ಹಾಸನ : ಒಕ್ಕಲಿಗ ಸಮುದಾಯಕ್ಕೆ (Vokkaliga) ನೀಡಿದ್ದ ಮೀಸಲಾತಿಯನ್ನು ಕಡಿಮೆ ಮಾಡಿ, ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದು ನಾನು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Devegowda) ಹೇಳಿಕೊಂಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೊಡ್ಡಗೌಡರು, ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಒದಗಿಸಲು ಒಳಮೀಸಲಾತಿ ಕೊಡಬೇಕೆಂದು ಸಚಿವ ಸಂಪುಟ ಸಭೆ ತುರ್ತು ನಿರ್ಣಯ ಮಾಡಿ ಈಗ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಈ ಕೆಲಸವನ್ನು ನಾನೂ ನನ್ನ ಅಧಿಕಾರ ಅವಧಿಯಲ್ಲೇ ಮಾಡಿದ್ದೆ. ಅಂದು ಮುಸ್ಲಿಮರಿಗೆ ಮೀಸಲಾತಿ (Muslims) ಕೊಟ್ಟಿದ್ದು ದೇವೇಗೌಡ. ನಾನು ಅಧಿಕಾರದಲ್ಲಿದ್ದಾಗ ಒಕ್ಕಲಿಗರಿಗೆ ನೀಡಿದ್ದನ್ನು ಕಡಿಮೆ ಮಾಡಿ, ಮುಸ್ಲಿಮರಿಗೆ ಮೀಸಲಾತಿ ಕೊಟ್ಟೆ. ಇದನ್ನು ನಿರ್ಣಯ ಮಾಡಿದ್ದು ದೇವೇಗೌಡ ಎಂದು ಹೇಳಿಕೊಂಡಿದ್ದಾರೆ.
ಗುಂಡೂರಾವ್ ಸರ್ಕಾರದಲ್ಲಿ ಅಂಬೇಡ್ಕರ್ ಅವರು ನೀಡಿದ್ದ 18% ಮೀಸಲಾತಿಯಲ್ಲಿ ಎಸ್ಸಿಗೆ 15%, ಎಸ್ಟಿಗೆ 3% ನೀಡಿದ್ದರು. ಆದ್ರೆ ಆ ಕೋಟಾ ಭರ್ತಿ ಮಾಡಲಿಲ್ಲ. ನಂತರ ನಾನು 1983ರಲ್ಲಿ ಲೋಕೋಪಯೋಗಿ ಸಚಿವನಾದಾಗ ಅಂಬೇಡ್ಕರ್ ಕೊಟ್ಟಂತಹ ಕೋಟಾ ಭರ್ತಿಯಾಗಲು 15% ಮೀಸಲಾತಿಯನ್ನು 18%ಗೆ ಹೆಚ್ಚಿಸಿದೆ. 3% ಇದ್ದ ಎಸ್ಟಿ ಮೀಸಲಾತಿಯನ್ನು 5%ಗೆ ಹೆಚ್ಚಿಸಿದೆ. ಅಂಬೇಡ್ಕರ್ ಅವರ ಆಶಯದಂತೆ ಆ ಕೋಟಾ ಗುರಿಮುಟ್ಟುವವರೆಗೂ ಕೆಲಸ ಮಾಡಿದ್ದೇನೆ. ಅದು ಖಾಯಂ ಆಗಿರಬೇಕು ಅಂತ ಮಾಡಿದ್ದೆ. ಇದು ಎಲ್ಲಾ ಇಲಾಖೆಗಳ ಮೇಲೆ ಪರಿಣಾಮ ಬೀರುತ್ತೆ ಅಂತ ಎಲ್ಲರೂ ಹೇಳಿದ್ರು, ಆದರೂ ನಾನು ಮೀಸಲಾತಿ ಹೆಚ್ಚಿಸಿದ್ದೆ ಎಂದು ತಿಳಿಸಿದ್ದಾರೆ
ಕಾಂಗ್ರೆಸ್ ನಾಯಕರು ಅಹಿಂದ ಅಂತ ಹೇಳಿದ್ದೇ, ಹೇಳಿದ್ದು, ದೇವೇಗೌಡರು ಈ ರಾಜ್ಯದಲ್ಲಿ ಏನು ಮಾಡಿದ್ರು ಅನ್ನೋದನ್ನ ಮರೆಮಾಚುವ ಕೆಲಸ ಮಾಡಿಬಿಟ್ಟರು. ಏಕೆಂದರೆ ನಾನೊಬ್ಬ ಒಕ್ಕಲಿಗ ಅದಕ್ಕೆ ಮಾಡಿದ್ರು, ಬೇಕಿದ್ದರೆ ಇದೆಲ್ಲದರ ಬಗ್ಗೆ ಚರ್ಚೆಯಾಗಲಿ ಎಂದು ಸವಾಲು ಹಾಕಿದರು.