ಬೆಂಗಳೂರು: ಫ್ಯಾನ್ಸ್ ವಾರ್ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದಂತೆ ಕಮೆಂಟ್ ಹಾಕುವ ವಿಕೃತ ಮನಸ್ಸಿನ ನೆಟ್ಟಿಗರ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ(Vijayalakshmi Darshan) ಸಿಸಿಬಿಗೆ ದೂರು ನೀಡಿದ್ದರು. ಇದೀಗ ಈ ದೂರಿನ ಬಗ್ಗೆ ಪೊಲೀಸರು ನಡೆಸುತ್ತಿರುವ ತನಿಖೆ ವಿರುದ್ಧ ವಿಜಯಲಕ್ಷ್ಮಿ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗ ದಿಢೀರ್ ಭೇಟಿ ನೀಡಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ, ʼನಾನು ಸಲ್ಲಿಸಿದ ದೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ನಮ್ಮ ದೇಶದಲ್ಲಿ ವ್ಯವಸ್ಥೆ ಮತ್ತು ಕಾನೂನು ಎಲ್ಲರಿಗೂ ಒಂದೇ ಎಂದು ನಾನು ಯಾವಾಗಲೂ ನಂಬಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ. ಬೇರೆ ಮಹಿಳೆ ನೀಡಿದ ದೂರು ಅನ್ನು ಒಂದು ದಿನದೊಳಗೆ ಕ್ರಮ ಕೈಗೊಳ್ಳಲಾಗಿದೆ. ಇದು ನಿಜವಾಗಿಯೂ ನನಗೆ ಆಶ್ಚರ್ಯವಾಗಿದೆʼ.

ʼನನ್ನ ದೂರು ಮುಖ್ಯವಲ್ಲವೇ?. ನನ್ನ ವಕೀಲರಿಂದ ನಿರಂತರ ಫಾಲೋ-ಅಪ್‌ಗಳ ನಂತರವೂ ಯಾವುದೇ ಕ್ರಮವಿಲ್ಲ. ಇಂದು ನಾನು ವೈಯಕ್ತಿಕವಾಗಿ ಹೋಗಿ ಅವರಿಗೆ ನೆನಪಿಸಬೇಕಾಯಿತು. ಯಾವುದೇ ಬಾಹ್ಯ ಒತ್ತಡ ಅಥವಾ ಪ್ರಭಾವ ಈ ವಿಳಂಬಕ್ಕೆ ಕಾರಣ ಆಗಿರದಿರಲಿ. ನಾನು ಇದನ್ನು ಸುಮ್ಮನೆ ಬಿಡುವುದಿಲ್ಲʼ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದು ಅನ್ನು ವಿಜಯಲಕ್ಷ್ಮಿ ಮಾಡಿದ್ದಾರೆ. ಈ ಮೂಲಕ ಪೊಲೀಸರು ತಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ನೇರವಾಗಿ ಹೇಳಿದ್ದಾರೆ.











