ಭಾರತದ ಪಾಲಿಗೆ ತನ್ನ ಅಸೀಮ ಪ್ರಾಕೃತಿಕ ಸೌಂದರ್ಯ ಮತ್ತು ಜನಜೀವನದ ಮೂಲಕ ಮುಕುಟಮಣಿಯಾಗಿರುವಂತೆಯೇ, ಪ್ರತ್ಯೇಕತಾವಾದಿಗಳು ಮತ್ತು ಪಾಕಿಸ್ತಾನಿ ಉಗ್ರರ ಹಿಂಸಾಚಾರದ ಕಾರಣಕ್ಕೆ ಸೆರಗಿನ ಕೆಂಡವೂ ಆಗಿರುವ ಕಾಶ್ಮೀರ ಇದೀಗ ಮತ್ತೆ ದೇಶವ್ಯಾಪಿ ಸಾರ್ವಜನಿಕ ಚರ್ಚೆಗೆ ಬಂದಿದೆ.
‘ಕಾಶ್ಮೀರ್ ಫೈಲ್ಸ್’ ಎಂಬ ಕಾಶ್ಮೀರಿ ಪಂಡಿತರ ಸಾಮೂಹಿಕ ವಲಸೆ ಮತ್ತು ಅದರ ಹಿಂದಿನ ಸಂಗತಿಗಳನ್ನು ಆಧರಿಸಿದೆ ಎಂದು ಹೇಳಲಾಗುತ್ತಿರುವ ಸಿನಿಮಾಕ್ಕೆ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ಭಾರತೀಯ ಜನತಾ ಪಾರ್ಟಿ ಸರ್ಕಾರಗಳು ನೀಡುತ್ತಿರುವ ತೆರಿಗೆ ವಿನಾಯ್ತಿ ಮತ್ತು ಬಿಜೆಪಿ, ಆರ್ ಎಸ್ ಎಸ್ ಮುಂತಾದ ಸಂಘಪರಿವಾರದ ಮಂದಿ ಆ ಸಿನಿಮಾಕ್ಕೆ ನೀಡುತ್ತಿರುವ ಇನ್ನಿಲ್ಲದ ಪ್ರಚಾರದ ಹಿನ್ನೆಲೆಯಲ್ಲಿ ಕಾಶ್ಮೀರದ ಇತಿಹಾಸದ ಭೂತ ಮತ್ತೆ ಎದ್ದು ಕೂತಿದೆ.
ಎಂದಿನಂತೆ ಬಿಜೆಪಿ ಮತ್ತು ಆರ್ ಎಸ್ ಎಸ್ ಸೇರಿದಂತೆ ಸಂಘಪರಿವಾರದ ಮಂದಿ ಕಾಶ್ಮೀರದಲ್ಲಿ 1990ರ ದಶಕದಲ್ಲಿ ನಡೆದ ಹಿಂಸಾಚಾರ ಮತ್ತು ಅದರ ಪರಿಣಾಮವಾಗಿ ಕಾಶ್ಮೀರಿ ಪಂಡಿತರು ಸಾಮೂಹಿಕವಾಗಿ ತಮ್ಮ ನೆಲೆ ತೊರೆದು ವಲಸೆ ಹೋದ ಘಟನೆಗಳಿಗೆ ಮೂಲಭೂತವಾಗಿ ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರೂ ಅವರ ನೀತಿಯೇ ಕಾರಣ ಎಂದು ಮತ್ತೊಮ್ಮೆ ನೆಹರು ಮತ್ತು ಕಾಂಗ್ರೆಸ್ ಮೇಲೆ ವಾಗ್ದಾಳಿ ಆರಂಭಿಸಿದ್ದಾರೆ.
