ಈ ವರ್ಷದ ಜಾಗತಿಕ ಆಹಾರ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ಮಾಡಬಹುದಾದ ಏಕೈಕ ವಿಚಾರವೆಂದರೆ ಅದು ತನ್ನ ದೇಶದ ಬಡವರಿಗೆ ಕೆಟ್ಟದಾಗದಂತೆ ನೋಡಿಕೊಳ್ಳುವುದು. ಎಲ್ಲೆಡೆ ಮೂಲಭೂತ ಪೌಷ್ಟಿಕಾಂಶದ ಬೆಲೆ ಗಗನಕ್ಕೇರಿದೆ. ಈಗ ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದ ಸರ್ಕಾರ ಮಾಡಬಹುದಾಗಿರುವುದೇನೆಂದರೆ ಆಹಾರ ಸಂಗ್ರಹಣೆ ಮತ್ತು ಸಾರ್ವಜನಿಕ ವಿತರಣೆಯನ್ನು ಸುಲಭಗೊಳಿಸಿ ಬಡವರಿಗೆ ಆಹಾರ ಧಾನ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು.
ಆದರೆ, ಏಪ್ರಿಲ್ ಮಧ್ಯದಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವು ಜಗತ್ತಿನ ಹೊಟ್ಟೆ ತುಂಬಿಸಬಲ್ಲುದು ಎಂದು ಯುಎಸ್ ಅಧ್ಯಕ್ಷ ಜೋ ಬಿಡನ್ ಅವರಿಗೆ ಭರವಸೆ ನೀಡಿದ್ದರು. ಅಷ್ಟು ಮಾತ್ರ ಅಲ್ಲದೆ ವಿಶ್ವ ವ್ಯಾಪಾರ ಸಂಸ್ಥೆಯು ಅನುಮತಿಸಿದರೆ ‘ನಾಳೆಯಿಂದಲೇ ಜಗತ್ತಿಗೆ ಆಹಾರ ದಾಸ್ತಾನುಗಳನ್ನು ಪೂರೈಸಲು ಭಾರತ ಸಿದ್ಧವಾಗಿದೆ’ ಎಂದೂ ಮೋದಿ ಹೇಳಿದ್ದರು.
ಆದರೆ ಭಾರತದ ಪ್ರಧಾನಿ ಒಂದೆಡೆ ಬಿಡೆನ್ ಅವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದರೆ ಉತ್ತರ ಭಾರತದ ಬಹುತೇಕೆಡೆ ಅಲ್ಲಿನ ಪ್ರಮುಖ ಬೆಳೆಯಾದ ಗೋಧಿ ಈ ಬಾರಿಯ ಬಿಸಿ ಗಾಳಿಯಿಂದ ಸುಟ್ಟು ಹೋಗುತ್ತಿತ್ತು. ಉಕ್ರೇನ್ ಯುದ್ಧ ಮತ್ತು ಅದರ ನಂತರ ಪರಿಣಾಮದಿಂದಾಗಿ ಉಂಟಾಗಿರುವ ಧಾನ್ಯದ ಕೊರತೆಯಿಂದಾಗಿ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ತನ್ನ ಪಾತ್ರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಭಾರತಕ್ಕೆ ಅವಕಾಶ ದೊರೆತಿರಬಹುದು. ಆದರೆ ಹವಾಮಾನ ಬದಲಾವಣೆ ಮತ್ತು ಆಂತರಿಕವಾಗಿ ಉಂಟಾಗಿರುವ ಚಪಾತಿ ಬಿಕ್ಕಟ್ಟಿನಿಂದಾದ ಬಡವರ ಅನ್ನದ ತಟ್ಟೆಯಲ್ಲಿನ ತೂತು ನಮ್ಮ ಪ್ರಧಾನಿಗಳ ಉತ್ಸಾಹವನ್ನು ಹಿಮ್ಮೆಟ್ಟಿಸಲೇಬೇಕು.
