ಆಡಳಿತ ಸರ್ಕಾರ ತನ್ನ ನೀತಿ-ನಡೆ ಪ್ರಶ್ನಿಸುವವರ ವಿರುದ್ಧ ಪ್ರಯೋಗಿಸಿದೆ ಎನ್ನಲಾಗುತ್ತಿರುವ ಪೇಗಾಸಸ್ ಸ್ಪೈವೇರ್ ಗೂಢಚಾರಿಕೆಯನ್ನು ಜಗಜ್ಜಾಹೀರುಗೊಳಿಸಿರುವ ಸಂಚಲನಕಾರಿ ಪೇಗಾಸಸ್ ಲೀಕ್ಸ್ ನ ಮತ್ತಷ್ಟು ಆಘಾತಕಾರಿ ವಿವರಗಳು ಬಹಿರಂಗವಾಗಿವೆ.
ದೇಶದಲ್ಲಿ ಹುಸಿ ರಾಷ್ಟ್ರೀಯತೆಯ ಅಮಲು ಮತ್ತು ಪ್ರಧಾನಿ ಮೋದಿಯವರ ಕೃತಕ ‘ಅವತಾರ ಪುರುಷ’ನ ಇಮೇಜ್ ಮೂಲಕ ಬಹುಸಂಖ್ಯಾತ ಜನರು ಉಘೇ ಉಘೇ ಎಂಬ ‘ಭಕ್ತಿ ಪರವಶ ಮಂತ್ರ’ ಜಪಿಸುವುದನ್ನು ಭಾರತೀಯ ಜನತಾ ಪಕ್ಷದ ಆಡಳಿತ ಯಶಸ್ವಿಯಾಗಿ ಜಾರಿಗೊಳಿಸಿದೆ. ಅಂತಹ ತನ್ನ ಮಂಕುಬೂದಿಗೆ ಪರವಶವಾಗಿ ತನ್ನ ತಾಳಕ್ಕೆ ಕುಣಿಯದ, ತನ್ನ ಜನವಿರೋಧಿ ನೀತಿ-ನಡೆಗಳನ್ನು ಟೀಕಿಸುವ, ಪ್ರಶ್ನಿಸುವ ಮಂದಿಯನ್ನು ಬಗ್ಗುಬಡಿಯಲು ನಡೆಸಿದ ಎನ್ನಲಾಗುತ್ತಿರುವ ಈ ಆಘಾತಕಾರಿ ಮೊಬೈಲ್ ಗೂಢಚಾರಿಕೆಗೆ ದೇಶದ ಸುಪ್ರೀಂಕೋರ್ಟ್ ಮಾಜಿ ಮುಖ್ಯನ್ಯಾಯಮೂರ್ತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳೆ ಮತ್ತು ಆಕೆಯ ಸಂಬಂಧಿಕರು ಕೂಡ ಗುರಿಯಾಗಿದ್ದಾರೆ ಎಂಬ ಸಂಗತಿ ಇದೀಗ ಬಯಲಾಗಿದೆ.
