ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಮೇಲಿಂದ ಮೇಲೆ ದಾಳಿಗಳನ್ನ ನಡೆಸುತ್ತಿರೋ ಐಟಿ ಅಧಿಕಾರಿಗಳು ಈಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರ ಪೊಲಿಟಿಕಲ್ ಕ್ಯಾಂಪೇನ್ ಮಾಡುತ್ತಿದ್ದ ಡಿಸೈನ್ ಬಾಕ್ಸ್ ಸಂಸ್ಥೆಗೆ ಲಗ್ಗೆ ಹಾಕಿತ್ತು. 10 ತಿಂಗಳಿನಿಂದ ಸಂಸ್ಥೆ ಮೇಲೆ ಕಣ್ಣಿಟ್ಟಿದ್ದ ಐಟಿ ಅಧಿಕಾರಿಗಳು ಕೊನೆಗೂ ದಾಳಿ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದರು.
ಬೆಂಗಳೂರಿನಲ್ಲಿರುವ ಡಿಸೈನ್ ಬಾಕ್ಸ್ ಸಂಸ್ಥೆಗೆ ಐಟಿ ಅಧಿಕಾರಿಗಳು ಆಘಾತ ನೀಡಿದ್ದಾರೆ. ಪ್ಯಾಲೆಸ್ ರಸ್ತೆಯ ಕಾವೇರಿ ಥಿಯೇಟರ್ ಹಿಂಭಾಗ ಇರುವ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡರು. ಹಾಗೆ ಸಂಸ್ಥೆಯ ಮಾಲೀಕ ನರೇಶ್ ಅರೋರ ತಂಗಿದ್ದ ಹೋಟೆಲ್ ಮೇಲೂ ಐಟಿ ದಾಳಿ ಮಾಡಿತ್ತು. ಅಷ್ಟಕ್ಕೂ ಐಟಿ ಕೆಂಗಣ್ಣಿಗೆ ಗುರಿಯಾಗಿರೋ ಈ ಡಿಸೈನ್ ಬಾಕ್ಸ್ ಸಂಸ್ಥೆ ಏನು? ಇದರ ಕೆಲಸ ಏನು? ಎಂಬ ಚರ್ಚೆಯೀಗ ಜೋರಾಗಿದೆ. ಈ ಬೆನ್ನಲ್ಲೇ ಡಿಸೈನ್ ಬಾಕ್ಡ್ಸ್ ಸಂಸ್ಥೆಯ ಎಂಡಿ ನರೇಶ್ ಅರೋರಾ ಐಟಿ ದಾಳಿ ಬಗ್ಗೆ ಹೇಳಿಕೆ ನೀಡಿದ್ದಾರೆ.
ನಮ್ಮ ಮೇಲೆ ರಾಜಕೀಯ ದುರುದ್ದೇಶದಿಂದ ಐಟಿ ರೇಡ್ ಮಾಡಲಾಗಿದೆ ಎಂದು ಡಿಸೈನ್ ಬಾಕ್ಡ್ಸ್ ಸಂಸ್ಥೆಯ ಎಂಡಿ ನರೇಶ್ ಅರೋರಾ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ನರೇಶ್ ಅರೋರಾ, ನಾವು ವಿರೋಧ ಪಕ್ಷಗಳ ಜೊತೆಗೆ ಕೆಲಸ ಮಾಡ್ತಿದ್ದೇವೆ. ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಜೊತೆ ಕೆಲಸ ಮಾಡುತ್ತಿರುವುದರಿಂದ ನಮ್ಮನ್ನ ರಾಜಕೀಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಅಂತಾ ಆರೋಪಿಸಿದ್ದಾರೆ.