ವಿವೇಕ್ ಅಗ್ರಿಹೋತ್ರಿ ನಿರ್ದೇಶನ ಮತ್ತು ಬಿಜೆಪಿ ನಾಯಕ ಅನುಪಮ್ ಖೇರ್ ನಟನೆಯ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಹಿಂದುತ್ವವಾದಿ ಅಜೆಂಡಾದ ಭಾಗವಾಗಿ ಬಿಜೆಪಿ ಮತ್ತು ಸಂಘಪರಿವಾರ ಪ್ರಮೋಟ್ ಮಾಡತೊಡಗಿದಂತೆ ಕಾಂಗ್ರೆಸ್ ಕಡೆಯಿಂದ ಕಾಶ್ಮೀರದ ವಿಷಯವನ್ನು ತಿರುಚುವ ಮತ್ತು ತನ್ನ ರಾಜಕೀಯ ಅಜೆಂಡಾಕ್ಕೆ ತಕ್ಕಂತೆ ಬಳಸಿಕೊಳ್ಳುವ ಬಿಜೆಪಿಯ ವರಸೆಗೆ ಟೀಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲ, ಸಮಾಜವನ್ನು ಕೋಮು ಧ್ರುವೀಕರಣ ಮಾಡುವ ಮೂಲಕ, ಕೋಮು ಆಧಾರದಲ್ಲಿ ಒಡೆಯುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಮತ್ತು ಅಂತಹ ಹುನ್ನಾರಗಳಿಗಾಗಿ ಸಿನಿಮಾದಂತಹ ಜನಪ್ರಿಯ ಮಾಧ್ಯಮಗಳನ್ನು ದುರುಪಯೋಗಮಾಡಿಕೊಳ್ಳುವುದರ ಬಗ್ಗೆಯೂ ಪ್ರಜ್ಞಾವಂತ ಸಮುದಾಯ ಆತಂಕ ವ್ಯಕ್ತಪಡಿಸಿದೆ. ಸಮಾಜದಲ್ಲಿ ಸಾಮರಸ್ಯ ಕಾಯಬೇಕಾದ, ಜೀವಪರವಾಗಿರಬೇಕಾದ ಕಲಾ ಮಾಧ್ಯಮವೊಂದು ಇತಿಹಾಸದ ಗಾಯಗಳನ್ನು ಪರಚಿ, ಮನುಷ್ಯ ಮನುಷ್ಯರ ನಡುವೆ ಹಗೆತನದ ಬೆಂಕಿ ಹಚ್ಚುವುದು ಎಷ್ಟು ಸರಿ ಎಂಬ ಚರ್ಚೆಯೂ ನಡೆಯುತ್ತಿದೆ.
ಹಾಗೇ ಕಾಶ್ಮೀರಿ ಪಂಡಿತರ ಸಾವುನೋವಿನ ಬಗ್ಗೆ ಇಷ್ಟೊಂದು ಮಿಡಿಯುವ ಸಿನಿಮಾ ಮಂದಿ, ತೆರಿಗೆ ವಿನಾಯ್ತಿ ನೀಡಿ ಪ್ರಮೋಟ್ ಮಾಡುವ ಸರ್ಕಾರಗಳು, ಟ್ರೋಲ್ ಪಡೆಗಳು, ಮನೆಮನೆಗೆ ಸಿನಿಮಾದ ಟಿಕೆಟ್ ತಲುಪಿಸಿ ಸಾಮೂಹಿಕವಾಗಿ ಕರೆದೊಯ್ದು ಸಿನಿಮಾ ತೋರಿಸುತ್ತಿರುವ ಬಿಜೆಪಿ ಮತ್ತು ಸಂಘಪರಿವಾರದ ಮಂದಿ, ದೇಶದ ಇತಿಹಾಸದುದ್ದಕ್ಕೂ ನಡೆದ ಮತ್ತು ಈಗಲೂ ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ ಸೇರಿದಂತೆ ತಮ್ಮದೇ ಸರ್ಕಾರವಿರುವ ರಾಜ್ಯಗಳಲ್ಲಿ ನಡೆಯುತ್ತಿರುವ ದಲಿತರ ಹತ್ಯೆಗಳು, ದಲಿತರ ಮೇಲಿನ ಅಟ್ಟಹಾಸ, ದೌರ್ಜನ್ಯಗಳ ವಿಷಯದಲ್ಲಿ ಯಾಕೆ ಮೌನ ವಹಿಸಿದ್ದಾರೆ. ಆ ಹಿನ್ನೆಲೆಯಲ್ಲಿ ‘ಕಾಶ್ಮೀರ್ ಫೈಲ್ಸ್’ ಗೆ ಪರ್ಯಾಯವಾಗಿ ‘ದಲಿತ್ ಫೈಲ್ಸ್’ ಎಂಬುದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಆ ಹಿನ್ನೆಲೆಯಲ್ಲಿ ನೋಡಿದರೆ; ಈ ಕಾಶ್ಮೀರ್ ಫೈಲ್ಸ್ ಎಂಬ ಅಜೆಂಡಾ ಸಿನಿಮಾ ಏಕ ಕಾಲಕ್ಕೆ ಕಾಶ್ಮೀರದ ಇತಿಹಾಸ, ಅದರಲ್ಲಿ ನೆಹರು, ಕಾಂಗ್ರೆಸ್, 1990ರ ದಶಕದ ಪಂಡಿತರ ಸಾಮೂಹಿಕ ವಲಸೆ, ಆ ವೇಳೆಯ ಬಿಜೆಪಿ ಬೆಂಬಲಿತ ವಿ ಪಿ ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ ಸರ್ಕಾರದ ಪಾತ್ರ, ದಲಿತರ ಮೇಲಿನ ದಾಳಿಗಳು, ದೇಶದಲ್ಲಿ ಜಾತಿ ಮತ್ತು ಧರ್ಮದ ಆಧಾರದಲ್ಲಿ ಸಾವು ನೋವುಗಳಿಗೆ ಬೆಲೆ ಕಟ್ಟುವ ಹೇಯ ಮನಸ್ಥಿತಿಗಳನ್ನು ಅನಾವರಣಗೊಳಿಸುತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಈ ಸಿನಿಮಾದ ಕುರಿತ ಪರ ಮತ್ತು ವಿರೋಧದ ಚರ್ಚೆ ಕಾಶ್ಮೀರದ ಇತಿಹಾಸ ಮತ್ತು ಅದರಲ್ಲಿ ಅಂದಿನ ದೇಶದ ನಾಯಕರ ಪಾತ್ರದ ಕುರಿತ ವ್ಯಾಪಕ ವಾಗ್ವಾದಕ್ಕೂ ಇಂಬು ನೀಡಿದೆ. ಆ ಹಿನ್ನೆಲೆಯಲ್ಲಿ ನೋಡಿದರೆ, ವಿವಾದ ಎಂಬುದು ಕಾಶ್ಮೀರದ ಕಣಿವೆಯಲ್ಲಿ ಎಂದೂ ಬತ್ತಿದ ಇತಿಹಾಸವೇ ಇಲ್ಲ! ಹಿಂಸೆ ಮತ್ತು ವಿವಾದ ಎಂಬುದು ಭಾರತ ಹೋಳಾಗಿ ಪಾಕಿಸ್ತಾನವೆಂಬ ದಾಯಾದಿ ದೇಶ ಹುಟ್ಟಿದ ಕ್ಷಣದಿಂದಲೂ ಹಿಮಕಣಿವೆಯ ಬದುಕಿನ ಅನಿವಾರ್ಯ ಭಾಗವಾಗಿ ಹರಿಯುತ್ತಲೇ ಇದೆ.
Also Read : ʼದಿ ಕಾಶ್ಮೀರ್ ಫೈಲ್ಸ್ʼ ಎಂಬ ಅತಿರಂಜಿತ ಚಿತ್ರವೂ ಬಿಜೆಪಿ ಸರ್ಕಾರದ ತೆರಿಗೆ ವಿನಾಯಿತಿಯೂ!
ಹಾಗೆ ನೋಡಿದರೆ, 1930ರಲ್ಲಿ ಲಂಡನ್ನಲ್ಲಿ ನಡೆದ ಮೊದಲ ದುಂಡು ಮೇಜಿನ ಪರಿಷತ್ನಲ್ಲಿ ಕಾಶ್ಮೀರದ ಮಹರಾಜ ಹರಿಸಿಂಗ್ ಬ್ರಿಟಿಷರ ತಾರತಮ್ಯ ನೀತಿಯ ವಿರುದ್ಧ ಸಿಡಿದೆದ್ದ ಕ್ಷಣದಿಂದಲೇ ಕಣಿವೆಯ ಕರಾಳ ಚರಿತ್ರೆಗೆ ಮುನ್ನುಡಿ ಬರೆಯಲಾಗಿತ್ತು. ಬ್ರಿಟಿಷರ ಒಡೆದು ಆಳುವ ನೀತಿಯ ಭಾಗವಾಗಿ 1931ರ ಜೂನ್ 21ರಂದು ಕಾಶ್ಮೀರಿ ಮುಸ್ಲಿಮರ ಪರ ಬ್ರಿಟಿಷ್ ಸರ್ಕಾರಕ್ಕೆ ಮನವಿಯೊಂದನ್ನು ನೀಡಲು ಅಂದಿನ ಪ್ರಭಾವಿ ಮುಸ್ಲಿಂ ವೇದಿಕೆಯಾಗಿದ್ದ ಮುಸ್ಲಿಂ ರೀಡಿಂಗ್ ಕ್ಲಬ್ ಸಭೆ ಸೇರುತ್ತದೆ. ಆ ಸಭೆಯಲ್ಲಿ ಅತ್ತ ಕಾಶ್ಮೀರಿಯೂ ಅಲ್ಲದ, ರಾಜ್ಯದ ನಿವಾಸಿಯೂ ಅಲ್ಲದ ಅಬ್ದುಲ್ ಖದೀರ್ ಎಂಬ ವ್ಯಕ್ತಿ ಶುಕ್ರವಾರದ ಪ್ರಾರ್ಥನೆ ಮುಗಿಸಿ ಹೊರಬಂದ ಮುಸ್ಲಿಮರನ್ನು ಉದ್ದೇಶಿಸಿ ಪ್ರಚೋದನಕಾರಿ ಭಾಷಣ ಮಾಡಿ, ರಾಜ ಹರಿಸಿಂಗ್ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಯ ವಿರುದ್ಧ ಅವರನ್ನು ಎತ್ತಿಕಟ್ಟಿ ಅರಮನೆ ಮೇಲೆ ದಾಳಿಗೆ ಪ್ರಚೋದಿಸುತ್ತಾನೆ. ಬಳಿಕ ಸುಮಾರು ಒಂದು ತಿಂಗಳ ಕಾಲ ಇಡೀ ಕಣಿವೆ ಮೊದಲ ಬಾರಿಗೆ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಗುತ್ತದೆ. ಆಗ ಮುಸ್ಲಿಂ ರೀಡಿಂಗ್ ಕ್ಲಬ್ ಸದಸ್ಯರಲ್ಲಿ ಒಬ್ಬರಾಗಿದ್ದ ಶೇಕ್ ಅಬ್ದುಲ್ಲಾ ಅದೇ ಘಟನೆಯನ್ನು ಬಳಸಿಕೊಂಡು ರಾಜಕೀಯ ನಾಯಕರಾಗಿ ಬೆಳೆಯುತ್ತಾರೆ ಮತ್ತು ಮುಂದೆ ಭಾರತ – ಪಾಕ್ ವಿಭಜನೆ ಬಳಿಕ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ.
ಬ್ರಿಟಿಷ್ ಮೇಜರ್ ಒಬ್ಬರ ಅಡುಗೆಯವನಾಗಿ ಕಾಶ್ಮೀರಕ್ಕೆ ಕಾಲಿಟ್ಟಿದ್ದ ಬ್ರಿಟಿಷ್ ಏಜೆಂಟ್ ಅಬ್ದುಲ್ ಖದೀರ್ ಹೊತ್ತಿಸಿದ ಆ ಕಿಡಿ ಇನ್ನೂ ದಹಿಸುತ್ತಲೇ ಇದೆ. ಆ ಬಳಿಕ ವಿಭಜನೆ ವೇಳೆ ಕೂಡ ಭಾರಿ ಹಿಂಸಾಚಾರ, ಸಂಘರ್ಷಕ್ಕೆ ಕಾಶ್ಮೀರ ವೇದಿಕೆಯಾಗುತ್ತದೆ. ಪಾಕಿಸ್ತಾನಿ ಮುಸ್ಲಿಮರು ಶ್ರೀನಗರಕ್ಕೆ ನುಗ್ಗಿ ಭಾರೀ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಾರೆ. ವಿಭಜನೆ ವೇಳೆ ಅತ್ತ ಪಾಕಿಸ್ತಾನಕ್ಕೂ ಸೇರದೆ, ಇತ್ತ ಭಾರತಕ್ಕೂ ಸೇರದೆ ನಿರ್ಲಿಪ್ತನಾಗಿ ತನ್ನ ರಾಜ ವೈಭೋಗ ಮತ್ತು ಅಧಿಕಾರ ದಂಡ ಉಳಿಸಿಕೊಳ್ಳಲು ಹೊಂಚಿದ್ದ ಮಹಾರಾಜ ಹರಿಸಿಂಗ್, ಪಾಕ್ ಪ್ರೇರಿತ ಬಂಡುಕೋರರು ಶ್ರೀನಗರಕ್ಕೆ ಮುತ್ತಿಗೆ ಹಾಕಿದಾಗ ರಕ್ಷಣೆ ನೀಡುವಂತೆ ಭಾರತ ಸರ್ಕಾರದ ಮೊರೆ ಹೋದ. ಅಲ್ಲದೆ, ಭಾರತ ಆಗ ತನಗೆ ನೆರವಾದರೆ ಭಾರತ ಗಣರಾಜ್ಯದಲ್ಲಿ ಸೇರುವ ಇಂಗಿತ ವ್ಯಕ್ತಪಡಿಸಿದ. ಆತನ ಅಂತಹ ಭರವಸೆಯ ಬಳಿಕ ಭಾರತ, ಸೇನಾ ಕಾರ್ಯಾಚರಣೆ ಮೂಲಕ ಪಾಕ್ ಸೇನೆ ಮತ್ತು ಅದರ ಬೆಂಬಲಿತ ದಾಳಿಕೋರರನ್ನು ಅಟ್ಟಿ, ಜಮ್ಮು- ಕಾಶ್ಮೀರವನ್ನು ತನ್ನೊಳಗೆ ವಿಲೀನಗೊಳಿಸಿಕೊಂಡಿತು.
