ಸರ್ಕಾರದ ಹೊರೆಗೆ ಸಂಸ್ಥೆಯ ಹೆಗಲು
ಈ ಹೊಸ ಶುಲ್ಕಗಳ ನಂತರವೂ ಗೃಹಲಕ್ಷ್ಮಿ ಯೋಜನೆಯ ಅನುಷ್ಟಾನಕ್ಕೆ ವಾರ್ಷಿಕ 13 ಸಾವಿರ ಕೋಟಿ ರೂಗಳಷ್ಟು ಹೊರೆಯಾಗುತ್ತದೆ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಅಧಿಕಾರಿಗಳು ಹೇಳಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ವಿದ್ಯುತ್ ಪರಿಸ್ಥಿತಿಯನ್ನು ನಿಭಾಯಿಸಲು 5 ಲಕ್ಷ ಟನ್ ಕಲ್ಲಿದ್ದಲು ಖರೀದಿಗೆ ಜಾಗತಿಕ ಟೆಂಡರ್‌ಗಳನ್ನು ಆಹ್ವಾನಿಸುತ್ತಿದ್ದರೂ, ಸಂಸ್ಥೆಯು ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) 15,000 ಕೋಟಿ ರೂ. ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಕಳೆದ ಹಲವಾರು ವರ್ಷಗಳಿಂದ ಖರೀದಿಸಿದ ವಿದ್ಯುತ್‌ಗೆ ಬದ್ಧವಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಎಲ್ಲಾ ಪೂರೈಕೆ ಕಂಪನಿಗಳು ಮತ್ತು ಕೆಪಿಟಿಸಿಎಲ್‌ನಿಂದ 15,464.77 ಕೋಟಿ ರೂಪಾಯಿಗಳ ಪಾವತಿ ಬಾಕಿ ಇದೆ, ಇದು ದೀರ್ಘಾವಧಿಯಲ್ಲಿ ಕೆಪಿಸಿಎಲ್ ಮತ್ತು ರಾಜ್ಯ-ಚಾಲಿತ ಉಷ್ಣ ವಿದ್ಯುತ್ ಸ್ಥಾವರಗಳ ಕಾರ್ಯಾಚರಣೆಯ ದಕ್ಷತೆಯ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ. ಅತಿ ಹೆಚ್ಚು ಸುಸ್ತಿದಾರರೆಂದರೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ), ಇದು 6,610.95 ಕೋಟಿ ರೂ.ಗಳ ಬಾಕಿಯನ್ನು ಹೊಂದಿದೆ, ಇದರಲ್ಲಿ ರೂ. 1,607.89 ಕೋಟಿ ಬಡ್ಡಿಯಿಂದ ಕೂಡಿದೆ. ಅಂಕಿಅಂಶಗಳು ಅಕ್ಟೋಬರ್ 20, 2018 ರವರೆಗೆ ನವೀಕೃತವಾಗಿವೆ.
ಕಲಬುರ್ಗಿಯ ಜೆಸ್ಕಾಂ 2334.64 ಕೋಟಿ ರೂ, ಮೈಸೂರಿನ ಸೆಸ್ಕಾಂ 2,174.17 ಕೋಟಿ ರೂ, ಹುಬ್ಬಳ್ಳಿಯ ಹೆಸ್ಕಾಂ 191435 ಕೋಟಿ ರೂ, ಮಂಗಳೂರಿನ ಮೆಸ್ಕಾಂ 1,729.60 ರೂ ಮತ್ತು ಕೆಪಿಟಿಸಿಎಲ್ 701.06 ಕೋಟಿ ರೂಗಳ ಬಾಕಿ ಉಳಿಸಿಕೊಂಡಿವೆ. ಎಸ್ಕಾಂಗಳು ಉಚಿತ ಪಂಪ್‌ಸೆಟ್ ಇತ್ಯಾದಿ ಸೌಲಭ್ಯಗಳಿಗೆ ವ್ಯಯ ಮಾಡುವ ವಿದ್ಯುತ್ತಿನ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕಾದರೂ, ಸರ್ಕಾರಗಳು ಈ ನಿಟ್ಟಿನಲ್ಲಿ ವಿಫಲವಾಗಿರುವುದು ಈ ಬಾಕಿ ಮೊತ್ತಕ್ಕೆ ಕಾರಣವಾಗಿದೆ. ಆದಾಗ್ಯೂ ಎಸ್ಕಾಂಗಳು ಮತ್ತು ಕೆಪಿಟಿಸಿಎಲ್‌ನಿಂದ ಪಾವತಿಸದ ಮೊತ್ತವು ಕೆಪಿಸಿಎಲ್‌ನ ಕಾರ್ಯಾಚರಣೆಯ ದಕ್ಷತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಇದು ಸರ್ಕಾರದ ಆಂತರಿಕ ವಿಚಾರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದೂ ಹೇಳಲಾಗಿದೆ . ಕೆಪಿಸಿಎಲ್ ಹೇಗೆ ಕಾರ್ಯನಿರ್ವಹಿಸುತ್ತದೆ ಅಥವಾ ಕಲ್ಲಿದ್ದಲು ಖರೀದಿಸುತ್ತದೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, “ಕೆಪಿಸಿಎಲ್ ರಾಜ್ಯ ಮತ್ತು ಇತರ ಸಂಸ್ಥೆಗಳಿಂದ ಸಾಲ ಪಡೆಯುತ್ತದೆ ಮತ್ತು ಅದನ್ನು ಸುಗಮವಾಗಿ ನಡೆಸುವುದನ್ನು ರಾಜ್ಯವು ಖಚಿತಪಡಿಸುತ್ತದೆ” ಎಂದು ಹೇಳಿದ್ದಾರೆ.