ಮಾಜಿ ಸಿಜೆಐ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ರಂಜನ್ ಗೊಗಾಯ್ ವಿರುದ್ಧ 2019ರ ಏಪ್ರಿಲ್ ನಲ್ಲಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಸುಪ್ರೀಂಕೋರ್ಟಿನ ನೌಕರರಾಗಿದ್ದ ಮಹಿಳೆ, ಆಕೆಯ ಪತಿ, ಪತಿಯ ಸಹೋದರ ಸೇರಿದಂತೆ ಅವರು ಮತ್ತು ಅವರ ಆಪ್ತರ ಸುಮಾರು 11 ಮೊಬೈಲ್ ಗಳನ್ನು ಈ ಲೈಂಗಿಕ ಕಿರುಕುಳ ಪ್ರಕರಣದ ದೂರು ದಾಖಲಾದ ಕೆಲವೇ ದಿನಗಳಲ್ಲಿ ಹೀಗೆ ಸ್ಪೈವೇರ್ ಮೂಲಕ ಕಣ್ಣಿಡಲು ಪಟ್ಟಿ ಮಾಡಲಾಗಿತ್ತು. ಯಾವುದೇ ಮೊಬೈಲ್ ಸಂಖ್ಯೆಯ ಮೇಲೆ ಪೇಗಾಸಸ್ ಸ್ಪೈವೇರ್ ಬಳಸಿ ಅದನ್ನು ಸಂಪೂರ್ಣ ಕಣ್ಗಾವಲಿಗೆ ಒಳಪಡಿಸುವ ಮುನ್ನ ಕೆಲವು ದಿನಗಳ ಕಾಲ ಆ ಮೊಬೈಲನ್ನು ‘ಲುಕ್ ಔಟ್’ ಪಟ್ಟಿಯಲ್ಲಿಟ್ಟು ನಿಗಾ ಇರಿಸಲಾಗುತ್ತದೆ. ರಂಜನ್ ಗೋಗಾಯ್ ವಿರುದ್ಧ ಗಂಭೀರ ಆರೋಪ ಮಾಡಿದ ಮಹಿಳೆ ಮತ್ತು ಆಕೆಯ ಕುಟುಂಬದವರ ಮೊಬೈಲ್ ಗಳನ್ನು ಕೂಡ 2019ರಲ್ಲಿ ಇಂತಹ ಲುಕ್ ಔಟ್ ಪಟ್ಟಿಗೆ ಸೇರಿಸಲಾಗಿತ್ತು ಎಂಬ ಆಘಾತಕಾರಿ ಸಂಗತಿ ಇದೀಗ ಪ್ರೆಂಚ್ ಮಾಧ್ಯಮದ ವಲಯದ ‘ಫಾರ್ಬಿಡನ್ ಸ್ಟೋರಿಸ್’ ಮತ್ತು ‘ಆಮ್ನೆಸ್ಟಿ ಇಂಟರ್ ನ್ಯಾಷನಲ್’ ನಡೆಸಿರುವ ಜಂಟಿ ತನಿಖೆಯ ‘ಪೇಗಾಸಸ್ ಲೀಕ್ಸ್’ ನಲ್ಲಿ ಬಹಿರಂಗವಾಗಿದೆ.

ಜಗತ್ತಿನ ಶಕ್ತಿಶಾಲಿ ಗೂಢಚರ್ಯೆ ಸಾಫ್ಟವೇರ್ ಎಂದೇ ಹೆಸರಾಗಿರುವ ‘ಪೇಗಾಸಸ್’ ಎಂಬ ಸ್ಪೈವೇರ್ ಸೇವೆ ಒದಗಿಸುವ ಇಸ್ರೇಲಿನ ಎನ್ ಎಸ್ ಒ ಸಂಸ್ಥೆ, ತನ್ನ ಈ ಸ್ಪೈವೇರ್ ಸೇವೆಯನ್ನು ಜಗತ್ತಿನ ಅಧಿಕೃತ ಸರ್ಕಾರಗಳು ಮತ್ತು ಸರ್ಕಾರಿ ತನಿಖಾ ಸಂಸ್ಥೆಗಳು ಮಾತ್ರ ಬಳಸಲು ಅವಕಾಶವಿದೆ. ಉಳಿದ ಯಾವುದೇ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಅದು ಲಭ್ಯವಿಲ್ಲ ಎಂಬುದನ್ನು ಮತ್ತೆ ಮತ್ತೆ ಸ್ಪಷ್ಟಪಡಿಸಿದೆ. ಆ ಹಿನ್ನೆಲೆಯಲ್ಲಿ ಈ ಬಾರಿ ಪೇಗಾಸಸ್ ಲೀಕ್ ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿರುವ 300 ಭಾರತೀಯರ ಮೊಬೈಲ್ ಮೇಲೆ ಕಣ್ಗಾವಲು ಇಡಲಾಗಿತ್ತು ಎಂಬ ಅಂಶವೂ ಸೇರಿ, ಮಾಜಿ ಸಿಜೆಐ ವಿರುದ್ಧದ ಲೈಂಗಿಕ ಹಗರಣದ ಆರೋಪ ಮಾಡಿದ ಮಹಿಳೆ ಮತ್ತು ಆಕೆಯ ಸಂಬಂಧಿಕರ ಮೊಬೈಲ್ ಮೇಲಿನ ಗೂಢಚಾರಿಕೆ ಕೂಡ ಭಾರತ ಸರ್ಕಾರ, ಇಲ್ಲವೇ ಸರ್ಕಾರದ ತನಿಖಾ ಸಂಸ್ಥೆಗಳಲ್ಲದೆ, ಬೇರೆ ಯಾರೂ ನಡೆಸಲು ಸಾಧ್ಯವಿಲ್ಲ ಎಂದೇ ಹೇಳಲಾಗುತ್ತಿದೆ.
