ನಾ.ದಿವಾಕರ : ವಿಶೇಷ ಲೇಖನ..
ಭಾಗ 2
ದೆಹಲಿಯಲ್ಲಿ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗಾಗಿ ಹೋರಾಡುತ್ತಿರುವ ಯುವ ಜನಾಂಗದ ಮುಂದೆ ನಾವು ಎಂತಹ ಮಾದರಿಯನ್ನು ಇಡುತ್ತಿದ್ದೇವೆ ? ಒಂದು ಸಾಂವಿಧಾನಿಕ ಸಂಸ್ಥೆಯ ಕಾರ್ಯನಿರ್ವಹಣೆಗೆ ಸಾರ್ವಕಾಲಿಕ ಮಾದರಿಯನ್ನು ದೇಶದ ಮುಂದಿಟ್ಟಿದ್ದ ಸನ್ಮಾನ್ಯ ಟಿ.ಎನ್. ಶೇಷನ್ ಅವರನ್ನು ಈ ಯುವ ಜನಾಂಗಕ್ಕೆ ಹೇಗೆ ಪರಿಚಯಿಸುವುದು ? ವರ್ತಮಾನದ ಬೆಳವಣಿಗೆಗಳ ನಡುವೆ ಈ ಯುವ ಮನಸ್ಸುಗಳಿಗೆ ಶೇಷನ್ ಒಂದು ವಿದ್ಯಮಾನವಾಗಿ ಅಥವಾ ಜನಪದ ಕತೆಯ ಮಾದರಿ ಕಾಣುತ್ತದೆ. ಭಾರತ ಹೀಗೂ ಇತ್ತೇ ? ಎಂಬ ಪ್ರಶ್ನೆ ನಿಸ್ಸಂಶಯವಾಗಿ ಅವರಲ್ಲಿ ಮೂಡುತ್ತದೆ. ಈ ಜಿಜ್ಞಾಸೆಗಳ ನಡುವೆ ಯುವ ಜನಾಂಗದ ಪ್ರತಿರೋಧದ ದನಿಗಳನ್ನು ಹತ್ತಿಕ್ಕಲು ಕೇಂದ್ರ ಬಿಜೆಪಿ ಸರ್ಕಾರ ಅನುಸರಿಸುತ್ತಿರುವ ಕ್ರಮಗಳು ಯುವ ಮನಸ್ಸುಗಳನ್ನು ಮತ್ತಷ್ಟು ಘಾಸಿಗೊಳಿಸುತ್ತವೆ.

ಡಾ. ಬಿ.ಆರ್. ಅಂಬೇಡ್ಕರ್ ಸಾಮಾನ್ಯ ಜನತೆಯ ಪ್ರತಿಭಟನೆ ಮತ್ತು ಹೋರಾಟಗಳನ್ನು ಕುರಿತು “ ಸಾಮಾಜಿಕ ಮತ್ತು ಆರ್ಥಿಕ ಗುರಿಗಳನ್ನು ಸಾಧಿಸಲು ನಾಗರಿಕರು ಸಾಂವಿಧಾನಿಕ ವಿಧಾನಗಳಿಗೆ ಬದ್ಧವಾಗಿರಬೇಕು. ಸಾಂವಿಧಾನಿಕ ಚೌಕಟ್ಟು ಅಸ್ತಿತ್ವಕ್ಕೆ ಬಂದ ನಂತರ ಹಿಂಸಾತ್ಮಕ ಮಾರ್ಗ, ಶಾಸನ ಉಲ್ಲಂಘನೆ, ಅಸಹಕಾರ ಮತ್ತು ಸತ್ಯಾಗ್ರಹದಂತಹ ಮಾರ್ಗಗಳನ್ನು ಕೈಬಿಡಬೇಕು ” ಎಂದು ವಿನಂತಿಸುತ್ತಾರೆ. ಬಿಜೆಪಿ ವಕ್ತಾರರು ಎನ್ಡಿಟಿವಿ ಚರ್ಚೆಯಲ್ಲಿ ಇದನ್ನು ಪ್ರಸ್ತಾಪಿಸಿ ಈಗ ನಡೆಯುತ್ತಿರುವ ಜಂತರ್ ಮಂತರ್ ಹೋರಾಟವನ್ನು ಖಂಡಿಸುತ್ತಾರೆ. ಆದರೆ ಅಂಬೇಡ್ಕರ್ ಅವರ ಈ ಮಾತುಗಳಲ್ಲಿ ʼ ಸಾಂವಿಧಾನಿಕ ಚೌಕಟ್ಟು ಅಸ್ತಿತ್ವಕ್ಕೆ ಬಂದ ನಂತರ ʼ ಎಂಬ ವಾಕ್ಯವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈಗಿನ ಆಳುವ ಸರ್ಕಾರಗಳು ಈ ಔದಾತ್ಯಕ್ಕೆ ಬದ್ಧವಾಗಿವೆಯೇ ಎಂದೂ ನೋಡಬೇಕಾಗುತ್ತದೆ.
