ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) , ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D. K. Shivakumar) ಇಬ್ಬರು ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ಧರಿಸಿದ್ದ ಕಾರ್ಟಿಯರ್ ಕಂಪನಿ ವಾಚ್(Cartier watch) ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಅಲ್ಲದೇ ಪ್ರತಿಪಕ್ಷ ಬಿಜೆಪಿ(BJP) ವಾಚ್ ಕುರಿತು ಚುನಾವಣಾ ಆಯೋಗಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಆರೋಪಿಸಿತ್ತು.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಆಪಾದಿಸಿದ್ದರು. ಅಫಿಡವಿಟ್‍ನಲ್ಲಿ ಡಿ.ಕೆ.ಶಿವಕುಮಾರ್ ಅವರು ಒಂದು ರೋಲೆಕ್ಸ್ ವಾಚ್ ಬೆಲೆಯನ್ನು ರೂ.9 ಲಕ್ಷ, ಹ್ಯುಬ್ಲೋ ವಾಚ್ ಬೆಲೆಯನ್ನು ರೂ.23,90,246 ಎಂದು ನಮೂದಿಸಿದ್ದಾರೆ.

ಅವರಿಬ್ಬರ ಕೈಯಲ್ಲಿ ಇರುವ ಕಾರ್ಟಿಯರ್ ಕಂಪನಿಯ ವಾಚ್ ದರ ರೂ.43 ಲಕ್ಷ ಇದೆ. ತೆರಿಗೆ ಸೇರಿ 47 ಲಕ್ಷ ರೂ ಆಗುತ್ತದೆ. ಈ ವಾಚ್‌ನ ಮಾಹಿತಿ ಅಫಿಡವಿಟ್‌ನಲ್ಲಿ ಇಲ್ಲ. ಇದು ಕಳವು ಮಾಡಿದ ವಾಚ್ ಇರಬಹುದೇ? ಖರೀದಿಸಿದ್ದರೆ ಈ ಬಗ್ಗೆ ದಾಖಲೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದರು. ವಾಚ್ ಕುರಿತು ಸಾಕಷ್ಷು ಅನುಮಾನ ವ್ಯಕ್ತಪಡಿಸಿದ್ದರು.
ಛಲವಾದಿ ನಾರಾಯಣಸ್ವಾಮಿ ಅವರ ಈ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅಫಿಡವಿಟ್ ಸಮೇತ ಉತ್ತರಿಸುವ ಮೂಲಕ ತಿರುಗೇಟು ನೀಡಿದ್ದಾರೆ ʼಮಿಸ್ಟರ್ ನಾರಾಯಣಸ್ವಾಮಿ.., ಇಲ್ಲಿದೆ ನೋಡಿ ಲೋಕಾಯುಕ್ತಕ್ಕೆ ನಾನು ಸಲ್ಲಿಸಿರೋ ಅಫಿಡವಿಟ್. ಜವಾಬ್ದಾರಿಯುತ ಸ್ಥಾನದಲ್ಲಿರೋ ನೀವು ನಿಮ್ಮ ಬಾಯಿ ತೆವಲಿಗಾಗಿ ಮನಸ್ಸಿಗೆ ಬಂದಂತೆ ಸುಳ್ಳು ಹೇಳಬಾರದು. ಇದು ನಿಮಗೆ ಘನತೆ ತರುವುದಿಲ್ಲʼ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ʼನಾನು ಪಾರದರ್ಶಕ ವ್ಯಕ್ತಿ. ಏನನ್ನೂ ಮುಚ್ಚಿಟ್ಟುಕೊಳ್ಳಬಾರದು ಅಂತಲೇ ನಿಜ ಹೇಳಿದ್ದೇನೆ. ನನಗೆ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ನಮಗೆ ಇಷ್ಟವಾದ ವಾಚ್ ಕಟ್ಟಿಕೊಳ್ಳುವ ಯೋಗ್ಯತೆ ಇಲ್ಲವೇ? ಹಕ್ಕು ಇಲ್ಲವೇ..? “ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ” ಆಡಬೇಡಿ. ನಿಮಗಿರೋ ಸಾಂವಿಧಾನಿಕ ಅಧಿಕಾರ, ಜವಾಬ್ದಾರಿಯನ್ನು ವಿವೇಕದಿಂದ ನಿರ್ವಹಿಸಿ. ಅವಿವೇಕಿಯಂತೆ ಆಡಬೇಡಿ..! ಬೇಕಿದ್ದರೆ ಲೋಕಾಯುಕ್ತ ಕಚೇರಿಗೆ ಹೋಗಿ ನನ್ನ ಅಫಿಡವಿಟ್ ಚೆಕ್ ಮಾಡಿಕೊಳ್ಳಿʼ ಎಂದು ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೆಡ್ಯೂಲ್ 7ರ ಅಡಿಯಲ್ಲಿ ಸಲ್ಲಿಸಲಾಗಿರುವ ಅಫಿಡವಿಟ್‌ನಲ್ಲಿ ರೋಲೆಕ್ಸ್ ಗಡಿಯಾರ 9 ಲಕ್ಷ ರೂಪಾಯಿ, ಕಾರ್ಟಿಯರ್ ಗಡಿಯಾರ 23,90,246 ಹಾಗೂ 12,06,000 ಲಕ್ಷ ರೂಪಾಯಿಯ ಮೌಲ್ಯದ್ದಾಗಿವೆ. ಆದರೆ ಇವುಗಳನ್ನು ಸಂಬಂಧಿಕರು, ಗೆಳೆಯರು ಕೊಡುಗೆ ನೀಡಿದ್ದಾರೆ. ಅಲ್ಲದೇ ಕೆಲವನ್ನು ಕೃಷಿ ಆದಾಯ, ಡಿವಿಡೆಂಟ್ ಸೇರಿದಂತೆ ಸಂಬಳದಂತಹ ಮೂಲಗಳ ಆದಾಯದಿಂದ ಪಡೆಯಲಾಗಿದೆ ಎಂದು ಡಿಕೆ ಶಿವಕುಮಾರ್ ನಾರಾಯಣಸ್ವಾಮಿಗೆ ಕೌಂಟರ್ ನೀಡಿದ್ದಾರೆ.
ಮಿಸ್ಟರ್ ನಾರಾಯಣಸ್ವಾಮಿ..,@NswamyChalavadi ಇಲ್ಲಿದೆ ನೋಡಿ ಲೋಕಾಯುಕ್ತಕ್ಕೆ ನಾನು ಸಲ್ಲಿಸಿರೋ ಅಫಿಡವಿಟ್!
ಜವಾಬ್ದಾರಿಯುತ ಸ್ಥಾನದಲ್ಲಿರೋ ನೀವು ನಿಮ್ಮ ಬಾಯಿ ತೆವಲಿಗಾಗಿ ಮನಸ್ಸಿಗೆ ಬಂದಂತೆ ಸುಳ್ಳು ಹೇಳಬಾರದು. ಇದು ನಿಮಗೆ ಘನತೆ ತರುವುದಿಲ್ಲ!
ನಾನು ಪಾರದರ್ಶಕ ವ್ಯಕ್ತಿ. ಏನನ್ನೂ ಮುಚ್ಚಿಟ್ಟುಕೊಳ್ಳಬಾರದು ಅಂತಲೇ ನಿಜ ಹೇಳಿದ್ದೇನೆ.… pic.twitter.com/nNBfGuJMHM
— DK Shivakumar (@DKShivakumar) December 5, 2025












