ನಟ ದರ್ಶನ್ (Actor darshan) ಮತ್ತು ಅವರ ಅಭಿಮಾನಿಗಳ ನಡುವಿನ ಸಂಬಂಧ ಅತ್ಯಂತ ಅವಿನಾಭಾವ ಸಂಬಂಧ. ಏನೇ ಏರಿಳಿತಗಳಿದ್ದರೂ, ಏನೇ ಸರಿ ತಪ್ಪುಗಳಿದ್ದರೂ ಕೂಡ ಅಭಿಮಾನಕ್ಕೆ ಇದುವರೆಗೂ ಯಾವುದೇ ಧಕ್ಕೆಯಾಗಿಲ್ಲ. ಇದಕ್ಕೆ ಸಾಕ್ಷಿ ದರ್ಶನ್ ಈ ಬಾರಿಯ ಹುಟ್ಟುಹಬ್ಬ.

ಹೌದು, ಈ ಬಾರಿ ತಮ್ಮ ಆರೋಗ್ಯ ಸಮಸ್ಯೆಯ ಕಾರಣ, ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗಲು ಸಾಧ್ಯವಿಲ್ಲ ಎಂದು ದರ್ಶನ್ ವಿಡಿಯೋ ಮಾಡಿ ಅಭಿಮಾನಿಗಳನ್ನು ಮನವಿ ಮಾಡಿಕೊಂಡಿದ್ದರು. ಆದ್ರೂ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ. ಹೀಗಾಗಿ ಸಂತಸಗೊಂಡಿರುವ ದಾಸ ಫ್ಯಾನ್ಸ್ ಗೆ ಥ್ಯಾಂಕ್ಸ್ ಹೇಳಿ ಪೋಸ್ಟ್ ಹಾಕಿದ್ದಾರೆ.

ಪ್ರೀತಿಯ ಸೆಲೆಬ್ರಿಟಿಸ್ ಗಳೇ..!
ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ.
ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ನಾನು ಮನದಾಳದಿಂದ ಕೃತಜ್ಞನಾಗಿದ್ದೇನೆ. ನೀವು ಹಲವೆಡೆ ಮಾಡುತ್ತಿರುವ ದಾನ-ಧರ್ಮ ಕಾರ್ಯಗಳು ಸಹಸ್ರಾರು ಹೃದಯಗಳನ್ನು ಸ್ಪರ್ಶಿಸುವಂತಹದ್ದು. ನಿಮ್ಮ ಈ ಕೆಲಸಗಳು ಅನೇಕರಿಗೆ ದಾರಿದೀಪವಾಗಲಿ.
ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಆದಷ್ಟು ಬೇಗ ನಿಮ್ಮನ್ನು ಕಾಣುವ ಹಂಬಲ, ಕಾತುರ ನನ್ನಲಿಯೂ ಇದೆ. ನಿಮ್ಮನ್ನು ಪಡೆದಿರುವ ನಾನೇ ಧನ್ಯ
ನಿಮ್ಮ ದಾಸ ದರ್ಶನ್ .. ಎಂದು ನಟ ದರ್ಶನ್ ತಮ್ಮ ಅನುಪಸ್ಥಿತಿಯಲ್ಲಿಯೂ ಹುಟ್ಟುಹಬ್ಬವನ್ನು ಆಚರಣೆ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.