• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ರಜಾತಂತ್ರದ ಬೇರುಗಳೂ ವಂಶಾಡಳಿತದ ಛಾಯೆಯೂ ನಾ ದಿವಾಕರ ! ಜನಸಮೂಹದಿಂದ ಉಗಮಿಸುವ ಧ್ವನಿಗಳೇ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಸಾಧ್ಯ

ಪ್ರತಿಧ್ವನಿ by ಪ್ರತಿಧ್ವನಿ
April 6, 2024
in Top Story, ಇದೀಗ, ದೇಶ, ರಾಜಕೀಯ
0
ಪ್ರಜಾತಂತ್ರದ ಬೇರುಗಳೂ ವಂಶಾಡಳಿತದ ಛಾಯೆಯೂ ನಾ ದಿವಾಕರ ! ಜನಸಮೂಹದಿಂದ ಉಗಮಿಸುವ ಧ್ವನಿಗಳೇ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಸಾಧ್ಯ
Share on WhatsAppShare on FacebookShare on Telegram

ಪ್ರಜಾಪ್ರಭುತ್ವದ ಮೂಲ ಧಾತು ಇರುವುದು ʼನುಡಿದಂತೆ ನಡೆʼ ಎನ್ನುವ ತಾತ್ವಿಕತೆಯಲ್ಲಿ. ವಿಶೇಷವಾಗಿ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಸಾರ್ವಭೌಮ ಪ್ರಜೆಗಳಿಂದಲೇ ಆಯ್ಕೆಯಾಗುವ ಚುನಾಯಿತ ಪ್ರತಿನಿಧಿಗಳು ಈ ತತ್ವವನ್ನು ಪಾಲಿಸುವುದು ಅತ್ಯವಶ್ಯ. ಇಲ್ಲವಾದರೆ ಇಡೀ ಸಾಮಾಜಿಕ ವ್ಯವಸ್ಥೆಯೇ ಸುಳ್ಳುಗಳ ಸಾಮ್ರಾಜ್ಯವಾಗಿಡುತ್ತದೆ. ಭಾರತದಲ್ಲಿ ಪ್ರಜಾಪ್ರಭುತ್ವದ ನೆಲೆಗಳನ್ನು ವೇದಕಾಲದಿಂದಲೇ ಗುರುತಿಸುವ ಬೌದ್ಧಿಕ ಕಸರತ್ತುಗಳ ನಡುವೆಯೇ ಸಮಕಾಲೀನ ರಾಜಕಾರಣದ ಹೆಜ್ಜೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಾರತೀಯ ಸಮಾಜದಲ್ಲಿ ಇಂದಿಗೂ ಸಹ ಪ್ರಜಾಪ್ರಭುತ್ವದ ಮೌಲ್ಯಗಳು ಸಾರ್ವಜನಿಕ ಪ್ರಜ್ಞೆಯಲ್ಲಿ ಬೇರೂರಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಚುನಾವಣೆ ಮತ್ತು ಪ್ರಾತಿನಿಧಿಕ ರಾಜಕಾರಣವನ್ನು ಬದಿಗಿಟ್ಟು ನೋಡಿದಾಗ, ತಳಮಟ್ಟದ ಸಮಾಜದಲ್ಲಿ ಬೇರೂರಿರುವ ಪಿತೃಪ್ರಧಾನ-ಊಳಿಗಮಾನ್ಯ ಧೋರಣೆಗಳು ನಮ್ಮ ಸಾಮಾಜಿಕ-ರಾಜಕೀಯ ಪ್ರಜ್ಞೆಯನ್ನೇ ನಿರ್ದೇಶಿಸುತ್ತಿರುವುದು ಇದಕ್ಕೆ ಮೂಲ ಕಾರಣವೂ ಆಗಿದೆ.