ಅಂತರರಾಷ್ಟ್ರೀಯ ವೇದಿಕೆಯಲ್ಲಿ ಅಥವಾ ಅಂತರರಾಷ್ಟ್ರೀಯ ನಾಯಕರೊಂದಿಗೆ ಆಡುವ ಮಾತು ಒಬ್ಬ ವ್ಯಕ್ತಿಯದು ಮಾತ್ರ ಆಗಿರುವುದಿಲ್ಲ, ಅದು ಇಡೀ ದೇಶದ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಹಾಗಾಗಿ ನಾಯಕರೆನಿಸಿಕೊಂಡವರು ಮಾತು ಕೊಡುವ ಮುನ್ನ ವಸ್ತು ಸ್ಥಿತಿಯನ್ನು ಚೆನ್ನಾಗಿ ಗ್ರಹಿಸಿರಬೇಕಾಗುತ್ತದೆ. ಇಲ್ಲದಿದ್ದರೆ ಇಡೀ ದೇಶವೇ ಮಾತಿಗೆ ತಪ್ಪಿದಂತಾಗುತ್ತದೆ. ಅಂತಿಮವಾಗಿ ಆಹಾರದ ವಿಷಯದಲ್ಲೂ ಆದದ್ದು ಅದೇ. ಇಡೀ ಜಗತ್ತಿಗೆ ಆಹಾರ ಪೂರೈಸುತ್ತೇವೆ ಎಂದ ಸರ್ಕಾರವೇ ಮೇ ಮಧ್ಯದಲ್ಲಿ, ದೇಶದೊಳಗಿನ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಗೋಧಿ ರಫ್ತಿನ ಮೇಲೆ ಅವಸರದ ನಿಷೇಧವನ್ನು ಹೇರಿತು. ಸರ್ಕಾರದ ಈ ನಡೆ ಅನಿವಾರ್ಯವೇ ಆಗಿತ್ತು, ಆದರೆ ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿತು. ಮೋದಿಯವರ ಈ ನಿರ್ಧಾರವನ್ನು ಏಳು ರಾಷ್ಟ್ರಗಳ ಗುಂಪು ಟೀಕಿಸಿತು. “ಪ್ರತಿಯೊಬ್ಬರೂ ರಫ್ತಿಗೆ ನಿರ್ಬಂಧಗಳನ್ನು ಹೇರಲು ಅಥವಾ ಮಾರುಕಟ್ಟೆಗಳನ್ನು ಮುಚ್ಚಲು ಪ್ರಾರಂಭಿಸಿದರೆ, ಅದು ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತದೆ” ಎಂದು ಜರ್ಮನ್ ಕೃಷಿ ಸಚಿವ ಸೆಮ್ ಓಜ್ಡೆಮಿರ್ ಹೇಳಿದರು.
ಮೋದಿ ಪ್ರಧಾನಿಯಾದ ಮೇಲೆ ಈ ರೀತಿ ಆಗುವುದು ಇದು ಮೊದಲ ಬಾರಿಯೇನಲ್ಲ. ಇಡೀ ಪ್ರಪಂಚ ಕೋವಿಡ್ ಅಬ್ಬರಕ್ಕೆ ಸಿಲುಕಿ ನರಳುತ್ತಿರಬೇಕಾದರೆ ಭಾರತದ ಪ್ರಧಾನಿ ‘ವಿಶ್ವದ ಔಷಧಾಲಯವಾದ ಭಾರತವು ಮಾನವೀಯತೆಯನ್ನು ಹೇಗೆ ಉಳಿಸುತ್ತದೆ’ ನೋಡಿ ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ ಕೋವಿಡ್ ಎರಡನೇ ಅಲೆಯು ಭಾರತವು ಇನ್ನಿಲ್ಲದಂತೆ ಕಾಡಿ, ಬಳಲಿ ಬೆಂಡಾಗಿಸಿದಾಗ ಲಸಿಕೆಯ ರಫ್ತನ್ನು ಅನಿವಾರ್ಯವಾಗಿ ನಿರ್ಬಂಧಿಸಬೇಕಾಗಿ ಬಂತು. ಅಂತಿಮವಾಗಿ ಮಾರ್ಚ್ 31 ರ ಹೊತ್ತಿಗೆ, ಜಾಗತಿಕ ಲಸಿಕೆ ವ್ಯಾಪಾರದಲ್ಲಿ ಭಾರತದ ಪಾಲು ಕೇವಲ 2.3 ಶೇಕಡಾ.
