12ನೇ ತರಗತಿವರೆಗೆ ಮಾತೃಭಾಷೆಯಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಮತ್ತು ಸಾಮಾನ್ಯ ಪಠ್ಯಕ್ರಮ ಜಾರಿಗೊಳಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಕುರಿತು ದೆಹಲಿ ಹೈಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಸಮಾಜವಾದ, ಜಾತ್ಯತೀತತೆ, ಸ್ಥಾನಮಾನದ ಸಮಾನತೆ, ಸಮಾನ ಅವಕಾಶ, ಭ್ರಾತೃತ್ವ, ಏಕತೆ ಮತ್ತು ರಾಷ್ಟ್ರದ ಸಮಗ್ರತೆಯ ಸಾಂವಿಧಾನಿಕ ಗುರಿಗಳಿಗೆ ಅನುಗುಣವಾಗಿ ಮತ್ತು ಮುಂದುವರಿಕೆಗೆ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ಕೋರಿ ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರ ಪೀಠ ಸೋಮವಾರ ಅರ್ಜಿದಾರರ ಸಲ್ಲಿಕೆಯನ್ನು ಗಮನಿಸಿ ಶಿಕ್ಷಣ ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯ, ಸಾಮಾಜಿಕ ನ್ಯಾಯ ಸಚಿವಾಲಯ ಮತ್ತು NCT ದೆಹಲಿ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ ಮತ್ತು ಆಗಸ್ಟ್ 30, 2022 ಕ್ಕೆ ವಿಷಯವನ್ನು ಕೈಗೆತ್ತುಕೊಳ್ಳಲು ಸಮಯ ನಿಗದಿಪಡಿಸಿದೆ.