ADVERTISEMENT

ಭಾರತ ಒಂದು ಸ್ವತಂತ್ರ ಗಣರಾಜ್ಯವಾಗಿ, ಸಾರ್ವಭೌಮ ಪ್ರಜಾಸತ್ತೆಯಾಗಿ 76 ವರ್ಷಗಳನ್ನು ಕಳೆದಿದ್ದರೂ ಇಂದಿಗೂ ಸಹ ಸಾರ್ವಜನಿಕ ಸಂಕಥನಗಳಲ್ಲಿ ರಾಜಪ್ರಭುತ್ವ-ರಾಜಮನೆತನ ಎಂಬ ಪರಿಭಾಷೆ ಬಳಕೆಯಲ್ಲಿರುವುದು ನಮ್ಮ ಪ್ರಜ್ಞೆಯನ್ನು ಕಾಡಲೇಬೇಕಿದೆ. ರಾಜಪ್ರಭುತ್ವಗಳು ಕೊನೆಗೊಂಡು ಭಾರತದ ಪ್ರತಿಯೊಬ್ಬ ನಾಗರಿಕನೂ/ಳೂ ಶ್ರೀಸಾಮಾನ್ಯರೆಂದೇ ಪರಿಗಣಿಸುವ ಒಂದು ಸಂವಿಧಾನಕ್ಕೆ ಇನ್ನೇನು 75 ವರ್ಷಗಳು ತುಂಬಲಿದೆ. ಒಬ್ಬ ವ್ಯಕ್ತಿ-ಒಂದು ಮತ- ಒಂದು ಮೌಲ್ಯ ಎಂಬ ಉದಾತ್ತ ನಿಯಮಗಳನ್ನು ಅಳವಡಿಸಿಕೊಂಡಿರುವ ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಯನ್ನೂ ಶ್ರೀಸಾಮಾನ್ಯ ಎಂದೇ ಪರಿಗಣಿಸಬೇಕಾಗುತ್ತದೆ. ಆದರೆ 2024ರ ಚುನಾವಣೆಗಳ ಸಂದರ್ಭದಲ್ಲೂ ಮಾಧ್ಯಮಗಳಲ್ಲಿ  ʼ ಮಹಾರಾಜ ʼ  ʼ ರಾಜವಂಶಸ್ತ ʼ ಎಂಬ ಪದ ಬಳಕೆಯಲ್ಲಿರುವುದು ನಮ್ಮ ಅರಿವಿನ ಕೊರತೆಯನ್ನು ಎತ್ತಿ ತೋರಿಸುತ್ತದೆ.

ಪರಂಪರೆಯ ಪಳೆಯುಳಿಕೆಗಳು

ರಾಜಪ್ರಭುತ್ವವನ್ನು ವೈಭವೀಕರಿಸುವ ಮನಸ್ಥಿತಿಗೂ ಭಾರತದ ರಾಜಕಾರಣವನ್ನು ಗಂಭೀರವಾಗಿ ಕಾಡುತ್ತಿರುವ ವಂಶಾಡಳಿತ ಅಥವಾ ಕುಟುಂಬ ರಾಜಕಾರಣದ ಸಮಸ್ಯೆಗೂ ನೇರ ಸಂಬಂಧ ಇರುವುದನ್ನು ಗಮನಿಸಬೇಕಿದೆ. ಪ್ರಸಕ್ತ ಸನ್ನಿವೇಶದಲ್ಲಿ ಯಾವ ಬಂಡವಾಳಿಗ (ಬೂರ್ಷ್ವಾ) ಪಕ್ಷವೂ ಸಹ ಕುಟುಂಬ ರಾಜಕಾರಣದಿಂದ ಮುಕ್ತವಾಗಿಲ್ಲ ಎನ್ನುವುದನ್ನು ಗಮನಿಸುತ್ತಲೇ ಇದರ ಹಿಂದಿನ ಸಾಮಾಜಿಕ ಮನಸ್ಥಿತಿಯನ್ನೂ ಶೋಧಿಸಬೇಕಾಗುತ್ತದೆ. ವಂಶಾಡಳಿತವನ್ನು ಕೊನೆಗೊಳಿಸುವುದೇ ತನ್ನ ಪರಮ ಧ್ಯೇಯ ಎಂದು ಘೋಷಿಸುತ್ತಲೇ ಹತ್ತು ವರ್ಷಗಳ ಆಳ್ವಿಕೆ ಪೂರೈಸಿರುವ ಬಿಜೆಪಿ ʼಕುಟುಂಬʼ ಎನ್ನುವ ಪದವನ್ನೇ ಸಂಕುಚಿತಗೊಳಿಸಿ ಅರ್ಥಹೀನ ಮಾಡಿಬಿಟ್ಟಿದೆ. ಗಾಂಧಿ ಕುಟುಂಬದಿಂದಾಚೆಗೆ ಭಾರತದ ರಾಜಕಾರಣದಲ್ಲಿ ಯಾವ ಕುಟುಂಬವನ್ನೂ ಗುರುತಿಸದ ಬಿಜೆಪಿ ನಾಯಕರಿಗೆ ʼ ವಂಶಾಡಳಿತ ʼ ಎನ್ನುವುದೂ ಒಂದು ಚುನಾವಣಾ ಅಸ್ತ್ರವಾಗಿರುವುದು ವಾಸ್ತವ.