ವಾಸ್ತವವಾಗಿ ಈಗ ರಫ್ತು ನಿರ್ಬಂಧ ಹೇರಿರುವುದು ಭಾರತ ಮಾತ್ರವಲ್ಲ, ತಾಳೆ ಎಣ್ಣೆ ಸಾಗಣೆಯ ಮೇಲಿನ ಇಂಡೋನೇಷಿಯಾದ ನಿರ್ಬಂಧಗಳಿಂದ ಹಿಡಿದು ಮಲೇಷಿಯಾದ ಕೋಳಿ ರಫ್ತು ನಿಷೇಧದವರೆಗೆ ಸುಮಾರು 30 ದೇಶಗಳು ಅಂತಹ ಕ್ರಮಗಳನ್ನು ಕೈಗೊಂಡಿವೆ. ಭಾರತವು ತನ್ನ ಮಾರುಕಟ್ಟೆಗಳನ್ನು ಮುಚ್ಚದಿದ್ದರೆ, ದೇಶವು ಚಪಾತಿಗಳ ಕೊರತೆಯನ್ನು ಎದುರಿಸಬೇಕಾಗಿತ್ತು. ಏಕೆಂದರೆ ಭಾರತದ ಬಡವರೇ ಆಗಿರಲಿ ಇಲ್ಲ ಶ್ರೀಮಂತರೇ ಆಗಿರಲಿ, ಗೋಧಿಯನ್ನು ನೇರವಾಗಿ ಸೇವಿಸುವುದಿಲ್ಲ. ಅವರು ಚಪಾತಿ ಮಾಡಲು ಹಿಟ್ಟು ಖರೀದಿಸುತ್ತಾರೆ. ಮತ್ತು ಈ ವರ್ಷ ಗೋಧಿ ಬೆಳೆಗೆ 6.5 ಪ್ರತಿಶತ ಕಡಿಮೆ ಚಪಾತಿ ತಯಾರಾಗುತ್ತದೆ ಎನ್ನಲಾಗಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಕಳೆದ ವರ್ಷ, ಒಂದು ಕಿಲೋ ಭಾರತೀಯ ಗೋಧಿಯಿಂದ ಸುಮಾರು 770 ಗ್ರಾಂ ಹಿಟ್ಟನ್ನು ತಯಾರಿಸಲಾಗುತ್ತಿದ್ದರೆ, ಈ ವರ್ಷ ಅದು 720 ಗ್ರಾಂಗೆ ಇಳಿಯಬಹುದು ಎಂದು ಅಂದಾಜಿಸಲಾಗಿದೆ. ಯಾಕೆಂದರೆ 122 ವರ್ಷಗಳಲ್ಲಿ ಅತ್ಯಂತ ಹೆಚ್ಚು ತಾಪಮಾನವನ್ನು ಹೊಂದಿದ್ದ ಈ ವರ್ಷದ ಮಾರ್ಚ್ ಧಾನ್ಯದ ಸಂರಚನೆಯನ್ನೇ ಬದಲಾಯಿಸಿದೆ. ವ್ಯಾಪಾರಿಗಳು ತಮ್ಮ ಸಾಮಾನ್ಯ ಹಿಟ್ಟು-ಇಳುವರಿ ಕಟ್ಆಫ್ ಮಟ್ಟಕ್ಕಿಂತ ಕಡಿಮೆ ಇರುವ ಗೋಧಿಯನ್ನು ಖರೀದಿಸುತ್ತಿದ್ದಾರೆ. ಮೊದಲು ಹೆಕ್ಟೋಲಿಟರ್ ಪರೀಕ್ಷೆಯಲ್ಲಿ 76 ಕ್ಕಿಂತ ಕಡಿಮೆ ಸ್ಕೋರ್ ಮಾಡಿದ ಗೋಧಿಯನ್ನು ಖರೀದಿಸುತ್ತಿರಲಿಲ್ಲ . ಈಗ, ಉತ್ತಮ ಗೋಧಿಯ ಕೊರತೆಯಿಂದಾಗಿ 72 ಕ್ಕಿಂತ ಕೆಳಮಟ್ಟದ ಗೋಧಿಯನ್ನೂ ಖರೀದಿಸಲಾಗುತ್ತಿದೆ ಎನ್ನುತ್ತದೆ ಉದ್ಯಮದ ಮೂಲಗಳು.
