ ನಡೆಸಿ ಜನಮಾನಸ ಗೆದ್ದರು. ಸಿದ್ದರಾಮಯ್ಯ ಕೂಡ ಇಬ್ರಾಹಿಂಗೆ ಯೋಜನಾ ಆಯೋಗದ ಉಪಾಧ್ಯಕ್ಷ, ವಿಧಾನಪರಿಷತ್ ಸದಸ್ಯರಾಗುವವರೆಗೆ ಕೈ ಹಿಡಿದರು. 2013ರಲ್ಲಿ ಚುನಾವಣೆಯಲ್ಲಿ ಸಿಎಂ ಇಬ್ರಾಹಿಂಗೆ ಸಂಬಂಧವೇ ಇಲ್ಲದ ಭದ್ರವಾತಿ ಕ್ಷೇತ್ರದಿಂದ ಹೈಕಮಾಂಡ್ ಮೇಲೆ ಒತ್ತಡ ಹೇರಿ ಟಿಕೆಟ್ ಕೊಡಿಸುವಲ್ಲಿಯೂ ಸಿದ್ದರಾಮಯ್ಯ ಯಶಸ್ವಿಯಾಗಿದ್ದರೂ. ಹೀಗೆ ಸಿಎಂ ಇಬ್ರಾಹಿಂ ಕಾಂಗ್ರೆಸ್ನ ಮನೆಮಗನಂತೆ ಬೆಳೆದು ಇದೀಗ ಕಾಂಗ್ರೆಸ್ ಏನೂ ಕೊಟ್ಟಿಲ್ಲ ಎಂದು ಆರೋಪಿಸಿ ಹೊರ ನಡೆದಿದ್ದಾರೆ.

ಇದರ ಹೊರತಾಗಿಯೂ ಸಿಎಂ ಇಬ್ರಾಹಿಂ ಓರ್ವ ವರ್ಣರಂಜಿತ, ಮಾತಿನಲ್ಲೇ ಅರಮನೆ ಕಟ್ಟುವ ಮಾತುಗಾರ. ಅದರಲ್ಲಿ ಯಾವ ತಕರಾರೂ ಸಲ್ಲ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ನ ಯಾವುದೇ ಸಂಘಟಿತ ಕೆಲಸಗಳಲ್ಲಿ ಇಬ್ರಾಹಿಂ ಗುರುತಿಸಿಕೊಂಡಿರಲಿಲ್ಲ. ಆಗಾಗ್ಗೆ ಮಾಧ್ಯಮಗಳ ಮುಂದೆ ಪ್ರತ್ಯಕ್ಷಗೊಂಡು ಮಾತಿನ ಚಟಾಕಿ, ಹಾಸ್ಯ ಲೇಪಿತ ಮಾತು ಆಡಿ ಮಾಯವಾಗುತ್ತಿದ್ದು ಬಿಟ್ಟರೆ ಸದ್ಯಕ್ಕೆ ರಾಜ್ಯ ರಾಜಕಾರಣದಲ್ಲಿ ಸಿಎಂ ಇಬ್ರಾಹಿಂಗೆ ಅಂಥಾ ವರ್ಚಸ್ಸೇನು ಇಲ್ಲ ಎಂಬುವುದು ಕೂಡ ಅಷ್ಟೇ ಸತ್ಯ. ಈಗಲೂ ಸಿಎಂ ಇಬ್ರಾಹಿಂ ತಾನೊಬ್ಬ ಅಲ್ಪಸಂಖ್ಯಾತರ ಮಾಸ್ ಲೀಡರ್ ಎಂದುಕೊಂಡಿದ್ದರೆ, ವಾಸ್ತವ ಬೇರೆಯೇ ಇದೆ.
