ಸಿಎಂ ಬಿ.ಎಸ್ ಯಡಿಯೂರಪ್ಪ ಬದಲಾವಣೆ ವಿಚಾರವೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಹೀಗಾಗಿ ಮುಂದಿನ ರಾಜ್ಯದ ಸಿಎಂ ಯಾರು ಎಂಬ ಚರ್ಚೆ ನಡೆಯುತ್ತಲೇ ಇದೆ. ಒಂದೆಡೆ ಸಿಎಂ ಗಾದಿಗಾಗಿ ಬಿಜೆಪಿ ರಾಜ್ಯ ನಾಯಕರು ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ ಸ್ಥಾನದಲ್ಲೇ ಬಿ.ಎಸ್ ಯಡಿಯೂರಪ್ಪ ಅವರನ್ನು ಉಳಿಸಲು ವೀರಶೈವ ಲಿಂಗಾಯತ ಸಮುದಾಯ ಸರ್ಕಸ್ ನಡೆಸುತ್ತಿದೆ.
ಹೀಗಿರುವಾಗಲೇ ಸಚಿವ ಬಿ.ಶ್ರೀರಾಮುಲು ಡಿಸಿಎಂ ಆಗಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಈ ಮುನ್ಸೂಚನೆ ಸಿಕ್ಕಿದ್ದೇ ತಡ ಬೆಂಬಲಿಗರು ಮತ್ತು ವಾಲ್ಮೀಕಿ ಸಮುದಾಯದ ನಾಯಕರು ಬಾಸ್ ಡಿಸಿಎಂ ಎಂದು ಶ್ರೀರಾಮುಲು ಹೆಸರಿನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಮಾತ್ರವಲ್ಲ ಬದಲಿಗೆ ಡಿಸಿಎಂ ಹುದ್ದೆಯಿಂದ ಸಿಎಸ್ ಆಶ್ವಥ್ ನಾರಾಯಣ್, ಗೋವಿಂದ ಕಾರಜೋಳ, ಲಕ್ಷ್ಮಣ್ ಸವದಿಗೆ ಕೋಕ್ ನೀಡಲಾಗುತ್ತದೆ. ಬಳಿಕ ಪ್ರತೀ ಚುನಾವಣೆಯಲ್ಲೂ ರಾಜ್ಯ ಬಿಜೆಪಿಯನ್ನು ವಾಲ್ಮೀಕಿ ಸಮುದಾಯ ಬೆಂಬಲಿಸಲು ಕಾರಣರಾದ ಬಿ. ಶ್ರೀರಾಮುಲುಗೆ ಡಿಸಿಎಂ ಪೋಸ್ಟ್ ನೀಡಬೇಕೆಂದು ಹೈಕಮಾಂಡ್ ಚಿಂತಿಸಿದೆ ಎನ್ನಲಾಗಿದೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಧ್ಯ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಕ್ಷವನ್ನ ಸಂಘಟಿಸಿದ್ದು ಬಿ. ಶ್ರೀರಾಮುಲು. ಬಿಜೆಪಿಗೆ ಇಡೀ ಮಧ್ಯ ಕರ್ನಾಟಕ ವೋಟ್ ಮಾಡಲು ಹಗಲು ರಾತ್ರಿಯೆನ್ನದೇ ಶ್ರಮಿಸಿದ ಶ್ರೀರಾಮುಲು ಅವರೇ ಕಾರಣ. ಹೀಗಾಗಿ ಇವರಿಗೆ ಡಿಸಿಎಂ ಪೋಸ್ಟ್ ನೀಡಲೇಬೇಕು. ಹೀಗಾದರೆ ಮುಂದಿನ ಚುನಾವಣೆಯಲ್ಲೂ ನಮ್ಮ ಸಮುದಾಯ ಬಿಜೆಪಿಯನ್ನೇ ಬೆಂಬಲಿಸಲಿದೆ ಎಂದು ವಾಲ್ಮೀಕಿ ನಾಯಕ ಜನಾಂಗದ ಮುಖಂಡರು ಹೈಕಮಾಂಡಿಗೆ ಸಂದೇಶ ರವಾನಿಸಿದ್ದಾರೆ.
ಈ ಹಿಂದೆಯೂ ಹೀಗೊಂದು ಆಗ್ರಹ ವಾಲ್ಮೀಕಿ ಸಮುದಾಯದಿಂದ ಇತ್ತು. ಆದರೆ, ಬಿಜೆಪಿ ಸರ್ಕಾರ ಬಂದು ಎರಡು ವರ್ಷಗಳಾದರೂ ಸಚಿವ ಬಿ.ಶ್ರೀರಾಮುಲುಗೆ ಡಿಸಿಎಂ ಪಟ್ಟ ನೀಡಲಿಲ್ಲ. ಬದಲಿಗೆ ಕೇವಲ ಸಚಿವ ಸ್ಥಾನ ನೀಡಿ ಕೈ ತೊಳೆದುಕೊಂಡಿತ್ತು. ಇದರಿಂದ ಸಚಿವ ಶ್ರೀರಾಮುಲು ಸೇರಿದಂತೆ ವಾಲ್ಮೀಕಿ ಸಮುದಾಯ ಬೇಸರಗೊಂಡಿತ್ತು. ಈ ಬೆನ್ನಲ್ಲೇ ಇದರ ವಿರುದ್ಧ ವಾಲ್ಮೀಕಿ ಸಮುದಾಯದ ನಾಯಕರು ಪ್ರತಿಭಟನೆಗಳು ಮಾಡಿದರು. ಇದು ಬಿಜೆಪಿ ಹೈಕಮಾಮಾಂಡ್ ಗಮನಕ್ಕೇ ಬಂದಿದ್ದೇ ತಡ ಶ್ರೀರಾಮುಲು ಅವರನ್ನು ದೆಹಲಿಗೆ ಕರೆಸಿಕೊಂಡಿತು.