ಸುಗ್ಗಿಯ ಆರಂಭದಲ್ಲಿ ಈ ವರ್ಷ ಭಾರತದ ಬೆಳೆ 111 ಮಿಲಿಯನ್ ಟನ್ ಇರಲಿದೆ ಎಂದು ಮೊದಲು ಸರ್ಕಾರ ಅಂದಾಜಿಸಿತ್ತು. ಆದರೆ ಅದು ಈಗ 100 ಮಿಲಿಯನ್ ಟನ್ಗಳನ್ನು ಮೀರುವುದೇ ಅನುಮಾನ ಎನ್ನಲಾಗಿದೆ. ಭಾರತ ಮತ್ತು ಪಾಕಿಸ್ತಾನವನ್ನು ಭಾದಿಸಿರುವ ಬಿಸಿಗಾಳಿಯನ್ನು ಈ ಪರಿಸ್ಥಿತಿಯ ಕಾರಣಕರ್ತ ಎಂದು ದೂರಬಹುದಾದರೂ ಮಾನವ ನಿರ್ಮಿತ ಸಂಕಷ್ಟವೂ ಇಲ್ಲದಿಲ್ಲ.
ಈಗ ಇದೇ ಒಟ್ಟು ಮೊತ್ತದಿಂದ 15 ಮಿಲಿಯನ್ ಮೆಟ್ರಿಕ್ ಟನ್ಗಳನ್ನು ಜಗತ್ತಿಗೆ ರಫ್ತು ಮಾಡಲು ತೆಗೆದುಕೊಳ್ಳುವುದು ಖಂಡಿತವಾಗಿಯೂ ದೂರದೃಷ್ಟಿಯ ಯೋಜನೆಯಲ್ಲ. ಯಾಕೆಂದರೆ, ಸರ್ಕಾರದ ಖರೀದಿ ಸಂಸ್ಥೆಯಾದ ಭಾರತೀಯ ಆಹಾರ ನಿಗಮವು ಈಗಾಗಲೇ ತನ್ನ ಧಾನ್ಯಗಳ ದಾಸ್ತಾನನ್ನು ತುಂಬಿಸಿಡಲು ವಿಫಲವಾಗಿದೆ. ಕಳೆದ ವರ್ಷ, ಇದು ತನ್ನ ದಾಸ್ತಾನುಗಳಿಗಾಗಿ 43 ಮಿಲಿಯನ್ ಮೆಟ್ರಿಕ್ ಟನ್ ಖರೀದಿಸಿತ್ತು. ಈ ವರ್ಷದ ಖರೀದಿಯ ಗುರಿಯನ್ನು ಅರ್ಧಕ್ಕಿಂತ ಕಡಿಮೆಗೆ ಕಡಿತಗೊಳಿಸಲಾಗಿದೆ. ಮೋದಿ ಆಡಳಿತವು ಸಾಂಕ್ರಾಮಿಕ ಸಮಯದಲ್ಲಿ ಪ್ರಾರಂಭಿಸಿದ ಉಚಿತ ಧಾನ್ಯ ಕಾರ್ಯಕ್ರಮವನ್ನು ಈ ವರ್ಷವೂ ಮುಂದುವರಿಸಿದರೆ ಈ ವರ್ಷ ಕೊಳ್ಳಲಿರುವ 19.5 ಮಿಲಿಯನ್ ಟನ್ಗಳ ಮತ್ತು ಪ್ರಸ್ತುತ ಎಫ್ಸಿಐ ಸಂಗ್ರಹದಲ್ಲಿರುವ 30 ಮಿಲಿಯನ್ ಟನ್ಗಳು ಸಾರ್ವಜನಿಕ ವಿತರಣೆಗೇ ಹೋಗುತ್ತವೆ. ದೇಶೀಯ ಮುಕ್ತ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾದರೆ ಸರ್ಕಾರದ ದಾಸ್ತಾನಿನಲ್ಲಿ ಗೋಧಿ ಉಳಿದಿರುವುದೇ ಇಲ್ಲ.