ಅಧಿಕಾರ ರಾಜಕಾರಣದ ಈ ಕ್ಷುಲ್ಲಕ ವಾದಸರಣಿಯಿಂದ ಹೊರನಿಂತು ನೋಡಿದಾಗ ನಮ್ಮ ಸಮಾಜದಲ್ಲಿ ಬೇರೂರಿರುವ ಊಳಿಗಮಾನ್ಯ ಮನಸ್ಥಿತಿ ಮತ್ತು ಅದನ್ನು ಮತ್ತಷ್ಟು ಗಟ್ಟಿಗೊಳಿಸುವ ಪಿತೃಪ್ರಧಾನ ಧೋರಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇಂದು ವ್ಯಾಪಕ ಚರ್ಚೆಯಲ್ಲಿರುವ ʼ ಕುಟುಂಬ ರಾಜಕಾರಣ ʼವನ್ನು ಪ್ರತ್ಯೇಕ ನೆಲೆಯಲ್ಲಿಟ್ಟು ಅಧಿಕಾರ ರಾಜಕಾರಣದ ʼವಂಶಾಡಳಿತʼದ ಬೇರುಗಳನ್ನು ಶೋಧಿಸಿದಾಗ ಗ್ರಾಮ ಪಂಚಾಯತಿಯಿಂದ ಸಂಸತ್ತಿನವರೆಗೂ ಇದು ವ್ಯವಸ್ಥಿತವಾಗಿ ಹರಡಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿರುವುದು ಕಾಣಿಸುತ್ತದೆ.  ಹಾಗೆಯೇ ಇಂದಿಗೂ ಭಾರತೀಯ ಸಮಾಜವನ್ನು ನಿರ್ದೇಶಿಸಿ ನಿಯಂತ್ರಿಸುವ ಶ್ರೇಣೀಕೃತ ಜಾತಿ ವ್ಯವಸ್ಥೆಗೂ ವಂಶಾಡಳಿತದ ಪರಿಕಲ್ಪನೆಗೂ ಇರುವ ಸಂಬಂಧಗಳೂ ಸ್ಪಷ್ಟವಾಗುತ್ತವೆ. ಜಾತಿ ಅಂತರಗಳಿಂದಾಚೆ ನೋಡಿದಾಗಲೂ ಭಾರತೀಯ ಸಮಾಜದಲ್ಲಿ  ʼವಂಶದ ಕುಡಿʼ ಸಾಮಾಜಿಕ ಪ್ರಾಬಲ್ಯ-ಆರ್ಥಿಕ ಆಧಿಪತ್ಯ ಸಾಧಿಸುವ ಒಂದು ಭೌತಿಕ ನೆಲೆಯಾಗಿ ಕಾಣುತ್ತದೆ.

ತನ್ನ ವಂಶದ ಕುಡಿಯನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಎತ್ತರಕ್ಕೇರಿಸುವ ಪುರುಷ ಸಮಾಜಕ್ಕೆ ಈ ಕುಡಿ ಹೆಣ್ಣಾಗುವುದೂ ಸಹ ಅಪಥ್ಯವೇ ಆಗುತ್ತದೆ. ಹಾಗಾಗಿಯೇ ಹೆಣ್ಣನ್ನು ಭ್ರೂಣಾವಸ್ಥೆಯಲ್ಲೇ ಕೊನೆಗೊಳಿಸಲಾಗುತ್ತದೆ. ವಂಶಾಡಳಿತದ ಪರಿಕಲ್ಪನೆಗೆ ಮೂಲ ನೆಲೆಯಾಗಿರುವ ರಾಜಪ್ರಭುತ್ವವನ್ನು ಇಂದಿಗೂ ವೈಭವೀಕರಿಸಿ, ಸಾಮಾನ್ಯ ಪ್ರಜೆಯಾಗಿರಬೇಕಾದ ವ್ಯಕ್ತಿಗಳನ್ನೂ ಮಹಾರಾಜ-ರಾಜವಂಶಸ್ತ ಎಂದು ಸಂಬೋಧಿಸುವ ಮೂಲಕ ಈ ಪಿತೃಪ್ರಧಾನತೆಯ ಬೇರುಗಳನ್ನು ಯಥಾಸ್ಥಿತಿಯಲ್ಲಿರಿಸಲು ಕುಟುಂಬ ರಾಜಕಾರಣ ನೆರವಾಗುತ್ತದೆ. ಈ ಸಂದರ್ಭದಲ್ಲಿ ಗಮನಿಸಲೇಬೇಕಾದ ಮತ್ತೊಂದು ಅಂಶ ಎಂದರೆ ನಮ್ಮ ಚುನಾಯಿತ ಪ್ರತಿನಿಧಿಗಳ ಸ್ಥಿರಾಸ್ತಿ-ಚರಾಸ್ತಿಗಳ ಹೆಚ್ಚಳ ಹಾಗೂ ಈ ಆಸ್ತಿಯನ್ನು ಸಂರಕ್ಷಿಸಲು ಅನುಸರಿಸುವ ಮಾರ್ಗಗಳು. ಆಸ್ತಿ ಗಳಿಕೆ, ಸಂರಕ್ಷಣೆ, ಸಂಪತ್ತಿನ ಕ್ರೋಢೀಕರಣ ಹಾಗೂ ವಿಸ್ತರಣೆ ಈ ಪ್ರಕ್ರಿಯೆಯಲ್ಲಿ ಕುಟುಂಬ ರಾಜಕಾರಣವೂ ಪ್ರಧಾನ ಪಾತ್ರ ವಹಿಸುವುದನ್ನು ಕಾಣಬಹುದು.