ಹಾಗಾಗಿ, ಮಾಜಿ ಸಿಜೆಐ ಮತ್ತು ಹಾಲಿ ಬಿಜೆಪಿ ಆಡಳಿತದಿಂದ ನಾಮಕರಣಗೊಂಡಿರುವ ರಾಜ್ಯಸಭಾ ಸದಸ್ಯ ರಂಜನ್ ಗೋಗಾಯ್ ವಿರುದ್ಧದ ಲೈಂಗಿಕ ಹಗರಣ ಪ್ರಕರಣ ಇದೀಗ ಮತ್ತೊಮ್ಮೆ ಹಲವು ಆಯಾಮದ ಚರ್ಚೆಗೆ ತೆರೆದುಕೊಂಡಿದೆ.
2018ರಲ್ಲಿ ಸುಪ್ರೀಂಕೋರ್ಟಿನ ಮುಖ್ಯನ್ಯಾಯಮೂರ್ತಿಯಾಗಿದ್ದ ರಂಜನ್ ಗೋಗಾಯ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದರು ಎಂದು ಸುಪ್ರೀಂಕೋರ್ಟಿನ ಸಿಬ್ಬಂದಿಯಾಗಿದ್ದ ಮಹಿಳೆ ಹೇಳಿಕೆ ನೀಡಿದ್ದರು. ಆಕೆಯ ಆ ಹೇಳಿಕೆಯ ಬಳಿಕ 2018ರ ಡಿಸೆಂಬರಿನಲ್ಲಿ ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಬಳಿಕ 2019ರ ಏಪ್ರಿಲ್ 20ರಂದು ಆ ಮಹಿಳೆ, ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿದ್ದರು. ಹಾಗೆ ಪ್ರಮಾಣ ಪತ್ರ ಸಲ್ಲಿಸಿ ಕೆಲವೇ ದಿನಗಳಲ್ಲಿ ಆಕೆಯನ್ನು ‘ನಿಗಾ ಇಡಬೇಕಾದ ವ್ಯಕ್ತಿ’ಗಳ ಪಟ್ಟಿಗೆ ಸೇರಿಸಲಾಗಿತ್ತು ಎಂಬುದು ಇದೀಗ ಬಹಿರಂಗವಾಗಿರುವ ಪೇಗಾಸಸ್ ಲೀಕ್ಸ್ ದಾಖಲೆಗಳು ಹೇಳುತ್ತಿವೆ.

