ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ದೇವದತ್ ಪಡಿಕ್ಕಲ್, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿ ಗಮನ ಸೆಳೆದಿದ್ದಾರೆ. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 26 ಎಸೆತಗಳಲ್ಲಿ 61 ರನ್ ಸಿಡಿಸಿದ ಅವರು, ಹೊಸ ಶೈಲಿಯ ಆಟದ ಹಿಂದೆ ಇರುವ ಕಾರಣಗಳನ್ನು ವಿವರಿಸಿದ್ದಾರೆ.

“ನಾನು ಕೇವಲ ತಾಂತ್ರಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಬದಲಾವಣೆಗೆ ಒಳಗಾಗಿದ್ದೇನೆ. ಇಷ್ಟು ವೇಗವಾಗಿ ಹಾಗೂ ಆಕ್ರಮಣಕಾರಿಯಾಗಿ ಬ್ಯಾಟ್ ಮಾಡಬಲ್ಲೆ ಎಂಬ ನಂಬಿಕೆಯನ್ನು ಮೊದಲೇ ನನ್ನೊಳಗೆ ಬೆಳೆಸಿಕೊಂಡೆ. ಒಂದೇ ಶೈಲಿಯಲ್ಲಿ ಆಡುತ್ತಿದ್ದ ನನಗೆ ಈ ಬದಲಾವಣೆ ಸುಲಭವಾಗಿರಲಿಲ್ಲ” ಎಂದು ಪಡಿಕ್ಕಲ್ ಹೇಳಿದ್ದಾರೆ.ತಮ್ಮ ಆಟದ ಬದಲಾವಣೆಗೆ ತಂಡದ ಕೋಚಿಂಗ್ ಸ್ಟಾಫ್ ಪಾತ್ರ ಪ್ರಮುಖವೆಂದು ತಿಳಿಸಿದ ಅವರು, “ಮುಖ್ಯ ಕೋಚ್ ಆಂಡಿ ಫ್ಲವರ್, ಮೊ ಬೊಬಾಟ್ ಮತ್ತು ದಿನೇಶ್ ಕಾರ್ತಿಕ್ ಅವರ ಮಾರ್ಗದರ್ಶನದಿಂದ ದೇಹದ ಸಮತೋಲನ ಮತ್ತು ಶಾಟ್ ಆಯ್ಕೆ ಬಗ್ಗೆ ಕಳೆದ ಎರಡು ವರ್ಷಗಳಿಂದ ಸಾಕಷ್ಟು ಕಲಿತಿದ್ದೇನೆ” ಎಂದು ಹೇಳಿದ್ದಾರೆ.

ಆರ್‌ಸಿಬಿ ತಂಡದಲ್ಲಿ ತಮ್ಮ ಪಾತ್ರದ ಬಗ್ಗೆ ಈಗ ಸ್ಪಷ್ಟತೆ ಹೊಂದಿರುವುದಾಗಿ ಹೇಳಿದ ಪಡಿಕ್ಕಲ್, ಆರಂಭಿಕ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡುವುದು ಹಾಗೂ ಮಧ್ಯಮ ಓವರ್‌ಗಳಲ್ಲಿ ರನ್‌ರೇಟ್ ಕಡಿಮೆಯಾಗದಂತೆ ನೋಡಿಕೊಳ್ಳುವುದು ತಮ್ಮ ಗುರಿ ಎಂದರು. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ಭವಿಷ್ಯದಲ್ಲಿ ಭಾರತ ತಂಡದಲ್ಲಿ ಆಡುವುದು ಅಂತಿಮ ಗುರಿ ಎಂದು ಹೇಳಿದರು. ಶಾಂತ ಸ್ವಭಾವದ ಬ್ಯಾಟರ್ ಎನಿಸಿಕೊಂಡಿದ್ದ ಕನ್ನಡಿಗ ದೇವದತ್ ಪಡಿಕ್ಕಲ್, ಇದೀಗ ಟಿ20 ಕ್ರಿಕೆಟ್‌ಗೆ ತಕ್ಕಂತೆ ಸ್ಪೋಟಕ ಆಟಗಾರನಾಗಿ ಹೊರಹೊಮ್ಮುತ್ತಿರುವುದು ಗಮನಾರ್ಹವಾಗಿದೆ.
ಇದನ್ನೂ ಓದಿ