ಪ್ರತಿ ಚುನಾವಣೆಯಲ್ಲೂ ಕಾನೂನುಸಮ್ಮತವಾಗಿ ಅಭ್ಯರ್ಥಿಗಳು ಆಸ್ತಿ ಘೋಷಣೆ ಮಾಡಿದಾಗ, ಆ ಸಂಪತ್ತಿನ ಅಗಾಧತೆ ನಮ್ಮನ್ನು ಬೆರಗುಗೊಳಿಸುತ್ತದೆ ಆದರೆ ಕೆಲವೇ ವರ್ಷಗಳಲ್ಲಿ ಕಾಣುವ ಆಸ್ತಿಯ ಹೆಚ್ಚಳ ಪ್ರಶ್ನೆಗೊಳಗಾಗುವುದೇ ಇಲ್ಲ. ಚರ್ಚೆಗೊಳಗಾಗುವುದೂ ಇಲ್ಲ. ಒಬ್ಬ ನಾಗರಿಕ ಅಧಿಕಾರಿ ಅಥವಾ ಸರ್ಕಾರಿ ನೌಕರರಿಗೆ ಇಲ್ಲದ ಈ ರಿಯಾಯಿತಿ ರಾಜಕೀಯ ನಾಯಕರಿಗಿದೆ. ಈ ನಾಗರಿಕ ದೋಷವೇ ರಾಜಕೀಯ ನಾಯಕರ ಅನಿರ್ಬಂಧಿತ ಸಾಮ್ರಾಜ್ಯ ವಿಸ್ತರಣೆಗೆ ಕಾರಣವೂ ಆಗಿದೆ. ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಯೂ ತನ್ನ ಕಿರು ಆಸ್ತಿಯ ಮೇಲೆ ತೆರಿಗೆ ಪಾವತಿಸುತ್ತಾನೆ ಆದರೆ ಅತಿ ಶ್ರೀಮಂತರ ಸಂಪತ್ತಿನ ಮೇಲೆ ತೆರಿಗೆ ವಿಧಿಸಲಾಗುವುದಿಲ್ಲ. 2016ರಲ್ಲೇ ನರೇಂದ್ರ ಮೋದಿ ಸರ್ಕಾರ ಸಂಪತ್ತಿನ ತೆರಿಗೆಯನ್ನು ತೆಗೆದುಹಾಕಿದೆ. ಸಂವಿಧಾನವನ್ನು ಅಪ್ಪಿಕೊಳ್ಳುವ ಯಾವುದೇ ಬಂಡವಾಳಿಗ ಪಕ್ಷವೂ ಇದನ್ನು ಪ್ರಸ್ತಾಪಿಸುವುದೂ ಇಲ್ಲ. “ ನಾವು ಅಧಿಕಾರಕ್ಕೆ ಬಂದರೆ ಸಂಪತ್ತಿನ ತೆರಿಗೆ ಮರಳಿ ತರುತ್ತೇವೆ ” ಎಂದು ಘೋಷಿಸುವುದೂ ಇಲ್ಲ.

ವಂಶ-ಕುಟುಂಬ ಮತ್ತು ಪ್ರಾಬಲ್ಯ

ವಂಶಾಡಳಿತ ಅಥವಾ ಕುಟುಂಬ ರಾಜಕಾರಣದ ಮೂಲಸ್ಥಾಯಿ ಇರುವುದು ಇಲ್ಲಿ. ಕೃಷಿ ಭೂಮಿಯಿಂದ ಗಣಿಗಾರಿಕೆಯವರೆಗೆ ಯಜಮಾನಿಕೆಯನ್ನು ಸಾಧಿಸುತ್ತಾ ತಮ್ಮ ಒಡೆತನವನ್ನು ಸ್ಥಾಪಿಸಲು ಪಿತೃಪ್ರಧಾನ ಮೌಲ್ಯಗಳನ್ನು ಬಳಸಿಕೊಳ್ಳುವ ಊಳಿಗಮಾನ್ಯ ಸಮಾಜದ ಪುರುಷ ವಲಯ ನಗರ ಜೀವನಕ್ಕೆ ಬಂದ ಕೂಡಲೇ ಪೆಟ್ರೋಲ್‌ ಬಂಕ್‌, ಕನ್ವೆನ್ಷನ್‌ ಹಾಲ್‌, ಶಾಲೆ, ಆಸ್ಪತ್ರೆ ಮುಂದಾದ ಸ್ಥಿರಾಸ್ತಿಗಳನ್ನು ಮಹಿಳಾ ಸಂಗಾತಿಗೆ ವಹಿಸಿಬಿಡುತ್ತದೆ. ರಿಯಲ್‌ ಎಸ್ಟೇಟ್‌ ಮಾಫಿಯಾಗಳನ್ನು ನಿಯಂತ್ರಿಸುವ ರಾಜಕೀಯ ನಾಯಕರೂ ತಮ್ಮ ಹತ್ತಾರು ಬಡಾವಣೆಗಳನ್ನು ತಮ್ಮ ಶ್ರೀಮತಿಯರ ಅಥವಾ ಮಗಳು-ಸೊಸೆ-ಅಳಿಯಂದಿರ ಹೆಸರಿನಲ್ಲಿ ನೋಂದಾಯಿಸುವ ಮೂಲಕ ವ್ಯಕ್ತಿಗತ ನೆಲೆಯಲ್ಲಿ ಆಸ್ತಿಹೀನರಾಗಿ ಕಾಣಿಸಿಕೊಳ್ಳುತ್ತಾರೆ. ಇಲ್ಲಿ ನಮಗೆ ಕಾಣುವ ಸ್ತ್ರೀ ಒಡೆತನ ಸಮಾನತೆಗಿಂತಲೂ ಹೆಚ್ಚಾಗಿ ಆಸ್ತಿ ರಕ್ಷಣೆಯ ಕವಚವಾಗಿ ಕಾಣುತ್ತದೆ. ಕುಟುಂಬದ ಘನತೆ/ಗೌರವ ಕಾಪಾಡುವ ಸಾಂಸ್ಕೃತಿಕ ಜವಾಬ್ದಾರಿಯೊಂದಿಗೇ ಹೆಣ್ಣುಮಕ್ಕಳು, ಯಾವುದೇ ಫಲಾಪೇಕ್ಷೆಯಿಲ್ಲದೆ, ಕುಟುಂಬದ ಆಸ್ತಿಯನ್ನೂ ಕಾಪಾಡಬೇಕಾಗುತ್ತದೆ. ಲಾಭಾರ್ಥಿಗಳು ಮಾತ್ರ ಪುರುಷ ಸಂಕುಲವೇ ಆಗಿರುತ್ತದೆ.