ಆ ಮಹಿಳೆಯ ಮೇಲೆ ಕಣ್ಣಿಡಲು ಪಟ್ಟಿ ಮಾಡಿಕೊಂಡ ಬೆನ್ನಲ್ಲೆ ಆಕೆಯ ಮೂರು ಮೊಬೈಲ್ ನಂಬರ್ ಹಾಗೂ ಆಕೆಯ ಪತಿ ಮತ್ತು ಪತಿಯ ಇಬ್ಬರು ಸಹೋದರರಿಗೆ ಸಂಬಂಧಿಸಿದ ಎಂಟು ಮೊಬೈಲ್ ಸೇರಿದಂತೆ ಒಟ್ಟು ಹನ್ನೊಂದು ನಂಬರುಗಳನ್ನು ಸಿಜೆಐ ವಿರುದ್ಧದ ಆಕೆಯ ಗಂಭೀರ ಆರೋಪ ಬಹಿರಂಗವಾದ ಒಂದೇ ವಾರದಲ್ಲಿ ಲುಕ್ ಔಟ್ ಪಟ್ಟಿಗೆ ಸೇರಿಸಲಾಗಿದೆ. ಆ ಪಟ್ಟಿಯಲ್ಲಿ ಆಕೆಯ ಹೆಸರು, ಹಾಗೆ ಹೆಸರು ಸೇರ್ಪಡೆಗೊಂಡ ಸಂದರ್ಭಗಳು ಆಕೆ ಮತ್ತು ಆಕೆಯ ಕುಟುಂಬದವರ ಮೇಲೆ ಯಾರು ಈ ಗೂಢಚಾರಿಕೆ ನಡೆಸಿರಬಹುದು ಮತ್ತು ಏತಕ್ಕಾಗಿ ನಡೆಸಿರಬಹುದು ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತಿವೆ. ಲುಕ್ ಔಟ್ ಪಟ್ಟಿಯಲ್ಲಿ ಈ ಕುಟುಂಬದ ಮೊಬೈಲ್ ಗಳು ಇದ್ದವು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಆದರೆ, ನಿರ್ದಿಷ್ಟವಾಗಿ ಆ ಮೊಬೈಲ್ ಗಳಲ್ಲಿ ಪೇಗಾಸಸ್ ಸ್ಪೈವೇರ್ ಬಳಕೆಯಾಗಿತ್ತೆ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆ ಮೊಬೈಲ್ ಬಳಕೆದಾರರಾದ ಮಹಿಳೆ ಮತ್ತು ಅವರ ಕುಟುಂಬವರ್ಗದವರ ಮೊಬೈಲ್ ಗಳನ್ನು ಲ್ಯಾಬ್ ಪರೀಕ್ಷೆಗೆ ಒಳಪಡಿಸಬೇಕಾಗಿದೆ. ಅದಕ್ಕೆ ಅವರ ಅನುಮತಿ ಬೇಕಾಗುತ್ತದೆ. ಆದರೆ, ಸದ್ಯ ತೀವ್ರ ಮಾನಸಿಕ ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಅವರು ಆ ಬಗ್ಗೆ ಆಸಕ್ತಿ ವಹಿಸಿಲ್ಲ ಎಂದು ‘ದ ವೈರ್’ ವರದಿ ಮಾಡಿದೆ.
ಹಾಗೇ ಭಾರತದಲ್ಲಿ ದೇಶದ ಭದ್ರತೆಯ ವಿಷಯದಲ್ಲಾಗಲೀ, ಸಾರ್ವಜನಿಕ ಹಿತಾಸಕ್ತಿಯ ವಿಷಯದಲ್ಲಾಗಲೀ ಯಾವುದೇ ಪಾತ್ರವಿರದ ಮತ್ತು ಅದೇ ಹೊತ್ತಿಗೆ ವ್ಯವಸ್ಥೆಯ ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯಗಳನ್ನು ಪ್ರಶ್ನಿಸುವ, ಸಿಡಿದೇಳುವ ವ್ಯಕ್ತಿಗಳ ವಿರುದ್ಧ ಕಾನೂನುಬಾಹಿರವಾದ ಮತ್ತು ಬಹಳ ಶಕ್ತಿಶಾಲಿಯಾದ ಸ್ಪೈವೇರ್ ನಂತಹ ಡಿಜಿಟಲ್ ಮಾಧ್ಯಮಗಳ ಮೂಲಕ ಗೂಢಚಾರಿಕೆ ಮಾಡಲಾಗುತ್ತಿದೆ. ವ್ಯಕ್ತಿಗಳ ಸಂವಿಧಾನಿಕ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ ಎಂಬ ನಾಗರಿಕ ಹಕ್ಕುಗಳ ಹೋರಾಟಗಾರರು ಮತ್ತು ಮಾಧ್ಯಮಗಳ ಆರೋಪಗಳು ಸುಳ್ಳಲ್ಲ ಎಂಬುದಕ್ಕೆ ಈ ಪ್ರಕರಣ ಒಂದು ಸ್ಪಷ್ಟ ಉದಾಹರಣೆ.

