ಅಫಜಲಪುರ:ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ತಳವಾರ ಪರಿವಾರ ಸಮಾಜಕ್ಕೆ ಎಸ್.ಟಿ ಪ್ರಮಾಣ ಪತ್ರ ನೀಡಲು ಅಧಿಕೃತ ಅನುಮತಿ ನೀಡ ಕಲಬುರಗಿ ಜಿಲ್ಲಾ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ತಹಶೀಲ್ದಾರರು ಪ್ರಮಾಣಪತ್ರ ನೀಡುವಲ್ಲಿ ಸುಖಾಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ. ನೈಜ್ಯ ತಳವಾರರಾದ ನಮಗೆ ಸಂವಿಧಾನಿಕ ಹಕ್ಕು ನೀಡಿ ಎಂದು ಅಫಜಲಪುರ ತಹಶೀಲ್ದಾರ್ ಕಚೇರಿಗೆ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಂಘದ ವತಿಯಿಂದ ಮುತ್ತಿಗೆ ಹಾಕಿ ತಮ್ಮ ಹಕ್ಕಿಗಾಗಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಂಘದ ಜಿಲ್ಲಾಧ್ಯಕ್ಷ ಸಂತೋಷ ತಳವಾರ, ಕೇಂದ್ರ ಸರಕಾರ ಕಳೆದ 4 ವರ್ಷಗಳ ಹಿಂದೆ ರಾಷ್ಟ್ರಪತಿಗಳ ಅಂಕಿತದೊಂದಿಗೆ ಆದೇಶ ಹೊರಡಿಸಿದ್ದಾರೆ. ತದನಂತರ ಬಸವರಾಜ ಬೊಮ್ಮಾಯಿ ಸಾಹೇಬ್ರು ಕಲಬುರಗಿ ಜಿಲ್ಲೆಗೆ ಬಂದು ತಳವಾರ ಪರಿವಾರದವರಿಗೆ ಪರಿಶಿಷ್ಟ ಪಂಗಡ ಘೋಷಣೆ ಮಾಡಿದ್ದರು.ಆದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಳವಾರ ಪರಿವಾರ ಸಮಾಜಕ್ಕೆ ಎಸ್.ಟಿ ಪ್ರಮಾಣಪತ್ರ ನೀಡುತ್ತಿದ್ದು,ಕಲಬುರಗಿ ಜಿಲ್ಲೆಯ ತಳವಾರರಿಗೆ ಪ್ರಮಾಣಪತ್ರ ನಿಡುತ್ತಿಲ್ಲ. ಕಾರಣ ಕೇಳಿದರೆ ಜಿಲ್ಲೆಯಲ್ಲಿಯೇ ತಳವಾರ ಸಮಾಜದ ಜನರು ಇಲ್ಲಾ ಎನ್ನುವ ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಹಾಗಾದರೆ 2010ರ ಜನಗಣತಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ 28 ಸಾವಿರ ತಳವಾರರು ಇದ್ದಾರೆ ಎನ್ನುವ ಕಾನೂನಾತ್ಮಕ ಆದೇಶ ಹೊರಡಿಸಿದ್ದು ಯಾಕೆ?.ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ತೆತ್ತಿದರೆ ಸಂವಿಧಾನದ ಬಗ್ಗೆ ಮಾತನಾಡುವವರು ತಮ್ಮ ಜಿಲ್ಲೆಯ ತಳವಾರ ಸಮಾಜಕ್ಕೆ ಅನ್ಯಾಯವಾಗುತ್ತಿದ್ದರೂ ಒಂದು ಮಾತು ಆಡದೆ ಮೌನಕ್ಕೆ ಜಾರಿರುವುದು ತಳವಾರ ಸಮಾಜಕ್ಕೆ ಎಸ್.ಟಿ ನೀಡಬಾರದು ಎನ್ನುವ ಉದ್ದೇಶ ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತದೆ.

ಈಗಾಗಲೇ ಜಿಲ್ಲೆಯ ಶಾಸಕರ ಮನೆಯ ಮುಂದೆ ಪ್ರತಿಭಟನೆ ಮಾಡಿ ಆಗಿದೆ. ತಹಶೀಲ್ದಾರ್ ಜಿಲ್ಲಾಧಿಕಾರಿಗಳಿಗೂ ಮನವಿ ಪತ್ರ ನೀಡಿ ಸಾಕಾಗಿದೆ.ಇದೆ ರೀತಿಯ ಚಾಳಿ ಮುಂದುವರೆದರೆ ರಾಜ್ಯದಲ್ಲಿ ತಳವಾರರು ಧಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಂತರ ಮಾತನಾಡಿದ ಶಾಸಕ ಎಂ.ವೈ.ಪಾಟೀಲ್ ತಾಲೂಕಿನ ತಳವಾರ ಸಮಾಜದ ಜೊತೆ ನಾನಿದ್ದೇನೆ. ಸಂವಿಧಾನಿಕವಾಗಿ ಅವರಿಗೆ ಸಲ್ಲಬೇಕಾದ ಹಕ್ಕನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರದ ಗಮನಕ್ಕೆ ತರುತ್ತೇನೆ. ಹಾಗೆಯೇ ಅಧಿಕಾರಿಗಳಿಗೂ ಸೂಚಿಸುತ್ತೇನೆ ಎಂದರು.
ತದನಂತರ ಮಾತನಾಡಿದ ತಳವಾರ ಸಮಾಜದ ಮುಖಂಡ ಶರಣು ದಿವಾಣಜಿ ಮೂಲತಃ ನಮ್ಮ ಪೂರ್ವಜರು ಸಾವುಕಾರರ ಮನೆಗಳ ಕಾರ್ಯಕ್ರಮಗಳಲ್ಲಿ ತಟ್ಟೆ ತೊಳೆದು ಜೀವನ ಮಾಡುತ್ತಾ ಬಂದಿದ್ದಾರೆ. ಈಗಲೂ ನಮ್ಮ ಸಮಾಜ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದೆ ಉಳಿದಿದೆ. ನಮ್ಮ ಸಮಾಜಕ್ಕೆ ಸಂವಿಧಾನಿಕವಾಗಿ ಸರಕಾರ ಆದೇಶ ಮಾಡಿದರೂ ಸಹ ಅಧಿಕಾರಿಗಳು ಯಾಕೆ ನಮಗೆ ಎಸ್.ಟಿ ಪ್ರಮಾಣಪತ್ರ ನೀಡುತ್ತಿಲ್ಲ. ದೇಶದಲ್ಲಿ ಒಂದು ಸಂವಿಧಾನ ಒಂದು ಕಾನೂನು ಇದ್ದರೆ ಕಲಬುರಗಿಯಲ್ಲಿ ಮತ್ತೊಂದು ಕಾನೂನು ಇದೆಯಾ?.ಕಲಬುರಗಿ ಉಸ್ತುವಾರಿ ಸಚಿವರು ನಮ್ಮ ಮೇಲೆ ವಕ್ರ ದೃಷ್ಟಿ ಹಾಕುತ್ತಿರುವುದು ಸರಿ ಅಲ್ಲ .ನಮಗೆ ಸಂವಿಧಾನಿಕವಾಗಿ ಪರಿಶಿಷ್ಟ ಪಂಗಡ ಪತ್ರ ನೀಡದಿದ್ದರೆ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ತಕ್ಕ ಪ್ರತ್ತ್ಯುತ್ತರ ಪಡೆಯುತ್ತೀರಿ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.