ಇದರ ಒಂದು ಛಾಯೆಯನ್ನು ಚುನಾವಣೆಗಳ ಸಂದರ್ಭದಲ್ಲಿ ಸೀಟು ಹಂಚಿಕೆಯಾಗುವಾಗ ಕಾಣಬಹುದು. ಕುಟುಂಬ ರಾಜಕಾರಣ ರಾಜಕೀಯವಾಗಿ ಸ್ವೀಕೃತ ಪದ್ಧತಿ ಎಂದೇ ಒಪ್ಪಿಕೊಂಡರೂ, ಅಲ್ಲಿ ಹೆಚ್ಚಿನ ಫಲಾನುಭವಿಗಳು ಪುರುಷರೇ ಆಗಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಇಲ್ಲಿ ಮೊದಲು ಜಾತಿ ಮುಖ್ಯವಾದರೆ ಅನಂತರ ಕುಟುಂಬ ಪ್ರಧಾನವಾಗುತ್ತದೆ. ಸಾಮಾಜಿಕ ವಲಯದಲ್ಲಿ ತಮ್ಮ ಯಜಮಾನಿಕೆ/ಪ್ರಾಬಲ್ಯ/ಆಧಿಪತ್ಯವನ್ನು ಕಾಪಾಡಿಕೊಳ್ಳಲು ಕುಲಸ್ಥರನ್ನು ಅಥವಾ ಜಾತಿ ಬಾಂಧವರನ್ನು ಪೋಷಿಸಿ ಬೆಳೆಸುವ ರಾಜಕೀಯ ನಾಯಕರಿಗೆ ಪ್ರಥಮ ಆದ್ಯತೆ ಸಹಜವಾಗಿಯೇ ಕುಟುಂಬ ಸದಸ್ಯರೇ ಆಗಿರುತ್ತಾರೆ. ಹಾಗಾಗಿಯೇ ಸಮಾಜ/ಸಮುದಾಯದ ಮೇಲಿನ ಹಿಡಿತವನ್ನೇ ರಾಜಕೀಯ ವಲಯಕ್ಕೂ ವಿಸ್ತರಿಸುವ ನಾಯಕರು ತಮ್ಮ ಸ್ವಂತ ಮಕ್ಕಳನ್ನು, ಸೋದರ ಸಂಬಂಧಿಗಳನ್ನು, ವಿವಾಹ ಸಂಬಂಧಗಳನ್ನು ಬಳಸಿಕೊಂಡು ʼಜನಪ್ರತಿನಿಧಿʼ ಸ್ಥಾನಕ್ಕೆ ಅರ್ಹರನ್ನಾಗಿಸುತ್ತಾರೆ. ತಮ್ಮ ರಾಜಕೀಯ ಸಾಮ್ರಾಜ್ಯ ವಿಸ್ತರಣೆಗೆ ಗಂಡುಮಕ್ಕಳನ್ನೇ ಅವಲಂಬಿಸುವ ಈ ಧೋರಣೆಯ ಹಿಂದೆ ರಾಜಪ್ರಭುತ್ವದ ಮನಸ್ಥಿತಿ ಇರುವುದನ್ನು ಗಮನಿಸಬೇಕು.