ಕಾಂಗ್ರೆಸ್ನಲ್ಲಿ ಜಮೀರ್ ಅಹಮ್ಮದ್, ಎನ್ಎ ಹ್ಯಾರಿಸ್, ಯುಟಿ ಖಾದರ್, ರಿಜ್ವನ್ ಅರ್ಷದ್ ಸೇರಿದಂತೆ ಇರುವ ಏಳು ಶಾಸಕರು ಕನಿಷ್ಠ ಪಕ್ಷ ತಮ್ಮ ಕ್ಷೇತ್ರದಲ್ಲಾದರೂ ವರ್ಚಸ್ಸು ಉಳಿಸಿಕೊಂಡಿದ್ದಾರೆ. ಯುಟಿ ಖಾದರ್ ವಿಪಕ್ಷದ ಉಪನಾಯಕರಾಗಿ ಬಜೆಟ್ ಅಧಿವೇಶನದಲ್ಲಿ ಉಪಸ್ಥಿತಿ ತೋರಿರುವ ಪರಿ ಭರವಸೆ ಮೂಡಿಸುವಂತದ್ದು. ಜೊತೆಗೆ ಮಾಸ್ ಔಟ್ರೆ ಹೊಂದಿರುವ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಕ್ಷೇತ್ರದ ಹೊರತಾಗಿಯೂ ಇಡೀ ಬೆಂಗಳೂರಿನಲ್ಲಿ ಹಾಗೂ ಉತ್ತರ ಕರ್ನಾಟಕದ ಅಲ್ಪಸಂಖ್ಯಾ ಬಾಹುಳ್ಯವಿರುವ ಕಡೆಗಳಲ್ಲಿ ಭಾಯ್ ಜಾನ್ ಎನಿಸಿಕೊಂಡಿದ್ದಾರೆ. ಹೀಗೆ ಕಾಂಗ್ರೆಸ್ನಲ್ಲಿರುವ ಮುಸ್ಲಿಂ ನಾಯಕರಿಗೆ ಹೋಲಿಸಿಕೊಂಡರೆ ಸಿಎಂ ಇಬ್ರಾಹಿಂ ಸದ್ಯಕ್ಕೆ ಕಾಂಗ್ರೆಸ್ ಎಂಬ ಶೊಕೇಸ್ ನಲ್ಲಿರುವ ಅಲಂಕಾರಿಕ ವಸ್ತುವಷ್ಟೇ. ಕೇವಲ ಮಾತುಗಾರನಾಗಿಯಷ್ಟೇ ಕಾಂಗ್ರೆಸ್ಗೆ ಅಲ್ಪಮಟ್ಟಿನ ಕಿರಿಕಿರಿ ಮಾಡ ಬಲ್ಲರೇ ಹೊರತು ಅದಕ್ಕಿಂತ ಆಚೆಗೆ ಈಗಲೂ ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟಿರುವ ಅಲ್ಪಸಂಖ್ಯಾತರನ್ನು ಮನೋಭಾವನೆಯನ್ನು ಕೆರಳಿಸಿ ಜನತಾ ದಳಕ್ಕೆ ಮತ ಬ್ಯಾಂಕ್ ಸೃಷ್ಟಿಸಲೇನು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಸಿಎಂ ಇಬ್ರಾಹಿಂ ನಿರ್ಗಮನ ಕಾಂಗ್ರೆಸ್ಸಿಗರನ್ನು ಹೆಚ್ಚೇನು ವಿಚಲಿತಗೊಳ್ಳುವಂತೇನು ಮಾಡಲಿಲ್ಲ.

ಸದ್ಯ ಸಿಎಂ ಇಬ್ರಾಹಿಂ ಕಾಂಗ್ರೆಸ್ ತೊರೆದಿದ್ದಾರೆ ಅಷ್ಟೇ. ದಳ ಸೇರುವವರಾದರೂ ಇನ್ನೂ ಅಧಿಕೃತವಾಗಿ ಸೇರಿಕೊಂಡಿಲ್ಲ. ಹಳೆಯ ದೋಸ್ತ್ಗಳನ್ನು ಅಪ್ಪಿಕೊಳ್ಳಲು ಹೊರಟಿರುವ ಸಿಎಂ ಇಬ್ರಾಹಿಂಗೆ ಮುಂಬರುವ ವಿಧಾನಸಭಾ ಚುನಾವಣೆ ಅಕ್ಷರಶಃ ಅಗ್ನಿ ಪರೀಕ್ಷೆಯಾಗಲಿದೆ. ಕನಿಷ್ಠ ಪಕ್ಷ ಜೆಡಿಎಸ್ಗೆ ಒಂದು ಸೀಟನ್ನಾದರೂ ಗೆಲ್ಲಿಸಿಕೊಟ್ಟರೆ ಇನ್ನುಳಿದ ಕಾಲ ಜೆಡಿಎಸ್ನಲ್ಲಿ ʻಹಿರಿಯʼ ಪಟ್ಟ ಧಕ್ಕಿಸಿಕೊಂಡು ಒಂದಿಷ್ಟು ಪೋರ್ಟ್ ಫೋಲಿಯೋ ಲಾಭಗಳನ್ನು ಪಡೆದುಕೊಂಡು ದಿನ ದೂಡಬಹುದು. ಅಲ್ಪಸಂಖ್ಯಾತರನ್ನು ಬುಟ್ಟಿಹೆ ಹಾಕಿಕೊಳ್ಳಲು ರಣತಂತ್ರ ಹೆಣೆಯುತ್ತಿರುವ ಕುಮಾರಸ್ವಾಮಿ ಆಂಡ್ ಟೀಮ್ಗೆ ಸಿಎಂ ಇಬ್ರಾಹಿಂ ಆಗಮನ ಆರಂಭದಲ್ಲಿ ಒಂದಿಷ್ಟು ಹುಮ್ಮಸ್ಸು ನೀಡಿದರೂ, ಅಂಥಾ ರಾಜಕೀಯ ಲಾಭದ ನಿರೀಕ್ಷೆಯೇನು ಅವರಿಗೂ ಇರ್ಲಿಕ್ಕಿಲ್ಲ. ಹೀಗಾಗಿ ಸಿಎಂ ಇಬ್ರಾಹಿಂ ನಿರ್ಗಮನ ಕಾಂಗ್ರೆಸ್ ಪಾಲಿಗೆ ಮುನಿಸಿಕೊಂಡು ಮನೆ ಬಿಟ್ಟ ಅಳಿಯನಂತೆಯಷ್ಟೇ.











