ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಾಯಕತ್ವ ಬದಲಾವಣೆಯ ಕುರಿತ ಚರ್ಚೆಗಳು ಒಂದು ಕಡೆಯಾದರೆ, ಮತ್ತೊಂದು ಕಡೆ ರಾಜ್ಯದ ಲಿಂಗಾಯತ ಮಠಾಧೀಶರು ಯಡಿಯೂರಪ್ಪ ಪರ ಸಮರೋಪಾದಿಯಲ್ಲಿ ವಕಾಲತು ವಹಿಸುತ್ತಿರುವ ವಿಷಯ ದೊಡ್ಡ ಮಟ್ಟದ ವಾಗ್ವಾದ ಹುಟ್ಟುಹಾಕಿದೆ.
ಲಿಂಗಾಯತ-ವೀರಶೈವ ಸಮುದಾಯದ ನಾಯಕರಾಗಿ ಯಡಿಯೂರಪ್ಪ ಅವರು ಗುರುತಿಸಿಕೊಂಡಿದ್ದಾರೆ ಎಂಬುದು ಎಷ್ಟು ನಿಜವೋ, ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಎಲ್ಲಾ ಆರೂವರೆ ಕೋಟಿ ಕನ್ನಡಿಗರ ಪ್ರತಿನಿಧಿ ಎಂಬುದೂ ಅಷ್ಟೇ ನಿಜ. ಅಲ್ಲದೆ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ಅವರು ಸಂವಿಧಾನದ ಮೇಲೆ ಪ್ರಮಾಣ ಮಾಡುವಾಗ ತಾವು ಯಾವುದೇ ರೀತಿಯ ತಾರತಮ್ಯ ಮಾಡದೆ, ಎಲ್ಲ ಜನರ ಪ್ರತಿನಿಧಿಯಾಗಿ, ಇಡೀ ರಾಜ್ಯದ ಪರ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ.
ಹಾಗಾಗಿ ಯಾವುದೇ ಒಂದು ಸಮುದಾಯ, ಜಾತಿಗೆ ಸೀಮಿತವಾಗದೆ ರಾಜ್ಯದ ಎಲ್ಲರ ಪರ ಕೆಲಸ ಮಾಡುವುದು ಅವರ ಕರ್ತವ್ಯ ಕೂಡ. ಹಾಗಾಗಿ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬಂದಾಗ ಅವರ ಸಮುದಾಯದ ಸ್ವಾಮೀಜಿಗಳು, ಮಠಾಧೀಶರು ಬೀದಿಗಿಳಿದು ಶಕ್ತಿ ಪ್ರದರ್ಶನ ಮಾಡುವ ಮೂಲಕ ಒಂದು ಸಮುದಾಯದ ಹಿತವನ್ನು ಮಾತ್ರ ಎತ್ತಿಹಿಡಿಯುವುದು ಸಂವಿಧಾನಿಕವಾಗಿಯೂ ಎಷ್ಟು ಸಮಂಜಸ ಎಂಬ ಪ್ರಶ್ನೆಯ ಹಿನ್ನೆಲೆಯಲ್ಲಿ ಒಂದು ಕಡೆ ಈ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ರಾಜ್ಯದ ಜನತೆ ಕಳೆದ ಹಿಂದಿನ ವರ್ಷದ ಭೀಕರ ನೆರೆ, ಪ್ರವಾಹ, ಆ ಬಳಿಕದ ಕರೋನಾ ಮತ್ತು ಲಾಕ್ ಡೌನ್ ಅವಧಿಯಲ್ಲಿ ರಾಜ್ಯದ ಜನಸಾಮಾನ್ಯರು ಸಾವು-ಬದುಕಿನ ನಡುವೆ ಹೋರಾಡುವಾಗ ಜನರ ನೆರವಿಗೆ ಬರದ ಬಹಳಷ್ಟು ಮಠಾಧೀಶರು, ಆಮ್ಲಜನಕ, ಔಷಧಿಗಳ ಕೊರತೆಯಿಂದ ಜನ ಹಾದಿ ಬೀದಿಯ ಹೆಣವಾಗುತ್ತಿದ್ದಾಗ ಕಣ್ಣೆತ್ತಿ ನೋಡದ ಮಠಾಧೀಶರು, ಈಗ ಒಬ್ಬ ವ್ಯಕ್ತಿಯ ಅಧಿಕಾರದ ಕುರ್ಚಿ ಉಳಿಸಲು ಹೀಗೆ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಸಮುದಾಯದ, ಜಾತಿಯ ಹೆಸರಲ್ಲಿ ಲಜ್ಜೆಬಿಟ್ಟು ವಕಾಲತು ವಹಿಸುತ್ತಿದ್ದಾರೆ. ಇದು ಸರ್ವಸಂಗ ಪರಿತ್ಯಾಗಿಗಳಿಗೆ ಎಷ್ಟರಮಟ್ಟಿಗೆ ಶೋಭಿಸುತ್ತದೆ ಎಂಬ ಗಂಭೀರ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ಇದೀಗ ರಾಜ್ಯದಲ್ಲಿ ಮತ್ತೊಮ್ಮೆ ಭೀಕರ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈಗಲೂ ಕೂಡ ಸಂಕಷ್ಟದಲ್ಲಿರುವ ಜನರ ನೆರವಿಗೆ ಎಷ್ಟು ಮಠಗಳು ಬರುತ್ತಿವೆ? ಕನಿಷ್ಟ ತಮ್ಮದೇ ಸಮುದಾಯಗಳ ಬಡವರ, ಸಂಕಷ್ಟದಲ್ಲಿರುವವರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಮಠದಲ್ಲಿ ಕೊಳೆಯುತ್ತಿರುವ ಅದೇ ಜನರ ಕಾಣಿಕೆಯ ಹಣ ಬಳಸಲು ಎಷ್ಟು ಮಠಗಳು ಸಿದ್ಧವಿವೆ? ಎಷ್ಟು ಮಠಗಳು ಪ್ರವಾಹ ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲು ಮುಂದೆ ಬಂದಿವೆ? ಕರೋನಾ ಸಂಕಷ್ಟದ ಕಾರಣಕ್ಕೆ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂಬುದನ್ನು ಸ್ವತಃ ಅದೇ ಮಠಾಧೀಶರು ಎಲ್ಲವನ್ನೂ ಒತ್ತೆ ಇಟ್ಟು ಬೆಂಬಲಿಸುತ್ತಿರುವ ಮುಖ್ಯಮಂತ್ರಿಗಳೇ ಹೇಳುತ್ತಿರುವಾಗ, ಜನರ ಸಂಕಟ ದೂರ ಮಾಡಲು ಜನರ ದುಡ್ಡನ್ನು ಬಳಸಿ ಎಂದು ಹೇಳಿ ಮಠದ ಖಜಾನೆಯ ಬಾಗಿಲು ತೆರೆಯುವ ಔದಾರ್ಯ ಎಷ್ಟು ಮಂದಿ ಸ್ವಾಮೀಜಿಗಳಿಗೆ ಇದೆ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡತೊಡಗಿವೆ.
ಅಷ್ಟಕ್ಕೂ ಈ ಮಠಗಳು ಪ್ರತಿ ವರ್ಷ ಸರ್ಕಾರದಿಂದಲೇ ಜನರ ತೆರಿಗೆ ಹಣವನ್ನು ಭಕ್ಷೀಸು ರೂಪದಲ್ಲಿ ಪಡೆಯುತ್ತಿವೆ. ಅದೂ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗೆಲ್ಲಾ ಮಠ-ಮಾನ್ಯಗಳಿಗೆ ಜನರ ತೆರಿಗೆ ಹಣವನ್ನು ಉದಾರ ದೇಣಿಗೆ ನೀಡುವ ಸಂಪ್ರದಾಯ ಬೆಳೆದುಬಂದಿದೆ. ಕನಿಷ್ಟ ಜನರ ಹಣ ತೆಗೆದುಕೊಂಡಿದ್ದೇವೆ ಎಂಬ ನೈತಿಕತೆಯ ಕಾರಣಕ್ಕಾದರೂ(ಕರೋನಾ ಸಂಕಷ್ಟದಲ್ಲಿ ಜನ ಆಮ್ಲಜನಕ ಸಿಗದೆ ಸಾಯುತ್ತಿರುವಾಗಲೇ ಮಠಗಳಿಗೆ ಕೋಟಿ ಕೋಟಿ ರೂ. ಸರ್ಕಾರದ ಖಜಾನೆಯಿಂದ ನೀಡಲಾಗಿತ್ತು!) ಜನರ ಸಂಕಷ್ಟದ ಹೊತ್ತಲ್ಲಿ ನೆರವಿಗೆ ಧಾವಿಸಿದ ಮಠಗಳೆಷ್ಟು? ಎಂಬ ಗಂಭೀರ ಪ್ರಶ್ನೆಗಳಿಗೆ ರಾಜಕೀಯ ನಾಯಕರ ಪರ ವಕಾಲತು ವಹಿಸುವ ಮಠಾಧೀಶರ ನಡೆ ಕಾರಣವಾಗಿದೆ.
ಅದರಲ್ಲೂ ನಿಡುಮಾಮಿಡಿ ಮಠ, ಸಾಣೇಹಳ್ಳಿ, ಚಿತ್ರದುರ್ಗದ ಮುರುಘಾಮಠದಂತಹ ಪ್ರಗತಿಪರ ನಿಲುವು, ಸಮಾಜ ಸುಧಾರಣೆಯ ಮಾತುಗಳನ್ನಾಡುವ ಮಠಾಧೀಶರು ಕೂಡ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡುತ್ತಿರುವುದು ಹಲವರ ಹುಬ್ಬೇರಿಸಿದೆ. ಬಿಜೆಪಿ ಪಕ್ಷದ ವಿರುದ್ಧ ಒಂದು ಕಾಲದಲ್ಲಿ ಬೆಂಕಿ ಕಾರುತ್ತಿದ್ದ ನಿಡುಮಾಮಿಡಿ ಸ್ವಾಮೀಜಿಯಂಥವರು ಸುದೀರ್ಘ ಪತ್ರ ಬರೆದು ಬಿಜೆಪಿ ಪಕ್ಷದ ಸರ್ಕಾರ ಮತ್ತು ಅದರ ಮುಖ್ಯಮಂತ್ರಿಗಳ ಪರ ವಕಾಲತು ವಹಿಸಿ, ಅವರನ್ನು ಬದಲಾಯಿಸಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಬೆದರಿಕೆಯ ದಾಟಿಯಲ್ಲಿ ಪಕ್ಷದ ವರಿಷ್ಠರಿಗೆ ಎಚ್ಚರಿಕೆ ನೀಡಿರುವುದು ಅಂತಹ ಅಚ್ಚರಿಗೆ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಪ್ರಜಾಪ್ರಭುತ್ವದ ಬಗ್ಗೆ, ಸಮಾನತೆಯ ಬಗ್ಗೆ ಅತಿ ಕಾಳಜಿಯ ಮಾತುಗಳ ಮೂಲಕ, ವಿಚಾರಗಳ ಮೂಲಕ ದಶಕಗಳ ಕಾಲ ಕನ್ನಡಿಗರ ನಡುವೆ ಗುರುತಿಸಿಕೊಂಡಿದ್ದ ಸ್ವಾಮೀಜಿಗಳು, ಇದೀಗ ಯಡಿಯೂರಪ್ಪ ಲಿಂಗಾಯತ ಸಮುದಾಯದ ನಾಯಕ ಮತ್ತು ಅಧಿಕಾರ ಅವರ ಕೈತಪ್ಪಿ ಮತ್ತೊಬ್ಬರ ಪಾಲಾಗುತ್ತಿದೆ ಎಂದ ಕೂಡಲೇ ಆ ಎಲ್ಲವನ್ನೂ ಮರೆತು, ದಿಢೀರನೇ ಒಬ್ಬ ವ್ಯಕ್ತಿಯ ಪರ, ಒಂದು ಪಕ್ಷದ ಸರ್ಕಾರದ ಪರ ಹೀಗೆ ‘ಮಾಡು-ಇಲ್ಲವೇ ಮಡಿ’ ಸ್ವರೂಪದ ಹೋರಾಟಕ್ಕೆ ಇಳಿದಿರುವುದು ಇಷ್ಟು ವರ್ಷಗಳ ಕಾಲ ಅವರು ಪ್ರತಿಪಾದಿಸಿದ ಪ್ರಗತಿಪರತೆ, ಜನಪರತೆ, ಪ್ರಜಾಪ್ರಭುತ್ವ, ವೈಚಾರಿಕತೆಗಳ ಟೊಳ್ಳುತನ ಎಷ್ಟು ಆಳದ್ದು ಎಂಬುದನ್ನು ಬಯಲುಮಾಡಿದೆ.
ಹಾಗೇ, ಒಂದು ಸಮುದಾಯದ ನಾಯಕರು ಅಧಿಕಾರಕ್ಕೆ ಏರಿದಾಗ, ಅವರು ತಮ್ಮದೇ ಸಮುದಾಯದ ಮಠ-ಮಾನ್ಯಗಳಿಗೆ ಸಾರ್ವಜನಿಕ ತೆರಿಗೆ ಹಣ ಸುರಿದು ತಮ್ಮ ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವುದು ಮತ್ತು ತಮ್ಮ ಪರ ಲಾಭಿಗೆ ಆ ಮಠಮಾನ್ಯಗಳನ್ನು ಬಳಸಿಕೊಳ್ಳುವುದು ರಾಜ್ಯದ ಮಟ್ಟಿಗೆ ಹೊಸದೇನಲ್ಲ. ಆದರೆ, ರಾಜ್ಯದ ಉದ್ದಗಲಕ್ಕೆ ಭಾರೀ ಆಸ್ತಿಪಾಸ್ತಿಯ ಮಠಮಾನ್ಯಗಳನ್ನು ಹೊಂದಿರುವ ಒಂದೆರಡು ಸಮುದಾಯಗಳ ನಾಯಕರು ಹೀಗೆ ತಮ್ಮ ಪರ ಪ್ರಭಾವ ಬೀರಲು, ಲಾಭಿ ಮಾಡಲು ಮತ್ತು ಆ ಮೂಲಕ ರಾಜ್ಯದ ಅಧಿಕಾರವನ್ನು ತಮ್ಮದೇ ಕೈಯಲ್ಲಿ ಇಟ್ಟುಕೊಳ್ಳಲು ಸಂವಿಧಾನಿಕ ಅಧಿಕಾರ ಮತ್ತು ಜನರ ಹಣ ಬಳಸಿಕೊಂಡರೆ, ನಿಜವಾದ ಪ್ರಜಾಪ್ರಭುತ್ವಕ್ಕೆ ಬೆಲೆ ಏನು? ಇಂತಹ ಪ್ರಭಾವ ಮತ್ತು ಮಠಮಾನ್ಯಗಳ ಜಾಲವನ್ನು ಹೊಂದಿರದ ಇತರೆ ಸಣ್ಣಪುಟ್ಟ ಸಮುದಾಯಗಳಿಗೆ ಮಾಡುವ ವಂಚನೆ ಇದಲ್ಲವೆ? ಎಂಬ ಪ್ರಜಾಪ್ರಭುತ್ವದ ಆಶಯವನ್ನೇ ಅಣಕಿಸುವ ಪ್ರಶ್ನೆಗಳೂ ಇವೆ.