ಇಲ್ಲಿ ಪುರುಷ ಪ್ರಧಾನ ಧೋರಣೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ವಿಶೇಷ ಸಂಶೋಧನೆ ಬೇಕಿಲ್ಲ. ಕುಟುಂಬದೊಳಗಿನಿಂದಲೇ ಚುನಾವಣೆಯ ಕಣಕ್ಕಿಳಿಯುವ ʼ ಸದಸ್ಯರ ʼನ್ನು ಗಮನಿಸಿದರೆ ಅಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಗೌಣವಾಗಿರುತ್ತದೆ. ಆಸ್ತಿ ಸಂರಕ್ಷಣೆಗೆ ತಮ್ಮ ಆಪ್ತ ಸಂಗಾತಿಯನ್ನು ಮುನ್ನಲೆಗೆ ತರುವ ರಾಜಕೀಯ ನಾಯಕರು ರಾಜಕೀಯ ಅಧಿಕಾರದ ಪ್ರಶ್ನೆ ಬಂದಾಗ ಅವರನ್ನು ಕೇವಲ ಅಲಂಕಾರಿಕ ವಸ್ತುಗಳಾಗಿ ಬಳಸಿಕೊಳ್ಳುವುದು ಸಾಮಾನ್ಯ ಸಂಗತಿ. ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತು ಅಂಗೀಕರಿಸಿದ್ದರೂ, 2024ರ ಚುನಾವಣೆಗಳಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನೇನೂ ನೀಡಲಾಗಿಲ್ಲ. ಆದರೆ ಕುಟುಂಬ ರಾಜಕಾರಣವನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಹರಿಯಾಣದಿಂದ ಕೋಲಾರದವರೆಗೆ ಎಲ್ಲ ರಾಜಕೀಯ ಪಕ್ಷಗಳೂ ʼಕುಟುಂಬ                         ಪ್ರಾತಿನಿಧ್ಯಕ್ಕೆʼ ಹೆಚ್ಚಿನ ಒಲವು ತೋರಿವೆ. ಸಂಭಾವ್ಯ ಮುಖ್ಯಮಂತ್ರಿ/ಪ್ರಧಾನಮಂತ್ರಿಯಾಗಿ ಬಿಂಬಿಸುವಾಗ ಅಪ್ಪಿತಪ್ಪಿಯೂ ಮಹಿಳೆಯ ಹೆಸರು ಕೇಳಿಬರುವುದಿಲ್ಲ. ಇದು ನಮ್ಮ ರಾಜಕೀಯ ವ್ಯವಸ್ಥೆಯ ಪುರುಷಾಧಿಪತ್ಯದ ಒಂದು ಸಂಕೇತ.

ರಾಜಕಾರಣದ ಔದ್ಯಮಿಕ ರೂಪ

ಗ್ರಾಮೀಣ ಭಾರತದ ಯಜಮಾನಿಕೆಯ ಸಂಸ್ಕೃತಿಯ ವಿಸ್ತೃತ ರೂಪವನ್ನೇ ನಾವು ನಗರ ಜೀವನದ ವಿಶಾಲ ಸಮಾಜದಲ್ಲೂ ಗುರುತಿಸಬಹುದು. ಭಾರತದ ಅಧಿಕಾರ ರಾಜಕಾರಣದಲ್ಲೂ ಇದೇ ಸುಪ್ತ ವಾಹಿನಿಯನ್ನು ಕಾಣಲು ಸಾಧ್ಯ. ಕೃಷಿ ಭೂಮಿ, ಕೈಗಾರಿಕೆ, ಸಾಫ್ಟ್‌ವೇರ್‌ ಉದ್ದಿಮೆ, ರಿಯಲ್‌ ಎಸ್ಟೇಟ್‌ ಸಾಮ್ರಾಜ್ಯ, ಗಣಿಗಾರಿಕೆ ಈ ಎಲ್ಲ ವಲಯಗಳಲ್ಲಿ ತಮ್ಮ ಬಂಡವಾಳ ಹೂಡಿಕೆಯ ಮೂಲಕ ಔದ್ಯಮಿಕ ಸಾಮ್ರಾಜ್ಯವನ್ನು ಕಟ್ಟಿಕೊಳ್ಳುವ ಪುರುಷ ಸಮಾಜ ಈ ಸಾಮ್ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಸಲುವಾಗಿಯೇ ವಂಶಾಡಳಿತದತ್ತ ಹೊರಳುತ್ತದೆ. ಬಂಡವಾಳಶಾಹಿ ಆರ್ಥಿಕತೆ ಈ ಹೊರಳುವಿಕೆಗೆ ಅಗತ್ಯವಾದ ಪರಿಕರಗಳನ್ನು ಸದಾ ಕಾಲಕ್ಕೂ ಒದಗಿಸುತ್ತಲೇ ಇರುತ್ತದೆ. ನವ ಉದಾರವಾದದ ವಾತಾವರಣದಲ್ಲಿ ಪಿತೃಪ್ರಾಧಾನ್ಯತೆ ಇನ್ನೂ ಗಟ್ಟಿಯಾಗುತ್ತಿರುವುದು, ಸಾಂಸ್ಕೃತಿಕ ವಲಯಗಳಲ್ಲೂ ಮಹಿಳಾ ಪ್ರಾತಿನಿಧ್ಯ ಗೌಣವಾಗುತ್ತಿರುವುದು ಇದನ್ನೇ ಸೂಚಿಸುತ್ತದೆ.