ನಮ್ಮ ಮೇಲಿನ ಐಟಿ ದಾಳಿಯಲ್ಲಿ ಅವರಿಗೆ ಏನೂ ಸಿಕ್ಕಿಲ್ಲ, ಕಾಂಗ್ರೆಸ್ನ ಪ್ರಮುಖ ನಾಯಕರ ಬಳಿ ಇಂಥದ್ದನ್ನ ಪತ್ತೆ ಹಚ್ಚಲು ಪ್ರಯತ್ನ ಪಡೋದು ಬಿಟ್ಟು ಒಂದು ಪ್ರೊಫೆಶನಲ್ ಫರ್ಮ್ ಆಗಿ, ಪೊಲಿಟಿಕಲ್ ಕ್ಯಾಂಪೇನ್ ಮ್ಯಾನೇಜ್ಮೆಂಟ್ ಫರ್ಮ್ ಆಗಿ ಕೆಲಸ ಮಾಡ್ತಿರೋ ನಮ್ಮ ಮೇಲೆ ದಾಳಿ ನಡೆಸಿದ್ದಾರೆ. ಈ ಮೂಲಕ ದೇಶದ ಪ್ರಮುಖ ವಿಪಕ್ಷದ ಪರವಾಗಿ ನಾವು ಕೆಲಸ ಮಾಡದಂತೆ ಮಾಡೋದು ಅವರ ಉದ್ದೇಶವಾಗಿದೆ. ಆಡಳಿತದಲ್ಲಿದ್ದುಕೊಂಡು, ಅಷ್ಟೊಂದು ಅಧಿಕಾರ ಇದ್ರೂ ಕೂಡ ವಿಪಕ್ಷದ ಜೊತೆ ಕೆಲಸ ಮಾಡುತ್ತಿವರರ ಮೇಲೆ ಕತ್ತಿ ಮಸೆಯುವಂತ ಸ್ಥಿತಿ ಅವ್ರಿಗೆ ಬಂದಿರೋದು ದುರದೃಷ್ಟಕರ ಅಂತ ಟ್ವೀಟ್ ಮಾಡಿದ್ದಾರೆ ನರೇಶ್ ಅರೋರಾ.
ಏನಿದು ಡಿಸೈನ್ ಬಾಕ್ಸ್?
ಡಿಸೈನ್ ಬಾಕ್ಸ್ ಸಂಸ್ಥೆ ರಾಜಕಾರಣಿಗಳ ಪರ ಸೋಷಿಯಲ್ ಮೀಡಿಯಾದಲ್ಲಿ ಬ್ರಾಂಡಿಂಗ್ ಮಾಡುತ್ತಿತ್ತು. ನರೇಶ್ ಅರೋರ 2011ರಲ್ಲಿ ಈ ಸಂಸ್ಥೆಯನ್ನು ಆರಂಭಿಸಿದ್ದಾರೆ. ದೇಶದಲ್ಲಿ ಹಲವು ರಾಜಕಾರಣಿಗಳ ಪಿಆರ್ ಸಂಸ್ಥೆಯಾಗಿ ಡಿಸೈನ್ ಬಾಕ್ಸ್ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಬ್ರಾಂಡಿಂಗ್ ಜವಾಬ್ದಾರಿಯನ್ನು ಡಿಸೈನ್ ಬಾಕ್ಸ್ ಹೊತ್ತುಕೊಂಡಿತ್ತು. ಆದರೆ ಪಕ್ಷದ ಬದಲು ಕೇವಲ ಡಿಕೆ ಶಿವಕುಮಾರ್ ಅವರನ್ನ ಮಾತ್ರ ಸಂಸ್ಥೆ ಪ್ರಮೋಟ್ ಮಾಡುತ್ತಿತ್ತು ಎಂದು ಹೇಳಲಾಗುತ್ತಿದೆ. ಪ್ರತಿದಿನ ಡಿಕೆ ಶಿವಕುಮಾರ್ ಅವರ ರಾಜಕೀಯ ಚಟುವಟಿಕಗಳ ಮೇಲ್ವಿಚಾರಣೆಯನ್ನು ಸಂಸ್ಥೆ ಮಾಡುತ್ತಿತ್ತು.