ಹಾಗೆಂದು ಸರ್ಕಾರದ ಬಳಿ ಪರಿಹಾರ ಇಲ್ಲವೇ ಇಲ್ಲ ಎಂದಲ್ಲ. ಬೆಲೆಗಳು ಗಗನಕ್ಕೇರಿದರೆ, ಸರ್ಕಾರವು ಸ್ಟಾಕ್ ಮಿತಿಗಳನ್ನು ಹೇರಬಹುದು ಮತ್ತು ವ್ಯಾಪಾರಿಗಳು ತಮ್ಮ ಸಂಗ್ರಹವನ್ನು ಬಿಡುಗಡೆ ಮಾಡಲು ಒತ್ತಾಯಿಸಬಹುದು. FCI ಸಹ ಗೋಧಿಗಿಂತ ಹೆಚ್ಚಿನ ಅಕ್ಕಿಯನ್ನು ಸಬ್ಸಿಡಿ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಇಳಿಸಬಹುದು. ಇನ್ನು ಈಜಿಪ್ಟ್ನಂತಹ ದೇಶಗಳೊಂದಿಗೆ ಭಾರತ ಮಾಡಿಕೊಂಡಿರುವ ‘ಸರ್ಕಾರದಿಂದ ಸರ್ಕಾರ’ಕ್ಕೆ ಪೂರೈಕೆ ಒಪ್ಪಂದಗಳಿಗೆ ಸರಿಹೊಂದಿಸಲು ಸುಮಾರು 10 ಮಿಲಿಯನ್ ಟನ್ಗಳಷ್ಟು ಗೋಧಿಯನ್ನು ಮುಕ್ತಗೊಳಿಸಬಹುದು.
ಹಾಗೆಯೇ ಲಿಥುವೇನಿಯಾ ಪ್ರಸ್ತಾಪಿಸಿದಂತೆ, ಉಕ್ರೇನ್ನಿಂದ ಧಾನ್ಯ ಸಾಗಣೆ ಮಾಡುವಂತಾಗಲು ಕಪ್ಪು ಸಮುದ್ರದ ಮೇಲೆ ರಷ್ಯಾ ಹೇರಿರುವ ದಿಗ್ಬಂಧನವನ್ನು ತೆಗೆದುಹಾಕಿದರೆ ಪ್ರಸ್ತುತ ಇರುವ ಗೋಧಿ ಕೊರತೆಯು ಸರಾಗವಾಗುತ್ತದೆ. ಅದರೊಂದಿಗೆ, ಭಾರತದ 1.4 ಶತಕೋಟಿ ಜನರಿಗೆ ಆಹಾರ ನೀಡುವ ಒತ್ತಡವೂ ಹೋಗಬಹುದು. ಆದರೆ ಹವಾಮಾನ ಬದಲಾವಣೆಯ ದೀರ್ಘಾವಧಿಯ ಬೆದರಿಕೆಯು ಹೋಗುವುದಿಲ್ಲ. ಜಾಗತಿಕ ತಾಪಮಾನವು ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಹೆಚ್ಚಾಗುತ್ತಿದ್ದಂತೆ, ದೇಶದ ಚಪಾತಿ ಸಮಸ್ಯೆ ಮತ್ತಷ್ಟು ಹೆಚ್ಚಲಿದೆ.