ಜಂತರ್ ಮಂತರ್ ಪ್ರದೇಶವನ್ನೇ ನಿಷೇಧಿತ ವಲಯವನ್ನಾಗಿ ಘೋಷಿಸುವುದು, ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲು ಶುಲ್ಕ ಪಾವತಿಸುವ ನಿಯಮ ರೂಪಿಸುವುದು, ಎಲ್ಲ ಪ್ರಮುಖ ನಗರಗಳಲ್ಲೂ ನಾಗರಿಕ ಪ್ರತಿಭಟನೆಗಳಿಗೆ ನಿರ್ದಿಷ್ಟ ಜಾಗಗಳನ್ನು ನಿಗದಿಪಡಿಸುವುದು ಇದಾವುದೂ ಸಾಂವಿಧಾನಿಕ ಮಾನ್ಯತೆ ಪಡೆಯುವುದಿಲ್ಲ. ತಾವೇ ಚುನಾಯಿಸಿದ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಧ್ವನಿಗೂಡಿಸಲು ಜನರು ಜಾಗಕ್ಕಾಗಿ ಹುಡುಕಾಡುವ ಕಲ್ಪನೆಯೇ ಅಪ್ರಜಾತಾಂತ್ರಿಕವಾದುದು. ಸರ್ಕಾರಗಳ ಈ ನೀತಿಯನ್ನು ಗೌರವಿಸಿ, ನಿಗದಿತ ಸ್ಥಳದಲ್ಲೇ ಹೋರಾಟಗಳನ್ನು ಮುಂದುವರೆಸಿದರೂ, ಈ ದೇಶದ ಪೊಲೀಸ್ ವ್ಯವಸ್ಥೆ ಪ್ರತಿಭಟನಾಕಾರರನ್ನು ನಿಯಂತ್ರಿಸುವ ಬಗೆ ಹೇಗಿದೆ ? ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ನೊಂದ-ಅವಕಾಶವಂಚಿತ ಜನರ ಪ್ರತಿರೋಧದ ದನಿಯನ್ನು ಹತ್ತಿಕ್ಕುವುದು ಸಾಂವಿಧಾನಿಕವಾಗಿ ಸಮ್ಮತವಾಗುವುದೇ ?
ಆಡಳಿತ ಕ್ರೌರ್ಯ ಮತ್ತು ಕಾನೂನು
ದೆಹಲಿಯಿಂದ ಬೆಂಗಳೂರಿನವರೆಗೂ ಕಾಣುವ ಸಮಾನ ದೃಶ್ಯ (Common scene) ಎಂದರೆ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಪಡೆಗಳು , ಮೀಸಲು ಸೇನಾ ಪಡೆಗಳು ನಡೆಸುವ ದೌರ್ಜನ್ಯ, ಹಿಂಸಾತ್ಮಕ ದಬ್ಬಾಳಿಕೆ ಮತ್ತು ಕ್ರೂರ ದಮನಕಾರಿ ಕ್ರಮಗಳು. ವಯಸ್ಸು, ಅಂತಸ್ತು, ಸ್ಥಾನಮಾನ, ಹೆಣ್ಣು ಗಂಡು ಬೇಧವಿಲ್ಲದೆ, ಯುವ ವಿದ್ಯಾರ್ಥಿ ವಿದ್ಯಾರ್ಥಿನಿಯರೂ, ಮಾಧ್ಯಮ ಪ್ರತಿನಿಧಿಗಳೂ, ನ್ಯಾಯ ವ್ಯವಸ್ಥೆಯನ್ನು ಪ್ರತಿನಿಧಿಸುವ ವಕೀಲರೂ ಒಂದೇ ರೀತಿಯ ದೌರ್ಜನ್ಯವನ್ನು ಎದುರಿಸುತ್ತಿರುವುದು ಸಾಮಾನ್ಯವಾಗಿ ಕಾಣುವ ದೃಶ್ಯ. ದೆಹಲಿಯಲ್ಲಿ 30ಕ್ಕೂ ಹೆಚ್ಚು ಪತ್ರಿಕಾ ವರದಿಗಾರರ ವಿರುದ್ಧ ಪೊಲೀಸರ ಕ್ರೂರ ದಾಳಿ ಚಿತ್ರೀಕರಣಗೊಂಡು ಹರಿದಾಡುತ್ತಿದೆ. ಯುವ ವಿದ್ಯಾರ್ಥಿನಿಯರೊಡನೆ ಅಸಭ್ಯ ವರ್ತನೆಯ ದೃಶ್ಯಗಳು ಬಹಿರಂಗವಾಗುತ್ತಿವೆ. ಹೆಣ್ಣು ಮಕ್ಕಳನ್ನು ಅಕ್ಷರಶಃ ಪ್ರಾಣಿಗಳ ಹಾಗೆ ಎಳೆದೊಯ್ಯುವ ದೃಶ್ಯಗಳು ಪ್ರಜ್ಞಾವಂತ ದೇಶವನ್ನು ಕಂಗೆಡಿಸುತ್ತಿವೆ.