ಅದೇ ಹೊತ್ತಿಗೆ, ಸಂತ್ರಸ್ತೆ ಮತ್ತು ಆಕೆಯ ಕುಟುಂಬವರ್ಗದವರ ಮೊಬೈಲ್ ಕದ್ದಾಲಿಕೆಯ ಮೂಲಕ ಗೂಢಚಾರಿಕೆ ಮಾಡಿದವರು ಯಾವೆಲ್ಲಾ ಮಾಹಿತಿಯನ್ನು ಪಡೆದುಕೊಂಡರು? ಆ ಮಾಹಿತಿಗಳು ಆಕೆಯ ಪ್ರಕರಣದ ವಿಷಯದಲ್ಲಿ ಸುಪ್ರೀಂಕೋರ್ಟಿನ ತೀರ್ಪಿನ ಮೇಲೆ ಪ್ರಭಾವ ಬೀರಿದ್ದವೆ? ಅಥವಾ ಆ ಮಾಹಿತಿಯನ್ನು ಮುಂದಿಟ್ಟುಕೊಂಡು ಆಕೆ ಆರೋಪ ಹೊರಿಸಿದ ಅಂದಿನ ಸಿಜೆಐ ಮೇಲೆ ಪ್ರಭಾವ ಬೀರಲಾಗಿತ್ತೆ? ಆ ಪ್ರಕರಣದ ಬಳಿಕ ಸಿಜೆಐ ಅವರು ವಿಚಾರಣೆ ನಡೆಸಿದ ಐತಿಹಾಸಿಕ ಪ್ರಕರಣಗಳು ಮತ್ತು ಅವುಗಳ ತೀರ್ಪುಗಳು ಹಾಗೂ ಮಹತ್ವದ ಪ್ರಕರಣಗಳ ರೋಸ್ಟರ್ ಹಂಚಿಕೆಯ ವಿಷಯದಲ್ಲಿ ಈ ಮೊಬೈಲ್ ಸ್ಪೈವೇರ್ ಗೂಢಚಾರಿಕೆಯ ಪ್ರಭಾವಗಳೇನಾದರೂ ಇದ್ದವೆ? ಎಂಬಂತಹ ಗಂಭೀರ ಪ್ರಶ್ನೆಗಳಿಗೆ ಈ ಇಡೀ ‘ಪೇಗಾಸಸ್ ಲೀಕ್ಸ್’ ಇಂಬು ನೀಡಿದೆ.
ಮುಂದಿನ ದಿನಗಳಲ್ಲಿ; ಆ ಹಿನ್ನೆಲೆಯಲ್ಲಿ ಈ ಸ್ಪೈವೇರ್ ಗೂಢಚಾರಿಕೆಯ ಕುರಿತು ಹೊರಬರಲಿರುವ ನಿಗೂಢ ಸಂಗತಿಗಳು ಇನ್ನಷ್ಟು ಕುತೂಹಲ ಹುಟ್ಟಿಸಿವೆ. ಸಿಜೆಐ ವಿರುದ್ಧ ದೂರು ನೀಡಿದ ಕೆಲವೇ ತಿಂಗಳಲ್ಲಿ ಮಹಿಳೆ ಸೇರಿದಂತೆ ಇಡೀ ಕುಟುಂಬವೇ ತಮ್ಮ ವಿವಿಧ ಸರ್ಕಾರಿ ನೌಕರಿ ಕಳೆದುಕೊಂಡು ದಿಕ್ಕೆಟ್ಟುಹೋದ ಕುಟುಂಬ ಮತ್ತು ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪದ ಪ್ರಕರಣದ ಹೊರತಾಗಿಯೂ ಸಿಜೆಐ ಆಗಿ ಮುಂದುವರಿದು, ಬಳಿಕ ಆಡಳಿತ ಸರ್ಕಾರದ ಕಡೆಯಿಂದ ರಾಜ್ಯಸಭಾ ಸದಸ್ಯ ಸ್ಥಾನದಂತಹ ಲಾಭದಾಯಕ ಹುದ್ದೆಗೇರಿದ ರಂಜನ್ ಗೋಗಾಯ್ ಮೇಲೆ ಕೂಡ ಪೇಗಾಸಸ್ ಲೀಕ್ಸ್ ಬೀರಲಿರುವ ಪರಿಣಾಮಗಳು ಕೂಡ ಕುತೂಹಲಹುಟ್ಟಿಸಿವೆ.