ದಾಳಿಗೆ ಕಾರಣಗಳೇನು?
ಡಿಸೈನ್ ಬಾಕ್ಸ್ ಸಂಸ್ಥೆ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಆನ್ಲೈನ್ ಪ್ರಚಾರ ನಡೆಸಿತ್ತು. ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಱಲಿ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಅಂದಿನಿಂದಲೂ ಸಂಸ್ಥೆ ಹಾಗೂ ಸಂಸ್ಥೆಯ ಮುಖ್ಯಸ್ಥ ನರೇಶ್ ಅರೋರಾ ಮೇಲೆ ಐಟಿ ನಿಗಾ ವಹಿಸಿತ್ತು. ಹಾಗೆ ಸಂಸ್ಥೆಯ ಬ್ಯಾಂಕಿಂಗ್ ವ್ಯವಹಾರಗಳ ಮೇಲೂ ಐಟಿ ಕಣ್ಣಿಟ್ಟಿತ್ತು.
ರಾಜಕಾರಣಿಗಳ ಸೋಷಿಯಲ್ ಮೀಡಿಯಾ ಬ್ರಾಂಡಿಂಗ್ ಡಿಸೈನ್ ಮಾಡುತ್ತಿದ್ದ ಡಿಸೈನ್ ಬಾಕ್ಸ್ ಸಂಸ್ಥೆಯ ಇಂದಿನ ದಿನಚರಿಯನ್ನು ಮಾತ್ರ ಐಟಿ ಅಧಿಕಾರಿಗಳು ಡಿಸೈನ್ ಮಾಡಿದ್ರು. ಇನ್ನು ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದ ಸಂಸ್ಥೆಯ ಮೇಲೆ ಐಟಿ ದಾಳಿ ನಡೆದಿರೋದು ರಾಜಕೀಯ ವಲಯದಲ್ಲೂ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಬೆಂಗಳೂರು, ದೆಹಲಿ, ಪಂಜಾಬ್ ಸೇರಿದಂತೆ ಹಲವು ಸಂಸ್ಥೆ ಹೊಂದಿರುವ ಕಚೇರಿಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ದಾಳಿ ವೇಳೆ ನರೇಶ್ ಅವರ ಬ್ಯಾಂಕ್ ಖಾತೆ, ವ್ಯವಹಾರದ ವಹಿವಾಟುಗಳನ್ನು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಅಲ್ಲದೆ, ಕಂಪನಿಯ ವ್ಯವಹಾರಗಳನ್ನೊಳಗೊಂಡಿರುವ ಲ್ಯಾಪ್ಟಾಪ್, ಹಾರ್ಡ್ಡಿಸ್ಕ್ ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ರಾಜಸ್ಥಾನ(Rajasthan), ಛತ್ತೀಸ್ಗಢ ರಾಜ್ಯದ ಚುನಾವಣೆ ವೇಳೆ ಸಾಮಾಜಿಕ ಜಾಲತಾಣದಲ್ಲಿ ಡಿಸೈನ್ ಬಾಕ್ಸ್ ಅಭಿಯಾನ ನಡೆಸಿತ್ತು. ರಾಜಕಾರಣಿಗಳ ಬ್ರಾಂಡಿಂಗ್ ಸೇವೆಯನ್ನು ಸಹ ಈ ಕಂಪನಿ ಒದಗಿಸುತ್ತದೆ. ಕಂಪನಿಯು ಎಲ್ಲಾ ರಾಜಕೀಯ ಪಕ್ಷಗಳ ಪರವಾಗಿ ಕೆಲಸ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷದ ಮುಖಂಡರ ಪರವಾಗಿ ತುಸು ಹೆಚ್ಚಾಗಿಯೇ ಕಾರ್ಯನಿರ್ವಹಿಸುತ್ತಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ ಎನ್ನಲಾಗಿದೆ.