ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಧಿಡೀರ್ ಸಾವು ಕಾಂಗ್ರೆಸ್ ಪಾಳಯವನ್ನ ಶೋಕ ಸಾಗರದಲ್ಲಿ ಮುಳುಗಿಸಿದೆ. ಮೈಸೂರಿನ ವಿಜಯನಗರದ ನಿವಾಸದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ. .ಆರ್.ಧೃವನಾರಾಯಣ್ ಅವರ ಅಂತ್ಯಕ್ರಿಯೆ ಹುಟ್ಟೂರು ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿಯಲ್ಲಿ ನಡೆಯಲಿದೆ.
ಭಾನುವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಧೃವನಾರಾಯಣ್ ಅವರ ಅಂತ್ಯಕ್ರಿಯೆ ನೆರವೇರಲಿದ್ದು ಸಂಬಂಧಿಕರು, ರಾಜಕೀಯ ನಾಯಕರು, ಸ್ನೇಹಿತರು ಭಾಗಿಯಾಗಲಿದ್ದಾರೆ. ಹುಲ್ಲಹಳ್ಳಿ ರಸ್ತೆಯಿಂದ ಪಾರ್ಥೀವ ಶರೀರದ ಮೆರವಣಿಗೆ ನಡೆಯಲಿದ್ದು ಇದಾದ ಬಳಿಕ ಹುಟ್ಟೂರು ಹೆಗ್ಗವಾಡಿಗೆ ಪಾರ್ಥಿವ ಶರೀರ ರವಾನೆಯಾಗಲಿದೆ.
ಸಿದ್ದರಾಮಯ್ಯ ಸಾಂತ್ವನ…
ಮಾಜಿ ಸಿಎಂ ಸಿದ್ಧರಾಮಯ್ಯ ವಿಧಿವಶರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ದಾವಣಗೆರೆಯಿಂದ ಮೈಸೂರಿಗೆ ಆಗಮಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ ಮೈಸೂರಿನ ವಿಜಯ ನಗರ ನಿವಾಸದಲ್ಲಿ ಆರ್.ದೃವನಾರಾಯಣ್ ಅವರ ಕುಟುಂಬಸ್ಥರನ್ನ ಭೇಟಿ ಮಾಡಿದ್ರು. ಧ್ರುವನಾರಾಯಣ ಜೊತೆಗಿದ್ದ ಒಡನಾಟ ನೆನೆದರು.
ಕಾಂಗ್ರೆಸ್ ಗೆ ನಷ್ಟ..
ಆರ್ ಧ್ರುವನಾರಾಯಣ್ ಹಠಾತ್ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲದೇ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಿದ್ದರಾಮಯ್ಯ ಭಾವುಕರಾದ್ರು.ಅವರು ಎಲ್ಲಾ ವರ್ಗದವರೊಂದಿಗೂ ಒಡನಾಟ ಹೊಂದಿದ್ದರು.ಪಕ್ಷ ಸಂಘಟನೆ ವಿಚಾರದಲ್ಲಿ ಸದಾ ಸಕ್ರಿಯರಾಗಿರುತ್ತಿದ್ಧರು.ಅವರ ಅಕಾಲಿಕ ಸಾವಿನಿಂದ ತುಂಬಲಾರದ ನಷ್ಟವಾಗಿದೆ.ಅವರ ಕುಟುಂಬ ಸದಸ್ಯರಿಗೆ ದುಖಃ ಭರಿಸುವ ಶಕ್ತಿ ಕೊಡಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ರು.

ಗಳಗಳನೆ ಅತ್ತ ಪ್ರತಾಪ್ ಸಿಂಹ..
ಧ್ರುವನಾರಾಯಣ್ ಸಾಹೇಬರ ಹಠಾತ್ ಸಾವಿನ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ಬೇಸರವಾಯಿತು ಎಂದು ಧ್ರುವನಾರಾಯಣ್ ಅಂತಿಮ ದರ್ಶನ ಪಡೆದ ಬಳಿಕ ಸಂಸದ ಪ್ರತಾಪ್ ಸಿಂಹ ಬೇಸರಗೊಂಡ್ರು.ಮಾಧ್ಯಮಗಳ ಮುಂದೆ ಗಳ ಗಳನೆ ಅತ್ತ ಪ್ರತಾಪ್ ಸಿಂಹ, ಧ್ರುವನಾರಾಯಣ ಜತೆಗಿನ ಒಡನಾಟ ನೆನೆದು ಕಣ್ಣೀರಿಟ್ಟರು.
ದುಃಖದಿಂದಲೇ ಮಾತನಾಡಿದ ಸಂಸದ ಪ್ರತಾಪ್ ಸಿಂಹ.
ಧ್ರುವನಾರಾಯಣ್ ಸಾಹೇಬರು ನನಗೆ ಹಲವು ಬಾರಿ ಗೈಡ್ ಮಾಡಿದ್ದಾರೆ.ಒಳ್ಳೆಯ ಕೆಲಸ ಮಾಡುತ್ತಿದೀಯಾ ಎಂದು ಬೆನ್ನು ತಟ್ಟಿದ್ದರು.ಚಾಮರಾಜನಗರ ಭಾಗದಲ್ಲಿ ಮೊರಾರ್ಜಿ ದೇಸಾಯಿ ಶಾಲೆ, ಇನ್ನಿತರ ವಸತಿ ಶಾಲೆಗಳು ಬಂದಿವೆ ಎಂಬುದಕ್ಕೆ ಧ್ರುವನಾರಾಯಣ್ ಅವರು ಕಾರಣ.ರಾಜಕೀಯ ವಲಯಕ್ಕೆ ಧ್ರುವನಾರಾಯಣ್ ಸಾವು ತುಂಬಲಾರದ ನಷ್ಟ.ಈ ಭಾಗದ ಜನ ನತದೃಷ್ಟರು ಎನಿಸುತ್ತದೆ.
ಅವರ ಕುಟುಂಬಕ್ಕೆ ಸಾವಿನ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರತಾಪ್ ಸಿಂಹ ಸಂತಾಪ ಸೂಚಿಸಿದ್ರು.
ಅಂತಿಮ ದರ್ಶನಕ್ಕೆ ಜನಸಾಗರ..
ಧ್ರುವನಾರಾಯಣ ನಿವಾಸಕ್ಕೆ ಆಗಮಿಸಿದ ಸಾವಿರಾರು ಕೈ ಕಾರ್ಯಕರ್ತರು ಹಾಗೂ ಧ್ರುವನಾರಾಯಣ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಕಡೇ ನಮನ ಸಲ್ಲಿಸಿದರು. ಕೆಲವರು ಶವದ ಮುಂದೆ ಕಣ್ಣೀರಿಟ್ಟು, ಧ್ರುವನಾರಾಯಣ ಅವರಿಗೆ ಜೈ ಕಾರ ಕೂಗಿದ್ರು.
ಇಷ್ಟೇ ಅಲ್ಲದೆ Aicc ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ , ರಾಜ್ಯ ಕೈ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ವಸತಿ ಸಚಿವ ಸೋಮಣ್ಣ , ಸುತ್ತೂರು ಶ್ರೀಗಳು , ಮಾಜಿ ಸಚಿವ ಮಹದೇವಪ್ಪ , ಮಾಜಿ ಶಾಸಕಿ ಗೀತಾ ಮಹಾದೇವಪ್ರಸಾದ್ , ಶಾಸಕ ತನ್ವಿರ್ ಸೇಠ್ , ಸಂಸದ ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಅನೇಕರು ಧ್ರುವನಾರಾಯಣ ಅವರಿಗೆ ಅಂತಿಮ ನಮನ ಸಲ್ಲಿಸಿದರು.