ಇಂದಿಗೂ ತನ್ನ ಸಾಂಪ್ರದಾಯಿಕ ಬೇರುಗಳನ್ನು ಕಾಪಾಡಿಕೊಂಡು ಬಂದಿರುವ ಭಾರತೀಯ ಸಮಾಜದಲ್ಲಿ ಊಳಿಗಮಾನ್ಯ ವ್ಯವಸ್ಥೆ ತಾತ್ವಿಕವಾಗಿ ಕುಸಿದಿರುವಂತೆ ಕಂಡರೂ, ಅದರ ಪಳೆಯುಳಿಕೆಗಳು ಸಾಂಸ್ಕೃತಿಕ ನೆಲೆಯಲ್ಲಿ, ರಾಜಕೀಯ ವಲಯದಲ್ಲಿ, ಔದ್ಯಮಿಕ ಕ್ಷೇತ್ರದಲ್ಲಿ ಯಥಾಸ್ಥಿತಿಯಲ್ಲಿದೆ. ಈ ವ್ಯವಸ್ಥೆಯೇ ಭಾರತದ ಪ್ರಜಾಪ್ರಭುತ್ವವನ್ನೂ ನಿರ್ದೇಶಿಸುತ್ತದೆ. ಬಂಡವಾಳಶಾಹಿ ಆರ್ಥಿಕತೆಯನ್ನು ಪೋಷಿಸುವ ನವ ಉದಾರವಾದಿ ಕಾರ್ಪೋರೇಟ್‌ ಮಾರುಕಟ್ಟೆಯು ಈ ವ್ಯವಸ್ಥೆಯನ್ನು ಕಾಪಾಡಲೆಂದೇ ರಾಜಕೀಯ ಪಕ್ಷಗಳನ್ನು ಪೋಷಿಸುತ್ತಿರುತ್ತದೆ. ಮಾರುಕಟ್ಟೆಯ ವಿಸ್ತರಣೆಗೆ ಮಹಿಳಾ ಸಂಕುಲವು ಜಾಹೀರಾತು ಸರಕಿನಂತೆ ಬಳಕೆಯಾಗುವಂತೆಯೇ ರಾಜಕೀಯ ಸಾಮ್ರಾಜ್ಯ ವಿಸ್ತರಣೆಗೆ ʼ ಮಹಿಳಾ ರಾಜಕಾರಣ ʼ ಅಲಂಕಾರಿಕ ಸೇತುವೆಯಾಗಿ ಬಳಕೆಯಾಗುತ್ತದೆ. ಮಹಿಳಾ ಮೀಸಲಾತಿ ಎಂಬ ಸಾಂವಿಧಾನಿಕ ಹೆಜ್ಜೆಯೂ ಇಂತಹ ಒಂದು ಸಾಧನವಾಗಿರುವುದು ಈ ಚುನಾವಣೆಯಲ್ಲೇ ಸ್ಪಷ್ಟವಾಗುತ್ತಿದೆ.  ಎರಡೂ ವಲಯಗಳಲ್ಲಿ ಲಿಂಗ ಸೂಕ್ಷ್ಮತೆ ಇಲ್ಲದಿರುವುದನ್ನು ಗಮನಿಸಲೇಬೇಕು.

ಕುಟುಂಬ ಮತ್ತು ವಂಶ ಎಂಬ ಎರಡು ಸ್ಥಾವರಗಳನ್ನು ಕಾಪಾಡುವ ಸಲುವಾಗಿಯೇ ʼ ವಂಶದ ಕುಡಿ ʼಯನ್ನು ತಮ್ಮ ಸಾಮ್ರಾಜ್ಯದ ಉತ್ತರಾಧಿಕಾರಿಯನ್ನಾಗಿ ಮಾಡುವ ಊಳಿಗಮಾನ್ಯ ಧೋರಣೆಯೇ ಇಂದು ಬಹುಚರ್ಚಿತವಾಗಿರುವ ಕುಟುಂಬ ರಾಜಕಾರಣ ಬೌದ್ಧಿಕ ಅಡಿಪಾಯವಾಗಿದೆ. ಈ ʼ ಕುಡಿ ʼ ಪುರುಷನೇ ಆಗಿರುವುದು ಕಾಕತಾಳೀಯವೇನಲ್ಲ. ಏಕೆಂದರೆ ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ವಂಶೋದ್ದಾರಕ ಕಾಣಬಹುದೇ ಹೊರತು ವಂಶೋದ್ದಾರಕಿ ಕಾಣಲಾಗುವುದಿಲ್ಲ. ಮೋಕ್ಷ ಪ್ರಾಪ್ತಿಗಾಗಿಯೇ ಶಾಸ್ತ್ರ, ಸಂಪ್ರದಾಯ, ಧಾರ್ಮಿಕ ವಿಧಿವಿಧಾನಗಳನ್ನು ಅವಂಬಿಸುವ ಸಮಾಜದಲ್ಲಿ ಮೋಕ್ಷದ ಹೆದ್ದಾರಿ ನಿರ್ಮಿಸುವುದೂ ಪುರುಷ ಸಮಾಜವೇ ಆಗಿರುತ್ತದೆ. ಪಿತೃಪ್ರಧಾನ ಹಾಗೂ ಊಳಿಗಮಾನ್ಯ , ಈ ಎರಡೂ ಸಾಂಸ್ಕೃತಿಕ ವಿದ್ಯಮಾನಗಳ ಜಂಟಿ ಪ್ರಾಯೋಜಕತ್ವದಲ್ಲೇ ಭಾರತದ ಅಧಿಕಾರ ರಾಜಕಾರಣವೂ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತದೆ. ಮಹಿಳಾ ಪ್ರಾತಿನಿಧ್ಯದ ಕೊರತೆಯನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ.