ಇದನ್ನೂ ಓದಿ : ಸಿದ್ದರಾಮಯ್ಯ ಧೈರ್ಯವಾಗಿ ಎದುರಿಸಿ ಫೈಟ್ ಮಾಡಬೇಕಿತ್ತು : ಗುರುವಿನ ಬೆಂಬಲಕ್ಕೆ ನಿಂತ ಶಿಷ್ಯ ಜಾರಕಿಹೊಳಿ..!
ವಿಕಾಸದ ಹಾದಿಯಲ್ಲಿ ಸಾಗುತ್ತಿರುವ ಭಾರತ ಹೀಗಿರಲಿದೆ ಎಂದು ನಾವು ಜೆನ್ ಝಿ-ಯುವ ಜನಾಂಗದ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆಯೇ ? ಮಾಜಿ ಐಪಿಎಸ್ ಅಧಿಕಾರಿ ಹಾಗೂ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಶಸ್ತ್ರಸಜ್ಜಿತ ಅಥವಾ ಗಲಭೆ ನಿಯಂತ್ರಣ ಪೊಲೀಸರನ್ನು ತಕ್ಷಣವೇ ನಿಯೋಜಿಸುವ ಬದಲು, ನಾಗರಿಕ ರಕ್ಷಣಾ ಸ್ವಯಂಸೇವಕರನ್ನು (CDVs) ರಕ್ಷಣೆಯ ಮೊದಲ ಹಂತವಾಗಿ ನಿಯೋಜಿಸುವಂತೆ ಪ್ರಸ್ತಾಪಿಸಿದ್ದಾರೆ.

ಪ್ರತಿಭಟನಾಕಾರರ ವಿರುದ್ಧ ಆರಂಭಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸಲು, ಲಾಠಿಗಳಿಲ್ಲದೆ, ಬೆತ್ತದ ಗುರಾಣಿಗಳು, ದೇಹದ ರಕ್ಷಾಕವಚ ಮತ್ತು ಹೆಲ್ಮೆಟ್ಗಳನ್ನು ಹೊಂದಿರುವ ತರಬೇತಿ ಪಡೆದ ನಾಗರಿಕ ರಕ್ಷಣಾ ಸಿಬ್ಬಂದಿಯನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಒಂದು ವೇಳೆ ಯುವ ಜನಾಂಗ ಬ್ಯಾರಿಕೇಡ್ಗಳು ಅಥವಾ ಆರಂಭಿಕ ರೇಖೆಯನ್ನು ಭೇದಿಸಿದರೆ, ಮಹಿಳಾ ಪೊಲೀಸ್ ಸಿಬ್ಬಂದಿಯನ್ನು, ಜನಸಂದಣಿಯನ್ನು ನಿಯಂತ್ರಿಸಲಾಗದಿದ್ದರೆ ಕೊನೆಯ ಉಪಾಯವಾಗಿ ಸಶಸ್ತ್ರ ಗಲಭೆ ಪೊಲೀಸರು ಅಥವಾ ಜಲ ಫಿರಂಗಿಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ. https://theprint.in/india/kiran-bedi-suggests-using-civil-defence-volunteers-as-first-line-of-defence-in-students-protests/2994741/
