ಅಫ್ಘಾನಿಸ್ತಾನದ ಕಂದಹಾರ್ ನಗರದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಘರ್ಷಣೆಯಲ್ಲಿ ಭಾರತೀಯ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿ ಹತ್ಯೆಯಾಗಿದ್ದಾರೆ.
ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ವಿಜೇತ ಫೋಟೊ ಜರ್ನಲಿಸ್ಟ್ ಆಗಿರುವ ದ್ಯಾನಿಶ್ ಸಿದ್ದಿಕಿ ಅವರು ಸುದ್ದಿ ಸಂಸ್ಥೆ ರಾಯ್ಟರ್ಸ್ ಗೆ ಕೆಲಸ ಮಾಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ದ್ಯಾನಿಶ್ ಸಿದ್ದಿಕಿ ಕಂದಹಾರ್ ನಲ್ಲಿ ನಡೆಯುತ್ತಿರುವ ಗಲಭೆಗಳ ಫೋಟೊಗೆಂದು ಅಲ್ಲಿ ತೆರಳಿದ್ದರು. ಅಫ್ಘಾನ್ ವಿಶೇಷ ಪಡೆಯ ಭದ್ರತೆಯೊಂದಿಗೆ ಅವರು ಅಲ್ಲಿ ಕೆಲಸ ಮಾಡುತ್ತಿದ್ದರು.
ಕಳೆದ ಕೆಲವು ದಿನಗಳಿಂದ, ದಾನಿಶ್ ಸಿದ್ದಿಕಿ ಅಫ್ಘಾನಿಸ್ತಾನದ ಕಂದಹಾರ್ನಲ್ಲಿನ ಪರಿಸ್ಥಿತಿಯ ಕುರಿತು ವರದಿ ಮಾಡುತ್ತಿದ್ದರು. ಅವರು ಕೆಲವು ಕಾರ್ಯಾಚರಣೆಗಳಲ್ಲಿ ಅಫಘಾನ್ ವಿಶೇಷ ಪಡೆಗಳೊಂದಿಗೆ ಸೇರಿಕೊಂಡು ವರದಿ ತಯಾರಿಸುತ್ತಿದ್ದರು ಎಂದು ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಅಫ್ಘಾನ್ ವಿಶೇಷ ಪಡೆಗಳು ತಾಲಿಬಾನ್ ದಾಳಿಗೆ ಒಳಗಾದಾಗ ಅವರು ಮೃತಪಟ್ಟಿದ್ದಾರೆ.
ಜೂನ್ 13ರಂದು ದ್ಯಾನಿಶ್ ಸಿದ್ದಿಕಿ ವಿಶೇಷ ಪಡೆಯೊಂದಿಗೆ ಪ್ರಯಾಣಿಸುತ್ತಿದ್ದಾಗ ಅವರ ವಾಹನಗಳ ಮೇಲೆ ದಾಳಿಯಾಗಿತ್ತು. ಈ ಕುರಿತು ಅವರು ಟ್ವೀಟ್ ಮಾಡಿ, ಅದೃಷ್ಟವಶಾತ್ ನಾನು ಸುರಕ್ಷಿತವಾಗಿದ್ದೇನೆ. ಅಲ್ಲದೆ ರಾಕೆಟ್ ಹೊಡೆಯುವ ದೃಶ್ಯವನ್ನು ಸೆರೆ ಹಿಡಿಯಲು ಸಾಧ್ಯವಾಗಿದೆ ಎಂದು ಅವರು ಬರೆದುಕೊಂಡಿದ್ದರು.
ಶುಕ್ರವಾರ, ಸಿದ್ದಿಕಿ ರಾಯಿಟರ್ಸ್ಗೆ ಘರ್ಷಣೆಯ ಬಗ್ಗೆ ವರದಿ ಮಾಡುವಾಗ ಶ್ರಾಪ್ನಲ್ನಿಂದ ಕೈಗೆ ಗಾಯವಾಗಿದೆ ಎಂದು ತಿಳಿಸಿದ್ದರು. ಸ್ಪಿನ್ ಬೋಲ್ಡಾಕ್ನಲ್ಲಿ ನಡೆದ ಹೋರಾಟದ ನಂತರ ಅವರಿಗೆ ಚಿಕಿತ್ಸೆ ನೀಡಲಾಯಿತು ಮತ್ತವರು ಚೇತರಿಸಿಕೊಳ್ಳುತ್ತಿದ್ದರು ಎಂದು ವರದಿ ತಿಳಿಸಿದೆ.
