ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅಭದ್ರತೆ. ಒಳ ಬೇಗುದಿ ಇದೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹನೆಯ ಕಟ್ಟೆ ಯಾವಾಗ ಒಡೆಯುತ್ತದೆ ಎನ್ನುವುದು ಪ್ರಶ್ನೆಯಾಗಿದ್ದು, ಕಾಲ ಸನ್ನಿಹಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅಭದ್ರತೆ. ಒಳ ಬೇಗುದಿ ಆರಂಭದಿಂದಲೂ ಇದೆ, ಇದು ನಿರೀಕ್ಷಿತ ಬೆಳವಣಿಗೆ ಇದರಲ್ಲಿ ಬಹಳ ಮುಖ್ಯ ವಿಚಾರ ಡಿಕೆಶಿವಕುಮಾರ್ ಅವರ ಸಹನೆ ಅವರು ತಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಬಹಳ ಸಹನೆ ಪ್ರದರ್ಶನ ಮಾಡುತ್ತಿದ್ದಾರೆ. ಅದು ಅವರ ಮುತ್ಸದ್ಧಿತನವೋ? ಹೈಕಮಾಂಡ್ ಸೂಚನೆಯೋ ನೋಡಬೇಕು. ಡಿಕೆಶಿವಕುಮಾರ್ ಅವರ ಸಹನೆ ಕಟ್ಟೆ ಯಾವಾಗ ಒಡೆಯುತ್ತದೆ ಅನ್ನುವುದು ಮುಖ್ಯವಾಗುತ್ತದೆ. ಪ್ರಕ್ರಿಯೆ ಆರಂಭವಾಗಿದ್ದು, ಕಾಲ ಯಾವಾಗ ಬರುತ್ತದೆ ಎಂದು ನೋಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಮೇಲಿನ ಕಮೀಷನ್ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರ ಎಲ್ಲದರಲ್ಲಿ ಕಮೀಷನ್, ಭ್ರಷ್ಟಾಚಾರ ನಡೆಸುತ್ತಿದೆ. ಇದರಿಂದ ಜನ ಹೈರಾಣಾಗಿದ್ದಾರೆ. ಅಬಕಾರಿ ಗುತ್ತಿಗೆದಾರರು, ಪಿಡಬ್ಲ್ಯುಡಿ, ನೀರಾವರಿ ಇಲಾಖೆಯ ಗುತ್ತಿಗೆದಾರರು ಅನುಭವಿಸುತ್ತಿದ್ದಾರೆ. ಜನ ಸಾಮಾನ್ಯರು ರೋಸಿ ಹೋಗಿದ್ದಾರೆ. ಮಧ್ಯಮ ವರ್ಗದವರು ಹೈರಾಣಾಗಿದ್ದಾರೆ.
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಒಂದು ಸೈಟ್ ತೆಗೆದುಕೊಳ್ಳಲಾಗದ ವಾತಾವರಣವನ್ನು ಸರ್ಕಾರ ನಿರ್ಮಾಣ ಮಾಡಿದೆ. ಎಸ್ಸಿ, ಎಸ್ಟಿ ಬೋರ್ ವೆಲ್ ಗಳಿಗೂ ಕಮೀಷನ್ ಪಡೆಯುತ್ತಿದ್ದಾರೆ. ಭ್ರಷ್ಟಾಚಾರ ಪದೇ ಪದೇ ಮುನ್ನೆಲೆಗೆ ಬರುತ್ತಿದೆ. ಇದನ್ನು ಸಿಎಂ ನಿರಾಕರಿಸಿರಬಹುದು, ಅವರಿಗೆ ಹಿಡಿತ ಕೈ ತಪ್ಪಿರಬಹುದು, ಅವರೇ ಭಾಗಿಯಾಗಿರಬಹುದು ಅಥವಾ ಅದರ ಬಗ್ಗೆ ಮಾತನಾಡಿದರೆ ಅಧಿಕಾರಕ್ಕೆ ಧಕ್ಕೆ ಬರುತ್ತದೆ ಎನ್ನುವ ಭಾವನೆ ಮೂಡಿದೆ. ಸರ್ಕಾರದಲ್ಲಿ ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯ ಪರ್ಸೆಂಟ್ ಕಮೀಷನ್ ಇದೆ. ಇಷ್ಟೇ ಇದೆ ಅಂತ ಹೇಳಲು ಆಗುವುದಿಲ್ಲ. ಆದರೆ, ಕುಮಾರಸ್ವಾಮಿಯವರು ಹೇಳಿರುವುದು ಭ್ರಷ್ಟಾಚಾರ ಮಿತಿಮೀರಿದೆ ಎಂದು ಹೇಳಿದರು.ಕಾಂಗ್ರೆಸ್ ನಲ್ಲಿ ಡಿನ್ನರ್ ಮೀಟಿಂಗ್ ಗಳು ಅವರ ಆಂತರಿಕ ವಿಚಾರ, ಈ ಬಗ್ಗೆ ಹೆಚ್ಚು ವಿಶ್ಲೇಷಣೆ ಮಾಡುವುದಿಲ್ಲ ಎಂದು ಹೇಳಿದರು.
ಗೊಂದಲಕ್ಕೆ ತೆರೆ:ಬಿಜೆಪಿಯಲ್ಲೂ ಭೋಜನ ಕೂಟ ನಡೆಯುತ್ತಿದಿಯಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಆಗಾಗ ಒಟ್ಟಿಗೆ ಊಟ ಮಾಡುತ್ತೇವೆ. ಅದರಲ್ಲಿ ಮಹತ್ವ ಏನು ಇಲ್ಲ ಎಂದರು. ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳ ಬಗ್ಗೆ ಪಕ್ಷದ ಹೈಕಮಾಂಡ್ ಗಮನ ಹರಿಸಿದೆ.ಈ ತಿಂಗಳಲ್ಲಿ ಸರಿ ಹೋಗಲಿದೆ.ಒಳ್ಳೆಯ ರೀತಿಯಲ್ಲಿ ಎಲ್ಲವೂ ಬಗೆಹರಿಯುವ ವಾತಾವರಣವನ್ನು ಹೈಕಮಾಂಡ್ ನಿರ್ಮಾಣಿಸಲಿದೆ ಎಂದು ಹೇಳಿದರು.