ಆದರೆ, ಅಷ್ಟಕ್ಕೇ ಎಲ್ಲವೂ ಸರಾಗವಾಗಲಿಲ್ಲ. 1965ರಲ್ಲಿ ಮತ್ತೆ ಪ್ರತ್ಯೇಕತಾವಾದಿಗಳ ಕೂಗು ಆರಂಭವಾಯಿತು. ಆದರೆ, ಕಣಿವೆರಾಜ್ಯದಲ್ಲಿ ನಿಜವಾದ ಬಂಡುಕೋರ ಚಳವಳಿಗೆ ಕಾರಣವಾಗಿದ್ದು, 1987ರ ಚುನಾವಣೆಯಲ್ಲಿ ಫಾರೂಕ್ ಅಬ್ದುಲ್ಲಾ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣಾ ಅಕ್ರಮಗಳ ಮೂಲಕ ಅಧಿಕಾರ ಹಿಡಿದಾಗ. ಅದೇ ವೇಳೆಗೆ ಜೆಕೆಎಲ್ ಎಫ್ ಮತ್ತಿತರ ಸ್ಥಳೀಯ ಪ್ರತ್ಯೇಕತಾವಾದಿಗಳಿಗೆ ಪಾಕಿಸ್ತಾನದ ಐಎಸ್ಐ ಬೇಹುಗಾರಿಕಾ ಸಂಸ್ಥೆ ಶಸ್ತ್ರಾಸ್ತ್ರ, ಹಣಕಾಸಿನ ನೆರವು ನೀಡಿ, ಜಮ್ಮು- ಕಾಶ್ಮೀರದಲ್ಲಿ ಪ್ರಕ್ಷುಬ್ಧತೆ ಹರಡಲು ಪ್ರಯತ್ನಿಸಿತು. ಅದಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಕಣಿವೆಯ ಜನರ ರಕ್ಷಣೆಗಾಗಿ ಹೆಚ್ಚಿನ ಸೇನಾ ಬಲ ನಿಯೋಜಿಸತೊಡಗಿತು. ಸೇನೆಯ ನಿಯೋಜನೆ ಹೆಚ್ಚಿದ್ದಂತೆಲ್ಲಾ ಬಂಡುಕೋರ ಗುಂಪುಗಳು ಮತ್ತು ಪ್ರತ್ಯೇಕತವಾದಿಗಳಿಂದ ಪ್ರಚೋದನಕಾರಿ ದಾಳಿಗಳು ಹೆಚ್ಚಾದವು. ಹಿಜ್ಬುಲ್ ಮುಜಾಹಿದೀನ್, ಲಷ್ಕರ್ ಎ ತೊಯ್ಬಾದಂತಹ ಉಗ್ರಗಾಮಿ ಸಂಘಟನೆಗಳು ಪಾಕಿಸ್ತಾನದ ಸೇನೆಯ ಬೆಂಬಲದೊಂದಿಗೆ ಕಣಿವೆ ರಾಜ್ಯದೊಳಗೆ ನುಸುಳಿ ಜೆಕೆಎಲ್ ಎಫ್ ನಂತಹ ಪ್ರತ್ಯೇಕತಾವಾದಿಗಳಿಗೆ ಬೆಂಬಲವಾಗಿ ಭಾರತೀಯ ಸೇನೆ ಮತ್ತು ಆಡಳಿತ ವ್ಯವಸ್ಥೆಯನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡತೊಡಗಿದವು.
ಈ ನಡುವೆ, 1990ರಲ್ಲಿ ಪಾಕಿಸ್ತಾನದ ಬೆಂಬಲದೊಂದಿಗೆ ಪ್ರತ್ಯೇಕತಾವಾದಿ ಜೆಕೆಎಲ್ ಎಫ್ ಮತ್ತು ಉಗ್ರ ಸಂಘಟನೆಗಳು ಕಾಶ್ಮೀರ ಕಣಿವೆಯ ಹಿಂದೂಗಳನ್ನೇ ಗುರಿಯಾಗಿರಿಸಿಕೊಂಡು ಗೆರಿಲ್ಲಾ ದಾಳಿ ನಡೆಸಿದರು. ಭಾರತೀಯ ಸೇನೆ ಅಲ್ಲಿಗೆ ತಲುಪುವ ಮುನ್ನವೇ ಉಗ್ರರು ಬಹುತೇಕ ಹಿಂದೂಗಳನ್ನು ಬರಿಗೈಲಿ ಕಣಿವೆಯಿಂದ ಹೊರಗಟ್ಟಿದ್ದರು. ಒಂದು ಅಂದಾಜಿನ ಪ್ರಕಾರ ಆಗ ದಾಳಿಗೆ ಹೆದರಿ, ಕಣಿವೆ ತೊರೆದ ಪಂಡಿತರ ಸಂಖ್ಯೆ ಬರೋಬ್ಬರಿ ಒಂದು ಲಕ್ಷ! ಆಗ ಒಟ್ಟು 1.40 ಲಕ್ಷದಷ್ಟಿದ್ದ ಕಣಿವೆಯ ಪಂಡಿತರ ಜನಸಂಖ್ಯೆ 2011ರ ಹೊತ್ತಿಗೆ ಕೇವಲ 3000ಕ್ಕೆ ತಲುಪಿತ್ತು ಎಂದರೆ, ಅಲ್ಲಿನ ಹಿಂಸಾಚಾರಕ್ಕೆ, ದಬ್ಬಾಳಿಕೆಗೆ ಹೆದರಿ ಯಾವ ಮಟ್ಟದಲ್ಲಿ ಸಾಮೂಹಿಕ ವಲಸೆ ನಡೆದಿರಬಹುದು ಎಂಬುದನ್ನು ಊಹಿಸಬಹುದು.
ಆ ಬಳಿಕ ಒಂದು ದಶಕದ ಕಾಲ ಇಡೀ ಕಣಿವೆ ನಿರಂತರ ಉಗ್ರ ಚಟುವಟಿಕೆ, ನುಸುಳುಕೋರರ ಅಟ್ಟಹಾಸಕ್ಕೆ ಮೂಕ ಸಾಕ್ಷಿಯಾಯಿತು. ಹಾಗಾಗಿ ಸಾವಿರಾರು ಮಂದಿ ಯೋಧರು, ನಾಗರಿಕರು ಸಂಘರ್ಷದಲ್ಲಿ ಜೀವಕಳೆದುಕೊಂಡರು. ಪರಿಣಾಮ, ಬಹುತೇಕ 90ರ ದಶಕ ಸಂಪೂರ್ಣ ರಕ್ತಸಿಕ್ತ ಅಧ್ಯಾಯವಾಗಿ ಜಮ್ಮು-ಕಾಶ್ಮೀರದ ಇತಿಹಾಸಲ್ಲಿ ದಾಖಲಾಯಿತು. ಅಂತಹ ಆಘಾತಕಾರಿ ಮಹಾ ವಲಸೆ ಮತ್ತು ಅದಾದ ಬಳಿಕ ಕೂಡ ಬಿಜೆಪಿ ಸರ್ಕಾರದ ಪಾಲುದಾರನಾಗಿತ್ತು. 1991ರ ರಾಮ ಜನ್ಮಭೂಮಿ ರಥಯಾತ್ರೆಯ ಮೂಲಕ ಹಿಂದುತ್ವದ ರಾಜಕಾರಣವನ್ನು ದೇಶವ್ಯಾಪಿ ಆಂದೋಲನವಾಗಿ ರೂಪಿಸಲು ಕಾಶ್ಮೀರ ಪಂಡಿತರ ಸಾವು-ವಲಸೆಯನ್ನೂ ಬಳಸಿಕೊಂಡ ಬಿಜೆಪಿ, ಇದೀಗ ಮತ್ತೆ ‘ಕಾಶ್ಮೀರ್ ಫೈಲ್ಸ್’ ಸಿನಿಮಾದ ಮೂಲಕ ಮತ್ತೊಂದು ಸುತ್ತಿನ ರಾಜಕೀಯ ಲಾಭ ಬಾಚಲು ಹವಣಿಸತೊಡಗಿದೆ!
ಈ ನಡುವೆ ಕಳೆದ ವಾರವಷ್ಟೇ ಕಾಶ್ಮೀರಿ ಪಂಡಿತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ತಮ್ಮ ಮಾಸಿಕ ಪರಿಹಾರ ಧನ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ. ಅದಕ್ಕೂ ಮುನ್ನ ಕಳೆದ ಸೆಪ್ಟೆಂಬರಿನಲ್ಲಿ ತಮ್ಮ ಪರಿಹಾರ ತಡೆ ಹಿಡಿದ ಸರ್ಕಾರದ ಕ್ರಮವನ್ನು ವಿರೋಧಿಸಿ ಜಮ್ಮುವಿನಲ್ಲಿ ಭಾರೀ ಪ್ರತಿಭಟನಾ ರ್ಯಾಲಿ ನಡೆಸಿದ್ದರು. ಬಳಿಕ ಅಕ್ಟೋಬರಿನಲ್ಲಿ ಕಾಶ್ಮೀರಿ ಕಣಿವೆಯಲ್ಲಿ ನಿರ್ದಿಷ್ಟವಾಗಿ ಅಲ್ಪಸಂಖ್ಯಾತರಾದ ತಮ್ಮನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿ ಹತ್ಯೆ ನಡೆಸುತ್ತಿರುವುದನ್ನು ಖಂಡಿಸಿ ಜುಮ್ಮುವಿನಲ್ಲಿ ಪಂಡಿತರು ಪ್ರತಿಭಟನೆ ನಡೆಸಿದ್ದರು. “ಸದ್ಯ ಕಾಶ್ಮೀರದಲ್ಲಿ ಹಿಂದೂಗಳು, ಸಿಖ್ಖರು ಮತ್ತು ಮುಸ್ಲಿಮ್ ದೇಶಬಾಂಧವರಿಗೂ ಯಾವುದೇ ರಕ್ಷಣೆ ಇಲ್ಲ. 1990ರ ಆಘಾತಕಾರಿ ಪರಿಸ್ಥಿತಿ ಮತ್ತೆ ಮರಳಿದೆ” ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದರು
ಈ ನಡುವೆ, ನೆನಪಿಡಬೇಕಾದ ಸಂಗತಿ ಎಂದರೆ, 2018ರ ನವೆಂಬರಿನಲ್ಲಿ ಜಮ್ಮು ಕಾಶ್ಮೀರದ ರಾಜ್ಯಪಾಲರು ಅಲ್ಲಿನ ರಾಜ್ಯ ಸರ್ಕಾರವನ್ನ ವಜಾಗೊಳಿಸಿ, ವಿಧಾನಸಭೆಯನ್ನು ವಿಸರ್ಜಿಸಿದ ಬಳಿಕ ಈವರೆಗೂ ಅಲ್ಲಿ ರಾಷ್ಟ್ರಪತಿ ಆಡಳಿತವೇ ಜಾರಿಯಲ್ಲಿದೆ; ಅಂದರೆ ಪರೋಕ್ಷವಾಗಿ ನರೇಂದ್ರ ಮೋದಿಯವರ ಭಾರತೀಯ ಜನತಾ ಪಕ್ಷವೇ ಆಡಳಿತದ ಸೂತ್ರಧಾರ! ಹಾಗೇ ಕೇಂದ್ರದಲ್ಲಿ ಕೂಡ ಅಧಿಕಾರದಲ್ಲಿರುವುದು ದಶಕಗಳ ಕಾಲ ಚುನಾವಣಾ ಕಣದಲ್ಲಿ ಈಜಿ ಜಯದ ದಡ ಸೇರಲು ಕಾಶ್ಮೀರಿ ಪಂಡಿತದ ಕಣ್ಣೀರನ್ನೇ ಹರಿಗೋಲಾಗಿ ಬಳಸಿಕೊಂಡ ಬಿಜೆಪಿ ಸರ್ಕಾರವೇ!