ಸಚಿವ. ಬಿ ಶ್ರೀರಾಮುಲು ಜೊತೆಗೆ ಮಾತುಕತೆ ನಡೆಸಿರುವ ಹೈಕಮಾಂಡ್ ಈ ಬಾರಿ ಡಿಸಿಎಂ ಹುದ್ದೆ ಪಕ್ಕಾ ಎಂದು ಮಾತು ಕೊಟ್ಟಿದೆಯಂತೆ. ಇದು ವಾಲ್ಮೀಕಿ ಸಮುದಾಯವನ್ನ ಸೆಳೆಯೋಕೆ ಮತ್ತೊಂದು ಪ್ಲಾನ್ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿವೆ. ಅದಕ್ಕೆ ಸಾಕ್ಷಿಯೇ ಇತ್ತೀಚೆಗೆ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿದ್ದಾಗಲೇ ರಾಮುಲುಗೆ ಹೈಕಮಾಂಡ್ ಮಾತು ನೀಡಿರುವುದು.
ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡುವಂತೆ ವಾಲ್ಮೀಕಿ ಸಮುದಾಯದ ನಾಯಕರು ಒತ್ತಾಯಿಸಿದ್ದಾರೆ. ಆದರೆ, ಶ್ರೀರಾಮುಲುಗೆ ಡಿಸಿಎಂ ಹುದ್ದೆ ನೀಡೋಕೆ ಹೈಕಮಾಂಡ್ ರೆಡಿ ಇದೆ.
ಇದರ ನಡುವೆ ಇತ್ತೀಚೆಗೆ ಸಿ.ಡಿ ಪ್ರಕರಣದಲ್ಲಿ ಸಿಲುಕಿಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಜಾರಕಿಹೊಳಿ ಕೂಡ ತನ್ನ ಜಾತಿ ಕೋಟಾದಡಿ ಡಿಸಿಎಂ ಹುದ್ದೆಗೆ ಅರ್ಜಿ ಹಾಕಿದ್ದಾರಂತೆ.
ನಾನು ವಾಲ್ಮೀಕಿ ಸಮಾಜದ ಪ್ರಬಲ ನಾಯಕ, ನನಗೂ ಡಿಸಿಎಂ ಪೋಸ್ಟ್ ಕೊಡಿ. ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದೇನೆ. ನಾನು ಶ್ರೀರಾಮುಲು ಅವರಿಗಿಂತಲೂ ಏನು ಕಡಿಮೆ ಇಲ್ಲ. ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಪೋಸ್ಟ್ ನೀಡೋದಾದರೆ ಅದು ನನಗೆ ಬೇಕು ಎಂದು ಪಟ್ಟು ಹಿಡಿದಿದ್ದಾರಂತೆ.
ಇನ್ನು, ರಮೇಶ್ ಜಾರಕಿಹೊಳಿ ನಡೆಗೆ ಬಿ. ಶ್ರೀರಾಮುಲು ಬೇಸರ ಮಾಡಿಕೊಂಡಿದ್ದಾರೆ. ವಾಲ್ಮೀಕಿ ಸಮಾಜದ ಮುಖಂಡರಲ್ಲೂ ಈ ವಿಚಾರವಾಗಿ ಎರಡು ಬಣ ಆಗಿದೆ. ಸಮುದಾಯದ ಮಠಾಧೀಶರಲ್ಲೂ ಕೆಲವರು ರಮೇಶ್ ಜಾರಕಿಯೊಳಿಯನ್ನು ಬೆಂಬಲಿಸಿದರೆ, ಮತ್ತೆ ಕೆಲವರು ಬಿ. ಶ್ರೀರಾಮುಲು ಬೆನ್ನಿಗೆ ನಿಂತಿದ್ದಾರೆ. ಹೀಗಾಗಿ ಬಿಜೆಪಿ ಹೈಕಮಾಂಡ್ ನಿಮ್ಮಬ್ಬರಲ್ಲಿ ಯಾರು ಬೇಕು ಎಂದು ನಿರ್ಧಾರ ಮಾಡಿ ಬನ್ನಿ ಎಂದು ಮತ್ತೊಂದು ಅವಕಾಶ ನೀಡಿದೆ ಎನ್ನಲಾಗುತ್ತಿದೆ.