ಆದರೆ ಕರ್ನಾಟಕ ಸರ್ಕಾರವೇ ಐದು ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಂಗಳು) 20 ಸಾವಿರ ಕೋಟಿ ರೂಗಳಷ್ಟು ಬಾಕಿ ಪಾವತಿ ಉಳಿಸಿಕೊಂಡಿರುವುದನ್ನು ಭಾವಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಅಧಿಕಾರಾವಧಿಯಲ್ಲೇ ದೃಢೀಕರಿಸಿದ್ದಾರೆ. ವಿವಿಧ ಪಟ್ಟಣ-ನಗರಸಭೆಗಳ ವತಿಯಿಂದ ಎಸ್ಕಾಂಗಳಿಗೆ 5,975 ಕೋಟಿ ರೂ ಬಾಕಿ ಪಾವತಿಯಾಗಬೇಕಿದೆ. 30.6 ಲಕ್ಷ ನೀರಾವರಿ ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡಲಾಗುವ ವಿದ್ಯುತ್ ಶುಲ್ಕದ ರೂಪದಲ್ಲಿ 12,912 ಕೋಟಿ ರೂಗಳನ್ನು ರಾಜ್ಯದ ಹಣಕಾಸು ಇಲಾಖೆ ಎಸ್ಕಾಂಗಳಿಗೆ ಪಾವತಿ ಮಾಡಬೇಕಿದೆ. ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲಾಡಳಿತಗಳು 3,750 ಕೋಟಿ ರೂಗಳನ್ನೂ, ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಒಳಚರಂಡಿ ಮಂಡಲಿಯ ಕಡೆಯಿಮದ 3,310 ಕೋಟಿ ರೂ, ವಿವಿಧ ಗ್ರಾಮಪಂಚಾಯತ್‌ಗಳಿಂದ 2,444 ಕೋಟಿ ರೂಗಳಷ್ಟು ವಿದ್ಯುತ್ ಬಿಲ್ ಪಾವತಿಯಾಗಬೇಕಿದೆ. ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ಸರಬರಾಜು ವ್ಯವಸ್ಥೆಯನ್ನು ನಿರ್ವಹಿಸುವ ಕೆಇಆರ್‌ಸಿ ಸಂಸ್ಥೆಯನ್ನು ಸ್ವಾಯತ್ತತೆಯೊಂದಿಗೆ ಸಮರ್ಥವಾಗಿ ನಿರ್ವಹಿಸಿದರೆ, ಉಚಿತ ವಿದ್ಯುತ್ ಪೂರೈಕೆಯಿಂದ ಸೃಷ್ಟಿಯಾಗುವ ಹಣಕಾಸು ಹೊರೆಯಿಂದ ಸುಲಭವಾಗಿ ಪಾರಾಗಬಹುದು.
ಬಳಕೆಯ ವಾಮಮಾರ್ಗಗಳು
ಸಿದ್ಧರಾಮಯ್ಯ ಸರ್ಕಾರವು ಸಾಮಾನ್ಯ ಜನತೆಗೆ ಉಪಯುಕ್ತವಾಗುವ ಒಂದು ಮಹತ್ತರ ಯೋಜನೆಯನ್ನು ಗೃಹಲಕ್ಷಿಯ ಹೆಸರಿನಲ್ಲಿ ಜಾರಿಗೆ ತಂದಿದೆ. ಆದರೆ ಈ ಯೋಜನೆಯ ಅನುಷ್ಟಾನದ ಪ್ರಕ್ರಿಯೆಯಲ್ಲಿ ಕೆಲವು ಮುಂಜಾಗ್ರತೆ ಕ್ರಮಗಳನ್ನೂ ಕೈಗೊಳ್ಳಬೇಕಿದೆ. ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ದರಗಳಲ್ಲಿರುವ ವ್ಯತ್ಯಾಸವನ್ನು ಗಮನಿಸುತ್ತಲೇ, ರಾಜ್ಯಾದ್ಯಂತ ವ್ಯಾಪಾರದಲ್ಲಿ ತೊಡಗಿರುವ ಅಂಗಡಿ ಮುಗ್ಗಟ್ಟುಗಳು, ಗೃಹ ಕೈಗಾರಿಕೆಗಳು, ವಾಣಿಜ್ಯ ಮಳಿಗೆಗಳು, ಖಾಸಗಿ ವೈದ್ಯರ ಕ್ಲಿನಿಕ್‌ಗಳು ಮತ್ತು ಇತರ ಸಣ್ಣ ಪುಟ್ಟ ದುಖಾನುಗಳ ವಿದ್ಯುತ್ ಮೀಟರ್‌ಗಳನ್ನು ಲೆಕ್ಕಪರಿಶೋಧನೆಗೆ
ಒಳಪಡಿಸಬೇಕಿದೆ. ಮೈಸೂರು, ಬೆಂಗಳೂರು, ದಾವಣಗೆರೆ ಮೊದಲಾದ ದೊಡ್ಡ ನಗರಗಳಲ್ಲಷ್ಟೇ ಅಲ್ಲದೆ, ಸಣ್ಣ ಪಟ್ಟಣಗಳಲ್ಲೂ ಸಹ ಕಳೆದ ಎರಡು-ಮೂರು ದಶಕಗಳಲ್ಲಿ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿವೆ. ನವ ಉದಾರವಾದ-ಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕ ನೀತಿಗಳ ಪರಿಣಾಮ ಸರ್ಕಾರಿ ಉದ್ಯೋಗಾವಕಾಶಗಳು ಕುಸಿಯುತ್ತಿರುವುದರಿಂದ ಹೆಚ್ಚು ಹೆಚ್ಚು ಮಂದಿ ವ್ಯಾಪಾರದ ಮೊರೆ ಹೋಗುತ್ತಿರುವುದನ್ನು ಈ ದಶಕಗಳ ಬೆಳವಣಿಗೆಯಲ್ಲಿ ಗಮನಿಸಬಹುದು.
ಈ ಅವಧಿಯಲ್ಲೇ ಎಲ್ಲ ಊರು-ಪಟ್ಟಣ-ನಗರ-ಮಹಾನಗರಗಳಲ್ಲೂ ಮುಖ್ಯರಸ್ತೆಗಳೆಲ್ಲವೂ ವಾಣಿಜ್ಯ ಬೀದಿಗಳಾಗಿ ಪರಿವರ್ತನೆಯಾಗಿರುವುದನ್ನು ಗಮನಿಸಬಹುದು. ವಸತಿ ಸೌಕರ್ಯಕ್ಕಾಗಿ ನಿರ್ಮಿಸಿರುವ ಮನೆಗಳ ಮುಂಭಾಗವನ್ನು ಅಂಗಡಿ-ಮುಗ್ಗಟ್ಟುಗಳಾಗಿ ಪರಿವರ್ತಿಸುವ ಒಂದು ವಿಧಾನವನ್ನು ಹೆಚ್ಚಾಗಿ ಮಧ್ಯಮ ವರ್ಗಗಳು, ಬಂಡವಾಳಶಾಹಿ ಆರ್ಥಿಕತೆಯ ಫಲಾನುಭವಿಗಳು, ಸರ್ಕಾರಿ ಉದ್ಯೋಗಿಗಳು ಅಳವಡಿಸಿಕೊಂಡಿದ್ದಾರೆ. ಇದರ ಪರಿಣಾಮ ನಗರ ಪ್ರಾಧಿಕಾರ ಅಥವಾ ನಗರಸಭೆ-ಪುರಸಭೆಗಳಿಂದ ವಾಸಿಸಲೆಂದೇ ಪರವಾನಗಿ ಪಡೆದು ನಿರ್ಮಿಸಲಾಗುವ ಮನೆಗಳ ಮುಂಭಾಗಗಳನ್ನು ಅಂಗಡಿಗಳಾಗಿ ಪರಿವರ್ತಿಸಲಾಗಿದೆ. ಪರವಾನಗಿ ಪಡೆಯಲು ಒದಗಿಸುವ ನೀಲನಕ್ಷೆಯಲ್ಲಿ ಕಾರ್‌ಷೆಡ್ ಎಂದು ನಮೂದಿಸಲಾಗಿರುವ ಕೋಣೆಗಳನ್ನು ಅಂಗಡಿ ಅಥವಾ ವೈದ್ಯರ ಕ್ಲಿನಿಕ್‌ಗಳಾಗಿ ಮಾಡಲಾಗಿದೆ. ಹಲವಾರು ನಗರಗಳಲ್ಲಿ 30 X 40 ಅಥವಾ ಇನ್ನೂ ಹೆಚ್ಚಿನ ವಿಸ್ತೀರ್ಣದ ಮನೆಗಳ ಕಾಂಪೌಂಡ್‌ಗಳಲ್ಲೂ ಸಹ ಅಂಗಡಿಗಳನ್ನು ಕಟ್ಟಿ ವ್ಯಾಪಾರಿ ಮಳಿಗೆಗಳನ್ನು ನಡೆಸಲಾಗುತ್ತಿದೆ. ಈ ಬಹುಪಾಲು ಅಂಗಡಿ ಅಥವಾ ಕ್ಲಿನಿಕ್‌ಗಳಲ್ಲಿ ಗೃಹಬಳಕೆಯ ವಿದ್ಯುತ್ ಮೀಟರ್‌ಗಳೇ ಬಳಕೆಯಾಗುತ್ತಿರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇದು ಪರಿಶೀಲನೆಗೊಳಪಡಬೇಕಿದೆ. ಯಾವುದೇ ವ್ಯಾಪಾರ ನಡೆಸುವ ಜಾಗಕ್ಕೆ ಕಟ್ಟಡ ತೆರಿಗೆ ಮತ್ತು ವಿದ್ಯುತ್ ಶುಲ್ಕವನ್ನು ವಾಣಿಜ್ಯ ದರಗಳಲ್ಲೇ ಪಾವತಿಸಬೇಕು ಎಂಬ ನಿಯಮವನ್ನು ಗಮನಿಸಿದಾಗ, ಈ ಕಟ್ಟಡಗಳೆಲ್ಲವೂ ವಾಮಮಾರ್ಗದಲ್ಲಿ ಗೃಹಬಳಕೆಯ ವಿದ್ಯುತ್ ಶುಲ್ಕ ಪಾವತಿಸಿ ವಾಣಿಜ್ಯ ಚಟುವಟಿಕೆಗಳಿಗೆ ಬಳಸುತ್ತಿರುವುದು ಕಂಡುಬರುತ್ತದೆ.
ಈ ದುರ್ಬಳಕೆ ಅಥವಾ ಸೋರಿಕೆಯನ್ನು ತಡೆಗಟ್ಟಬೇಕಾದರೆ ರಾಜ್ಯ ಸರ್ಕಾರ ಹಾಗೂ ಕೆಇಆರ್‌ಸಿ ಜಂಟಿಯಾಗಿ ರಾಜ್ಯಾದ್ಯಂತ ವಿದ್ಯುತ್ ಲೆಕ್ಕಪರಿಶೋಧನೆಯ (Electricity Auditing) ಕ್ರಮವನ್ನು ಕೈಗೊಳ್ಳುವ ತುರ್ತು ಎಂದಿಗಿಂತಲೂ ಇಂದು ತುರ್ತು ಎನಿಸುತ್ತದೆ. ಗೃಹಬಳಕೆಯ ಮೀಟರ್‌ನೊಂದಿಗೆ ವಾಣಿಜ್ಯ ಚಟುವಟಿಕೆ ನಡೆಸುವ ಮನೆಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದೇ ಅಲ್ಲದೆ, ಇಲ್ಲಿ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಿಗಳಿಂದ ಸೂಕ್ತ ಶುಲ್ಕ ವಸೂಲಿ ಮಾಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಉಂಟಾಗುವ ಹೊರೆಯನ್ನು ತಗ್ಗಿಸಲು ಯತ್ನಿಸಬಹುದು. ಐಸ್‌ಕ್ರೀಂ ತಯಾರಿಕೆ, ಪಾನಿಪೂರಿಯಂತಹ ವ್ಯಾಪಾರಿ ಸರಕುಗಳು, ಯಂತ್ರಾಧಾರಿತ ಹಪ್ಪಳ-ಸಂಡಿಗೆ ಇತ್ಯಾದಿ ತಯಾರಿಕೆಯನ್ನು ಮನೆಯ ಒಳಗೇ ಮಾಡಬಹುದಾದ್ದರಿಂದ, ಇಂತಹ ಮನೆಗಳು ಗೃಹಬಳಕೆಯ ದರದಲ್ಲೇ ವಿದ್ಯುತ್ ಶುಲ್ಕ ಪಾವತಿ ಮಾಡುತ್ತಿರುತ್ತವೆ. ಇಂಥವುಗಳನ್ನು ಸರ್ಕಾರ ಶೋಧಿಸಿ ಕ್ರಮ ಜರುಗಿಸಬೇಕಿದೆ. ಕೈಯ್ಯಿಂದಲೇ ತಯಾರಿಸುವ ಗೃಹಕೈಗಾರಿಕೆಗಳಿಗೆ ವಿನಾಯಿತಿ ನೀಡಬಹುದು. ಕೆಳಮಧ್ಯಮ ವರ್ಗಗಳಿಗೆ, ದುಡಿಯುವ ವರ್ಗಗಳಿಗೆ, ಬಡಜನತೆಗೆ ನೀಡಲಾಗುವ ಕೆಲವೇ ಸೌಲಭ್ಯಗಳ ಬಗ್ಗೆ ಅಥವಾ ಉಚಿತವಾಗಿ ನೀಡಲಾಗುವ ಕೊಡುಗೆಗಳ ಬಗ್ಗೆ ಅಪಹಾಸ್ಯ ಮಾಡುತ್ತಾ ಜಗತ್ತೇ ಮುಳುಗಿಹೋಗುತ್ತದೆ ಎಂದು ಹುಯಿಲೆಬ್ಬಿಸುವ ಮಧ್ಯಮ ವರ್ಗದ ಬೌದ್ಧಿಕ ವಲಯ ಇಂತಹ ವ್ಯತ್ಯಯಗಳ ಬಗ್ಗೆ ತಿಳಿದೂ ತಿಳಿಯದಂತೆ ಮೌನ ವಹಿಸಿರುತ್ತದೆ. ಇಂದಿಗೂ ಒಂದೇ ಒಂದು ಹಳೆಯ ಕಾಲದ ವಿದ್ಯುತ್ ಬಲ್ಬುಗಳನ್ನು ಬಳಸುವ ಕುಟುಂಬಗಳು ಆದಿವಾಸಿಗಳ ನಡುವೆ, ಕುಗ್ರಾಮಗಳಲ್ಲಿ ಹೇರಳವಾಗಿವೆ. ಇದೇ ವೇಳೆ ಇಬ್ಬರೇ ಇರುವ ವಿಲ್ಲಾಗಳಲ್ಲಿ ಹತ್ತಾರು ಬಲ್ಬುಗಳನ್ನು ಝಗಮಗಿಸುವ ಕುಟುಂಬಗಳು ನಗರಗಳಲ್ಲಿ ರಾರಾಜಿಸುತ್ತಿವೆ. ಇವೆರಡರ ನಡುವೆ ಇರುವ ಒಂದು ಜಗತ್ತನ್ನು ಕತ್ತಲು ಆವರಿಸಿದೆ. ಈ ಕತ್ತಲಲ್ಲಿ ವಾಸಿಸುವ ಒಂದು ವರ್ಗಕ್ಕೆ ಉಚಿತ ವಿದ್ಯುತ್ ಅಪಹಾಸ್ಯ ಮಾಡಬಹುದಾದ ಒಂದು ಉಡುಗೊರೆಯಾಗಿ ಕಾಣುತ್ತದೆ. ಗೃಹಲಕ್ಷ್ಮಿಯಾದರೂ ಈ ಜನತೆಯ ಮಿದುಳಿನಲ್ಲಿ ಬೆಳಕು ಹೊತ್ತಿಸಲು ಸಾಧ್ಯವೇ ಕಾದುನೋಡೋಣ.