“ನಾವು ತುರ್ತಾಗಿ ಹೆಚ್ಚಿನ ಮಾಹಿತಿಯನ್ನು ಬಯಸುತ್ತಿದ್ದೇವೆ, ಈ ಪ್ರದೇಶದ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ” ಎಂದು ರಾಯಿಟರ್ಸ್ ಅಧ್ಯಕ್ಷ ಮೈಕೆಲ್ ಫ್ರೀಡೆನ್‌ಬರ್ಗ್ ಮತ್ತು ಪ್ರಧಾನ ಸಂಪಾದಕ ಅಲೆಸ್ಸಾಂಡ್ರಾ ಗಲ್ಲೋನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಡ್ಯಾನಿಶ್ ಒಬ್ಬ ಅತ್ಯುತ್ತಮ ಪತ್ರಕರ್ತ ಮತ್ತು ನಾವು ಹೆಚ್ಚು ಪ್ರೀತಿಸುವ ಸಹೋದ್ಯೋಗಿ. ಈ ಭಯಾನಕ ಸಮಯದಲ್ಲಿ ನಾವು ಅವರ ಕುಟುಂಬದೊಂದಿಗೆ ಇರುತ್ತೇವೆ ಎಂದು ಹೇಳಿದ್ಧಾರೆ. ”.
ನವದೆಹಲಿಯಲ್ಲಿ, ವಿದೇಶಾಂಗ ಸಚಿವಾಲಯದ ವಕ್ತಾರರು ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾ, “ಕಾಬೂಲ್‌ನಲ್ಲಿರುವ ನಮ್ಮ ರಾಯಭಾರಿ ಅಫಘಾನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ನಾವು ಅವರ ಕುಟುಂಬಕ್ಕೆ ಬೆಳವಣಿಗೆಗಳ ಬಗ್ಗೆ ತಿಳಿಸುತ್ತಿದ್ದೇವೆ. ”
“ಕಂದಹಾರ್ನಲ್ಲಿ ತಾಲಿಬಾನ್ ದೌರ್ಜನ್ಯವನ್ನು ಚಿತ್ರಿಸುವಾಗ ರಾಯಿಟರ್ಸ್ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಕೊಲ್ಲಲ್ಪಟ್ಟರು ಎಂಬ ಆಘಾತಕಾರಿ ವರದಿಗಳಿಂದ ನಾನು ತುಂಬಾ ದುಃಖಿತನಾಗಿದ್ದೇನೆ” ಎಂದು ಅಫ್ಘಾನಿಸ್ತಾನ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಘನಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
“ನಾನು ಶ್ರೀ ಸಿದ್ದಿಕಿ ಅವರ ಕುಟುಂಬಕ್ಕೆ ಮತ್ತು ನಮ್ಮ ಮಾಧ್ಯಮ ಕುಟುಂಬಕ್ಕೂ ನನ್ನ ಹೃತ್ಪೂರ್ವಕ ಸಂತಾಪವನ್ನು ಅರ್ಪಿಸುತ್ತೇನೆ. ವಾಕ್ ಸ್ವಾತಂತ್ರ್ಯ, ಮುಕ್ತ ಮಾಧ್ಯಮ ಮತ್ತು ಪತ್ರಕರ್ತರ ರಕ್ಷಣೆಗೆ ನನ್ನ ಸರ್ಕಾರದ ಅಚಲ ಬದ್ಧತೆಯನ್ನು ನಾನು ಪುನರುಚ್ಚರಿಸುತ್ತೇನೆ, ”ಎಂದು ಅಫ್ಘಾನಿಸ್ತಾನ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಘನಿ ಅವರು ಹೇಳದ್ದಾರೆ ಎಂದು ವರದಿಯಾಗಿದೆ.
ಮುಂಬೈ ಮೂಲದ ಸಿದ್ದಿಕಿ ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದು ಅದೇ ಸಂಸ್ಥೆಯಲ್ಲಿ ಮಾಸ್ ಕಮ್ಯುನಿಕೇಷನ್ ರಿಸರ್ಚ್ ಸೆಂಟರ್ನಿಂದ ಮಾಸ್ ಕಮ್ಯುನಿಕೇಷನ್‌ನಲ್ಲಿ ಪದವಿ ಪಡೆದಿದ್ದರು.
ಅವರು ಟೆಲಿವಿಷನ್ ಸುದ್ದಿ ವರದಿಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ನಂತರ 2010 ರಲ್ಲಿ ರಾಯಿಟರ್ಸ್ ಅನ್ನು ಇಂಟರ್ನ್ ಆಗಿ ಸೇರಿದರು.
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಮೆರಿಕ ಸೇನೆ ಆಫ್ಘಾನ್ಗೆ ವಿದಾಯ ಹೇಳಿದ ಬೆನ್ನಲ್ಲೇ ತಾಲಿಬಾನ್ ಉಗ್ರರು ಆಫ್ಘಾನಿಸ್ತಾನದ ಒಂದೊಂದೆ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಯೋಧರು, ಅಮಾಯಕರ ಮೇಲೆ ಗುಂಡಿನ ಸುರಿಮಳೆಗೈಯುತ್ತಿದ್ದಾರೆ. ಇದೀಗ ಉಗ್ರರ ಅಟ್ಟಹಾಸಕ್ಕೆ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ ಯೋಧರ ಮೇಲೆ ಉಗ್ರರು ಗುಂಡಿನ ಸುರಿಮಳೆಗೈದಿದ್ದಾರೆ.