ಜುಲೈ 26ರಿಂದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಪದವಿ, ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ಭೌತಿಕ ತರಗತಿಗಳು ಪುನರಾರಂಭಗೊಳ್ಳಲಿದ್ದು, ವಿದ್ಯಾರ್ಥಿಗಳು ಕನಿಷ್ಠ ಪ್ರಥಮ ಡೋಸ್ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದು ಹಾಜರಾಗಲು ವಿವಿ ಸುತ್ತೋಲೆಯಲ್ಲಿ ಆದೇಶಿಸಿದೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಕುಲಸಚಿವರು, ವಿಶ್ವವಿದ್ಯಾಲಯ ಧನಸಹಾಯ ಆಯೋಗ ಮತ್ತು ಕರ್ನಾಟಕ ಸರ್ಕಾರದ ನಿರ್ದೇಶನದ ಮೇರೆಗೆ ಜುಲೈ 26ರ ಸೋಮವಾರದಿಂದ ಬೆಂಗಳೂರು ಸೆಂಟ್ರಲ್ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಭೌತಿಕ ತರಗತಿಗಳು ಪುನರಾರಂಭಗೊಳ್ಳಲಿದ್ದು, ವಿದ್ಯಾರ್ಥಿಗಳು ಕೋವಿಡ್-19 ಸಂಬಂಧ ಸರ್ಕಾರದ ಮಾರ್ಗಸೂಚಿ ಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿರುವ ಬೆಂಗಳೂರು ಸೆಂಟ್ರಲ್ ವಿಶ್ವವಿದ್ಯಾಲಯ, ತರಗತಿಗೆ ಹಾಜರಾಗುವಾಗ ಕನಿಷ್ಠ ಪ್ರಥಮ ಡೋಸ್ ಲಸಿಕೆ ಪಡೆಯುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಭೌತಿಕ ಅಂತರವನ್ನು ಕಾಯ್ದುಕೊಳ್ಳುವುದು, ಮತ್ತು ಸಾನಿಟೈಸರ್ ಬಳಸುವ ಮೂಲಕ ಶುಚಿತ್ವ ಕಾಪಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ಮತ್ತು ಕಾಲೇಜು ಕಟ್ಟಡ ಹಾಸ್ಟೆಲ್ ಗಳಿಗೆ ಸ್ಯಾನಿಟೈಮ್ ಮಾಡಲಾಗುತ್ತಿದೆ.
ಸುಮಾರು ಮೂರ್ನಾಲ್ಕು ತಿಂಗಳಿಂದ ಮುಚ್ಚಿರುವ ಕಾಲೇಜು ಪುನಾರಂಭಕ್ಕೆ ಸಜ್ಜಾಗಿದ್ದು ತನ್ನ ಶೈಕ್ಷಣಿಕ ವರ್ಷವನ್ನು ಆರಂಭ ಮಾಡಲು ಸಜ್ಜಾಗಿದೆ.