ಈ ʼನಾಗರಿಕ ರಕ್ಷಣಾ ಸ್ವಯಂ ಸೇವಕರನ್ನು ಆಯ್ಕೆ ಮಾಡುವವರು ಯಾರು ? ಯಾವ ಸಮಾಜಗಳಿಂದ, ಸಮಾಜಗಳ ಯಾವ ಸ್ತರಗಳಿಂದ ಈ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗುತ್ತದೆ ? ಈ ಪಡೆಗಳ ಜವಾಬ್ದಾರಿ, ಕಾರ್ಯಾಚರಣೆಯ ವ್ಯಾಪ್ತಿ ಮತ್ತು ಉತ್ತರದಾಯಿತ್ವವನ್ನು ಹೇಗೆ ನಿರ್ಧರಿಸಲಾಗುತ್ತದೆ ? ಒಂದು ವೇಳೆ ಈ ಸ್ವಯಂ ಸೇವಕ ಪಡೆಗಳಿಂದಲೇ ದೌರ್ಜನ್ಯ ನಡೆದರೆ ಉತ್ತರ ನೀಡುವವರು ಯಾರು ? ಈ ಪ್ರಶ್ನೆಗಳು ಕಿರಣ್ ಬೇಡಿಯವರಿಗೆ ಹೊಳೆಯುವುದೇ ಇಲ್ಲ. ಇನ್ನೂ ಶೋಚನೀಯ ಸಂಗತಿ ಎಂದರೆ, ನೊಂದ-ಅವಕಾಶವಂಚಿತ-ಹತಾಶ ಯುವ ಜನಾಂಗದ ಕುಂದುಕೊರತೆಗಳನ್ನು , ಹತಾಶ ಮನವಿಗಳಿಗಳನ್ನು, ಹಕ್ಕೊತ್ತಾಯಗಳನ್ನು ಸಂಯಮದಿಂದ ಆಲಿಸಿ, ಮಾತುಕತೆಗಳ ಮೂಲಕ ಪರಿಹಾರಗಳನ್ನು ಸೂಚಿಸುವ ಸಲಹೆ ಯಾವ ಮೂಲೆಯಿಂದಲೂ ಕೇಳಿಬರುವುದಿಲ್ಲ. ಕಳೆದ ಹಲವು ದಿನಗಳ ಹೋರಾಟಗಳ ಹೊರತಾಗಿಯೂ ದೇಶದ ಪ್ರಧಾನ ಮಂತ್ರಿ, ಗೃಹ ಸಚಿವರು ಮೌನವಾಗಿರುವುದು ಏನನ್ನು ಸೂಚಿಸುತ್ತದೆ ?
ಭವಿಷ್ಯದ ತಲೆಮಾರಿಗೆ ಹಾದಿ ?????
ಜೆನ್ ಝಿ-ಮಿಲೆನಿಯಂ ಯುವ ಜನಾಂಗದ ಮುಂದೆ ನಾವು ಎಂತಹ ಆಡಳಿತ ವ್ಯವಸ್ಥೆಯನ್ನು ಪ್ರಸ್ತುತಪಡಿಸುತ್ತಿದ್ದೇವೆ ? ಮತದಾರರ ಪಟ್ಟಿಯ (Electoral Rolls) ಪರಿಷ್ಕರಣೆ, ಬಿಟ್ಟುಹೋದ ಮತದಾರರ ಮರು ಸೇರ್ಪಡೆ, ಚುನಾವಣಾ ವ್ಯವಸ್ಥೆಯ ಸಮಗ್ರ ಸುಧಾರಣೆ ಈ ಎಲ್ಲ ಸಾಂವಿಧಾನಿಕ ಪ್ರಕ್ರಿಯೆಯಗಳಿಂದಾಚೆ ನೋಡಿದಾಗ, ಅಲ್ಲೊಂದು ಯುವ ಭಾರತ ಗೋಚರಿಸುತ್ತದೆ. ಅಲ್ಲಿ ತಮ್ಮ ನೋವನ್ನು ಹೇಳಿಕೊಂಡ ತಪ್ಪಿಗಾಗಿ ಪೊಲೀಸ್ ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳ ಕಂಬನಿ ಕಾಣಬೇಕಲ್ಲವೇ ? ಈ ಯುವ ಜನಾಂಗದ ಹೋರಾಟ ಯಾರಿಗಾಗಿ ? ಕೇವಲ ಅವರ ವಯೋಮಾನದ ಸಮಾಜದ ಒಳಿತಿಗಾಗಿಯೇ ಅಥವಾ ಕೇವಲ ಈ ಹೊತ್ತಿನ ಸಮಾಜದ ಸುಸ್ಥಿತಿಗಾಗಿಯೇ ? ಅಲ್ಲವಲ್ಲಾ.

ಜಿರಳೆ, ನೊಣ ಎಂದೆಲ್ಲಾ ಬಣ್ಣಿಸಲಾಗುತ್ತಿರುವ ಈ ಯುವ ಜನಾಂಗದ ಸಾಮೂಹಿಕ ದನಿಯ ಹಿಂದೆ ಭವಿಷ್ಯದ ಕನಸುಗಳಿವೆ ಅಲ್ಲವೇ ? 2047ರ ವಿಕಸಿತ ಭಾರತದ ಸುಂದರ ಕಲ್ಪನೆ ಅವರಲ್ಲಿ ಸುಂದರ ಕನಸುಗಳನ್ನು ಹುಟ್ಟುಹಾಕಿದೆಯಲ್ಲವೇ ? ಈ ಕನಸುಗಳು ಸಾಕಾರಗೊಳ್ಳಬೇಕಾದರೆ ನಾವು ಅನುಸರಿಸಬೇಕಾದ ಆಡಳಿತ ವ್ಯವಸ್ಥೆ, ಕಾನೂನು ನಿಯಂತ್ರಣ ವಿಧಾನ ಹೇಗಿರಬೇಕು ? ಜಂತರ್ ಮಂತರ್ 2.0 ನೋಡಿದಾಗ ಈ ಯುವ ಮನಸ್ಸುಗಳಲ್ಲಿ ಏನೆಲ್ಲಾ ಗೊಂದಲಗಳು ಸುಳಿದಾಡಬಹುದು ? 2047ರ ವಿಕಸಿತ ಭಾರತ 1947ರ ಕನಸಿನ ಭಾರತದ ತದ್ರೂಪು ಆಗಿರುತ್ತದೆ ಎಂಬ ಆಶಾಭಾವನೆ 2026ರಲ್ಲೇ ಅಳಿಸಿಹೋಗುತ್ತಿದೆಯೇ ? ಆಡಳಿತ ಪರಿಭಾಷೆಯಲ್ಲಿ ಪ್ರತಿರೋಧ, ಅರಾಜಕತೆ (Anarchy), ಸಾರ್ವಜನಿಕ ಉಪದ್ರವ (Public Nuisance) ಎಂದೆಲ್ಲಾ ವ್ಯಾಖ್ಯಾನಿಸಲಾಗುವ ಯುವ ಜನಾಂಗದ ನೋವು, ಹತಾಶೆ , ಆತಂಕಗಳನ್ನು ಯಾರ ಬಳಿ ನಿವೇದಿಸಬೇಕು ?
ಈ ದನಿಗಳನ್ನು ನಿರ್ವಹಿಸಲು (Manage) ಮೂರು ಹಂತದ ನಿಯಂತ್ರಣಾ ಬೇಲಿಗಳನ್ನು ಪ್ರಸ್ತಾಪಿಸುವ ನಮಗೆ, ಸಮಾಜದ ಅಂತರಾಳವನ್ನು ಪ್ರತಿನಿಧಿಸುವ ಈ ಯುವ ದನಿಗಳನ್ನು ಸಂಯಮದಿಂದ ಆಲಿಸುವ ವಿಧಾನಗಳೇಕೆ ಹೊಳೆಯುತ್ತಿಲ್ಲ. ನಾಗರಿಕರ ಕಾರ್ಮಿಕರ, ರೈತರ, ನೊಂದ-ಮತವಂಚಿತ ಜನರ ಹೋರಾಟಗಳು, ಮುಷ್ಕರಗಳು, ಪ್ರತಿಭಟನೆಗಳು ಶಾಂತಿಯುತ, ಅಹಿಂಸಾತ್ಮಕವಾಗಿರಬೇಕು ಎನ್ನುವುದು ಪ್ರಜಾಸತ್ತೆಯ ಆಶಯ. ಆದರೆ ಇದು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಕೂಡದು ಎಂದು ಅಪೇಕ್ಷಿಸುವುದು ಅಪ್ರಬುದ್ಧತೆಯ ಲಕ್ಷಣ. ಬ್ಯಾಂಕ್ ನೌಕರರು ಗ್ರಾಹಕರಿಗೆ ತೊಂದರೆಯಾಗದಂತೆ ಮುಷ್ಕರ ನಡೆಸಬೇಕು ಉಎಂಬ ಬೇಡಿಕೆಗಳೂ ನಮ್ಮ ನಡುವೆ ಕೇಳಿಬರುತ್ತಿದೆ. ಇಂತಹ ಒಂದು ಮನಸ್ಥಿತಿಯನ್ನು ನವ ಉದಾರವಾದ-ಹಿಂದುತ್ವ ರಾಜಕಾರಣ ನಮ್ಮೊಳಗೇ ಸೃಷ್ಟಿಸಿದೆ.
ಫಲಾನುಭವಿಗಳ ದ್ವೀಪಗಳಿಂದಾಚೆ
ತಮ್ಮ ಕುಂದುಕೊರತೆಗಳಿಗಾಗಿ, ತಮಗಾದ ಅನ್ಯಾಯದ ವಿರುದ್ಧ, ತಾವು ಎದುರಿಸುತ್ತಿರುವ ನಿತ್ಯ ಬದುಕಿನ ಸಮಸ್ಯೆಗಳ ಪರಿಹಾರಕ್ಕಾಗಿ, ತಮ್ಮ ಭವಿಷ್ಯದ ಸುಗಮ ಹಾದಿಗಾಗಿ ಬೀದಿಗಿಳಿದು ಹೋರಾಡುವ ನೊಂದ ಜೀವಿಗಳನ್ನು ವಿಕಸಿತ ಭಾರತದ ಫಲಾನುಭವಿ ಸಮಾಜ ಹೇಗೆ ನೋಡಬೇಕು ? ಸರ್ಕಾರಗಳ-ಆಡಳಿತ ವ್ಯವಸ್ಥೆಯ ದೃಷ್ಟಿ ಮತ್ತು ಭಾಷೆ, ವಿಶಾಲ ಸಮಾಜದ ಅಭಿವ್ಯಕ್ತಿಯೂ ಆದರೆ ಈ ನೊಂದ ದನಿಗಳಿಗೆ ಆಸರೆ ಯಾವುದು ? ಜನರಿಗಾಗಿ ಜನರಿಂದಲೇ ಆಯ್ಕೆಯಾಗುವ ಜನಸಾಮಾನ್ಯರ ಆಡಳಿತ ವ್ಯವಸ್ಥೆ (ಸರ್ಕಾರ ಮತ್ತು ಸಾಂವಿಧಾನಿಕ ಸಂಸ್ಥೆಗಳು) ಅದೇ ಜನರ ಆಂತರಿಕ ವೇದನೆಯನ್ನು ತುಚ್ಛವಾಗಿ ನೋಡುವುದು ಪ್ರಜಾಪ್ರಭುತ್ವದ ಅವನತಿಯ ಸ್ಪಷ್ಟ ಸೂಚನೆ. ರಾಜಕೀಯ ಒಲವು-ನಿಲುವುಗಳ ವಶೀಕರಣಕ್ಕೊಳಗಾಗಿ ಈ ದೃಷ್ಟಿಯನ್ನು ಸಮರ್ಥಿಸಿಕೊಳ್ಳುವುದು ಸಮಾಜದ ಅಧಃಪತನದ, ನೈತಿಕ ಅವನತಿಯ ಸೂಚನೆ.
ಬಹುಶಃ ತನ್ನ ವಿಕಾಸದ ಹಾದಿಯಲ್ಲಿ ಭಾರತ ಈ ಹಂತವನ್ನು ತಲುಪಿಬಿಟ್ಟಿದೆ. ಈ ದೃಷ್ಟಿಕೋನವನ್ನೇ ಸಾರ್ವತ್ರೀಕರಿಸುವ (Universalise), ಸಾಮಾನ್ಯೀಕರಿಸುವ (Generalise) ಒಂದು ಸುಶಿಕ್ಷಿತ ಸಮಾಜ ನಮ್ಮ ನಡುವೆ ಸಕ್ರಿಯವಾಗಿರುವುದು ಶೋಚನೀಯ. ಸ್ವಾತಂತ್ರ್ಯಪೂರ್ವದ ಆದರ್ಶಗಳನ್ನು ನಾವು ಮರೆತಿದ್ದೇವೆ, ಹೌದು. ಆದರೆ ಕನಿಷ್ಠ 50 ವರ್ಷಗಳ ಕಾಲ ಸ್ವತಂತ್ರ ಭಾರತ ಅನುಕರಿಸಿದ-ಅನುಸರಿಸಿದ ಆದರ್ಶಪ್ರಾಯ ಮಾದರಿಗಳನ್ನೂ ಮರೆತುಹೋಗಿದ್ದೇವಲ್ಲಾ !!!! ಜಿರಳೆ, ನೊಣ, ವಿದ್ಯಾರ್ಥಿ-ವಿದ್ಯಾರ್ಥಿನಿ, ನಿರುದ್ಯೋಗಿ, ಅತ್ಯಾಚಾರ-ದೌರ್ಜನ್ಯಗಳ ಸಂತ್ರಸ್ತ ಹೆಣ್ಣು ಮಕ್ಕಳು ಈ ಜನಸಮೂಹದ ಮುಂದೆ ನಾವು ಎಂತಹ ಸಮಾಜವನ್ನು ಪ್ರಸ್ತುತಪಡಿಸುತ್ತಿದ್ದೇವೆ ? ಎಂತಹ ಆಡಳಿತ ವ್ಯವಸ್ಥೆಯನ್ನು ಪ್ರತಿಪಾದಿಸುತ್ತಿದ್ದೇವೆ ?
ಹೆದ್ದಾರಿಗಳ ದುರಸ್ತಿ ಹೇಗೆ ? ಯಾರಿಗಾಗಿ ?
ನಿಜ ನಮಗೆ ನಾಗರಿಕ ರಕ್ಷಣಾ ಸ್ವಯಂ ಸೇವಕರ (Civil Defence Volunteers) ಅಗತ್ಯತೆ ಇದೆ. ಆದರೆ ಈ ಸ್ವಯಂಸೇವಕ ಪಡೆಗಳ ಆದ್ಯತೆ ಏನಾಗಿರಬೇಕು ? ಕುಸಿಯುತ್ತಿರುವ ರಾಜಕೀಯ ನೈತಿಕತೆಯನ್ನು ತಡೆಗಟ್ಟುವುದು, ಶಿಥಿಲವಾಗಿ ಪಾತಾಳ ತಲುಪುತ್ತಿರುವ ಮಾನವೀಯ ಮೌಲ್ಯಗಳನ್ನು ಕಾಪಾಡುವುದು, ವ್ಯವಸ್ಥಿತವಾಗಿ ಬೇರೂರುತ್ತಿರುವ ದ್ವೇಷಾಸೂಯೆಗಳನ್ನು ತೊಡೆದುಹಾಕುವುದು, ಜನಗಳ-ಜನಾಂಗಗಳ ನಡುವೆ ಎದ್ದಿರುವ ಗೋಡೆಗಳನ್ನು ಕೆಡವಿಹಾಕುವುದು, ಹಿತವಲಯದ ಸುಶಿಕ್ಷಿತ ಸಮಾಜದ ದೃಷ್ಟಿಗೆ ಕವಿದಿರುವ ಪೊರೆಯನ್ನು ಹೋಗಲಾಡಿಸುವುದು, ನೊಂದ ಜೀವಗಳ ಕಂಬನಿಗೆ ಬೊಗಸೆಯಾಗುವುದು, ಈ ನಿಕೃಷ್ಟ ಸಮಾಜದ ವೇದನೆಗಳಿಗೆ ಸ್ಪಂದಿಸುವುದು, ಸಾವಿರಾರು ಜೀವಗಳನ್ನು ತೆತ್ತು ಪಡೆದ ಪ್ರಜಾಪ್ರಭುತ್ವವನ್ನು ಕಾಪಾಡುವುದು.

ಈ ಆದ್ಯತೆಗಳನ್ನು ನಾವು ಹಂತಹಂತವಾಗಿ ಮರೆಯುತ್ತಿದ್ದೇವೆ ಅಥವಾ ನಿರ್ಲಕ್ಷಿಸುತ್ತಿದ್ದೇವೆ. ಹಾಗಾಗಿಯೇ ಮತವಂಚಿತ ಸಮಾಜವನ್ನು ನೋಡಿ ಸಂಭ್ರಮದಿಂದ ಕೇಕೆ ಹಾಕುವ ಕ್ರೌರ್ಯ ನಮ್ಮೊಳಗೆ ಮನೆ ಮಾಡಿದೆ. ಈ ದುರವಸ್ಥೆಯನ್ನು ಸರಿಪಡಿಸಬೇಕಾದ ಸಾಮಾಜಿಕ ಜವಾಬ್ದಾರಿಯನ್ನು ಹೊರಬೇಕಾಗಿರುವುದು ಸಮಾಜವೇ ಅಲ್ಲವೇ ? ಇದಕ್ಕೆ ಬೇಕಿರುವುದು ರಾಜಕೀಯ ಕಣ್ಣೋಟವಲ್ಲ ಅಥವಾ ಪಕ್ಷನಿಷ್ಠ ಒಳನೋಟವೂ ಅಲ್ಲ. ಸಂವಿಧಾನದ ಪ್ರಸ್ತಾವನೆಯ ಮೊದಲ ಸಾಲನ್ನು ಮತ್ತೆ ಮತ್ತೆ ಉಚ್ಛರಿಸುತ್ತಾ, “ ಭಾರತದ ಜನಗಳಾದ ನಾವು ” (We the People of India) ನಮ್ಮ ಅಂತರ್ ದೃಷ್ಟಿಯ ಮೂಲಕ ಸಮಾಜದ ಕಡೆಗೆ ನೋಡಬೇಕಿದೆ.
ಹಿಂದೂ ಮುಸ್ಲಿಂ ಕ್ರೈಸ್ತ ಸಿಖ್ ಈ ಅಸ್ಮಿತೆಗಳು ಕೌಟುಂಬಿಕ ಗೋಡೆಗಳ ನಡುವೆ ಇರಲಿ, ಮಾರ್ಕ್ಸ್, ಲೋಹಿಯಾ ಗಾಂಧಿ ಪೆರಿಯಾರ್ ಅಂಬೇಡ್ಕರ್ ಮೊದಲಾದ ಅಸ್ಮಿತೆಗಳು ಸಾಂಘಿಕ ವೇದಿಕೆಗಳಲ್ಲಿರಲಿ, ಭಾರತದ ಪ್ರತಿಯೊಬ್ಬ ಪ್ರಜೆಯಲ್ಲಿರಬೇಕಾದುದು ವ್ಯಕ್ತಿಗತವಾದ ದೂರದೃಷ್ಟಿ ಮತ್ತು ಸೂಕ್ಷ್ಮ ಒಳನೋಟ. ಇದನ್ನು ಆಗುಮಾಡುವ ಸ್ವಯಂ ಸೇವಕರ ಅಗತ್ಯತೆ ವರ್ತಮಾನದ ಭಾರತಕ್ಕಿದೆ. ಇದು ಕಾಣಲಾಗುತ್ತಿಲ್ಲ ಎಂದರೆ ಒಂದು ಪ್ರಜ್ಞಾವಂತ ನಾಗರಿಕತೆಯಾಗಿ (Civilisation), ಪ್ರಬುದ್ಧ ಸಮಾಜವಾಗಿ ನಾವೆಲ್ಲೋ ಎಡವುತ್ತಿದ್ದೇವೆ ಎಂದೇ ಹೇಳಬಹುದು. ಅಥವಾ ದಿಕ್ಕುಗಾಣದಂತಾಗಿದ್ದೇವೆ. ಸಮಾಜವನ್ನು ಅಮಾನುಷ ಜಗತ್ತಿನೆಡೆಗೆ ಕರೆದೊಯ್ಯುವ ನಾವೆಗಳು ಸಾಲುಗಟ್ಟಿ ನಿಂತಿವೆ. ಧರ್ಮನಿಷ್ಠೆ-ಹುಸಿ ರಾಷ್ಟ್ರೀಯತೆ-ಜಾತಿಪ್ರೇಮ ಇವೆಲ್ಲವೂ ಈ ನಾವೆಗಳನ್ನು ದಡ ಸೇರಿಸುವ ಆಕರಗಳಾಗಿವೆ. ಈ ಅಡೆತಡೆಗಳನ್ನು ದಾಟಿ ಒಂದು ಸುಂದರ ಸಮಾಜವನ್ನು ಕಟ್ಟುವ, ಸುಂದರ ಭವಿಷ್ಯದ ಭಾರತವನ್ನು ಕಲ್ಪಿಸುವ ಜವಾಬ್ದಾರಿ “ ಭಾರತದ ಜನಗಳಾದ ” ನಮ್ಮ ಮೇಲಿದೆ. ನಮ್ಮ ಚರ್ಚೆಗಳೂ ಈ ದಿಕ್ಕಿನಲ್ಲೇ ಸಾಗಬೇಕಿದೆ.
\-೦-೦-೦-೦-