ಈ ನಡುವೆ, ಜು.25ರಂದು ಕೇಂದ್ರದ ವರಿಷ್ಠರಿಂದ ಬರುವ ಸಂದೇಶಕ್ಕಾಗಿ ತಾವು ಕಾಯುತ್ತಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ ಬೆನ್ನಲ್ಲೇ, ಅಂದೇ ರಾಜ್ಯದ ಮಠಾಧೀಶರ ಸಮಾವೇಶ ನಡೆಸುವುದಾಗಿ ಸ್ವಾಮೀಜಿಗಳು ಘೋಷಿಸಿದ್ದಾರೆ. “ಯಾವುದೇ ವ್ಯಕ್ತಿಯ ಕುರಿತು ಸಮಾವೇಶ ಮಾಡುತ್ತಿಲ್ಲ. ಸದ್ಯದ ರಾಜ್ಯ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಸ್ವಾಮೀಜಿಗಳ ನಡೆಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಜುಲೈ 25ಕ್ಕೆ ಎಲ್ಲಾ ಸಮುದಾಯಗಳ ಮಠಾಧೀಶರ ಸಮಾವೇಶ ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಠಾಧೀಶರ ಸಮಾವೇಶ ನಡೆಯಲಿದ್ದು, ನಾಡಿನ ಹಿತದೃಷ್ಟಿ, ಪ್ರಸ್ತುತ ಬೆಳವಣಿಗೆಯ ಕುರಿತು ಚರ್ಚೆಗೆ ಸಭೆ ನಡೆಸಲಿದ್ದೇವೆ” ಎಂದು ಸ್ವಾಮೀಜಿಗಳು ಹೇಳಿದ್ದಾರೆ.
ಆದರೆ, ಯಡಿಯೂರಪ್ಪ ಅವರ ಸಿಎಂ ಗಿರಿಗೆ ಕುತ್ತು ಬಂದ ಹೊತ್ತಲ್ಲೇ ಯಾಕೆ ನಾಡಿನ ಹಿತದೃಷ್ಟಿ ಮತ್ತು ಪ್ರಸ್ತುತ ಬೆಳವಣಿಗೆಗಳ ಕುರಿತು ಚರ್ಚಿಸಬೇಕು ಎಂದು ಸ್ವಾಮೀಜಿಗಳಿಗೆ ಎನಿಸಿತು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಬಹುಶಃ ಜು.25ರಂದು ಸಮಾವೇಶದಲ್ಲಿ ಸಿಗಬಹುದು!
ಆದರೆ, ಸಮಾವೇಶದಲ್ಲಿ ರಾಜಕೀಯ ವಿಷಯ ಚರ್ಚೆಯಾಗುವುದೇ ಇಲ್ಲವೇ? ಯಡಿಯೂರಪ್ಪ ಮತ್ತು ಲಿಂಗಾಯತ ನಾಯಕತ್ವದ ವಿಷಯ ಚರ್ಚೆಗೆ ಬರುವುದೇ ಅಥವಾ ಇಲ್ಲವೇ ಎಂಬುದು ಸ್ವಾಮೀಜಿಗಳ ಮೇಲಿನ ಮಾತುಗಳನ್ನು ಸ್ಪಷ್ಟಪಡಿಸಲಿದೆ.
ಈ ನಡುವೆ, ಯಡಿಯೂರಪ್ಪ ಸಮುದಾಯದ ಪ್ರಶ್ನಾತೀತ ನಾಯಕರು ಹೌದು. ಹಾಗೇ ಅವರು ಕೇವಲ ಲಿಂಗಾಯತ ಸಮುದಾಯಕ್ಕೆ ಸೀಮತವಾದ ನಾಯಕರೂ ಅಲ್ಲ. ಎಲ್ಲಾ ಸಮುದಾಯ ಮತ್ತು ಜಾತಿಗಳಲ್ಲೂ ಅವರ ಅಭಿಮಾನಿಗಳಿದ್ದಾರೆ. ರಾಜ್ಯದ ಜನರ ಹಿತಕ್ಕಾಗಿ, ಅಭಿವೃದ್ಧಿಗಾಗಿ ಅವರು ಕೆಲಸ ಮಾಡಿದ್ದಾರೆ. ಹಾಗಾಗಿ ಅವರನ್ನು ಮುಂದುವರಿಸಬೇಕು ಎಂಬುದು ನಮ್ಮ ಆಗ್ರಹ ಎಂದು ಕೆಲವು ಮಠಾಧೀಶರು ಪ್ರಜಾಸತ್ತಾತ್ಮಕ ವರಸೆ ಪ್ರದರ್ಶಿಸಿದ್ದರೆ, ಮತ್ತೆ ಕೆಲವರು ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬಾರದು. ಒಂದು ವೇಳೆ ಬದಲಾವಣೆ ಮಾಡಿದರೂ ಮತ್ತೊಬ್ಬ ವೀರಶೈವ-ಲಿಂಗಾಯರ ಸಮುದಾಯಕ್ಕೆ ಸೇರಿದ ಉತ್ತರಕರ್ನಾಟಕದ ನಾಯಕರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದೂ ಹೇಳಿದ್ದಾರೆ.
ಒಂದು ಕಡೆ ಯಡಿಯೂರಪ್ಪ ಅವರು ಸರ್ವಜನಾಂಗದ ನಾಯಕ, ಅವರಿಗೆ ಎಲ್ಲಾ ಸಮುದಾಯದ ಮತ್ತು ಎಲ್ಲಾ ಜಾತಿ ಮಠಗಳ ಬೆಂಬಲವಿದೆ ಎನ್ನುತ್ತಲೇ, ಮತ್ತೊಂದು ಕಡೆ ಯಡಿಯೂರಪ್ಪ ಬದಲಾಯಿಸುವುದೇ ಆದರೆ ಮತ್ತೊಬ್ಬ ಲಿಂಗಾಯತರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬೇಕು ಎನ್ನುವ ಮೂಲಕ ಮಠಾಧೀಶರು ತಮ್ಮ ಜಾತಿಪ್ರೀತಿಯನ್ನೂ, ಮಠಗಳಿಗೆ ಕೋಟಿ ಕೋಟಿ ಅನುದಾನ ನೀಡುವ ಯಡಿಯೂರಪ್ಪ ಮೇಲಿನ ಮಮಕಾರವನ್ನೂ ಪ್ರದರ್ಶಿಸಿದ್ದಾರೆ!
ಅಂದರೆ; ಸದ್ಯಕ್ಕೆ ರಾಜ್ಯದಲ್ಲಿ ಸಂವಿಧಾನದ ಮೇಲೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಜಾತಿ ಮತ್ತು ಧರ್ಮದ ಆಧಾರದ ಮಠೀಯ ವ್ಯವಸ್ಥೆ ಸವಾರಿ ಮಾಡುತ್ತಿದೆ ಮತ್ತು ಅಂತಹ ಸವಾರಿಯ ನೇತೃತ್ವವನ್ನು ಕೂಡ ನಿಡುಮಾಮಿಡಿ, ಸಾಣೇಹಳ್ಳಿ ಮತ್ತು ಮುರುಘಾಮಠದಂತಹ ಪ್ರಗತಿಪರ ಮಠಾಧೀಶರೇ ವಹಿಸಿಕೊಂಡಿದ್ದಾರೆ ಎಂಬುದು ಆಘಾತಕಾರಿ!