ಒಂದು ಸಂವಿಧಾನ ಬದ್ಧ ಗಣತಂತ್ರದಲ್ಲಿ ಪ್ರತಿಯೊಬ್ಬ ನಾಗರಿಕ ಪ್ರಜೆಯೂ ಶ್ರೀಸಾಮಾನ್ಯನೇ ಆಗಿರಬೇಕು. ಪ್ರಜಾಪ್ರಭುತ್ವ ಮತ್ತು ಭಾರತದ ಸಂವಿಧಾನ ಅಪೇಕ್ಷಿಸುವಂತೆ ಒಬ್ಬ ವ್ಯಕ್ತಿ-ಒಂದು ಮತ-ಒಂದು ಮೌಲ್ಯ ಸಾಕಾರಗೊಳ್ಳಬೇಕಾದರೆ, ಭಾರತದ ಅಧಿಕಾರ ರಾಜಕಾರಣವನ್ನು ಊಳಿಗಮಾನ್ಯ ಮನಸ್ಥಿತಿಯಿಂದ ಮುಕ್ತಗೊಳಿಸಬೇಕಿದೆ. ಇದು ಗ್ರಾಮ ಮಟ್ಟದಿಂದಲೇ ಆರಂಭವಾಗಬೇಕಾದ ಪ್ರಕ್ರಿಯೆ. ಇದರ ಛಾಯೆಯಲ್ಲೇ ಬೆಳೆಯುವ ಪಿತೃಪ್ರಾಧಾನ್ಯತೆಯನ್ನು ತಳಮಟ್ಟದ ಸಾಂಸ್ಕೃತಿಕ ನೆಲೆಯಿಂದಲೇ ಉಚ್ಚಾಟಿಸಬೇಕಿದೆ. ಈ ಎರಡೂ ಸಹ ಸಾಂಪ್ರದಾಯಿಕ ಸಮಾಜದಲ್ಲಿ ಬೇರೂರಿರುವಂತಹ ಮನಸ್ಥಿತಿಯಾಗಿದ್ದು, ತಳಮಟ್ಟದ ಸಮಾಜದ ಕೆಳಸ್ತರದಿಂದಲೇ ಜನಜಾಗೃತಿಯನ್ನು ಮೂಡಿಸುವ ಮೂಲಕ ಎರಡೂ ಪಿಡುಗುಗಳನ್ನು ಕೊನೆಗೊಳಿಸಬೇಕಿದೆ. ಹಾಗಾದಲ್ಲಿ ಮಾತ್ರ ಪ್ರಜಾಸತ್ತಾತ್ಮಕ ಭಾರತವು ಕುಟುಂಬ ರಾಜಕಾರಣ ಅಥವಾ ವಂಶಾಡಳಿತದಿಂದ ಮುಕ್ತವಾಗಲು ಸಾಧ್ಯ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ನಾಗುರದ ಸ್ವಲ್ಪ ಭಾಗ ಈಗ ಶಾಶ್ವತವಾಗಿ ಸುಪ್ರೀಂ ಕೋರ್ಟ್‌ನ ಭಾಗ ! ಚರ್ಚೆಗೆ ಗ್ರಾಸವಾದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿಕೆ!

Next Post

ಸದ್ದಿಲ್ಲದೆ ಆಪರೇಷನ್ ಶುರು ಮಾಡಿದ ಗಾಲಿ ಜನಾರ್ದನ ರೆಡ್ಡಿ.

Related Posts

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ
ರಾಜಕೀಯ

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

by ಪ್ರತಿಧ್ವನಿ
April 25, 2026
0

ನವದೆಹಲಿ: ದೇಶದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಬೆಳವಣಿಗೆಯೊಂದರಲ್ಲಿ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕ ರಾಘವ ಚಡ್ಡಾ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದು ಮಹತ್ವದ ರಾಜಕೀಯ...

Read moreDetails
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
Next Post
ಸದ್ದಿಲ್ಲದೆ ಆಪರೇಷನ್ ಶುರು ಮಾಡಿದ ಗಾಲಿ ಜನಾರ್ದನ ರೆಡ್ಡಿ.

ಸದ್ದಿಲ್ಲದೆ ಆಪರೇಷನ್ ಶುರು ಮಾಡಿದ ಗಾಲಿ ಜನಾರ್ದನ ರೆಡ್ಡಿ.

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada